ಹೂಡಿಕೆ ಹಗರಣಗಳು: ಇಂದಿನ ದಿನಮಾನಗಳಲ್ಲಿ ಹಣ ಹೂಡಿಕೆ ಮಾಡಿಸಿ ವಂಚಿಸುವ ಹಗರಣಗಳ ಸಂಖ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಇಂಥ ಹಗರಣಗಳಲ್ಲಿ ಸಾಮಾನ್ಯವಾಗಿ ಒಂದು ರೂಪಾಯಿ ಹೂಡಿಕೆ ಮಾಡಿದರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಭಾರಿ ಲಾಭದ ಭರವಸೆಯನ್ನು ಜನರಿಗೆ ನೀಡಲಾಗುತ್ತದೆ. ಇಂಥ ಆಮಿಷ ಜನರಿಗೆ ಬಹಳ ಆಕರ್ಷಕವಾಗಿ ಕಾಣಿಸುತ್ತದೆ. ಆದರೆ ಇದೊಂದು ಕುತಂತ್ರವಲ್ಲದೆ ಮತ್ತೇನೂ ಅಲ್ಲ. ಸೈಬರ್ ಅಪರಾಧಿಗಳು ತಮ್ಮ ತಂತ್ರಗಳಿಂದ ಆಮಿಷವನ್ನು ಇನ್ನಷ್ಟು ಉತ್ತಮವಾಗಿ ಕಾಣುವಂತೆ ಮಾಡುತ್ತಾರೆ ಮತ್ತು ಜನರನ್ನು ಆಕರ್ಷಿಸುತ್ತಾರೆ. ಜನರ ಹಣ ತಮ್ಮ ಖಾತೆಗೆ ಬರುತ್ತಲೇ ಈ ವಂಚಕರು ಕಣ್ಮರೆಯಾಗಿ ಬಿಡುತ್ತಾರೆ. ಇಂಥ ಹಗರಣಗಳು ಈಗ ಸಾಕಷ್ಟು ನಡೆಯುತ್ತಿವೆ. ಆದಾಗ್ಯೂ ಸೈಬರ್ ವಂಚನೆಯಲ್ಲಿ ಹಲವಾರು ವಿಧಾನಗಳ ಮೂಲಕ ಜನರ ಹಣವನ್ನು ಎಗರಿಸಲಾಗುತ್ತದೆ. ಕೆಲವೊಂದು ಪ್ರಮುಖ ಮಾದರಿಯ ವಂಚನೆಗಳು ಹೇಗಾಗುತ್ತವೆ ತಿಳಿಯೋಣ. ಅಂಥ ಒಂದಿಷ್ಟು ಉದಾಹರಣೆಗಳು ಇಲ್ಲಿವೆ.
1) ವೆಬ್ ಸೈಟ್ ಆಧಾರಿತ ಹಗರಣಗಳು:ಇತ್ತೀಚೆಗೆ ಸ್ಕ್ಯಾಮರ್ಗಳು ಜನರನ್ನು ಮೋಸಗೊಳಿಸಲು ವೆಬ್ ಸೈಟ್ಗಳನ್ನು ಬಳಸುತ್ತಿದ್ದಾರೆ. ಮುಗ್ಧ ಜನರನ್ನು ವಂಚಿಸಲು ಇವರು ಬೋಗಸ್ ಆಫರ್ಗಳನ್ನು ಜನರ ಮುಂದಿಡುತ್ತಾರೆ. ಉದಾಹರಣೆಗೆ ನೀವು ಬ್ರೌಸ್ ಮಾಡುವಾಗ ಪಾಪ್ ಒಂದು ಕಾಣಿಸಿಕೊಂಡು ಪ್ರಖ್ಯಾತ ಬ್ರಾಂಡಿನ ಮೊಬೈಲ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ ಎಂಬ ಸಂದೇಶ ಕಾಣಿಸಬಹುದು. ಇದು ಸ್ಟಾಕ್ ಕ್ಲಿಯರೆನ್ಸ್ ಮಾರಾಟ ಎಂದು ನಿಮ್ಮನ್ನು ನಂಬಿಸಲಾಗುತ್ತದೆ. ನೀವು ಹೆಚ್ಚಿನ ಸಂಖ್ಯೆಯಲ್ಲಿ ಸರಕು ಖರೀದಿಸಿದರೆ ಇನ್ನೂ ಹೆಚ್ಚಿನ ಡಿಸ್ಕೌಂಟ್ ನೀಡಲಾಗುವುದು ಎಂದು ನಂಬಿಸಲಾಗುತ್ತದೆ. ಇಂಥ ಆಫರ್ನಲ್ಲಿ ಫೋನ್ ಕೊಂಡು ಸಂತೋಷವಾಗಿದ್ದಾರೆ ಎಂದು ಚಿತ್ರಿಸುವ ಗ್ರಾಹಕರ ಚಿತ್ರಗಳನ್ನು ಸಹ ನಿಮಗೆ ತೋರಿಸಬಹುದು. ನೀವು