ಲೆಬನಾನ್ನಲ್ಲಿ ಪೇಜರ್ಗಳು, ವಾಕಿ ಟಾಕಿಗಳು ಮತ್ತು ಸೋಲಾರ್ ಇಂಧನ ಫಲಕಗಳನ್ನು ಇಸ್ರೇಲ್ನ ಮೊಸ್ಸಾದ್ ಮತ್ತು ಅದರ ಸೈಬರ್ ಯುದ್ಧತಂತ್ರ ಘಟಕ 8200 ಹೇಗೆ ಸ್ಫೋಟಿಸಿದವು ಎಂಬ ಬಗ್ಗೆ ನಿಖರ ಮಾಹಿತಿಗಳು ಎಂದಿಗೂ ಬಹಿರಂಗವಾಗದಿರಬಹುದು. ಆದರೆ ಹೈಬ್ರಿಡ್ ಯುದ್ಧತಂತ್ರಗಳು ಮತ್ತೊಂದು ಎತ್ತರಕ್ಕೆ ತಲುಪಿವೆ ಎಂಬುದನ್ನು ಮಾತ್ರ ಈ ಸ್ಪೋಟಗಳು ಸಾಬೀತುಪಡಿಸಿವೆ.
ಈ ದಾಳಿಗಳಿಂದ ಲೆಬನಾನ್ನಲ್ಲಿ ಎಷ್ಟೊಂದು ದೊಡ್ಡ ಪ್ರಮಾಣದ ಭೀತಿ ಸೃಷ್ಟಿಯಾಗಿದೆ ಎಂದರೆ, ಇಲ್ಲಿನ ಜನ ಎಲ್ಲಾ ಆಧುನಿಕ ತಾಂತ್ರಿಕ ಸಾಧನಗಳನ್ನು ದೂರವಿಟ್ಟು ಹಳೆಯ ಕಾಲದ ಸಂಪರ್ಕ ವ್ಯವಸ್ಥೆಯನ್ನು ಬಳಸಲು ಮುಂದಾಗುತ್ತಿದ್ದಾರೆ. ಪೇಜರ್, ವಾಕಿಟಾಕಿ ಸ್ಫೋಟಗಳಿಂದ ವಿಚಲಿತವಾಗಿರುವ ಹಿಜ್ಬುಲ್ಲಾ ನಾಯಕರು ಅನಿಶ್ಚಿತತೆ ಮತ್ತು ಗೊಂದಲದ ಮನಸ್ಥಿತಿಗೆ ಒಳಗಾಗಿದ್ದಾರೆ. ಸದ್ಯ ಈ ಗೊಂದಲದ ಸ್ಥಿತಿಯು ಇಸ್ರೇಲ್ ತನ್ನ ದಾಳಿಗಳನ್ನು ಕರಾರುವಾಕ್ಕಾಗಿ ಪ್ಲಾನ್ ಮಾಡಲು ಸಮಯ ಮತ್ತು ಅವಕಾಶ ನೀಡಿದಂತಾಗಿದೆ. ಜೊತೆಗೆ ಈ ಘಟನೆಯು ಎಲೆಕ್ಟ್ರಾನಿಕ್ ಸಾಧನಗಳು ಒಡ್ಡಬಲ್ಲ ಅಪಾಯಗಳ ಬಗ್ಗೆ ಕಳವಳಗಳನ್ನು ಕೂಡ ಮೂಡಿಸಿದೆ.
ಜೆರುಸಲೇಂ ಪೋಸ್ಟ್ ಪ್ರಕಾರ, ಯುನಿಟ್ 8200 ಯುಎಸ್ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್ಎಸ್ಎ) ಅಥವಾ ಬ್ರಿಟನ್ನ ಜಿಸಿಎಚ್ಕ್ಯೂಗೆ ಸಮಾನವಾಗಿದೆ ಮತ್ತು ಇಸ್ರೇಲ್ ರಕ್ಷಣಾ ಪಡೆಗಳಲ್ಲಿನ ಅತಿದೊಡ್ಡ ಏಕೈಕ ಮಿಲಿಟರಿ ಘಟಕವಾಗಿದೆ. ಸಿಗ್ನಲ್ಗಳನ್ನು ಪತ್ತೆ ಮಾಡುವುದು, ರಹಸ್ಯ ಡೇಟಾ ಮೈನಿಂಗ್ ಸೇರಿದಂತೆ ಸೈಬರ್ ದಾಳಿ ನಡೆಸುವುದರವರೆಗೆ ಇದು ಕಾರ್ಯವ್ಯಾಪ್ತಿಯನ್ನು ಹೊಂದಿದೆ.
