ನವದೆಹಲಿ: ನೇಪಾಳ ದೇಶವನ್ನು ಹಿಂದೂ ರಾಷ್ಟ್ರವಾಗಿ ಪುನಃಸ್ಥಾಪಿಸಬೇಕು ಮತ್ತು ಸಾಂವಿಧಾನಿಕ ರಾಜಪ್ರಭುತ್ವವನ್ನು ಪುನಃಸ್ಥಾಪಿಸಬೇಕು ಎಂದು ನೇಪಾಳದ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ (ಆರ್ಪಿಪಿ) ಅಭಿಯಾನ ಆರಂಭಿಸಿದೆ. ಆರ್ಪಿಪಿ ಬುಧವಾರ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರಿಗೆ ಮನವಿಯೊಂದನ್ನು ಸಲ್ಲಿಸಿದ್ದು, 40 ಅಂಶಗಳ ಬೇಡಿಕೆಗಳಲ್ಲಿ ಇವು ಪ್ರಮುಖ ಬೇಡಿಕೆಗಳಾಗಿವೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ. ನೇಪಾಳದಲ್ಲಿ ಸಾಂವಿಧಾನಿಕ ರಾಜಪ್ರಭುತ್ವವನ್ನು ಪುನಃಸ್ಥಾಪಿಸಲು ಶಾಂತಿಯುತ ಅಭಿಯಾನ ಪ್ರಾರಂಭಿಸುವುದಾಗಿ ಪಕ್ಷ ಇದೇ ಸಂದರ್ಭದಲ್ಲಿ ಘೋಷಿಸಿದೆ.
ಕಠ್ಮಂಡುವಿನ ವಿವಿಧ ಭಾಗಗಳಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ರ್ಯಾಲಿಗಳನ್ನು ನಡೆಸಿದ ನಂತರ ಆರ್ಪಿಪಿ ನಾಯಕರು ಈ ಬಗ್ಗೆ ಪ್ರಧಾನಿ ದಹಲ್ ಅವರನ್ನು ಭೇಟಿಯಾಗಿ ಬೇಡಿಕೆಗಳ ಪಟ್ಟಿ ಸಲ್ಲಿಸಿದರು. "ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಶಾಂತಿಯುತ ಮಾರ್ಗದಲ್ಲಿ ಪ್ರತಿಭಟನೆಗಳನ್ನು ಮುಂದುವರಿಸಲಿದೆ. ಆದರೆ ಸರ್ಕಾರ ಉದಾಸೀನ ಮನೋಭಾವ ತಾಳಿದರೆ ಉಗ್ರ ಕ್ರಾಂತಿಯ ಮಾರ್ಗವನ್ನು ಆಯ್ಕೆ ಮಾಡಬೇಕಾಗುತ್ತದೆ" ಎಂದು ಪಕ್ಷದ ಅಧ್ಯಕ್ಷ ರಾಜೇಂದ್ರ ಲಿಂಗ್ಡೆನ್ ಹೇಳಿದ್ದಾರೆ.
2015 ರಲ್ಲಿ ನೇಪಾಳವು ಹೊಸ ಸಂವಿಧಾನವನ್ನು ಜಾರಿಗೆ ತರುವ ಮೂಲಕ ಔಪಚಾರಿಕವಾಗಿ ಜಾತ್ಯತೀತ ಗಣರಾಜ್ಯವಾಗಿ ಪರಿವರ್ತನೆಗೊಂಡಿತು. 2008 ರ ಆರಂಭದಲ್ಲಿ, ಸಂವಿಧಾನ ಸಭೆಯ ಉದ್ಘಾಟನಾ ಅಧಿವೇಶನದಲ್ಲಿ ರಾಜಪ್ರಭುತ್ವವನ್ನು ಗತಕಾಲಕ್ಕೆ ತಳ್ಳಲಾಯಿತು ಮತ್ತು ನೇಪಾಳವನ್ನು ಅಧಿಕೃತವಾಗಿ ಹಿಂದೂಯೇತರ ರಾಷ್ಟ್ರವೆಂದು ಘೋಷಿಸಲಾಗಿತ್ತು.
ಆದರೆ ಈ ಸಂದರ್ಭದಲ್ಲಿ ಆರ್ಪಿಪಿ ಪಕ್ಷವು ನೇಪಾಳವನ್ನು ಹಿಂದೂ ರಾಜ್ಯವಾಗಿ ಪುನಃಸ್ಥಾಪಿಸಲು ಮತ್ತು ಸಾಂವಿಧಾನಿಕ ರಾಜಪ್ರಭುತ್ವವನ್ನು ಪುನಃಸ್ಥಾಪಿಸಲು ಏಕೆ ಒತ್ತಾಯಿಸುತ್ತಿದೆ ಎಂಬ ವಿಷಯದ ಬಗ್ಗೆ ತಿಳಿಯುವುದು ಅಗತ್ಯ.
ನೇಪಾಳದ ರಾಜಕೀಯ ಪಕ್ಷವಾದ ಆರ್ ಪಿಪಿ ಸಾಂವಿಧಾನಿಕ ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರೀಯತೆಯೊಂದಿಗೆ ಗುರುತಿಸಿಕೊಂಡಿದೆ. ರಾಜಪ್ರಭುತ್ವವನ್ನು ರದ್ದುಗೊಳಿಸುವ ಮೊದಲು ಇದನ್ನು 1990 ರಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಸೂರ್ಯ ಬಹದ್ದೂರ್ ಥಾಪಾ ಮತ್ತು ಲೋಕೇಂದ್ರ ಬಹದ್ದೂರ್ ಚಂದ್ ಸ್ಥಾಪಿಸಿದರು.
ಪಕ್ಷವು 1997 ರಲ್ಲಿ ಥಾಪಾ ಮತ್ತು ಚಂದ್ ಅವರ ನಾಯಕತ್ವದಲ್ಲಿ ಎರಡು ಸಮ್ಮಿಶ್ರ ಸರ್ಕಾರಗಳನ್ನು ಯಶಸ್ವಿಯಾಗಿ ಮುನ್ನಡೆಸಿತ್ತು. ಇದಲ್ಲದೆ, ಥಾಪಾ ಮತ್ತು ಚಂದ್ ಇಬ್ಬರನ್ನೂ 2000 ರ ದಶಕದಲ್ಲಿ ಆಗಿನ ರಾಜ ಜ್ಞಾನೇಂದ್ರ ಅವರು ಪ್ರಧಾನ ಮಂತ್ರಿಗಳಾಗಿ ನೇಮಿಸಿದರು. 2002 ರಲ್ಲಿ ಚಂದ್ ಮತ್ತು 2003 ರಲ್ಲಿ ಪ್ರಧಾನಿಯಾಗಿದ್ದರು.
2022 ರ ಸಾರ್ವತ್ರಿಕ ಚುನಾವಣೆಯ ನಂತರ ಆರ್ಪಿಪಿ 14 ಸ್ಥಾನಗಳನ್ನು ಗಳಿಸಿ 275 ಸ್ಥಾನಗಳ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಐದನೇ ಅತಿದೊಡ್ಡ ಪಕ್ಷವಾಯಿತು. ಇದು ಚುನಾವಣಾ ಆಯೋಗದಿಂದ ಅಧಿಕೃತವಾಗಿ ಗುರುತಿಸಲ್ಪಟ್ಟ ಏಳು ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾಗಿದೆ. ಚುನಾವಣೆಯ ನಂತರ ಸಂಕ್ಷಿಪ್ತವಾಗಿ ಆಡಳಿತ ಮೈತ್ರಿಕೂಟದ ಭಾಗವಾಗಿದ್ದರೂ ಪಕ್ಷವು ಫೆಬ್ರವರಿ 25, 2023 ರಂದು ವಿರೋಧ ಪಕ್ಷಕ್ಕೆ ಸ್ಥಳಾಂತರಗೊಂಡಿತು. ಹಿಂದೂ ರಾಜ್ಯ ಮತ್ತು ಸಾಂವಿಧಾನಿಕ ರಾಜಪ್ರಭುತ್ವಕ್ಕಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಏಕೈಕ ರಾಜಕೀಯ ಪಕ್ಷ ಇದಾಗಿದೆ.
ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ಬೇಡಿಕೆಗಳನ್ನು ಮುಂದಿಟ್ಟಿರುವ ಇತರ ಹಲವಾರು ಗುಂಪುಗಳಿವೆ. ಇವುಗಳಲ್ಲಿ ಕೆಲವು ಹಿಂದೂ ಗುಂಪುಗಳು ಮತ್ತು ಮಾಜಿ ರಾಜವಂಶಸ್ಥರು ಸೇರಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ ನೊಂದಿಗೆ ಮಾತನಾಡಿದ ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್ನ ಸಂಶೋಧನಾ ಫೆಲೋ ಮತ್ತು ನೇಪಾಳದ ವಿಷಯಗಳ ತಜ್ಞ ನಿಹಾರ್ ಆರ್ ನಾಯಕ್, "ಈಗ್ಗೆ ಕೆಲ ಕಾಲದಿಂದ ಈ ಅಭಿಯಾನ ನಡೆಯುತ್ತಿದೆ. 2008 ರಲ್ಲಿ ರಾಜಪ್ರಭುತ್ವವನ್ನು ರದ್ದುಗೊಳಿಸಿದಾಗಿನಿಂದ ರಾಜಮನೆತನದವರು ಈ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ" ಎಂದು ಹೇಳಿದರು.
ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲ ಹಿಂದೂಪರ ಸಂಘಟನೆಗಳು ಸಹ ಈ ಬೇಡಿಕೆಗಳನ್ನು ಎತ್ತುತ್ತಿವೆ. ಆಗಸ್ಟ್ 2021 ರಲ್ಲಿ, 20 ಹಿಂದೂ ಧಾರ್ಮಿಕ ಸಂಘಟನೆಗಳು ತನಾಹುನ್ ಜಿಲ್ಲೆಯ ದೇವಹತ್ ನಲ್ಲಿ "ಯುನೈಟೆಡ್ ಫ್ರಂಟ್" ಅನ್ನು ರಚಿಸಿವೆ ಮತ್ತು ಹಿಂದೂ ರಾಜ್ಯವನ್ನು ಪುನಃಸ್ಥಾಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿವೆ.
ಅದೇ ತಿಂಗಳು, ಹಿಂದೂ ಸಾಮ್ರಾಜ್ಯವನ್ನು ಪುನಃಸ್ಥಾಪಿಸಬೇಕೆಂದು ಪ್ರತಿಪಾದಿಸುವ ಒಂದು ಗುಂಪು ಅಭಿಯಾನವನ್ನು ಪ್ರಾರಂಭಿಸಿತು. 2006 ರಿಂದ 2009 ರವರೆಗೆ ನೇಪಾಳ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ರುಕ್ಮಂಗುಡ್ ಕಟಾವಾಲ್ ಈ ಅಭಿಯಾನದ ನೇತೃತ್ವ ವಹಿಸಿದ್ದಾರೆ. "ಹಿಂದೂ ರಾಷ್ಟ್ರ ಸ್ವಾಭಿಮಾನ್ ಜಾಗರಣ ಅಭಿಯಾನ" ಎಂದು ಕರೆಯಲ್ಪಡುವ ಈ ಅಭಿಯಾನವನ್ನು ರಾಷ್ಟ್ರವ್ಯಾಪಿ ವಿಸ್ತರಿಸುವ ಉದ್ದೇಶ ಸಂಘಟಕರದ್ದಾಗಿದೆ. "ಅಸ್ಮಿತೆ ಮತ್ತು ಸಂಸ್ಕೃತಿ" ಯನ್ನು ಸಂರಕ್ಷಿಸಲು ನಿರ್ದಿಷ್ಟ ಒತ್ತು ನೀಡುವ ಮೂಲಕ ನೇಪಾಳವನ್ನು ಹಿಂದೂ ರಾಷ್ಟ್ರವಾಗಿ ಪುನಃಸ್ಥಾಪಿಸುವ ಗುರಿ ಅವರದ್ದಾಗಿದೆ.
ಈ ಅಭಿಯಾನದಲ್ಲಿ ಶಂಕರಾಚಾರ್ಯ ಮಠದ ಮಠಾಧೀಶ ಕೇಶವಾನಂದ ಸ್ವಾಮಿ, ಕಠ್ಮಂಡುವಿನ ಶಾಂತಿಧಾಮದ ಪಿತಾಮಹ ಸ್ವಾಮಿ ಚತುರ್ಭುಜ ಆಚಾರ್ಯ, ಹನುಮಾನ್ ಜಿ ಮಹಾರಾಜ್ ಮತ್ತು ಹಿಂದೂ ಸ್ವಯಂಸೇವಕ ಸಂಘದ ಸಹ ಸಂಚಾಲಕ ಮತ್ತು ನೇಪಾಳದ ಮಾಜಿ ಪೊಲೀಸ್ ಸಹಾಯಕ ಇನ್ಸ್ ಪೆಕ್ಟರ್ ಜನರಲ್ ಕಲ್ಯಾಣ್ ಕುಮಾರ್ ತಿಮಿಲ್ಸಿನಾ ಸೇರಿದಂತೆ ಹಲವಾರು ಪ್ರಮುಖ ಹಿಂದೂ ಪರ ವ್ಯಕ್ತಿಗಳು ಭಾಗವಹಿಸಿದ್ದರು.
"ನಮ್ಮ ಅಭಿಯಾನವು ದೇಶದಲ್ಲಿ ಹಿಂದೂ ಮೂಲಭೂತವಾದವನ್ನು ಸ್ಥಾಪಿಸುವ ಉದ್ದೇಶ ಹೊಂದಿಲ್ಲ ಅಥವಾ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಂಥ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸುವ ಉದ್ದೇಶ ಹೊಂದಿಲ್ಲ. ಈ ಅಭಿಯಾನವು ನೇಪಾಳದ ಹಿಂದೂ ಅಸ್ಮಿತೆಯನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿದೆ." ಎಂದು ಕಟಾವಾಲ್ ಹೇಳಿದ್ದನ್ನು ಕಠ್ಮಂಡು ಪೋಸ್ಟ್ ಉಲ್ಲೇಖಿಸಿದೆ.
ದೇಶವು ಗಣರಾಜ್ಯವಾಗಿ ಪರಿವರ್ತನೆಗೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ನೇಪಾಳದ ರಾಜಕೀಯ ಪಕ್ಷಗಳೊಳಗಿನ ಕೆಲವು ಬಣಗಳು ಹಿಂದಿನ ಸ್ಥಿತಿಗೆ ಮರಳಲು ಹೆಚ್ಚಿನ ಒಲವು ತೋರಿಸುತ್ತಿರುವುದರಿಂದ, ಹಿಂದೂ ರಾಷ್ಟ್ರದ ವಾದವು ವೇಗವನ್ನು ಪಡೆಯಬಹುದು ಎಂದು ವಿಶ್ಲೇಷಕರು ಹೇಳಿದ್ದನ್ನು ಪೋಸ್ಟ್ ಉಲ್ಲೇಖಿಸಿದೆ. ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ತನ್ನನ್ನು ಕಮ್ಯುನಿಸ್ಟ್ ನಾಯಕ ಎಂದು ಗುರುತಿಸಿಕೊಂಡರೂ, ಹಿಂದೂ ಧರ್ಮದ ಬಗ್ಗೆ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದರು.
ಕಳೆದ ವರ್ಷ ಫೆಬ್ರವರಿಯಲ್ಲಿ ನೇಪಾಳದ ಮಾಜಿ ರಾಜ ಜ್ಞಾನೇಂದ್ರ ಶಾ ಅವರು ನೇಪಾಳದ ಹಿಂದಿನ ಸ್ಥಾನಮಾನವನ್ನು ಹಿಂದೂ ರಾಜ್ಯವೆಂದು ಪುನಃಸ್ಥಾಪಿಸುವ ಗುರಿಯನ್ನು ಹೊಂದಿರುವ ಸಾರ್ವಜನಿಕ ಉಪಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ನೇಪಾಳದ ಪೂರ್ವ ಝಾಪಾ ಜಿಲ್ಲೆಯಲ್ಲಿರುವ ಕಾಕರ್ಭಿಟ್ಟಾದಲ್ಲಿ 'ಧರ್ಮ, ರಾಷ್ಟ್ರ, ರಾಷ್ಟ್ರೀಯತೆ, ಸಂಸ್ಕೃತಿ ಮತ್ತು ನಾಗರಿಕರ ಮೆಗಾ ಅಭಿಯಾನ' ವನ್ನು ಶಾ ಉದ್ಘಾಟಿಸಿದರು. ಈ ಕಾರ್ಯಕ್ರಮವು ದೊಡ್ಡ ಜನಸಮೂಹವನ್ನು ಆಕರ್ಷಿಸಿತು. ಒಲಿ ನೇತೃತ್ವದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್) ಪಕ್ಷದ ಕೇಂದ್ರ ಸಮಿತಿ ಸದಸ್ಯೆ ದುರ್ಗಾ ಪ್ರಸಾಯಿ ಈ ಅಭಿಯಾನವನ್ನು ಆಯೋಜಿಸಿದ್ದರು.
ಮತ್ತೆ, ಕಳೆದ ವರ್ಷ ನವೆಂಬರ್ ನಲ್ಲಿ, ಶತಮಾನಗಳಷ್ಟು ಹಳೆಯದಾದ ರಾಜಪ್ರಭುತ್ವವನ್ನು ಪುನಃಸ್ಥಾಪಿಸುವಂತೆ ಒತ್ತಾಯಿಸಿ ಮತ್ತು ನೇಪಾಳವನ್ನು ಮತ್ತೊಮ್ಮೆ ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಕಠ್ಮಂಡುವಿನಲ್ಲಿ ಪ್ರದರ್ಶನ ನಡೆಸಿದ್ದರು. ಈ ಪ್ರದರ್ಶನಗಳ ನೇತೃತ್ವವನ್ನು ಪ್ರಸಾಯಿ ವಹಿಸಿದ್ದರು.
ನಾಯಕ್ ಅವರ ಪ್ರಕಾರ, ನೇಪಾಳದಲ್ಲಿ ಹೊಸ ಪ್ರಜಾಪ್ರಭುತ್ವ ವ್ಯವಸ್ಥೆ ವಿಫಲವಾಗಿದೆ ಎಂದು ನಂಬುವ ಪ್ರಜಾಪ್ರಭುತ್ವ ವಿರೋಧಿ ಗುಂಪುಗಳು ಈ ಪ್ರತಿಭಟನೆಗಳನ್ನು ನಡೆಸುತ್ತಿವೆ. ನೇಪಾಳಿ ಕಾಂಗ್ರೆಸ್ನ ಒಂದು ಗುಂಪು ಸಹ ಇಂತಹ ಬೇಡಿಕೆಗಳನ್ನು ಮುಂದಿಟ್ಟಿದ್ದರೂ, ಪಕ್ಷದ ಕೇಂದ್ರ ಕಾರ್ಯಕಾರಿ ಸಮಿತಿ ಇವುಗಳನ್ನು ತಿರಸ್ಕರಿಸಿದೆ. ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಈ ಬೇಡಿಕೆಗಳನ್ನು ಅನುಮೋದಿಸಲಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ : ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆಗೆ ತಡೆ: ವನ್ಯ ಸಂಪತ್ತಿನ ರಕ್ಷಣೆಯಲ್ಲಿ ಮಹತ್ವದ ಹೆಜ್ಜೆ