ಕಳೆದ ವಾರ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಹೌಸ್ ಫಾರಿನ್ ಅಫೇರ್ಸ್ ಕಮಿಟಿಯ ರಿಪಬ್ಲಿಕನ್ ಅಧ್ಯಕ್ಷ ಮೈಕೆಲ್ ಮೆಕ್ಕಾಲ್ ನೇತೃತ್ವದ ಏಳು ಸದಸ್ಯರ ದ್ವಿಪಕ್ಷೀಯ ನಿಯೋಗದ ಭಾಗವಾಗಿ ಭಾರತಕ್ಕೆ ಆಗಮಿಸಿದ್ದರು. ವೈದ್ಯಕೀಯ ಚಿಕಿತ್ಸೆಗಾಗಿ ದಲೈ ಲಾಮಾ ಅವರು ಅಮೆರಿಕಕ್ಕೆ ತೆರಳುವ ಮುನ್ನ ಅವರನ್ನು ಭೇಟಿಯಾಗುವುದು ನಿಯೋಗದ ಉದ್ದೇಶವಾಗಿತ್ತು. ಟಿಬೆಟಿಯನ್ ಜನತೆಯೊಂದಿಗೆ ಅಮೆರಿಕದ ಬೆಂಬಲವನ್ನು ಪ್ರದರ್ಶಿಸಲು ನ್ಯಾನ್ಸಿ ಪೆಲೋಸಿ ಅವರು ಧರ್ಮಶಾಲಾದಲ್ಲಿ ಎರಡು ದಿನ ತಂಗಿದ್ದರು. ದಲೈ ಲಾಮಾ ಮತ್ತು ದೇಶಭ್ರಷ್ಟ ಟಿಬೆಟಿಯನ್ ಸರ್ಕಾರವನ್ನು ಭೇಟಿ ಮಾಡುವುದರ ಹೊರತಾಗಿ, ಅವರು ಟಿಬೆಟಿಯನ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.
ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ 'ರಿಸಾಲ್ವ್ ಟಿಬೆಟ್ ಆಕ್ಟ್' (Resolve Tibet Act) ನಿರ್ಣಯವನ್ನು ಅಂಗೀಕರಿಸಿದ ಸಮಯದಲ್ಲಿಯೇ ನ್ಯಾನ್ಸಿ ಪೆಲೋಸಿ ದಲೈ ಲಾಮಾ ಅವರನ್ನು ಭೇಟಿಯಾಗಿದ್ದು ಗಮನಾರ್ಹ. 'ರಿಸಾಲ್ವ್ ಟಿಬೆಟ್ ಆಕ್ಟ್' ಕಾಯ್ದೆಯು 2010 ರಿಂದ ಸ್ಥಗಿತಗೊಂಡಿರುವ ಟಿಬೆಟಿಯನ್ ನಾಯಕರೊಂದಿಗೆ ಮಾತುಕತೆಯನ್ನು ಪುನರಾರಂಭಿಸಲು ಬೀಜಿಂಗ್ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ. ಮೈಕೆಲ್ ಮೆಕ್ಕಾಲ್ ಹೇಳಿದಂತೆ, 'ಇದು ಟಿಬೆಟ್ ಜನರಿಗೆ ತಮ್ಮ ಭವಿಷ್ಯದ ಸರ್ಕಾರವನ್ನು ರಚಿಸಿಕೊಳ್ಳಲು ಸಹಾಯ ಮಾಡುತ್ತದೆ.'