ಯುನಿಟ್ 8200 ಭಾಗಿ:ಇರಾನಿನ ಪರಮಾಣು ಸೆಂಟ್ರಿಫ್ಯೂಜ್ಗಳನ್ನು ನಿಷ್ಕ್ರಿಯಗೊಳಿಸಲು ಸೈಬರ್ ದಾಳಿ ನಡೆಸಿದ್ದು ಸೇರಿದಂತೆ ಹಿಂದಿನ ಇಂಥ ಅನೇಕ ಘಟನೆಗಳಲ್ಲಿ ಯುನಿಟ್ 8200 ಭಾಗಿಯಾಗಿದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ಹಮಾಸ್ನ ನೆಲೆಗಳನ್ನು ಗುರುತಿಸಿ ದಾಳಿಗಳನ್ನು ಯೋಜಿಸಿರುವುದು ಇದರ ಹೆಗ್ಗಳಿಕೆಯಾಗಿದೆ. ಆದರೆ, ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಮೊದಲೇ ಪತ್ತೆಹಚ್ಚಲು ಮಾತ್ರ ಇದು ವಿಫಲವಾಗಿತ್ತು. ಇದೇ ಕಾರಣದಿಂದ ಇದರ ಮುಖ್ಯಸ್ಥರು ರಾಜೀನಾಮೆ ನೀಡಿದ್ದರು.
ಹಿಜ್ಬುಲ್ ಸಂದೇಶ ಪತ್ತೆ ಹಚ್ಚಿ ಮುಟ್ಟಿ ನೋಡಿಕೊಳ್ಳುವ ತಿರುಗೇಟು?:ಹಲವಾರು ಸಂಪರ್ಕ ಸಾಧನಗಳ ಮೂಲಕ ಹಿಜ್ಬುಲ್ಲಾ ಕಳುಹಿಸುತ್ತಿರುವ ಸಾಮೂಹಿಕ ಸಂದೇಶಗಳನ್ನು ಪತ್ತೆ ಮಾಡುವಲ್ಲಿ ಇಸ್ರೇಲ್ ಯಶಸ್ವಿಯಾಗಿದೆ. ಅಲ್ಲದೇ ಆ ಸಾಧನಗಳನ್ನು ತನಗೆ ಬೇಕಾದಂತೆ ಮಾರ್ಪಡಿಸಿ ಅವುಗಳಲ್ಲಿ ಸ್ಫೋಟಕಗಳು ಮತ್ತು ಚಿಪ್ಗಳನ್ನು ಅಳವಡಿಸಿ, ರಿಮೋಟ್ ಮೂಲಕ ಅವನ್ನು ಸ್ಫೋಟಿಸಲು ಕೂಡ ಅದು ಯಶಸ್ವಿಯಾಗಿದೆ. ಸ್ಫೋಟಗೊಂಡ ಸಾಧನಗಳನ್ನು ತಯಾರಿಸಿವೆ ಎಂದು ಹೇಳಲಾದ ಕಂಪನಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿವೆ. ಇಸ್ರೇಲ್ ಕಾರ್ಯಕರ್ತರ ಒಡೆತನದ ಶೆಲ್ ಕಂಪನಿಗೆ ಈ ಸಾಧನಗಳನ್ನು ತಯಾರಿಸುವ ಆರ್ಡರ್ ನೀಡಲಾಗಿತ್ತು ಎಂಬ ಆರೋಪಗಳಿಗೆ ಪುಷ್ಟಿ ಸಿಗುತ್ತಿದೆ.
