ಚೆನ್ನೈ: ವಿಶ್ವವಿಖ್ಯಾತ ಅಲಂಗನಲ್ಲೂರ್ ಜಲ್ಲಿಕಟ್ಟು ಕ್ರೀಡೆಗೆ ಗುರುವಾರ ಅದ್ದೂರಿ ಚಾಲನೆ ಸಿಕ್ಕಿದೆ. ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಮಿಳುನಾಡಿನ ವಾಣಿಜ್ಯ ಮತ್ತು ನೋಂದಣಿ ಸಚಿವ ಪಿ.ಮೂರ್ತಿ, ಜಿಲ್ಲಾಧಿಕಾರಿ ಎಂ.ಎಸ್.ಸಂಗೀತಾ ಉಪಸ್ಥಿತರಿದ್ದರು.
ಜಲ್ಲಿಕಟ್ಟು ಕ್ರೀಡಾಕೂಟದಲ್ಲಿ ಗೂಳಿಗಳನ್ನು ಪಳಗಿಸುವ 'ಮಾಡು ಪಿಡಿ ಆಟಗಾರರು' ಎಂದು ಕರೆಯಲ್ಪಡುವ ಸ್ಪರ್ಧಿಗಳು ಕ್ರೀಡಾಕೂಟದ ಪ್ರತಿಜ್ಞೆಯನ್ನು ಸ್ವೀಕರಿಸಿದ್ದು, ರೋಮಾಂಚಕ ಆಟ ಆರಂಭಗೊಂಡಿದೆ. ದೇವಾಲಯದ ಎತ್ತುಗಳನ್ನು ಹೊರಗೆ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಸ್ಪರ್ಧೆಗಾಗಿಯೇ ವಿಶೇಷವಾಗಿ ತರಲಾದ ಎತ್ತುಗಳನ್ನು ಬಿಡಲಾಯಿತು.
ಬುಧವಾರ ಪಾಲಮೇಡು ಜಲ್ಲಿಕಟ್ಟು ನಡೆಯಿತು. ಆದರೆ ಅಂತಿಮ ಸುತ್ತಿನ ಸಮಯದಲ್ಲಿ ಸಂಜೆ 5.45 ರ ಸುಮಾರಿಗೆ ಮಳೆಯಿಂದಾಗಿ ಕ್ರೀಡಾಕೂಟಕ್ಕೆ ಅಡ್ಡಿಯಾಯಿತು. ಹೀಗಾಗಿ ಈ ಪಂದ್ಯವನ್ನು ಹಠಾತ್ತಾಗಿ ಮುಕ್ತಾಯಗೊಳಿಸಲಾಯಿತು.
ಅವನಿಯಪುರಂ, ಪಾಲಮೇಡು ಮತ್ತು ಅಲಂಗನಲ್ಲೂರ್ ಜಲ್ಲಿಕಟ್ಟು ಉತ್ಸವಗಳು ಕ್ರಮವಾಗಿ ಪೊಂಗಲ್ ದಿನದಿಂದ ಪ್ರಾರಂಭವಾಗಿ ಮುಂದಿನ ದಿನಗಳಲ್ಲಿ ಸತತವಾಗಿ ನಡೆಯುತ್ತವೆ. ಅಲಂಗನಲ್ಲೂರ್ ಜಲ್ಲಿಕಟ್ಟುಗಾಗಿ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ಪೊಲೀಸ್ ಇನ್ ಸ್ಪೆಕ್ಟರ್ ಜನರಲ್ (ದಕ್ಷಿಣ ವಲಯ) ಪ್ರೇಮ್ ಆನಂದ್ ಸಿನ್ಹಾ ಅವರು ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.