ಆಗಸ್ಟ್ 23ರಂದು ಪ್ರಧಾನಿ ಮೋದಿ ಉಕ್ರೇನ್ ಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಭೇಟಿಯ ಬಗ್ಗೆ ಸಿದ್ಧತೆಗಳು ಇನ್ನೂ ನಡೆಯುತ್ತಿವೆ ಎಂದು ತಿಳಿದು ಬಂದಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಪ್ರಾರಂಭಿಸಿದ ನಂತರ ಇದು ಉಕ್ರೇನ್ ದೇಶಕ್ಕೆ ಮೋದಿಯವರ ಮೊದಲ ಭೇಟಿ. ಈ ಹಿಂದೆ ಜುಲೈನಲ್ಲಿ ಪ್ರಧಾನಿ ಎರಡು ದಿನಗಳ ಕಾಲ ಮಾಸ್ಕೋಗೆ ಭೇಟಿ ನೀಡಿದ್ದರು. ಮಾಸ್ಕೋ ಭೇಟಿಗೆ ಮೊದಲು ಪ್ರಧಾನಿ ಮೋದಿ ಇಟಲಿಯಲ್ಲಿ ನಡೆದ ಜಿ 7 ಶೃಂಗಸಭೆಯ ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಜೆಲೆನ್ ಸ್ಕಿ ಅವರನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಉಕ್ರೇನ್ಗೆ ಆಗಮಿಸುವಂತೆ ಜೆಲೆನ್ ಸ್ಕಿ ಪ್ರಧಾನಿ ಮೋದಿಗೆ ಆಹ್ವಾನ ನೀಡಿದ್ದರು.
ವಾಷಿಂಗ್ಟನ್ನಲ್ಲಿ ನ್ಯಾಟೋ ಶೃಂಗಸಭೆ ನಡೆಯುತ್ತಿದ್ದ ಸಮಯದಲ್ಲಿಯೇ ಪ್ರಧಾನಿ ಮೋದಿ ಮಾಸ್ಕೋಗೆ ಭೇಟಿ ನೀಡಿದ್ದು ಅಮೆರಿಕಕ್ಕೆ ಇರಿಸು ಮುರುಸು ಉಂಟು ಮಾಡಿತ್ತು. ರಷ್ಯಾಗೆ ನ್ಯಾಟೊ ನೀಡಿದ ಎಚ್ಚರಿಕೆಯನ್ನು ಲೆಕ್ಕಿಸದೆ ಮೋದಿ ಮಾಸ್ಕೋಗೆ ಭೇಟಿ ನೀಡಿದ್ದು ರಷ್ಯಾದ ಮಾಧ್ಯಮಗಳಲ್ಲಿ ಮುಖಪುಟದ ಪ್ರಚಾರ ಪಡೆದಿತ್ತು. ನ್ಯಾಟೋ ಶೃಂಗಸಭೆ ನಡೆಯುವ ಸಮಯದಲ್ಲಿಯೇ ಮೋದಿ-ಪುಟಿನ್ ಮುಖಾಮುಖಿಯನ್ನು ತಪ್ಪಿಸಲು ಮೋದಿಯವರ ಭೇಟಿಯನ್ನು ಮರುನಿಗದಿ ಪಡಿಸುವಂತೆ ಕೋರಿ ಯುಎಸ್ ಉಪ ವಿದೇಶಾಂಗ ಕಾರ್ಯದರ್ಶಿ ಕರ್ಟ್ ಕ್ಯಾಂಪ್ಬೆಲ್ ಜುಲೈ ಆರಂಭದಲ್ಲಿ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರೊಂದಿಗೆ ಮಾತನಾಡಿದ್ದರು ಎಂದು ಯುಎಸ್ ಮಾಧ್ಯಮ ವರದಿ ಉಲ್ಲೇಖಿಸಿದೆ.
ಇದನ್ನು ತಳ್ಳಿಹಾಕಿದ ವಿನಯ್ ಕ್ವಾತ್ರಾ, "ಈ ಬಾರಿಯ ದ್ವಿಪಕ್ಷೀಯ ಭೇಟಿಯು ನಮ್ಮ ನಿಗದಿತ ಆದ್ಯತೆಯ ನಿರ್ಧಾರವಾಗಿದೆ ಮತ್ತು ಅದು ಅದೇ ಸಮಯದಲ್ಲಿಯೇ ನಡೆಯಲಿದೆ." ಎಂದು ಹೇಳಿದ್ದರು.
ಈ ಬಗ್ಗೆ ಮಾತನಾಡಿದ ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಭಾರತವು ಅಮೆರಿಕದ ಸ್ನೇಹವನ್ನು ಲಘುವಾಗಿ ಪರಿಗಣಿಸಬಾರದು ಎನ್ನುವ ಮೂಲಕ ಈ ಭೇಟಿಯ ಬಗ್ಗೆ ವಾಷಿಂಗ್ಟನ್ ನ ಅಸಮಾಧಾನವನ್ನು ಹೆಚ್ಚಿಸಿದರು. ಯುಎಸ್ ಎನ್ಎಸ್ಎ (ರಾಷ್ಟ್ರೀಯ ಭದ್ರತಾ ಸಲಹೆಗಾರ) ಜೇಕ್ ಸುಲ್ಲಿವಾನ್, "ರಷ್ಯಾವನ್ನು ದೀರ್ಘಕಾಲೀನ, ವಿಶ್ವಾಸಾರ್ಹ ಪಾಲುದಾರನಾಗಿ ಅವಲಂಬಿಸುವುದು ಉತ್ತಮ ಆಯ್ಕೆಯಲ್ಲ" ಎಂದು ಹೇಳಿದರು. ಆದರೆ ಯುಎಸ್ ಈ ಸಂದರ್ಭದಲ್ಲಿ ಭಾರತದ ಕಾರ್ಯತಂತ್ರದ ಸ್ವಾತಂತ್ರ್ಯವನ್ನು ನಿರ್ಲಕ್ಷಿಸಿತು.
ಮತ್ತೊಂದು ವಿಚಾರವೆಂದರೆ- ಉಕ್ರೇನ್ ರಾಜಧಾನಿ ಕೀವ್ನ ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ ಸಮಯದಲ್ಲಿಯೇ ಪ್ರಧಾನಿ ಮೋದಿ ಮಾಸ್ಕೋದಲ್ಲಿ ಇದ್ದಿದ್ದು ಜೆಲೆನ್ಸ್ಕಿಯ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಆದರೆ ಮಾಸ್ಕೋ ಈ ದಾಳಿ ನಡೆಸಿರುವುದನ್ನು ನಿರಾಕರಿಸಿತ್ತು. "ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕ ಮಾಸ್ಕೋದಲ್ಲಿ ವಿಶ್ವದ ಅತ್ಯಂತ ಕುಖ್ಯಾತ ಅಪರಾಧಿಯನ್ನು ಅಪ್ಪಿಕೊಳ್ಳುವುದನ್ನು ನೋಡುವುದು ನಿರಾಶಾದಾಯಕವಾಗಿದೆ" ಎಂದು ಜೆಲೆನ್ ಸ್ಕಿ ಟೀಕಾಪ್ರಹಾರ ನಡೆಸಿದ್ದರು. ನಂತರ ಭಾರತವು ರಾಜತಾಂತ್ರಿಕ ಮಟ್ಟದಲ್ಲಿ ಕೀವ್ ನ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ಮೋದಿ ಉಕ್ರೇನ್ ಭೇಟಿಯ ಹಿಂದೆ ಕಣ್ಣಿಗೆ ಕಾಣದ ಬೇರೇನೋ ವಿಷಯಗಳಿವೆ. ಪಿಎಂ ಮೋದಿ ಅವರು ಮಾಸ್ಕೋದಲ್ಲಿ ತಮ್ಮ ಚರ್ಚೆಯ ಸಮಯದಲ್ಲಿ ಅಧ್ಯಕ್ಷ ಪುಟಿನ್ ಅವರೊಂದಿಗೆ ಯುದ್ಧವನ್ನು ಕೊನೆಗೊಳಿಸುವ ರಷ್ಯಾದ ಷರತ್ತುಗಳ ಬಗ್ಗೆ ಚರ್ಚಿಸಿರಬಹುದು. ಇದು ರಷ್ಯಾ ಇಲ್ಲಿಯವರೆಗೆ ವಿಶ್ವದ ಮುಂದೆ ಪ್ರಸ್ತಾಪಿಸುತ್ತಿರುವ ಷರತ್ತುಗಳಿಗಿಂತ ಬೇರೆ ಇರಬಹುದು. ಭಾರತ-ರಷ್ಯಾ ಸಂಬಂಧಗಳು ಮತ್ತು ಮಾಸ್ಕೋ ಮೇಲೆ ನವದೆಹಲಿ ಹೊಂದಿರುವ ಪ್ರಭಾವದ ಬಗ್ಗೆ ಜಗತ್ತಿಗೆ ತಿಳಿದಿದೆ.