ಧರ್ಮಶಾಲಾದಲ್ಲಿ ಮಾಡಿದ ಭಾಷಣದಲ್ಲಿ, ಪೆಲೋಸಿ ಕ್ಸಿ ಜಿನ್ ಪಿಂಗ್ ಅವರನ್ನು ಟೀಕಿಸಿದರು. 'ಜ್ಞಾನ, ಸಂಪ್ರದಾಯ, ಸಹಾನುಭೂತಿ, ಆತ್ಮ ಶುದ್ಧತೆ ಮತ್ತು ಪ್ರೀತಿಯ ಸಂದೇಶದೊಂದಿಗೆ ಪವಿತ್ರ ದಲೈ ಲಾಮಾ ದೀರ್ಘಕಾಲ ಬದುಕುತ್ತಾರೆ ಮತ್ತು ಅವರ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ. ಆದರೆ ಚೀನಾದ ಅಧ್ಯಕ್ಷರಾದ ನೀವು ಹೊರಟುಹೋಗುವಿರಿ ಮತ್ತು ನಿಮಗೆ ಸಂಬಂಧಿಸಿದ ಯಾವುದಕ್ಕೂ ಜನ ಮನ್ನಣೆ ನೀಡುವುದಿಲ್ಲ.' ಎಂದು ಪೆಲೋಸಿ ಹೇಳಿದರು. ಪೆಲೋಸಿ ಅವರ ಧರ್ಮಶಾಲಾ ಭೇಟಿಯನ್ನು ವಾಷಿಂಗ್ಟನ್, ನವದೆಹಲಿ ಮತ್ತು ಬೀಜಿಂಗ್ನಲ್ಲಿನ ಚೀನಾ ಅಧಿಕಾರಿಗಳು ಉಗ್ರವಾಗಿ ಟೀಕಿಸಿದ್ದಾರೆ.
ಈ ಭೇಟಿಗೆ ಮುಂಚೆಯೇ ವಾಷಿಂಗ್ಟನ್ನಲ್ಲಿರುವ ತಮ್ಮ ರಾಯಭಾರ ಕಚೇರಿಯ ಚೀನಾದ ಸಚಿವ-ಸಲಹೆಗಾರ ಝೌ ಜೆಂಗ್ ಮಾತನಾಡಿ, "ಈ ಭೇಟಿಯು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ. ಚೀನಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುತ್ತದೆ. ಚೀನಾ ಇದನ್ನು ತೀವ್ರವಾಗಿ ಖಂಡಿಸುತ್ತದೆ. 13 ನೇ ಶತಮಾನದಲ್ಲಿ ಯುವಾನ್ ರಾಜವಂಶದ ನಂತರ ಕ್ಸಿಜಾಂಗ್ (ಟಿಬೆಟ್) ಇದು ಚೀನಾದ ಭೂಪ್ರದೇಶದ ಅವಿಭಾಜ್ಯ ಅಂಗವಾಗಿದೆ" ಎಂದು ಹೇಳಿದರಲ್ಲದೆ, ಭೇಟಿಯನ್ನು ರದ್ದುಗೊಳಿಸುವಂತೆ ಅವರು ಯುಎಸ್ ಸರ್ಕಾರಕ್ಕೆ ಸಲಹೆ ನೀಡಿದರು. ಆದರೆ ಅಮೆರಿಕ ಈ ಸಲಹೆಯನ್ನು ನಿರ್ಲಕ್ಷಿಸಿತು.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಮಾತನಾಡಿ, '14 ನೇ ದಲೈ ಲಾಮಾ ಶುದ್ಧ ಧಾರ್ಮಿಕ ವ್ಯಕ್ತಿಯಲ್ಲ. ಅವರು ಧರ್ಮದ ಸೋಗಿನಲ್ಲಿ ಚೀನಾ ವಿರೋಧಿ ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿರುವ ರಾಜಕೀಯ ದೇಶಭ್ರಷ್ಟರಾಗಿದ್ದಾರೆ' ಎಂದು ಹೇಳಿದರು. ದೆಹಲಿಯಲ್ಲಿನ ಚೀನಾದ ರಾಯಭಾರ ಕಚೇರಿಯು ದಲೈ ಲಾಮಾ ಅವರನ್ನು 'ಧಾರ್ಮಿಕ ನೆಪದಲ್ಲಿ ಮರೆಮಾಚಲಾದ ಚೀನಾದ ಹಿತಾಸಕ್ತಿಗಳಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿರುವ ರಾಜಕೀಯ ದೇಶಭ್ರಷ್ಟ' ಎಂದು ಬಣ್ಣಿಸಿದೆ.
ಪೆಲೋಸಿ ಅವರನ್ನು ಒಳಗೊಂಡ ನಿಯೋಗವು ಪ್ರಧಾನಿಯನ್ನು ಭೇಟಿ ಮಾಡಿ, ಐತಿಹಾಸಿಕ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದೆ ಎಂದು ಭಾರತ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯ ಪ್ರಮಾಣ, ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಈ ನಿಯೋಗವು ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರೊಂದಿಗೆ ಸಂವಹನ ನಡೆಸಿತು.
