ಹೈದರಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮುಂದಿನ ಆವೃತ್ತಿಗಾಗಿ ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ನಡೆಯಲಿದೆ. ಈ ಬಾರಿ ಒಟ್ಟು 1,574 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, 574 ಆಟಗಾರರ ಆಯ್ದ ಪಟ್ಟಿ (ಶಾರ್ಟ್ಲಿಸ್ಟ್) ಮಾಡಲಾಗಿದೆ.
ಈ ಪಟ್ಟಿಯಲ್ಲಿ ಹಿರಿಯರು, ಕಿರಿಯರು ಮತ್ತು ಅನ್ಕ್ಯಾಪ್ಡ್(ರಾಷ್ಟ್ರೀಯ ತಂಡದಲ್ಲಿ ಆಡದವರು) ಆಟಗಾರರಿದ್ದಾರೆ. ಅಚ್ಚರಿಯೆಂಬಂತೆ, 13 ವರ್ಷದ ಹುಡುಗನ ಹೆಸರೂ ಇದರಲ್ಲಿದೆ. ಈ ಹುಡುಗ 30 ಲಕ್ಷ ರೂ ಮೂಲ ಬೆಲೆಯೊಂದಿಗೆ ಹರಾಜು ಪ್ರವೇಶಿಸಲಿದ್ದಾರೆ. ಇವರನ್ನು ಹರಾಜಿನಲ್ಲಿ ಯಾವ ಫ್ರಾಂಚೈಸಿ ಖರೀದಿಸಲಿದೆ ಎಂಬುದು ಸದ್ಯದ ಕುತೂಹಲ.
ವೈಭವ್ ಸೂರ್ಯವಂಶಿ ಎಂಬವರೇ ಐಪಿಎಲ್ ಮೆಗಾ ಹರಾಜಿಗೆ ತನ್ನ ಹೆಸರನ್ನು ನೋಂದಾಯಿಸಿಕೊಂಡ ಹುಡುಗ. 2011ರಲ್ಲಿ ಜನಿಸಿದ ಇವರಿಗೆ ಸದ್ಯ 13 ವರ್ಷ. ಬಿಹಾರದ ತಾಜಪುರ ಗ್ರಾಮದವರಾದ ವೈಭವ್, ನಾಲ್ಕನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದರು. ಮಗನ ಕ್ರಿಕೆಟ್ ಪ್ರೀತಿಯನ್ನು ಕಂಡ ತಂದೆ ಸಂಜೀವ್ ಸೂರ್ಯವಂಶಿ ವಿಶೇಷ ಮೈದಾನ ನಿರ್ಮಿಸಿದ್ದರು. ಬಳಿಕ ವೈಭವ್‌ನನ್ನು ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದ್ದರು.
ಎರಡು ವರ್ಷಗಳ ಕಾಲ ಅಲ್ಲಿ ತರಬೇತಿ ಪಡೆದ ವೈಭವ್ ಅಂಡರ್-16 ತಂಡದಲ್ಲಿ ಸ್ಥಾನ ಪಡೆದುಕೊಂಡರು. ಆಗ ಕೇವಲ 10 ವರ್ಷ ವಯಸ್ಸು. ಆ ವಯಸ್ಸಿನಲ್ಲಿ ಬಿಹಾರ ರಾಜ್ಯ ಮಟ್ಟದ ಎಲ್ಲಾ ಪಂದ್ಯಾವಳಿಗಳಲ್ಲೂ ಆಡಿದ್ದರು. ಚಿಕ್ಕ ವಯಸ್ಸಿನಲ್ಲಿ ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟ್ರೋಫಿಗಳಲ್ಲಿ ಆಡಿದ್ದಾರೆ. ಅಂಡರ್ 19 ತಂಡದಲ್ಲಿ ಆಡಿರುವ ಇವರು ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅನ್ಅಫೀಶಿಯಲ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು.