ಯುಎಸ್ ಅಧ್ಯಕ್ಷ ಜೋ ಬೈಡನ್ ಇತ್ತೀಚೆಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದು, 'ಪ್ರಸ್ತುತ ಅತ್ಯಂತ ಪ್ರಮುಖ ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳನ್ನು ನಿಭಾಯಿಸಲು' ವಾಷಿಂಗ್ಟನ್ ಪಾಕಿಸ್ತಾನಕ್ಕೆ ಬೆಂಬಲಿಸುವುದನ್ನು ಮುಂದುವರಿಸಲಿದೆ ಎಂದು ಉಲ್ಲೇಖಿಸಿದ್ದಾರೆ. ಆದರೆ 2019 ರ ಜುಲೈನಲ್ಲಿ ಇಮ್ರಾನ್ ಖಾನ್ ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ ಉಭಯ ದೇಶಗಳ ಉನ್ನತ ನಾಯಕತ್ವದ ನಡುವೆ ಯಾವುದೇ ಸಂಪರ್ಕ ಏರ್ಪಟ್ಟಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಪ್ರಧಾನಿ ಹುದ್ದೆಯನ್ನು ವಹಿಸಿಕೊಂಡಿದ್ದಕ್ಕಾಗಿ ಶೆಹಬಾಜ್ ಅವರಿಗೆ ಅಭಿನಂದನೆ ಹೇಳುವುದಾಗಲಿ, ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವುದಾಗಲಿ ಅಥವಾ ಪಾಕಿಸ್ತಾನಕ್ಕೆ ಆರ್ಥಿಕ ಬೆಂಬಲ ನೀಡುವ ಬಗ್ಗೆಯಾಗಲೀ ಬೈಡನ್ ಯಾವುದೇ ಉಲ್ಲೇಖ ಮಾಡದಿರುವುದು ಬಹಳ ಕುತೂಹಲಕಾರಿ ಸಂಗತಿಯಾಗಿದೆ.
ಅದರ ಬದಲಾಗಿ ಹವಾಮಾನ ಬದಲಾವಣೆ, ಮಾನವ ಹಕ್ಕುಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಸಹಕಾರವನ್ನು ಪತ್ರದಲ್ಲಿ ಉಲ್ಲೇಖಿಸಿರುವುದು ಗಮನಾರ್ಹ. ಆದರೆ ಪ್ರಸ್ತುತ ಹೆಚ್ಚುವರಿ ಸಾಲಕ್ಕಾಗಿ ಐಎಂಎಫ್ ಜತೆ ಸತತ ಮಾತುಕತೆ ನಡೆಸುತ್ತಿರುವ ಇಸ್ಲಾಮಾಬಾದ್ಗೆ ಈಗ ಈ ವಿಷಯದಲ್ಲಿ ಅಮೆರಿಕದ ಬೆಂಬಲ ತೀರಾ ಅಗತ್ಯವಾಗಿದೆ.
ಬೈಡನ್ ಅವರ ಪತ್ರ ಸಂಪರ್ಕದ ನಂತರ ಯುಎಸ್ ಸ್ಟೇಟ್ ಸೆಕ್ರೆಟರಿ ಆಂಥೋನಿ ಬ್ಲಿಂಕೆನ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ನಡುವೆ ದೂರವಾಣಿ ಮೂಲಕ ಸಂಭಾಷಣೆ ನಡೆದಿದೆ. ಪರಸ್ಪರ ಹಿತಾಸಕ್ತಿಯ ಎಲ್ಲಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಬದ್ಧತೆಯನ್ನು ಎರಡೂ ಪಕ್ಷಗಳು ಪುನರುಚ್ಚರಿಸಿವೆ ಎಂದು ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಗಾಜಾ, ಕೆಂಪು ಸಮುದ್ರ ಮತ್ತು ಅಫ್ಘಾನಿಸ್ತಾನದ ಬೆಳವಣಿಗೆಗಳಂತಹ ಪ್ರಾದೇಶಿಕ ಪ್ರಾಮುಖ್ಯತೆಯ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಅದು ಹೇಳಿದೆ.