ಇದನ್ನು ನಂಬಿ ಹಣ ಪಾವತಿಸಿದರೆ ನಿಮಗೆ ಚೊಂಬೇ ಗತಿ. ಹೈದರಾಬಾದ್ನ ದೊಡ್ಡ ಸಾಫ್ಟ್ವೇರ್ ಕಂಪನಿಯೊಂದರ ಎಕ್ಸಿಕ್ಯೂಟಿವ್ ಒಬ್ಬರು ತನ್ನ ಸಿಬ್ಬಂದಿಗೆ ಬಹುಮಾನವಾಗಿ ನೀಡುವ ಸಲುವಾಗಿ ಇಂಥ ಆಫರ್ನಲ್ಲಿ 20 ಲಕ್ಷ ರೂ. ಮೌಲ್ಯದ ಪೋನ್ಗಳನ್ನು ಆರ್ಡರ್ ಮಾಡಿದ್ದರು. ಆದರೆ ಫೋನ್ ಡೆಲಿವರಿ ಆಗಲಿಲ್ಲ ಮತ್ತು ಹಣವೂ ಹೋಯಿತು. ಕೊನೆಗೆ ಅವರು ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.
2) ವಿದೇಶೀ ವಿನಿಮಯ ವ್ಯಾಪಾರದ ಹೆಸರಲ್ಲಿ ವಂಚನೆ:ವಿದೇಶಿ ವಿನಿಮಯ (ವಿದೇಶಿ ವಿನಿಮಯ) ವ್ಯಾಪಾರದ ಹೆಸರಲ್ಲಿ ಜನರನ್ನು ವಂಚಿಸಲು ಸ್ಕ್ಯಾಮರ್ಗಳು ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ (ವಿಒಐಪಿ) ಕರೆಗಳನ್ನು ಬಳಸುತ್ತಿದ್ದಾರೆ. ಇವರು ವಿದೇಶಿ ವಿನಿಮಯ ವ್ಯಾಪಾರ ಕಂಪನಿಗಳ ಪ್ರತಿನಿಧಿಗಳಂತೆ ನಟಿಸುತ್ತಾರೆ ಮತ್ತು ನೀವು ಅವರ ಬಳಿ ಹೂಡಿಕೆ ಮಾಡಿದರೆ ಭಾರಿ ಲಾಭ ನೀಡುವುದಾಗಿ ಭರವಸೆ ನೀಡುತ್ತಾರೆ. ಅಂತರರಾಷ್ಟ್ರೀಯ ವಹಿವಾಟುಗಳು ಹೆಚ್ಚಾಗುತ್ತಿದ್ದು ಕರೆನ್ಸಿ ವಿನಿಮಯಕ್ಕೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಇದರಲ್ಲಿ ದೊಡ್ಡ ಲಾಭವಿದೆ ಎಂದು ಅವರು ನಿಮ್ಮನ್ನು ನಂಬಿಸುತ್ತಾರೆ. ಜನರಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲು ಅವರು ನಕಲಿ ವೆಬ್ಸೈಟ್ಗಳು ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ. ಗ್ರಾಹಕರ ವಿಶ್ವಾಸ ಗಳಿಸಲು, ಅವರು ಆರಂಭದಲ್ಲಿ ಸಣ್ಣ ಪ್ರಮಾಣದ ಕಮಿಷನ್ ಪಾವತಿಸುತ್ತಾರೆ. ಇದರಿಂದ ಜನ ಮತ್ತಷ್ಟು ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡುತ್ತಾರೆ. ಹೀಗೆ ದೊಡ್ಡ ಮೊತ್ತದ ಹೂಡಿಕೆ ಬರುತ್ತಿರುವಂತೆಯೇ ಅವರು ಕಣ್ಮರೆಯಾಗಿ ಬಿಡುತ್ತಾರೆ. ಗಚಿಬೌಲಿಯ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಇಂಥ ಹಗರಣದಿಂದ 73 ಲಕ್ಷ ರೂ. ಕಳೆದುಕೊಂಡಿದ್ದಾರೆ.
