ಕರ್ನಾಟಕ

karnataka

ETV Bharat / spiritual

ಐತಿಹಾಸಿಕ ಗೌಡಗೆರೆಯಲ್ಲಿ ಭೀಮನ ಅಮಾವಾಸ್ಯೆ: ರಥೋತ್ಸವಕ್ಕೆ ಹರಿದುಬಂದ ಭಕ್ತಸಾಗರ - Bheemana Amavasya

ರಾಮನಗರ ಜಿಲ್ಲೆಯ ಗೌಡಗೆರೆಯ ಪ್ರಸಿದ್ಧ ಚಾಮುಂಡೇಶ್ವರಿ ಪುಣ್ಯಕ್ಷೇತ್ರದಲ್ಲಿ ಭೀಮನ ಅಮಾವಾಸ್ಯೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

goudagere
ಗೌಡಗೆರೆಯಲ್ಲಿ ಭೀಮನ ಅಮಾವಾಸ್ಯೆ (ETV Bharat)

By ETV Bharat Karnataka Team

Published : Aug 4, 2024, 10:44 PM IST

ರಾಮನಗರ:ಬೊಂಬೆನಗರಿ‌ ಚನ್ನಪಟ್ಟಣ ತಾಲೂಕಿನ ಗೌಡಗೆರೆಯ ಪ್ರಸಿದ್ಧ ಶ್ರೀ ಬಸವಪ್ಪ, ಚಾಮುಂಡೇಶ್ವರಿ ಪುಣ್ಯಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಭೀಮನ ಅಮಾವಾಸ್ಯೆ ಹಬ್ಬವು ಅದ್ಧೂರಿಯಾಗಿ ಜರುಗಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ಹಬ್ಬದ ಪ್ರಯುಕ್ತ ಶನಿವಾರ ಮಧ್ಯರಾತ್ರಿ ಎರಡು ಗಂಟೆಯಿಂದ ಭಾನುವಾರ ಸಂಜೆಯವರೆಗೆ ಅಮ್ಮನವರ ಮೂಲಮೂರ್ತಿಗೆ ಅಭಿಷೇಕ ಮಾಡಲು ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ದೇವಿಗೆ ಮೂರು ಮಹಾಮಂಗಳಾರತಿ ಸೇವೆ ನಡೆಯಿತು. ಮುಂಜಾನೆ 4.28ಕ್ಕೆ ಚಾಮುಂಡೇಶ್ವರಿಗೆ ಮೊದಲ ಮಹಾ ಆರತಿ ನಡೆಸಲಾಯಿತು. ಮಧ್ಯರಾತ್ರಿಯಿಂದಲೇ ಸಾವಿರಾರು ಭಕ್ತರು ಸರತಿಸಾಲಿನಲ್ಲಿ ನಿಂತು ದೇವಿಯ ದರ್ಶನ‌ ಪಡೆದರು.

ಗೌಡಗೆರೆಯಲ್ಲಿ ಭೀಮನ ಅಮಾವಾಸ್ಯೆ (ETV Bharat)

ಜೊತೆಗೆ, ವಿಶೇಷ ಅಭಿಷೇಕ, ಅಲಂಕಾರ,‌ ನೂರೆಂಟು ಹಾಲರವಿ ಸೇವೆ ಹಾಗೂ‌ ರಥೋತ್ಸವ ನಡೆಯಿತು. ಮಧ್ಯಾಹ್ನ 12.28ಕ್ಕೆ ರಥೋತ್ಸವಕ್ಕೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಚಾಲನೆ ನೀಡಿದರು. ಗರ್ಭಗುಡಿಯಲ್ಲಿರುವ ಅಮ್ಮನವರ ಮೂಲ ವಿಗ್ರಹವನ್ನು ರಥದಲ್ಲಿ ಕೂರಿಸಿ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು.‌ ಯಾವುದೇ ವಿಶೇಷ ಅತಿಥಿಯನ್ನು ಆಹ್ವಾನಿಸದೇ, ಭಕ್ತರಿಂದಲೇ ಉದ್ಘಾಟನೆ ಮಾಡಿಸಿರುವುದು ಕ್ಷೇತ್ರದ ವಿಶೇಷವಾಗಿತ್ತು.