ಈ ಯುಎಸ್-ಪಾಕ್ ಸಂವಾದವನ್ನು ಪಾಕಿಸ್ತಾನದ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ಕೆಲವರು ಇದು ಪಾಕಿಸ್ತಾನದ ಬಗ್ಗೆ ಯುಎಸ್ ನೀತಿಯಲ್ಲಿನ ಬದಲಾವಣೆ ಎಂದು ಭಾವಿಸುತ್ತಾರೆ. ಫೆಬ್ರವರಿ 8 ರ ಪಾಕಿಸ್ತಾನ ಚುನಾವಣೆಯ ನಂತರ, ಯುಎಸ್ ಕಾಂಗ್ರೆಸ್ನ 30 ಸದಸ್ಯರು ಅಧ್ಯಕ್ಷ ಬೈಡನ್ ಮತ್ತು ಆಂಟನಿ ಬ್ಲಿಂಕೆನ್ ಅವರಿಗೆ ಪತ್ರ ಬರೆದು, ಚುನಾವಣೆಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು, ಪಾಕಿಸ್ತಾನದ ಹೊಸ ಸರ್ಕಾರಕ್ಕೆ ಮಾನ್ಯತೆ ನೀಡದಂತೆ ಮನವಿ ಮಾಡಿದ್ದರು. ಬಹುಶಃ ಇದೇ ಬೈಡನ್ ಶೆಹಬಾಜ್ ಅವರನ್ನು ಅಭಿನಂದಿಸದೇ ಇರಲು ಕಾರಣವಾಗಿರಬಹುದು.
ಏತನ್ಮಧ್ಯೆ ಪಾಕಿಸ್ತಾನವು ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವಿನ ಸಂಬಂಧವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಅಫ್ಘಾನಿಸ್ತಾನದಿಂದ ಯುಎಸ್ ಅವಸರದಿಂದ ಹಿಂದೆ ಸರಿದ ನಂತರ ಪಾಕ್-ಯುಎಸ್ ಸಂಬಂಧಗಳು ಹಳಸಿವೆ. ತಾಲಿಬಾನ್ ಅನ್ನು ಬೆಂಬಲಿಸಿದ್ದಕ್ಕಾಗಿ ಪಾಕಿಸ್ತಾನವನ್ನು ಅಮೆರಕ ದೂಷಿಸಿತ್ತು. ಉಕ್ರೇನ್ ಯುದ್ಧದ ಸಮಯದಲ್ಲಿ ಇಮ್ರಾನ್ ಅವರ ಮಾಸ್ಕೋ ಭೇಟಿಯ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಇಮ್ರಾನ್ ತನ್ನ ಕುಖ್ಯಾತ 'ಸೈಫರ್' ಹೇಳಿಕೆಯ ಆಧಾರದ ಮೇಲೆ ತನ್ನ ಪದಚ್ಯುತಿಯ ಹಿಂದೆ ಯುಎಸ್ ಇದೆ ಎಂದು ಆರೋಪಿಸಿದ್ದು ಸಂಬಂಧಗಳನ್ನು ಮತ್ತಷ್ಟು ಹಾನಿಗೊಳಿಸಿತು.
ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಯುಎಸ್ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಅವರು ತಮ್ಮನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸುವ ಬಗ್ಗೆ ವಾಷಿಂಗ್ಟನ್ನಲ್ಲಿರುವ ಪಾಕಿಸ್ತಾನದ ರಾಯಭಾರಿಯೊಂದಿಗೆ ಚರ್ಚಿಸಿದ್ದಾರೆ ಎಂದು ಇಮ್ರಾನ್ ಸಾರ್ವಜನಿಕವಾಗಿ ಆರೋಪಿಸಿದ್ದರು. ಆದರೆ ಈಗ ಅನೇಕ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಇಮ್ರಾನ್ ಖಾನ್ ಜೈಲಿನಲ್ಲಿದ್ದಾರೆ.