3) ಫ್ರಾಂಚೈಸಿ ನೀಡುವುದಾಗಿ ವಂಚನೆ: ಅನೇಕ ಕಂಪನಿಗಳು ಈಗ ತಮ್ಮ ಶಾಖೆಗಳನ್ನು ಆರಂಭಿಸಲು ಫ್ರಾಂಚೈಸಿ ನೀಡುವುದು ಸಾಮಾನ್ಯ. ಆದರೆ ಸ್ಕ್ಯಾಮರ್ಗಳು ನಕಲಿ ಫ್ರಾಂಚೈಸಿ ಆಫರ್ಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಹೀಗಾಗಿ ಜನ ಜಾಗರೂಕರಾಗಿರಬೇಕಾಗುತ್ತದೆ. ವಂಚಕರು ತಾವು ಪ್ರಸಿದ್ಧ ಕಂಪನಿಗಳ ಫ್ರಾಂಚೈಸಿ ನೀಡುವುದಾಗಿ ಆಫರ್ ಮಾಡುತ್ತಾರೆ. ಇದಕ್ಕಾಗಿ ಅಸಲಿಯಂತೆ ಕಾಣೀಸುವ ದಾಖಲೆಗಳನ್ನು ಸಹ ಅವರು ನಿಮಗೆ ತೋರಿಸುತ್ತಾರೆ. ಆದರೆ ಒಂದೊಮ್ಮೆ ನೀವು ಫ್ರಾಂಚೈಸಿಗಾಗಿ ಹಣ ಪಾವತಿಸಿದರೆ ಅವರು ಹಣ ತೆಗೆದುಕೊಂಡು ಮಾಯವಾಗಿ ಬಿಡುತ್ತಾರೆ. ಹೈದರಾಬಾದ್ನಲ್ಲಿ ವ್ಯಕ್ತಿಯೊಬ್ಬರು ಕೆಎಫ್ಸಿ ಫ್ರಾಂಚೈಸಿ ಪಡೆಯುವ ಹೆಸರಿನಲ್ಲಿ 26.27 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಗ್ಯಾಸ್ ಡೀಲರ್ ಶಿಪ್ ಹೆಸರಲ್ಲಿ 45 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
4) ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ ವಂಚನೆ:ವಂಚಕರು ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ ಉದ್ಯೋಗಾಕಾಂಕ್ಷಿಗಳನ್ನು ದೊಡ್ಡ ಪ್ರಮಾಣದಲ್ಲಿ ವಂಚಿಸುತ್ತಿದ್ದಾರೆ. ಪ್ರಸಿದ್ಧ ಕಂಪನಿಯ ಪಾರ್ಟ್ ಟೈಮ್ ಜಾಬ್ ಕೊಡಿಸುವುದಾಗಿ ಇವರು ಆನ್ಲೈನ್ನಲ್ಲಿ ಜಾಹೀರಾತು ಹಾಕುತ್ತಾರೆ. ನಂತರ ಕೆಲಸ ಬೇಕೆಂದು ಕೇಳಿದ ಉದ್ಯೋಗಾಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರಗಳನ್ನು ಸಹ ಕಳುಹಿಸುತ್ತಾರೆ. ಯಾವುದೋ ವಿಮರ್ಶೆ ಬರೆಯುವ ಮೂಲಕ ಅಥವಾ ಕತೆ ಬರೆಯುವ ಮೂಲಕ ಹಣ ಗಳಿಸಬಹುದು, ಗೂಗಲ್ ರಿವೀವ್ ಬರೆದು ಹಣ ಗಳಿಸಬಹುದು ಎಂದು ಇವರು ನಂಬಿಸುತ್ತಾರೆ. ಆದರೆ ಪಾರ್ಟ್ ಟೈಮ್ ಜಾಬ್ ಪಡೆಯಲು ಇಂಥವರಿಗೆ ಹಣ ಪಾವತಿಸಿದರೆ ಕೆಲಸ ಸಿಗುವುದು ದೂರದ ಮಾತು, ಕೊಟ್ಟ ಹಣವೂ ಹೋಗುತ್ತದೆ. ಇಂಥ ಹಗರಣವೊಂದಕ್ಕೆ ಬಲಿಯಾಗಿ ಸರ್ಕಾರಿ ಉದ್ಯೋಗಿಯೊಬ್ಬರು 84.9 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