ಪ್ರತಿಕ್ರಿಯೆಗೆ ಇಸ್ರೇಲ್ ನಕಾರ:ಲೆಬನಾನ್ನಲ್ಲಿ ಪೇಜರ್ ದಾಳಿ ನಡೆಯುವ ವಿಷಯ ತನಗೆ ತಿಳಿದಿರಲಿಲ್ಲ ಎಂದು ಅಮೆರಿಕ ಹೇಳಿಕೊಂಡಿದೆ. ಆದರೆ ಯಾವ ರೀತಿಯಲ್ಲಿ ದಾಳಿ ನಡೆಯಲಿವೆ ಎಂಬುದು ತಿಳಿಯದಿದ್ದರೂ ದಾಳಿ ನಡೆಯಲಿವೆ ಎಂಬುದು ಅಮೆರಿಕಕ್ಕೆ ತಿಳಿದಿತ್ತು ಎಂದು ಸಿಎನ್ಎನ್ ವರದಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಇಸ್ರೇಲ್ ನಿರಾಕರಿಸಿದ್ದರೂ, ಅದರ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, 'ನಾವು ಈ ಯುದ್ಧದಲ್ಲಿ ಹೊಸ ಯುಗದ ಪ್ರಾರಂಭದಲ್ಲಿದ್ದೇವೆ ಮತ್ತು ಇದಕ್ಕಾಗಿ ನಮ್ಮನ್ನು ನಾವು ಹೊಂದಿಸಿಕೊಳ್ಳಬೇಕಿದೆ' ಎಂದು ಹೇಳಿದ್ದಾರೆ. ಲೆಬನಾನ್ ದಾಳಿಗಳನ್ನು ಇಸ್ರೇಲ್ನೇ ನಡೆಸಿದ್ದು ಎಂಬುದಕ್ಕೆ ಇದೊಂದು ಸಣ್ಣ ಪುರಾವೆಯಾಗಿದೆ. ಆದರೆ ಸದ್ಯ ವಿಶ್ವದಲ್ಲಿ ಹೈಬ್ರಿಡ್ ಯುದ್ಧದ ಅಪಾಯಕಾರಿ ಹಂತವನ್ನು ನೋಡಿದರೆ ಸಾಮಾನ್ಯ ಜನತೆ ಕೂಡ ಈ ಅಪಾಯ ಎದುರಿಸುವ ಸಾಧ್ಯತೆಗಳಿವೆ.
ಮಾಲ್ವೇರ್ ಬಳಸಿ ಸ್ಫೋಟ ಮಾಡಲಾಗಿದೆಯೇ?:ಸಾಧನಗಳಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತೇ ಅಥವಾ ಎಲೆಕ್ಟ್ರಾನಿಕ್ ಸಂಕೇತಗಳನ್ನು ಬಳಸಿಕೊಂಡು ಬ್ಯಾಟರಿಗಳನ್ನು ಸ್ಫೋಟಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸಾಧನವನ್ನು ದೂರದಿಂದಲೇ ಸ್ಫೋಟಗೊಳಿಸಲು ಮಾಲ್ವೇರ್ ಅನ್ನು ಬಳಸಿರುವ ಸಾಧ್ಯತೆಯಿದೆ ಎಂದು ಹ್ಯಾಕರ್ಗಳು ದೃಢಪಡಿಸಿದ್ದಾರೆ. ಆದರೆ, ಇದನ್ನು ಖಚಿತಪಡಿಸುವುದು ಸಾಧ್ಯವಿಲ್ಲ. ಇಸ್ರೇಲಿಗಳು ಮೊಬೈಲ್ ಸಿಗ್ನಲ್ಗಳ ಆಧಾರದ ಮೇಲೆ ಹಿರಿಯ ಕಮಾಂಡರ್ಗಳನ್ನು ಪತ್ತೆಹಚ್ಚಿ, ಅವರ ಮೇಲೆ ನಿಖರವಾಗಿ ದಾಳಿ ಮಾಡುತ್ತಿದ್ದಾರೆ ಎಂಬುದು ತಿಳಿದ ನಂತರ ಹಿಜ್ಬುಲ್ಲಾ ಉಗ್ರರು ಮೊಬೈಲ್ಗಳನ್ನು ಬಿಟ್ಟು ಪೇಜರ್ಗಳನ್ನು ಬಳಸಲಾರಂಭಿಸಿದ್ದರು. ಆದರೆ, ಈಗ ನಡೆದ ದಾಳಿಗಳನ್ನು ನೋಡಿದರೆ ಲೆಬನಾನ್ನಲ್ಲಿ ಪೇಜರ್ ಮತ್ತು ಕೈಯಲ್ಲಿ ಹಿಡಿಯಬಹುದಾದ ವಾಕಿ-ಟಾಕಿಗಳು ಸಹ ಅಪಾಯಕಾರಿಯಾಗಿ ಕಾಣಿಸಿವೆ. ಸದ್ಯ ಇದರಿಂದ ಯುದ್ಧಕ್ಕೆ ತೀರಾ ಅಗತ್ಯವಾದ ಸಂಪರ್ಕ ವ್ಯವಸ್ಥೆ ಹಾಳಾಗಿರುವುದರಿಂದ ಹಿಜ್ಬುಲ್ಲಾದ ಯುದ್ಧ ಸಿದ್ಧತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.
