ಕರ್ನಾಟಕ

karnataka

ETV Bharat / opinion

ಯುಎಸ್​ ಅಧ್ಯಕ್ಷೀಯ ಚುನಾವಣೆ: ಮಂಕಾದ ಬೈಡನ್, ಉತ್ಸಾಹದಲ್ಲಿ ಟ್ರಂಪ್ - US Presidential Election

ಅಮೆರಿಕದಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಗಳ ಬಗ್ಗೆ ಒಂದು ಅವಲೋಕನ ಇಲ್ಲಿದೆ.

ಯುಎಸ್​ ಅಧ್ಯಕ್ಷೀಯ ಅಭ್ಯರ್ಥಿಗಳಾದ ಬೈಡನ್ ಹಾಗೂ ಟ್ರಂಪ್
ಯುಎಸ್​ ಅಧ್ಯಕ್ಷೀಯ ಅಭ್ಯರ್ಥಿಗಳಾದ ಬೈಡನ್ ಹಾಗೂ ಟ್ರಂಪ್ (ETV Bharat)

By ETV Bharat Karnataka Team

Published : Jun 30, 2024, 7:51 PM IST

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ಬರುವ ನವೆಂಬರ್​ನಲ್ಲಿ ನಡೆಯಲಿವೆ. ಎರಡನೇ ಅವಧಿಗೆ ಅಧ್ಯಕ್ಷರಾಗಲು ಬಯಸುತ್ತಿರುವ ಹಾಲಿ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರತಿಸ್ಪರ್ಧಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (2020 ರಲ್ಲಿ ಸೋತವರು) ನಡುವಿನ ಚುನಾವಣಾ ಪೂರ್ವ ಚರ್ಚೆ ಟಿವಿಗಳಲ್ಲಿ ಪ್ರಸಾರವಾಯಿತು. 90 ನಿಮಿಷಗಳ ಕಾಲ ನಡೆದ ಈ ಚರ್ಚೆಯನ್ನು 50 ದಶಲಕ್ಷಕ್ಕೂ ಹೆಚ್ಚು ವೀಕ್ಷಕರು ಟಿವಿಯಲ್ಲಿ ವೀಕ್ಷಿಸಿದರು.

ಅಮೆರಿಕದ ಚುನಾವಣೆಗಳ ಬಗ್ಗೆ ಮಾಧ್ಯಮ ಪಂಡಿತರು ಗಂಟೆಗಳ ಕಾಲ ವಿಶ್ಲೇಷಣೆ ಮಾಡುತ್ತಾರೆ ಮತ್ತು ಇವುಗಳ ಬಗ್ಗೆ ಜಾಗತಿಕವಾಗಿ ಚರ್ಚಿಸಲಾಗುತ್ತದೆ. ಭವಿಷ್ಯದ ಅಮೆರಿಕ ಅಧ್ಯಕ್ಷರ ನೀತಿಗಳು, ವಿಶ್ವದ ಬಗ್ಗೆ ಅವರ ದೃಷ್ಟಿಕೋನ ಮತ್ತು ಒಳನೋಟಗಳ ಬಗ್ಗೆ ಮುಖ್ಯವಾಗಿ ಚರ್ಚಿಸಲಾಗುತ್ತದೆ.

ಈ ಚರ್ಚೆಯ ಪ್ರಮುಖ ವಿಷಯವೆಂದರೆ ಪ್ರಸ್ತುತ ಅಧ್ಯಕ್ಷ ಬೈಡನ್ ಅವರ ಕಾರ್ಯಕ್ಷಮತೆ, ಅವರ ವಯಸ್ಸು, ಫಿಟ್ನೆಸ್ ಹಾಗೂ ವಿಶೇಷವಾಗಿ ಅವರ ಅರಿವಿನ ಆರೋಗ್ಯದ ಬಗ್ಗೆ. 81 ವರ್ಷದ ಬೈಡನ್ ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಪ್ರಮುಖ ಭಾಷಣಗಳ ಸಂದರ್ಭಗಳಲ್ಲಿ ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಮಾತನಾಡುವಾಗ, ಇದ್ದಕ್ಕಿದ್ದಂತೆ ತಮ್ಮ ಯೋಚನಾ ಲಹರಿಯನ್ನು ಕಳೆದುಕೊಂಡು ಗೊಂದಲಕ್ಕೊಳಗಾಗಿದ್ದರು. ಕೆಲ ಬಾರಿ ತಪ್ಪಾಗಿ ಮಾತನಾಡಿದ್ದರು. ಅಲ್ಲದೇ ಇನ್ನೂ ಕೆಲ ಬಾರಿ ಜಾರಿಬಿದ್ದಿದ್ದರು.

ಹಾಗಾದರೆ ಮುಂದಿನ ನಾಲ್ಕು ವರ್ಷ ಅವರೇ ಅಧ್ಯಕ್ಷರಾದರೆ, 86ನೇ ವಯಸ್ಸಿನವರೆಗೆ ಅವರು ಎಷ್ಟು ಕಾರ್ಯಕ್ಷಮತೆಯಿಂದ ಕೆಲಸ ಮಾಡಬಲ್ಲರು? ಅವರು ಅಮೆರಿಕವನ್ನು ಸಶಕ್ತವಾಗಿ ಮುನ್ನಡೆಸಬಲ್ಲರೇ? ಧ್ರುವೀಕೃತ ಸಮಾಜವನ್ನು ಮತ್ತು ಅನೇಕ ಅಂತರರಾಷ್ಟ್ರೀಯ ವಿರೋಧಿಗಳನ್ನು ನಿರ್ವಹಿಸಬಹುದೇ? ಈ ಎಲ್ಲ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ಈ ಹಿಂದಿನ ಘಟನೆಗಳನ್ನು ನೋಡಿದರೆ, ಅವರ ಬಗ್ಗೆ ದೈಹಿಕವಾಗಿ ಅಂಥ ನಿರೀಕ್ಷೆಗಳೇನೂ ಇರಲಿಲ್ಲ. ಆದಾಗ್ಯೂ ಓರ್ವ ಅಧ್ಯಕ್ಷರಾಗಿ ಬೈಡನ್ ದಯನೀಯವಾಗಿ ವಿಫಲರಾದರು. ವೇದಿಕೆಯ ಮೇಲೆ ನಿಧಾನವಾಗಿ ನಡೆಯುವುದರೊಂದಿಗೆ ಪ್ರಾರಂಭಿಸಿ, ಅವರ ಭಾಷಣಗಳು ಗೊಣಗಾಟದಂತಿರುತ್ತಿದ್ದವು. ಇನ್ನು ಅನೇಕ ಬಾರಿ ಅವರು ಮಾತು ಬಾರದೆ ತಡವರಿಸಿದ್ದರು. ಅನೇಕ ಬಾರಿ ಅವರು ಉದ್ಯೋಗಗಳು, ತೆರಿಗೆಗಳು ಮತ್ತು ಆರ್ಥಿಕತೆಯ ಬಗ್ಗೆ ಮಾತನಾಡುವಾಗ ಸಾವಿರಗಳ ಬದಲು ನೂರು ಎನ್ನುವುದು, ಬಿಲಿಯನ್​ಗಳ ಬದಲಿಗೆ ಟ್ರಿಲಿಯನ್​ ಎನ್ನುವುದು ಹೀಗೆ ಅನೇಕ ತಪ್ಪು ಉಲ್ಲೇಖಗಳನ್ನು ಮಾಡಿದ್ದಾರೆ.

ಆರೋಗ್ಯ ರಕ್ಷಣೆಯ ವಿಷಯದಲ್ಲಿ ಮಾತನಾಡುತ್ತಿರುವಾಗ ಒಮ್ಮೆ ಅವರು ಹಿರಿಯರ ಆರೋಗ್ಯ ರಕ್ಷಣೆಗಾಗಿ ಸರ್ಕಾರದ ಯೋಜನೆಯಾದ ಮೆಡಿಕೇರ್​ ಅನ್ನು ಸೋಲಿಸಿದ್ದೇವೆ ಎಂದು ಅಸಂಬದ್ಧವಾಗಿ ಹೇಳಿದ್ದರು. ಮತ್ತೊಂದೆಡೆ, ಟ್ರಂಪ್ ಅವರು ತಮ್ಮ ಆಡಳಿತಾವಧಿಯಲ್ಲಿ ಕೈಗೊಂಡ ನೀತಿಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡಿ ಗಮನ ಸೆಳೆದರು.

ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಹೊರತಾಗಿಯೂ ಹಣದುಬ್ಬರವನ್ನು ನಿಭಾಯಿಸಿದ್ದು, ತೆರಿಗೆಗಳನ್ನು ಗಣನೀಯವಾಗಿ ಕಡಿತಗೊಳಿಸಿದ್ದು ಮತ್ತು ಉದ್ಯೋಗಗಳು ಹೆಚ್ಚಾಗಿರುವುದನ್ನು ಟ್ರಂಪ್ ಪರಿಣಾಮಕಾರಿಯಾಗಿ ಎತ್ತಿ ತೋರಿಸಿದರು. ಇಬ್ಬರೂ ಅಭ್ಯರ್ಥಿಗಳು ಇಸ್ರೇಲ್​ನ ವಿಷಯದಲ್ಲಿ ಒಂದೇ ರೀತಿಯ ನಿಲುವನ್ನು ಹೊಂದಿದ್ದಾರೆ. ಆದರೂ ಬೈಡನ್ ತಮ್ಮ ನಿಲುವನ್ನು ಸೂಕ್ತವಾಗಿ ವಿವರಿಸಲು ಸಾಧ್ಯವಾಗಲಿಲ್ಲ. ಇಷ್ಟಾದರೂ ವಿದೇಶಾಂಗ ನೀತಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯಲಿಲ್ಲ.

ಟ್ರಂಪ್ ನೇತೃತ್ವದ ಕನ್ಸರ್ವೇಟಿವ್​​ಗಳು ಸುಪ್ರೀಂ ಕೋರ್ಟ್ ತೀರ್ಪನ್ನು (ರೋ ವರ್ಸಸ್ ವೇಡ್) ರದ್ದುಗೊಳಿಸಿ ಗರ್ಭಪಾತವನ್ನು ಕಾನೂನುಬಾಹಿರಗೊಳಿಸಿದ ವಿಷಯದ ಬಗ್ಗೆ, ಬೈಡನ್ ತಮ್ಮದೇ ಆದ ನಿಲುವನ್ನು ಹೊಂದಿದ್ದರು. ಇದನ್ನು ಅನೇಕ ಮಹಿಳಾ ಮತದಾರರು ಬೆಂಬಲಿಸಿದರು. ಟ್ರಂಪ್ ಎದುರಿಸಿದ ಅನೇಕ ಪ್ರಕರಣಗಳು ಮತ್ತು ಅಪರಾಧದ ಶಿಕ್ಷೆಗಳ ಬಗ್ಗೆ ಬೈಡನ್ ಕೇಳಿದ ಪ್ರಶ್ನೆಗಳನ್ನು ಟ್ರಂಪ್ ತಪ್ಪಿಸಿಕೊಂಡರು. ಜನವರಿ 6, 2021 ರಂದು ನಡೆದ ಹಿಂದಿನ ಚುನಾವಣೆಯಲ್ಲಿ ಸೋತ ನಂತರ ಟ್ರಂಪ್ ಬೆಂಬಲಿಗರು ಯುಎಸ್ ಕಾಂಗ್ರೆಸ್​ಗೆ ನುಗ್ಗಿದರು ಎಂಬ ಆರೋಪವು ಇನ್ನೂ ಉದಾರವಾದಿ ವಲಯಗಳಲ್ಲಿ ಮಾಜಿ ಅಧ್ಯಕ್ಷರಿಗೆ ಅಂಟಿಕೊಂಡಿದೆ.

ವಲಸೆಯ ಜ್ವಲಂತ ವಿಷಯದ ಬಗ್ಗೆ ಮಾತನಾಡಿದ ಟ್ರಂಪ್, ದಕ್ಷಿಣ ಅಮೆರಿಕಾದಿಂದ ಯುಎಸ್​ಗೆ ಅಕ್ರಮ ವಲಸಿಗರ ಹೆಚ್ಚಳವನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ತಮ್ಮ ವಾಕ್ಚಾತುರ್ಯದಿಂದ ಮತದಾರರಿಗೆ ಮನವರಿಕೆ ಮಾಡಿಕೊಟ್ಟರು.