5) ಷೇರು ಮಾರುಕಟ್ಟೆಯಲ್ಲಿ ಲಾಭ ಕೊಡಿಸುವುದಾಗಿ ವಂಚನೆ:ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಸ್ಕ್ಯಾಮರ್ಗಳು ಷೇರು ಮಾರುಕಟ್ಟೆಯ ಹೆಸರಲ್ಲಿಯೂ ಈಗ ಜನರನ್ನು ವಂಚಿಸುತ್ತಿದ್ದಾರೆ. ಈ ವಂಚಕರು ತಾವು ಸ್ಟಾಕ್ ಬ್ರೋಕರ್ಗಳೆಂದು ಹೇಳಿಕೊಂಡು ಆನ್ಲೈನ್ನಲ್ಲಿ ಜಾಹೀರಾತು ನೀಡುತ್ತಾರೆ. ಯಾವ ಕಂಪನಿಯ ಷೇರು ಬೆಲೆ ಹೆಚ್ಚಾಗುತ್ತವೆ ಎಂಬ ಬಗ್ಗೆ ತಮಗೆ ಮಾಹಿತಿ ಇರುವುದಾಗಿ ಹೇಳಿ ತ್ವರಿತ ಲಾಭದ ಭರವಸೆ ನೀಡುತ್ತಾರೆ. ನೀವು ಬೆಳಿಗ್ಗೆ ಹೂಡಿಕೆ ಮಾಡಿದರೆ, ಸಂಜೆಯ ವೇಳೆಗೆ ಲಕ್ಷಾಂತರ ರೂಪಾಯಿ ಆದಾಯ ಪಡೆಯಬಹುದು ಎಂದು ಹೇಳುತ್ತಾರೆ. ಆರಂಭದಲ್ಲಿ ನಿಮ್ಮ ಖಾತೆಗೆ ಒಂದಿಷ್ಟು ಲಾಭಾಂಶವನ್ನು ಕೂಡ ಅವರು ಹಾಕುತ್ತಾರೆ. ಅಲ್ಲದೆ ಅಪ್ಲಿಕೇಶನ್ನಲ್ಲಿ ರಜಿಸ್ಟರ್ ಮಾಡಲು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಹ ಅವರು ಪಡೆಯುತ್ತಾರೆ. ಆದರೆ ಲಾಭ ಬಂದಿದೆ ಎಂದು ನೀವು ಹಣ ಹಿಂಪಡೆಯಲು ಯತ್ನಿಸಿದಾಗ ಅದು ಸಾಧ್ಯವಾಗುವುದಿಲ್ಲ. ಆಗ ಮತ್ತಷ್ಟು ಹೂಡಿಕೆ ಮಾಡಿದರೆ ಲಾಭದ ಹಣವನ್ನು ಪಡೆಯಬಹುದು ಎಂದು ನಂಬಿಸಿ ಮತ್ತೆ ಹೂಡಿಕೆ ಮಾಡಿಸಿಕೊಳ್ಳುತ್ತಾರೆ. ಆದರೆ ಕೊನೆಗೆ ಎಲ್ಲ ಹಣವನ್ನು ಎಗರಿಸಿ ವಂಚಕರು ಕಣ್ಮರೆಯಾಗುತ್ತಾರೆ. ಇಂಥ ಹಗರಣಕ್ಕೆ ಬಲಿಯಾದ ಹೈದರಾಬಾದಿನ ವ್ಯಕ್ತಿಯೊಬ್ಬರು 36 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
