ನವದೆಹಲಿ: 2023ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದ ಅನುಷ್ ಅಗರ್‌ವಾಲಾ, ಡ್ರೆಸ್ಸೇಜ್ ವಿಭಾಗದಲ್ಲಿ ಪ್ಯಾರಿಸ್ ಒಲಿಂಪಿಕ್ ಕೋಟಾವನ್ನು ಸ್ವೀಕರಿಸಿದ್ದಾರೆ. ಈಕ್ವೆಸ್ಟ್ರಿಯನ್ ಫೆಡರೇಶನ್ ಆಫ್ ಇಂಡಿಯಾ (ಇಎಫ್‌ಐ) ಸೋಮವಾರ ಈ ವಿಚಾರವನ್ನು ಪ್ರಕಟಿಸಿದೆ.
ಹ್ಯಾಂಗ್‌ಝೌನಲ್ಲಿ, ಕಂಚಿನ ಪದಕ ಗೆದ್ದಿದ್ದ ಅನುಷ್ ಅಗರ್‌ವಾಲಾ ಅವರ ನಾಲ್ಕು ಪ್ರಮುಖ ಈವೆಂಟ್‌ಗಳಲ್ಲಿನ ಪರ್ಫಾಮೆನ್ಸ್ ಆಧರಿಸಿ ಕೋಟಾವನ್ನು ನಿಗದಿಪಡಿಸಲಾಗಿದೆ. ರೊಕ್ಲಾ, ಪೋಲೆಂಡ್ (73.485%) ಕ್ರೋನೆನ್‌ಬರ್ಗ್, ನೆದರ್ಲ್ಯಾಂಡ್ಸ್ (74.4%), ಫ್ರಾಂಕ್‌ಫರ್ಟ್, ಜರ್ಮನಿ (72.9%), ಮತ್ತು ಮೆಚೆಲೆನ್, ಬೆಲ್ಜಿಯಂ (74.2%) ಆಟಗಳನ್ನು ಪರಿಗಣಿಸಲಾಗಿದೆ. ರಾಷ್ಟ್ರೀಯ ಒಕ್ಕೂಟವು ಅಂತಿಮ ಹೆಸರನ್ನು ಸಂಘಟಕರಿಗೆ ಕಳುಹಿಸುವ ಮೊದಲು ಫೈನಲ್ ಟ್ರಯಲ್ ನಡೆಸಲಿದೆ.
"ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ನಾನು ಬಹಳ ಹೆಮ್ಮೆ ಪಡುತ್ತೇನೆ ಮತ್ತು ಕೃತಜ್ಞನಾಗಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ನನ್ನ ಬಾಲ್ಯದ ಕನಸು ಮತ್ತು ರಾಷ್ಟ್ರಕ್ಕಾಗಿ ಈ ಐತಿಹಾಸಿಕ ಕ್ಷಣದ ಭಾಗವಾಗಿರಲು ನಾನು ಹೆಮ್ಮೆಪಡುತ್ತೇನೆ" ಎಂದು 24ರ ಹರೆಯದ ಅಗರ್‌ವಾಲಾ ತಿಳಿಸಿದ್ದಾರೆ. ಯುವ ಕುದುರೆ ಸವಾರ ಈ ಕೋಟಾವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆಶಿಸಿದ್ದಾರೆ.
"ನನ್ನ ಕೆಲಸಗಳನ್ನು ಮುಂದುವರಿಸುತ್ತೇನೆ. ಏಕಾಗ್ರತೆ, ಶಿಸ್ತು, ಕಠಿಣ ಕೆಲಸ ಮತ್ತು ಗುರಿಯತ್ತ ಗಮನ ಹರಿಸಿ ಅವುಗಳನ್ನು ಸಾಧಿಸುತ್ತೇನೆ. ಈ ಪ್ರತಿಷ್ಠಿತ ಹಂತದಲ್ಲಿ ಭಾರತವನ್ನು ಪ್ರತಿನಿಧಿಸಲು ನಾನು ಆಯ್ಕೆಯಾಗುತ್ತೇನೆ ಎಂದು ನನಗೆ ವಿಶ್ವಾಸವಿದೆ" ಎಂದು ಅಗರ್‌ವಾಲಾ ತಿಳಿಸಿದ್ದಾರೆ. ಇಎಫ್‌ಐನ ಪ್ರಧಾನ ಕಾರ್ಯದರ್ಶಿ ಜೈವೀರ್ ಸಿಂಗ್ ಅವರು ಯುವ ಕುದುರೆ ಸವಾರನನ್ನು ಅಭಿನಂದಿಸಿದ್ದಾರೆ.