ಅಪರಾಧಗಳ ಹೆಚ್ಚಳದ ಬಗೆಗಿನ ಆತಂಕವನ್ನು ಎತ್ತಿದ ಟ್ರಂಪ್, ಅಪರಾಧಗಳನ್ನು ನಿಭಾಯಿಸುವಲ್ಲಿ ಬೈಡನ್ ವಿಫಲರಾಗಿದ್ದಾರೆ ಎಂದರು. ಚರ್ಚೆಯ ಸಮಯದಲ್ಲಿ ಈ ವಿಷಯದ ಬಗ್ಗೆ ಬೈಡನ್ ಅವರಿಗೆ ಸ್ಪಷ್ಟೀಕರಣ ನೀಡಲು ಸಾಧ್ಯವಾಗಲಿಲ್ಲ. ಆದರೆ ಬೈಡನ್ ಅವರ ಗೊಂದಲಕ್ಕೆ ಪ್ರತಿಕ್ರಿಯೆಯಾಗಿ ಟ್ರಂಪ್ ಅವರ ಪುನರಾವರ್ತನೆಗಳು ಈ ಚರ್ಚೆಯ ಪ್ರಮುಖ ಅಂಶವಾಯಿತು. ಹೀಗಾಗಿ ಬೈಡನ್ ಅವರ ಕಳಪೆ ಪ್ರದರ್ಶನವು ಡೆಮಾಕ್ರಟಿಕ್ ಪಕ್ಷದ ವ್ಯವಸ್ಥಾಪಕರನ್ನು ಚಿಂತೆಗೆ ದೂಡಿದೆ. ಬೈಡನ್ ಪ್ರಚಾರವು ಈಗಾಗಲೇ ಅವರ ವಯಸ್ಸು, ಅವರ ಅರಿವಿನ ಆರೋಗ್ಯ ಮತ್ತು ಸರಾಸರಿ ಮತದಾರರನ್ನು ಚಿಂತೆಗೀಡುಮಾಡುವ ಜೀವನ ವೆಚ್ಚದ ಬಿಕ್ಕಟ್ಟುಗಳ ಬಗ್ಗೆ ಕಳವಳಗಳ ಕಾರಣಗಳಿಂದ ಹಿನ್ನಡೆ ಅನುಭವಿಸುತ್ತಿದೆ. ಯುಎಸ್ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ಹೆಚ್ಚಿನ ರಾಷ್ಟ್ರ ಮತ್ತು ರಾಜ್ಯಗಳ ಸಮೀಕ್ಷೆಗಳಲ್ಲಿ ಬೈಡನ್ ಟ್ರಂಪ್​​ಗಿಂತ ಹಿಂದಿದ್ದಾರೆ.

ಈ ಚರ್ಚೆಯ ನಂತರ ಅನೇಕ ಡೆಮೋಕ್ರಾಟ್​ಗಳು ಚುನಾವಣೆಯಲ್ಲಿ ಸೋಲಿನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ತಮ್ಮ ಪಕ್ಷ ಜಯ ಗಳಿಸಬೇಕಾದರೆ ಬೈಡನ್ ಬದಲಿಗೆ ಬೇರೆಯವರನ್ನು ಅಭ್ಯರ್ಥಿಯನ್ನಾಗಿಸಬೇಕೆಂಬ ಕೂಗು ಕೇಳಿ ಬಂದಿದೆ. ಆದರೆ ಡೆಮಾಕ್ರಟಿಕ್ ಪಕ್ಷದ ಉನ್ನತ ನಾಯಕರು ಮತ್ತು ಬರಾಕ್ ಒಬಾಮಾ ಅವರಂತಹ ಹಿರಿಯ ನಾಯಕರು ಇದನ್ನು ನಿರಾಕರಿಸುತ್ತಿದ್ದಾರೆ. ಈ ಒಂದು ಚರ್ಚೆಯು ಬೈಡನ್ ಅವರ ಗೆಲುವಿನ ಸಾಧ್ಯತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ಈ ಆಡಳಿತವು ಸಾಮಾನ್ಯ ಜನರಿಗೆ ಸಾಕಷ್ಟು ಅನುಕೂಲ ಮಾಡಿದೆ ಎಂಬ ಅಂಶವನ್ನು ಅವರು ಪರಿಗಣಿಸುತ್ತಿದ್ದಾರೆ.