6)ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ:ಕಳೆದ ಕೆಲ ವರ್ಷಗಳಲ್ಲಿ ಕ್ರಿಪ್ಟೋಕರೆನ್ಸಿ ಲಾಭ ಗಳಿಸುವ ಆಕರ್ಷಕ ಮಾರ್ಗವಾಗಿ ಕಾಣಿಸಿದೆ. ಆದರೆ ವಂಚಕರು ಇದನ್ನೇ ಬಂಡವಾಳ ಮಾಡಿಕೊಂಡು ಜನರನ್ನು ದೊಡ್ಡ ಪ್ರಮಾಣದಲ್ಲಿ ವಂಚಿಸುತ್ತಿದ್ದಾರೆ. ಆರಂಭದಲ್ಲಿ ವಂಚಕರು ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಜನರನ್ನು ಸಂಪರ್ಕಿಸುತ್ತಾರೆ ಮತ್ತು ದೊಡ್ಡ ಲಾಭದ ಭರವಸೆ ನೀಡುತ್ತಾರೆ. ಒಮ್ಮೆ ಹೂಡಿಕೆ ಮಾಡಿದರೆ ಸಾಕು ತ್ವರಿತವಾಗಿ ಲಾಭ ಗಳಿಸಬಹುದು ಎಂದು ನಂಬಿಸುತ್ತಾರೆ. ಆದರೆ ಒಮ್ಮೆ ನೀವು ಹೂಡಿಕೆ ಮಾಡಿದ ನಂತರ ನಿಮ್ಮ ಹಣವನ್ನು ಹಿಂಪಡೆಯಲು ಸಾಧ್ಯವೇ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ಮತ್ತಷ್ಟು ಹೂಡಿಕೆ ಮಾಡುವಂತೆ ಅವರು ಜನರನ್ನು ಪ್ರೆರೇಪಿಸಿ ಎಲ್ಲ ಹಣ ಬಾಚಿಕೊಂಡು ಪರಾರಿಯಾಗುತ್ತಾರೆ. ಹೈದರಾಬಾದ್ನ ಕಾಪ್ರಾ ಪ್ರದೇಶದ ಐಟಿ ಉದ್ಯೋಗಿಯೊಬ್ಬರು ಇಂಥ ಹಗರಣದಲ್ಲಿ 78 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
7) ಪೊಂಜಿ ಸ್ಕೀಮ್ಗಳು:ಪೊಂಜಿ ಸ್ಕೀಮ್ ಎಂಬುದು ಜನರನ್ನು ವಂಚಿಸುವ ಮತ್ತೊಂದು ಮಾರ್ಗವಾಗಿದೆ. ಇಂಥ ಹಗರಣದಲ್ಲಿ ವಂಚಕರು ತಾವು ಸ್ಟಾಕ್ ಬ್ರೋಕಿಂಗ್ ಕಂಪನಿಯವರು ಅಥವಾ ಮತ್ತಾವುದೋ ಹೂಡಿಕೆ ಕಂಪನಿಯವರು ಎಂದು ನಂಬಿಸುತ್ತಾರೆ. ಜನ ತಾವು ಹೂಡಿಕೆ ಮಾಡುವುದಲ್ಲದೆ ಬೇರೆಯವರಿಂದ ಹೂಡಿಕೆ ಮಾಡಿಸಿದರೆ ದೊಡ್ಡ ಮೊತ್ತದ ಲಾಭ ಬರುವುದಾಗಿ ನಂಬಿಸುತ್ತಾರೆ. ಹೀಗೆ ಒಬ್ಬರಿಂದ ಮತ್ತೊಬ್ಬರನ್ನು ಹೂಡಿಕೆ ಮಾಡಿಸಿಕೊಳ್ಳುತ್ತ ದೊಡ್ಡ ಮೊತ್ತ ಸಂಗ್ರಹ ಮಾಡಿಕೊಳ್ಳುತ್ತಾರೆ. ನಂತರ ಒಂದು ದಿನ ಕಣ್ಮರೆಯಾಗುತ್ತಾರೆ. ಒಟ್ಟಾರೆಯಾಗಿ ಒಬ್ಬನಿಂದ ಹೂಡಿಕೆ ಮಾಡಿಸಿಕೊಂಡು ಅವನಿಗೆ ಕಮಿಷನ್ ನೀಡಲು ಅವನಿಂದಲೇ ಮತ್ತೊಬ್ಬನು ಹೂಡಿಕೆ ಮಾಡುವಂತೆ ಮಾಡುವುದು ಪೊಂಜಿ ಸ್ಕೀಮ್ನ ತಿರುಳಾಗಿದೆ. ಕೊನೆಗೊಂದು ದಿನ ಈ ಚಕ್ರ ಕುಸಿದು ಬೀಳುತ್ತದೆ ಮತ್ತು ವಂಚಕರು ದೊಡ್ಡ ಮೊತ್ತದೊಂದಿಗೆ ಪರಾರಿಯಾಗುತ್ತಾರೆ.