ಇಸ್ರೇಲ್ನ ಈ ಯುದ್ಧತಂತ್ರದ ಕಾರ್ಯಾಚರಣೆಯು ಆರಂಭದಲ್ಲಿ ಅನೇಕ ಭಯೋತ್ಪಾದಕ ಸಂಘಟನೆಗಳು ಸೇರಿದಂತೆ ಜಾಗತಿಕವಾಗಿ ಕಾರ್ಯತಂತ್ರದ ಪರಿಣಾಮಗಳನ್ನು ಬೀರಲಿದೆ. ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಪದೇ ಪದೆ ಹೇಳುತ್ತಿದ್ದರೂ, ಹಿಂದಿನ ಕಾಲದ ಸಂಪರ್ಕ ವ್ಯವಸ್ಥೆಗಳೊಂದಿಗೆ ಅದು ಸುಲಭವಲ್ಲ. ಹಿಜ್ಬುಲ್ಲಾ ನಾಯಕರು ಇನ್ನು ಕೆಲ ಕಾಲ ಗೊಂದಲದ ಮನಸ್ಥಿತಿಯಲ್ಲಿಯೇ ಇರಲಿದ್ದು, ಇಸ್ರೇಲಿಗಳು ಇದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಹುದು.
ಇಸ್ರೇಲ್ ಈ ರಹಸ್ಯ ಭೇದಿಸಿದ್ದಾದರೂ ಹೇಗೆ? - ಹೀಗೂ ಆಗಿರಬಹುದಾ?:ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ- ಹಿಜ್ಬುಲ್ಲಾ ಸಂಘಟನೆಯೊಳಗೇ ಇಸ್ರೇಲಿ ಗೂಢಚಾರರು ಸೇರಿಕೊಂಡಿರುವ ಮತ್ತು ಅವರು ಸಂವಹನ ಸಾಧನಗಳ ಖರೀದಿಯ ಬಗೆಗಿನ ವಿವರಗಳನ್ನು ಮೊಸ್ಸಾದ್ ಗೆ ಸೋರಿಕೆ ಮಾಡಿರಬಹುದು ಎಂಬ ಸಂಶಯ. ಇದರಿಂದ ಸಂಘಟನೆಯೊಳಗೇ ಅಪನಂಬಿಕೆ ಹೆಚ್ಚಾಗಬಹುದು. ಸ್ಫೋಟಗಳಲ್ಲಿ ಸಾವಿನ ಸಂಖ್ಯೆ ಕಡಿಮೆ ಇದ್ದರೂ, ಗಾಯಗೊಂಡವರ ಪೈಕಿ ಹೆಚ್ಚಿನವರು ಹಿಜ್ಬುಲ್ಲಾದ ಮಧ್ಯಮ ಶ್ರೇಣಿಯ ಕಾರ್ಯಕರ್ತರಾಗಿರುವುದರಿಂದ ಇದು ಸಂಘಟನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಘಟನೆಯ ನಂತರ ಇಸ್ರೇಲ್ ನೊಂದಿಗೆ ಸಂಘರ್ಷದಲ್ಲಿ ತೊಡಗಿರುವ ಇತರ ಭಯೋತ್ಪಾದಕ ಸಂಘಟನೆಗಳು ಎಲೆಕ್ಟ್ರಾನಿಕ್ ಸಂವಹನ ಸಾಧನಗಳನ್ನು ಬಳಸಿಕೊಳ್ಳುವ ಬಗ್ಗೆ ಜಾಗರೂಕರಾಗಿರುತ್ತವೆ.