ಅದೇ ಸಮಯದಲ್ಲಿ ಟ್ರಂಪ್ ಮತದಾರರನ್ನು ಧ್ರುವೀಕರಣ ಮಾಡುವ ಸಾಮರ್ಥ್ಯದ ವ್ಯಕ್ತಿಯಾಗಿರುವುದು ಗಮನಾರ್ಹ. ಅವರು ಮಧ್ಯ ಅಮೆರಿಕಾದಲ್ಲಿ ದೊಡ್ಡ ಸಂಪ್ರದಾಯವಾದಿ ಮತ್ತು ಕ್ರಿಶ್ಚಿಯನ್ ಸಮುದಾಯದ ಬೆಂಬಲವನ್ನು ಹೊಂದಿದ್ದಾರೆ. ಬೈಡನ್ ಮತ್ತು ಡೆಮೋಕ್ರಾಟ್​​ಗಳು ಸಾಂಪ್ರದಾಯಿಕವಾಗಿ ಕಪ್ಪು ಮತದಾರರು ಮತ್ತು ಹೆಚ್ಚಿನ ಸಂಖ್ಯೆಯ ಅಲ್ಪಸಂಖ್ಯಾತರ ಬೆಂಬಲವನ್ನು ಹೊಂದಿದ್ದಾರೆ.

ಆದಾಗ್ಯೂ, ಈ ಬಾರಿ ಮತದಾನಕ್ಕೆ ಹಿಂಜರಿಯುವ ಸಮುದಾಯಗಳು ಹೊರಗೆ ಬಂದು ಮತ ಚಲಾಯಿಸುವಂತೆ ಮಾಡುವುದು ಬಹಳ ದೊಡ್ಡ ಕಾರ್ಯವಾಗಲಿದೆ. ಗಾಜಾದಲ್ಲಿ ಇಸ್ರೇಲ್ ದಾಳಿಯನ್ನು ಬೆಂಬಲಿಸಿದ ಅಮೆರಿಕದ ನಡೆಯನ್ನು ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳು ಕೆಲ ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವುದು ಮತ್ತೊಂದು ಪ್ರಮುಖ ಚುನಾವಣಾ ವಿಷಯವಾಗಿದೆ.

ಇದಲ್ಲದೆ, ಇಸ್ರೇಲ್​ ದಾಳಿಯಿಂದ ಗಾಜಾದಲ್ಲಿ ಸಾವಿಗೀಡಾಗುತ್ತಿರುವ ಪ್ಯಾಲೆಸ್ಟೈನಿಯರ ಹತ್ಯೆಯಲ್ಲಿ ಬೈಡನ್ ಕೂಡ ಭಾಗಿಯಾಗಿದ್ದಾರೆ ಎಂದು ನಂಬುವ ಅನೇಕ ಮುಸ್ಲಿಂ ಮತದಾರರು ಅವರಿಂದ ದೂರವಾಗಿದ್ದಾರೆ. ಕೆನಡಿಗಳ ಅತ್ಯಂತ ಪ್ರಸಿದ್ಧ ಅಮೇರಿಕನ್ ಕುಟುಂಬದಿಂದ ಬಂದಿರುವ ರಾಬರ್ಟ್ ಕೆನಡಿ ಜೂನಿಯರ್ ಮೂರನೇ ಅಭ್ಯರ್ಥಿಯಾಗಿದ್ದಾರೆ. ಇವರು ಪ್ರಜಾಪ್ರಭುತ್ವವಾದಿಗಳ ಉದಾರವಾದಿ ಮತಗಳನ್ನು ಪಡೆಯಬಹುದು. ಆದರೂ ಸಾಂಪ್ರದಾಯಿಕವಾಗಿ ಅಮೆರಿಕನ್ ಚುನಾವಣೆ ಎರಡು ಪಕ್ಷಗಳ ನಡುವಿನ ವ್ಯವಹಾರವಾಗಿದೆ.

ಯುಎಸ್​ನಲ್ಲಿ ಚುನಾವಣಾ ದಿನದ ಕ್ಷಣಗಣನೆಯ ಕ್ಯಾಲೆಂಡರ್ ಬಹಳಷ್ಟು ಕಾರ್ಯಚಟುವಟಿಕೆಗಳಿಂದ ಕೂಡಿದೆ. ಆಗಸ್ಟ್ 19 ರಂದು ಚಿಕಾಗೋದಲ್ಲಿ ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್ ನಡೆಯಲಿದ್ದು, ಈ ಸಮಾವೇಶದಲ್ಲಿ ಎಲ್ಲಾ ಪ್ರತಿನಿಧಿಗಳು ಮತ ಚಲಾಯಿಸಿದ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. ಟ್ರಂಪ್ ಅವರ ಉಮೇದುವಾರಿಕೆಯ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದ ಕಾರಣ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯ ಘೋಷಣೆ ಜುಲೈ ಮಧ್ಯದಲ್ಲಿ ಆಗಲಿದೆ. ಈ ಹಂತದಿಂದ ಔಪಚಾರಿಕವಾಗಿ ಚುನಾವಣಾ ಪ್ರಚಾರ ಆರಂಭವಾಗಲಿದೆ.

ಈ ಮೊದಲ ಚರ್ಚೆಯನ್ನು ಆಯೋಜಿಸಿದ್ದ ಸಿಎನ್ಎನ್ ಟಿವಿ ಸುದ್ದಿ ನೆಟ್ ವರ್ಕ್ ಆಗಸ್ಟ್​ನಲ್ಲಿ ಎರಡನೇ ಚರ್ಚೆ ನಡೆಯುವುದಾಗಿ ಘೋಷಿಸಿದೆ. ಆದರೆ ಈ ಮೊದಲ ಚರ್ಚೆಯಲ್ಲಿ ಬೈಡನ್ ಮಾಡಿಕೊಂಡಿರುವ ಎಡವಟ್ಟುಗಳನ್ನು ನೋಡಿದರೆ ಅವರ ಚುನಾವಣಾ ಮ್ಯಾನೇಜರ್​ಗಳು ಅವರನ್ನು ಮತ್ತೊಮ್ಮೆ ಬಹಿರಂಗ ಚರ್ಚೆಗೆ ಕಳುಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ, ಈ ಯುಎಸ್ ಅಧ್ಯಕ್ಷೀಯ ಚರ್ಚೆ ಮತ್ತು ಅದರ ನಂತರದ ಪರಿಣಾಮಗಳು ವಿಶ್ವದಾದ್ಯಂತದ ಲಕ್ಷಾಂತರ ಜನರಿಗೆ ಆತಂಕ ಹುಟ್ಟಿಸುವುದರ ಜೊತೆಗೆ ಮನರಂಜನೆಯನ್ನೂ ನೀಡುತ್ತಿವೆ.

ಲೇಖನ: ಅನುರಾಧಾ ಚೆನೋಯ್, ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕರು ಮತ್ತು ಟ್ರಾನ್ಸ್​ ನ್ಯಾಷನಲ್ ಇನ್ ಸ್ಟಿಟ್ಯೂಟ್​ನ ಅಸೋಸಿಯೇಟ್ ಫೆಲೋ

ಇದನ್ನೂ ಓದಿ : ಧರ್ಮಶಾಲಾದಲ್ಲಿ ಅಮೆರಿಕ ನಿಯೋಗದಿಂದ ದಲೈ ಲಾಮಾ ಭೇಟಿ: ಚೀನಾಗೆ ಕಠಿಣ ಸಂದೇಶ ರವಾನಿಸಿದ ಭಾರತ - Nancy Pelosi in Dharamshala

ABOUT THE AUTHOR

...view details