ಗೌಡಗೆರೆಯಲ್ಲಿ ಭೀಮನ ಅಮಾವಾಸ್ಯೆ (ETV Bharat)

ಹರಿದುಬಂದ ಭಕ್ತಸಾಗರ:ಆಷಾಢ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಶ್ರೀ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ಭೀಮನ ಅಮಾವಾಸ್ಯೆಯಂದು ಸಹ ಸಾವಿರಾರು ಭಕ್ತರು ಆಗಮಿಸಿದ್ದರು‌. ಯಾವುದೇ ಅನಾನುಕೂಲವಾಗದಂತೆ ಕ್ಷೇತ್ರದ ವತಿಯಿಂದ ಸಕಲ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಹೊಸದಾಗಿ ನಿರ್ಮಿಸಿರುವ 25 ಅಡಿ ಎತ್ತರದ ತೇರನ್ನು ದೇವಿಗೆ ಸಮರ್ಪಿಸಲಾಯಿತು. ಜೊತೆಗೆ, ನೂತನ ದಾಸೋಹ ಭವನವನ್ನು ಸಹ ಇದೇ ವೇಳೆ ಉದ್ಘಾಟಿಸಲಾಯಿತು. ಎಲ್ಲರಿಗೂ ಕ್ಷೇತ್ರದ ವತಿಯಿಂದ ದಾಸೋಹ ಏರ್ಪಡಿಸಲಾಗಿತ್ತು.

ಮ್ಯೂಸಿಯಂ ಲೋಕಾರ್ಪಣೆ:ಇದೇ ವೇಳೆ ನೂತನವಾಗಿ ನಿರ್ಮಿತ, ರಾಜ್ಯದಲ್ಲೇ ವಿಶೇಷ ಎನ್ನಬಹುದಾದ ಮ್ಯೂಸಿಯಂ ಅನ್ನು ಉದ್ಘಾಟನೆ ಮಾಡಲಾಯಿತು. ಮ್ಯೂಸಿಯಂ ಒಳಗೆ ಇತಿಹಾಸ, ಆಧ್ಯಾತ್ಮ ಸೇರಿದಂತೆ ಎಲ್ಲ ವಿಚಾರಕ್ಕೆ ಸಂಬಂಧಿತ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರ ಬಗ್ಗೆ ವಿವರ ನೀಡಲಾಗಿದೆ. ಗ್ರಾಮೀಣ ಸೊಗಡು ತಿಳಿಸುವ ಪರಿಸರ, ಮೈಸೂರು ಯದುವಂಶಕ್ಕೆ ಸಂಬಂಧಿಸಿದ ವಿವರ ಸೇರಿದಂತೆ ದೇಶ ಹಾಗೂ ರಾಜ್ಯದ ಇತಿಹಾಸದ ಮಾಹಿತಿ ಲಭ್ಯವಿದೆ.

ಗೌಡಗೆರೆಯಲ್ಲಿ ಭೀಮನ ಅಮಾವಾಸ್ಯೆ (ETV Bharat)

ಗಂಗಾ, ಯಮುನಾ, ಗೋದಾವರಿ, ನರ್ಮದಾ, ಕಾವೇರಿ ಸೇರಿದಂತೆ ಸಪ್ತನದಿಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ. ಜೊತೆಗೆ 12 ಜ್ಯೋತಿರ್ಲಿಂಗ, ಹಳೇ ಕಾಲದ ನಾಣ್ಯಗಳು, ವಿದೇಶಿ ಕರೆನ್ಸಿ ಸೇರಿದಂತೆ ಸಪ್ತಋಷಿಗಳು, ಸಪ್ತಮಾತ್ರಿಕೆಯರ ಮಣ್ಣಿನ ಪ್ರತಿಮೆ, ಜ್ಞಾನ ಮಂಟಪಗಳೂ ಇವೆ. ಕ್ಷೇತ್ರಕ್ಕೆ ಬರುವ ಭಕ್ತರು ಮತ್ತು ಮಕ್ಕಳಿಗೆ ನಮ್ಮ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಮ್ಯೂಜಿಯಂ ನಿರ್ಮಿಸಲಾಗಿದೆ.

ಇದನ್ನೂ ಓದಿ:ಪುಷ್ಕರದಲ್ಲಿ ಅಘೋರಿ ರೂಪದಲ್ಲಿ ಕಂಡು ಪವಾಡ ಸೃಷ್ಟಿಸಿದ ಶಿವ: ಆತ್ಮೇಶ್ವರ ಮಹಾದೇವನ ಸ್ಥಳದ ಮಹತ್ವವಿದು - Pushkar Atmateshwar Mahadev

ABOUT THE AUTHOR

...view details