ಮಂಗಳೂರು (ದಕ್ಷಿಣ ಕನ್ನಡ) : ನಾನು ಮುಂಬೈನಲ್ಲಿ ಬೆಳೆದರೂ, ಹುಟ್ಟೂರು ತುಳುನಾಡಿನ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ಇಲ್ಲಿನ ಸಂಸ್ಕೃತಿ, ಜಾಗ ಅದ್ಭುತವಾಗಿದೆ. ಇದೀಗ ಜೈ ತುಳು ಸಿನಿಮಾದಲ್ಲಿ ಗೆಸ್ಟ್ ರೋಲ್ ಮಾಡುತ್ತಿದ್ದೇನೆ. ಮುಂದೊಂದು ದಿನ ಹೇರ ಫೇರಿಯಂತೆ ಪೂರ್ಣ ಪ್ರಮಾಣದಲ್ಲಿ ತುಳು ಕಾಮಿಡಿ ಸಿನಿಮಾ ಮಾಡುವ ಆಸೆಯಿದೆ ಎಂದು ಹೆಸರಾಂತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದ್ದಾರೆ.
ಬಿಗ್‌ಬಾಸ್ ವಿನ್ನರ್, ನಟ ರೂಪೇಶ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಜೈ ತುಳು ಸಿನಿಮಾದಲ್ಲಿ ಅಭಿನಯಿಸಲು ಎರಡು ದಿನಗಳ ಹಿಂದೆ ಮಂಗಳೂರಿಗೆ ಆಗಮಿಸಿರುವ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತುಳು ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಅಭಿನಯ ಮಾಡುತ್ತಿದ್ದೇನೆ. ತುಳು ಸಿನಿಮಾದವರು ತಾನು ತುಳು ಸಿನಿಮಾದಲ್ಲಿ ನಟಿಸಬೇಕೆಂದು ನಿರಂತರವಾಗಿ ಕೇಳುತ್ತಾ ಬಂದಿದ್ದರೂ ಸಮಯಾವಕಾಶ ಕೂಡಿ ಬಂದಿರಲಿಲ್ಲ. ಈಗ ಜೈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದೇನೆ. ಇದನ್ನೂ ಮೀರಿ ಪೂರ್ಣ ಪ್ರಮಾಣದಲ್ಲಿ ತುಳು ಕಾಮಿಡಿ ಸಿನಿಮಾ ಮಾಡುವ ಆಸೆಯಿದೆ. ತುಳು ಭಾಷೆಯಲ್ಲಿರುವ ಕಾಮಿಡಿ ಸೀನ್ಗಳನ್ನು ನೋಡಿ ಖುಷಿ ಪಟ್ಟಿದ್ದೇನೆ. ಅದನ್ನು ಗೆಳೆಯರ ಜೊತೆಗೆ ಶೇರ್ ಮಾಡಿದ್ದೇನೆ ಎಂದರು.
ಮಲಯಾಳಂ, ಬೆಂಗಾಲಿ, ಮರಾಠಿ ಭಾಷೆಗಳ ಸಿನಿಮಾಗಳು ಜಗತ್ತಿನ ಗಮನ ಸೆಳೆಯುತ್ತಿರುವುದು ಬಜೆಟ್‌ನಿಂದಲ್ಲ. ಇದು ಸಾಧ್ಯವಾದದ್ದು, ಸಿನಿಮಾದ ಕಂಟೆಂಟ್ನಿಂದ. ತುಳು ಭಾಷೆಗೂ ಇಂತಹ ಸಾಮರ್ಥ್ಯ ಇದೆ. ಆದರೆ ತುಳುನಾಡಿನ ಸಮಸ್ಯೆ ಎಂದರೆ, ಇಲ್ಲಿ ಕಲಿತು ಬೇರೆ ಕಡೆ ಕೆಲಸಕ್ಕೆ ತೆರಳುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಹೀಗೇ ಆಗಿದೆ. ಸಿನಿಮಾದ ಸಬ್ಜೆಕ್ಟ್ ಚೆನ್ನಾಗಿದ್ದರೆ ಗೆದ್ದೇ ಗೆಲ್ಲುತ್ತದೆ ಎಂದು ತಿಳಿಸಿದರು.
ನಾನು ತುಳು ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ತಿಳಿದು ಕಳೆದ ಎರಡು ದಿನಗಳಿಂದ ಸಾಕಷ್ಟು ಗೆಳೆಯರು ಕರೆ ಮಾಡಿ ಅಚ್ಚರಿ ಪಡುತ್ತಿದ್ದಾರೆ. ತುಳು ಭಾಷೆಯ ಸಿನಿಮಾ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ಹೇಳಿದರು.
ಕಾಂತಾರ ಸಿನಿಮಾದಲ್ಲಿ ನಮ್ಮ ಸಂಸ್ಕೃತಿಯ ಹಿರಿಮೆ ಇದೆ. ನಾನು ನಮ್ಮ ಸಂಸ್ಕೃತಿಯ ಬಗ್ಗೆ ಮುಂಬಯಿಯಲ್ಲಿ ಗೆಳೆಯರಲ್ಲಿ ಹೇಳುತ್ತಿದ್ದೆ. ಕಾಂತಾರ ಸಿನಿಮಾ ನೋಡಿ ನಾನು ಅಚ್ಚರಿಗೊಂಡೆ. ಇದು ನಮ್ಮ ಸಂಸ್ಕೃತಿ ಎಂಬುದನ್ನು ಹೇಳಿದೆ. ಜೈ ಸಿನಿಮಾದಲ್ಲಿ ಗೆಸ್ಟ್ ರೋಲ್ ಮಾಡಿದ್ದು, ಈ ಸಿನಿಮಾದಲ್ಲಿ ನಟಿಸಿದ್ದು ಖುಷಿ ತಂದಿದೆ. ಸಿನಿಮಾ ಪ್ರೊಮೋಷನ್ಗೂ ಬರುತ್ತೇನೆ ಎಂದು ತಿಳಿಸಿದರು.
ಸೈಫ್ ಅಲಿ ಖಾನ್‌ಗೆ ಏನಾಗಿದೆ ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ವಿಚಾರ ನನಗೆ ಗೊತ್ತಾದ ತಕ್ಷಣ ನಾನು ಒಂದೇ ಅಂದುಕೊಂಡದ್ದು ಅವರು ಪ್ರಾಣಾಪಾಯದಿಂದ ಪಾರಾಗಲಿ ಎಂದು. ಸೆಕ್ಯುರಿಟಿ ಸಮಸ್ಯೆ ಆಗಿದೆಯೆಂದು ಕಾಣುತ್ತದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದರು.
ಇದನ್ನೂ ಓದಿ : ನಾನು ತುಳುನಾಡಿನವ, ತುಳು ಸಿನಿಮಾ ಮಾಡುತ್ತಿರುವುದು ಹೆಮ್ಮೆಯ ಕ್ಷಣ: ಜೈ ಶೂಟಿಂಗ್ ಆರಂಭಿಸಿದ ಸುನೀಲ್ ಶೆಟ್ಟಿ - SUNIEL SHETTY