"@HouseForeignGOP ಅಧ್ಯಕ್ಷ @RepMcCaul ನೇತೃತ್ವದ ನಿಯೋಗದಲ್ಲಿ ಯುಎಸ್ ಕಾಂಗ್ರೆಸ್ನ ಸ್ನೇಹಿತರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇನೆ. ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಬಲವಾದ ದ್ವಿಪಕ್ಷೀಯ ಬೆಂಬಲವನ್ನು ಗೌರವಿಸುತ್ತೇನೆ." ಎಂದು ಪ್ರಧಾನಿ ಕಚೇರಿಯು ಟ್ವೀಟ್ ಮಾಡಿದೆ. ಆದರೆ ಇದರಲ್ಲಿ ಧರ್ಮಶಾಲಾ ಭೇಟಿಯ ಬಗ್ಗೆ ಯಾವುದೇ ಅಧಿಕೃತ ಉಲ್ಲೇಖವಿಲ್ಲ.
ದಲೈ ಲಾಮಾ ಹೇಗಿದ್ದರೂ ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗುವವರಿದ್ದರು. ಅಮೆರಿಕದ ನಿಯೋಗವು ಅವರನ್ನು ಅಲ್ಲಿಯೇ ಭೇಟಿ ಮಾಡಬಹುದಿತ್ತು. ಆದರೆ ಅಮೆರಿಕದಿಂದ ನೇರವಾಗಿ ಧರ್ಮಶಾಲಾಕ್ಕೆ ಬರುವುದರಲ್ಲಿ ದೊಡ್ಡ ಕಾರಣ ಇಲ್ಲದೆ ಇರಲು ಸಾಧ್ಯವಿಲ್ಲ. ಇದಲ್ಲದೆ, ಭಾರತ ಸರ್ಕಾರದ ಮೌನ ಅನುಮೋದನೆಯಿಲ್ಲದೆ ಈ ಭೇಟಿ ನಡೆಯುತ್ತಿರಲಿಲ್ಲ. ಇದು ಜಗತ್ತಿಗೆ ನಿರ್ದಿಷ್ಟ ಸಂದೇಶಗಳನ್ನು ರವಾನಿಸುತ್ತದೆ.
ಮೊದಲನೆಯದಾಗಿ, ಇದು ದಲೈ ಲಾಮಾ ಅವರಿಗೆ ಮತ್ತು ಅವರ 'ಧಾರ್ಮಿಕ' ಉದ್ದೇಶಕ್ಕೆ ಭಾರತದ ಬೆಂಬಲವನ್ನು ಪ್ರದರ್ಶಿಸುತ್ತದೆ. ದಲೈ ಲಾಮಾ ಅವರ ಬಗ್ಗೆ ಭಾರತ ಸರ್ಕಾರದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ ಎಂದು ಭಾರತದ ವಿದೇಶಾಂಗ ಕಚೇರಿ ವಕ್ತಾರರು ಹೇಳಿರುವುದು ಗಮನಾರ್ಹ. ದಲೈ ಲಾಮಾ ಅವರು ಪೂಜ್ಯ ಧಾರ್ಮಿಕ ನಾಯಕರಾಗಿದ್ದಾರೆ ಮತ್ತು ಭಾರತದ ಜನರಿಂದ ಗೌರವಿಸಲ್ಪಟ್ಟಿದ್ದಾರೆ. ಅವರ ಪವಿತ್ರತೆಗೆ ಅವರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ನಡೆಸಲು ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂಬ ಸಂದೇಶವನ್ನು ಇದು ರವಾನಿಸಿದೆ. ಎರಡನೆಯದಾಗಿ, ಯುಎಸ್ ಮತ್ತು ಭಾರತವು ನಿಕಟ ಮಿತ್ರರು ಮತ್ತು ಟಿಬೆಟ್ ಮತ್ತು ಚೀನಾ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಒಮ್ಮತವನ್ನು ಹೊಂದಿವೆ ಎಂಬುದನ್ನು ಬಿಂಬಿಸುತ್ತದೆ.