ಜರ್ಮನ್ ಕರಡು ಬಜೆಟ್ ನಲ್ಲಿ ದೇಶವು ಉಕ್ರೇನ್ ಗೆ ತನ್ನ ಮಿಲಿಟರಿ ಧನಸಹಾಯವನ್ನು 6.7 ಬಿಲಿಯನ್ ಯುರೋಗಳಿಂದ 4 ಬಿಲಿಯನ್ ಯುರೋಗಳಿಗೆ ಅಂದರೆ ಅರ್ಧದಷ್ಟು ಕಡಿತಗೊಳಿಸಲು ಯೋಚಿಸುತ್ತಿದೆ ಎಂದು ಉಲ್ಲೇಖಿಸಿದೆ. ಯುರೋಪ್ ರಾಷ್ಟ್ರಗಳ ಪೈಕಿ ಜರ್ಮನಿ ಉಕ್ರೇನ್ಗೆ ಅತಿದೊಡ್ಡ ಆರ್ಥಿಕ ಬೆಂಬಲ ನೀಡುತ್ತಿದೆ. ಇದಲ್ಲದೆ, ಯುರೋಪಿಯನ್ ರಾಷ್ಟ್ರಗಳಲ್ಲಿ ಹೊಸದಾಗಿ ಅಧಿಕಾರಕ್ಕೆ ಬರುತ್ತಿರುವ ನಾಯಕರು ಪ್ರಸ್ತುತ ಮಟ್ಟದ ಧನಸಹಾಯ ಮುಂದುವರಿಸಲು ಹಿಂಜರಿಯುತ್ತಿದ್ದಾರೆ.
ಯುಎಸ್ ಚುನಾವಣೆಗಳಲ್ಲಿ ಟ್ರಂಪ್ ಗೆಲುವು ಸಾಧಿಸಬಹುದು. ಅಧಿಕಾರಕ್ಕೆ ಬಂದರೆ ಯುದ್ಧವನ್ನು ಕೊನೆಗೊಳಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಉಕ್ರೇನ್ಗೆ ಅಮೆರಿಕದ ಧನಸಹಾಯ ಕಡಿತಗೊಳಿಸುವುದರೊಂದಿಗೆ ಅದು ರಷ್ಯಾದೊಂದಿಗೆ ಮಾತುಕತೆಗೆ ಮುಂದಾಗಬೇಕೆಂದು ಅವರು ಒತ್ತಾಯಿಸುವ ಸಾಧ್ಯತೆಗಳಿವೆ. ಆದರೆ ಟ್ರಂಪ್ ಅವರ ನಿಲುವುಗಳು ಖಂಡಿತವಾಗಿಯೂ ಜೆಲೆನ್ ಸ್ಕಿಗೆ ಇಷ್ಟವಾಗಲಾರವು.
ಕೋಪನ್ ಹ್ಯಾಗನ್, ರಿಯಾದ್ ಮತ್ತು ಸ್ವಿಟ್ಜರ್ಲೆಂಡ್ ನಲ್ಲಿ ಇತ್ತೀಚೆಗೆ ನಡೆದ ಮೂರು ಉಕ್ರೇನಿಯನ್ ಶಾಂತಿ ಶೃಂಗಸಭೆಗಳು ಯಾವುದೇ ಪ್ರಗತಿ ಸಾಧಿಸಲು ಅಥವಾ ಮಾತುಕತೆಗೆ ದೃಢವಾದ ಪ್ರಸ್ತಾಪಗಳನ್ನು ರೂಪಿಸಲು ವಿಫಲವಾಗಿವೆ. ಕಳೆದ ಶೃಂಗಸಭೆಯ ಕೊನೆಯಲ್ಲಿ ಹೊರಡಿಸಲಾದ ಹೇಳಿಕೆಯು ಉಕ್ರೇನ್ ನೊಂದಿಗಿನ ಒಗ್ಗಟ್ಟಿನ ಪ್ರದರ್ಶನವಾಗಿತ್ತು. ಇದಕ್ಕೆ 81 ರಾಷ್ಟ್ರಗಳು ಸಹಿ ಹಾಕಿದವು. ಆದರೆ ಅವುಗಳಲ್ಲಿ ಯಾವುದೂ ಬ್ರಿಕ್ಸ್ ರಾಷ್ಟ್ರಗಳಾಗಿರಲಿಲ್ಲ. ಇವು ರಷ್ಯಾದಿಂದ ಸ್ವಲ್ಪ ಮಟ್ಟಿಗೆ ಪ್ರಭಾವ ಹೊಂದಿವೆ.