ರಷ್ಯಾ-ಉಕ್ರೇನ್ ಸಂಘರ್ಷದ ವಿಷಯದಲ್ಲಿ ಪಾಕಿಸ್ತಾನ ತಟಸ್ಥತೆಯನ್ನು ಕಾಯ್ದುಕೊಂಡಿದ್ದರೂ, ಅದು ಅನಧಿಕೃತವಾಗಿ ಎರಡು ಯುಎಸ್ ಖಾಸಗಿ ಕಂಪನಿಗಳ ಮೂಲಕ ಉಕ್ರೇನ್ಗೆ ಮದ್ದುಗುಂಡುಗಳನ್ನು ಪೂರೈಸಿ 364 ಮಿಲಿಯನ್ ಡಾಲರ್ ಗಳಿಸಿತು. ಇವುಗಳನ್ನು ಪಾಕಿಸ್ತಾನದ ನೂರ್ ಖಾನ್ ವಾಯುಪಡೆಯ ನೆಲೆಯಿಂದ ಬ್ರಿಟಿಷ್ ಮಿಲಿಟರಿ ಸರಕು ವಿಮಾನಗಳ ಮೂಲಕ ವಿಮಾನದಲ್ಲಿ ಸಾಗಿಸಲಾಯಿತು. ಇದರಿಂದ ಅಮೆರಿಕ ಮತ್ತು ಪಾಕಿಸ್ತಾನ ಸಂಬಂಧಗಳಲ್ಲಿ ವಿಶ್ವಾಸ ಪುನಃ ಸ್ಥಾಪನೆಯಾಯಿತು ಮತ್ತು ಇದರ ಪರಿಣಾಮವಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಕಳೆದ ವರ್ಷ ಡಿಸೆಂಬರ್ನಲ್ಲಿ ಯುಎಸ್ಗೆ ಭೇಟಿ ನೀಡಿ ಯುಎಸ್ ವಿದೇಶಾಂಗ ಮತ್ತು ರಕ್ಷಣಾ ಕಾರ್ಯದರ್ಶಿಗಳನ್ನು ಭೇಟಿಯಾದರು.
ಮುನೀರ್ ಅವರ ಭೇಟಿಯು ನಂತರ ಪಾಕಿಸ್ತಾನದಲ್ಲಿ ನಡೆದ ಘಟನೆಗಳು, ಚುನಾವಣೆಗಳನ್ನು ವಿಳಂಬಗೊಳಿಸುವುದು ಮತ್ತು ಚುನಾವಣೆಗೆ ಕೆಲವು ದಿನಗಳ ಮೊದಲು ಇಮ್ರಾನ್ ಖಾನ್ ಅವರನ್ನು ಜೈಲಿಗೆ ಹಾಕಿದ್ದಕ್ಕೆ ಮುನ್ನುಡಿಯಾಗಿರಬಹುದು. ಈ ಎಲ್ಲ ಕ್ರಮಗಳಿಗೆ ಯುಎಸ್ ಅನುಮೋದನೆ ಇದ್ದುದರಿಂದಲೇ ಅದರಿಂದ ಈ ಬಗ್ಗೆ ಯಾವುದೇ ಟೀಕೆ ಬರಲಿಲ್ಲ. 'ಅಂತಿಮವಾಗಿ ಪಾಕಿಸ್ತಾನದ ಜನರು ತಮ್ಮ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತಾರೆ' ಎಂದು ಯುಎಸ್ ವಕ್ತಾರರು ಹೇಳಿದರು. ಈ ಸಂದರ್ಭದಲ್ಲಿ ಇದನ್ನು ಕೇಜ್ರಿವಾಲ್ ಬಂಧನದ ಬಗ್ಗೆ ಅಮೆರಿಕದ ಕಾಮೆಂಟ್ ಗಳಿಗೆ ಹೋಲಿಸಿ ನೋಡಬೇಕಾಗುತ್ತದೆ. ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರೊಂದಿಗಿನ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ಪತ್ರಕರ್ತರೊಬ್ಬರು ಈ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಾರೆ.