ನ್ಯಾಷನಲ್ ಡೆಸ್ಕ್, ಹೈದರಾಬಾದ್: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೇಶದಲ್ಲಿ ವ್ಯಾಪಕ ಚಟುವಟಿಕೆಗಳು ಗರಿಗೆದರಿವೆ. ಆಡಳಿತಾರೂಢ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ್ದು, ಚುನಾವಣಾ ಸಿದ್ಧತೆ ಚುರುಕುಗೊಂಡಿದೆ. ಆದರೆ, ಪ್ರತಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಪಕ್ಷ ತೀವ್ರ ಸಂಕಷ್ಟದಲ್ಲಿರುವಂತೆ ಕಾಣುತ್ತಿದೆ. ಹಲವೆಡೆ ಜನ ಬೆಂಬಲ ಲಭಿಸಿದರೂ ಪ್ರತಿಪಕ್ಷ ಕಾಂಗ್ರೆಸ್ ಒಂದು ರೀತಿಯ ಗಂಭೀರ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ.
ಕಳೆದ ವಾರ ನಡೆದ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಆರು ಶಾಸಕರು ಪಕ್ಷದ ವಿಪ್ ವಿರುದ್ಧ ಮತ ಚಲಾಯಿಸಿದ್ದರಿಂದ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದೆ. ಪಕ್ಷದ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಪರಾಭವಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ, ಪ್ರಮುಖ ಮಿತ್ರ ಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಂದು ಅಥವಾ ಎರಡು ಲೋಕಸಭೆ ಸ್ಥಾನಗಳನ್ನು ಗೆಲ್ಲುವ ಏಕೈಕ ಭರವಸೆ ಹೊಂದಿದ್ದವು. ಆದರೆ ಸುಮಾರು ಅರ್ಧ ಡಜನ್ ಪಕ್ಷದ ಶಾಸಕರು ಪಕ್ಷದ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ್ದಾರೆ. ಇದರಿಂದ ಬಿಜೆಪಿಗೆ ಹೆಚ್ಚುವರಿ ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡಿದೆ.
ಇಲ್ಲಿ ಸೋಲು ಸುಲಭವಾಗಿ ತಡೆಯಬಹುದಿತ್ತು:ಕಾಂಗ್ರೆಸ್ ಪಕ್ಷವು ಹಿಮಾಚಲ ಪ್ರದೇಶದ ಸೋಲನ್ನು ಸುಲಭವಾಗಿ ತಡೆಯಬಹುದಿತ್ತು. ಆದರೆ, ಈ ಬಗ್ಗೆ ಹಿಮಾಚಲ ಪ್ರದೇಶದ ಹಿರಿಯ ನಾಯಕರೊಬ್ಬರು ಮೊದಲೇ ಎಚ್ಚರಿಕೆ ನೀಡಿದರೂ ಪಕ್ಷದ ಹೈಕಮಾಂಡ್ ಆ ಸಮಸ್ಯೆ ಬಗೆಹರಿಸಲು ಏನನ್ನೂ ಮಾಡಲಿಲ್ಲ. ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರು ಆನಂದ್ ಶರ್ಮಾ ಅವರು ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ಮತ್ತು ಮತ್ತೊಂದು ಅವಧಿಗೆ ಆಸಕ್ತಿ ಹೊಂದಿದ್ದರು. ಹಿಮಾಚಲ ಪ್ರದೇಶದಿಂದ ಹೊರಗಿನವರೊಬ್ಬರನ್ನು ನಾಮನಿರ್ದೇಶನ ಮಾಡಿರುವುದನ್ನು ವಿರೋಧಿಸಿ ಅವರು ಪ್ರತಿಭಟನೆ ನಡೆಸುತ್ತಿದ್ದರು. ಹಿಮಾಚಲ ಪ್ರದೇಶ ಕಾಂಗ್ರೆಸ್ ಹಿಂದೆಂದೂ ರಾಜ್ಯದಿಂದ ಹೊರಗಿನವರನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿರಲಿಲ್ಲ ಎಂದು ಶರ್ಮಾ ಹೇಳಿದರು. ಅವರು ಸಿಂಘ್ವಿ ಅವರ ನಾಮನಿರ್ದೇಶನದ ವಿರುದ್ಧ ಪಕ್ಷದ ಶಾಸಕರಲ್ಲಿ ಅಸಮಾಧಾನ ಕೂಡಾ ಇತ್ತು.
ಶಿಮ್ಲಾದಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಕಾಂಗ್ರೆಸ್ ಶಾಸಕಾಂಗ ಸಭೆಯ ಸದಸ್ಯರ ಅಸಮಾಧಾನ ಎದುರಿಸುತ್ತಿದ್ದಾರೆ. 14 ತಿಂಗಳ ಹಿಂದೆ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪಕ್ಷದ ಹೈಕಮಾಂಡ್ ಸೂಚಿಸಿದಾಗ, ಶಾಸಕರ ಒಂದು ವರ್ಗ ವಿರೋಧ ವ್ಯಕ್ತಪಡಿಸಿತ್ತು. ಅವರು ಪಿಪಿಸಿಸಿ ಮುಖ್ಯಸ್ಥೆ ಪ್ರತಿಭಾ ಸಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದರು. ಹೈಕಮಾಂಡ್ ಅವರ ನಿರ್ಧಾರವನ್ನು ತಿರಸ್ಕರಿಸಿ ಸುಖು ಪರವಾಗಿ ನಿಂತಿತ್ತು. ಇದರಿಂದ ಮುಖ್ಯಮಂತ್ರಿಯಾಗಿ ಸುಖು ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಿಂದಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕೆಲ ಸದಸ್ಯರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಆ ಅತೃಪ್ತ ಶಾಸಕರಿಗೆ ಪ್ರತಿಭಟಿಸಲು ಅವಕಾಶ ಸಿಕ್ಕಿತ್ತು. ಮತ್ತು ಆರು ಶಾಸಕರು ಪಕ್ಷದ ವಿಪ್ ಧಿಕ್ಕರಿಸಿ ಸಿಂಘ್ವಿ ವಿರುದ್ಧ ಮತ ಚಲಾಯಿಸಿದ್ದಾರೆ.
ವಿಪ್ ದಿಕ್ಕರಿಸಿ ಬಿಜೆಪಿ ಅಭ್ಯರ್ಥಿಗೆ ಮತ:68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಆಡಳಿತ ಪಕ್ಷದಿಂದ 40, ಪ್ರತಿಪಕ್ಷ ಬಿಜೆಪಿಯಿಂದ 25 ಮತ್ತು ಮೂವರು ಸ್ವತಂತ್ರ ಸದಸ್ಯರು ಇದ್ದಾರೆ. ಆರು ಕಾಂಗ್ರೆಸ್ ಸದಸ್ಯರು ಪಕ್ಷದ ವಿಪ್ ಧಿಕ್ಕರಿಸಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದ ನಂತರ ಪ್ರತಿ ಅಭ್ಯರ್ಥಿಗಳು 34 ಮತಗಳನ್ನು ಪಡೆದಿದ್ದರು.
ಸುಖು ಸರ್ಕಾರವು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಚುನಾವಣೆ ಮುಗಿದ ಒಂದು ದಿನದ ನಂತರ ವಿಧಾನಸಭೆ ಅಧಿವೇಶನ ನಡೆದಾಗ ಬಿಜೆಪಿಯ 15 ಶಾಸಕರನ್ನು ಅಮಾನತು ಮಾಡಿ ಧ್ವನಿಮತದ ಮೂಲಕ ಬಜೆಟ್ಗೆ ಅಂಗೀಕಾರ ನೀಡಲಾಗಿದೆ. ಅಲ್ಲದೇ ವಿಧಾನಸಭೆಯನ್ನು ತರಾತುರಿಯಲ್ಲಿ ಮುಂದೂಡಲಾಯಿತು. ಪಕ್ಷವನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಕೇಂದ್ರ ವೀಕ್ಷಕರ ತಂಡ ಶಿಮ್ಲಾಕ್ಕೆ ಧಾವಿಸಿತ್ತು. ಅಡ್ಡ ಮತದಾನ ಮಾಡಿದ ಆರು ಕಾಂಗ್ರೆಸ್ ಶಾಸಕರನ್ನು ವಿಧಾನಸಭಾಧ್ಯಕ್ಷರು ಉಚ್ಚಾಟಿಸಿದ್ದಾರೆ. ಏತನ್ಮಧ್ಯೆ, ಶಾಸಕರು ನ್ಯಾಯಾಲಯದ ಮೊರೆ ಹೋಗಿದ್ದು, ಈ ವಿಷಯಕ್ಕೆ ತಡೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ಮಧ್ಯೆ, ಪ್ರತಿಭಾ ಸಿಂಗ್ ಅವರ ಪುತ್ರ ಮತ್ತು ಪಿಡಬ್ಯ್ಲೂಡಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಸರ್ಕಾರಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಸಿಎಂ ಕೆಲಸ ಮಾಡಲು ಬಿಡದ ಕಾರಣ ನನಗೆ ಅವಮಾನವಾಗಿದೆ ಎಂದ ಅವರು ಆರೋಪಿಸಿದ್ದಾರೆ.