ಕರ್ನಾಟಕ

karnataka

ETV Bharat / opinion

ಇಸ್ರೇಲ್-ಇರಾನ್ ಸಂಘರ್ಷ; ಮಧ್ಯ ಪ್ರಾಚ್ಯದಲ್ಲಿ ಮುಂದೇನಾಗಬಹುದು?: ವಿಶ್ಲೇಷಣೆ - Israel Iran conflict

ಇಸ್ರೇಲ್ ಇರಾನ್ ಸಂಘರ್ಷದ ಬಗ್ಗೆ ಒಂದು ಅವಲೋಕನ ಇಲ್ಲಿದೆ.

ಲೆಬನಾನ್ ಮೇಲೆ ಇಸ್ರೇಲ್ ದಾಳಿಯ ದೃಶ್ಯ
ಲೆಬನಾನ್ ಮೇಲೆ ಇಸ್ರೇಲ್ ದಾಳಿಯ ದೃಶ್ಯ (AP)

By ETV Bharat Karnataka Team

Published : Oct 6, 2024, 7:50 PM IST

ಜಗತ್ತು ಇಂದು ಸಾಗುತ್ತಿರುವ ಅತ್ಯಂತ ಅಸ್ಥಿರ ಮತ್ತು ಅನಿಶ್ಚಿತ ಸಮಯಗಳಲ್ಲಿ ಮುಂದೆ ಏನಾಗುತ್ತದೆ ಎಂದು ಊಹಿಸುವುದಾದರೂ ಹೇಗೆ? ಇಸ್ರೇಲ್ ಮತ್ತು ಇರಾನ್​​ನ ಸಂಘರ್ಷದಲ್ಲಿ ಇರಾನ್​ ಬೆಂಬಲಿತ ಭಯೋತ್ಪಾದಕ ಗುಂಪುಗಳ ಮುಖಂಡರನ್ನು ಹತ್ಯೆ ಮಾಡಿ, ಈ ಸಂಘರ್ಷಕ್ಕೆ ಹೊಸದೊಂದು ತಿರುವು ನೀಡಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿದ್ದನ್ನು ನೋಡಿದರೆ ಹಳೆಯ ತಂತ್ರಗಳು ತೀರಾ ನಿರುಪಯುಕ್ತವಾಗಿ ಕಾಣಿಸುತ್ತವೆ.

ಕೆಲವು ವಾರಗಳ ಹಿಂದೆ ಇದೇ ರೀತಿಯಲ್ಲಿ ಹಮಾಸ್ ನಾಯಕ ಹನಿಯೆಹ್ ಹತ್ಯೆಯ ನಂತರ ಇರಾನ್ ಪ್ರತೀಕಾರ ತೀರಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವಾಗ ಈ ಅಂಕಣದ ಲೇಖಕರ ನಿಲುವು ಕೂಡ ತಪ್ಪಾಗಿತ್ತು. ಒಂದು ಹಂತದಲ್ಲಿ ಅಮೆರಿಕದ ನಿರ್ಬಂಧಗಳಿಂದ ಉಸಿರುಗಟ್ಟಿದ ದೇಶ ಮತ್ತು ಹಳೆಯ ನಾಗರಿಕತೆಯನ್ನು ಹೊಂದಿ ಶ್ರೇಷ್ಠತೆಯ ಈಡೇರದ ಬಯಕೆಯಿಂದ ಉಸಿರುಗಟ್ಟಿದ ಇರಾನ್​ನಲ್ಲಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲಾಗುತ್ತದೆ ಎಂಬುದರ ಮೂಲಭೂತ ತಿಳುವಳಿಕೆಯಲ್ಲಿ ಇದರ ಉತ್ತರ ಹುದುಗಿದೆ.

ನಾನು ಕೂಡ ತಪ್ಪಾಗಿ ಭಾವಿಸಿದ್ದೆ ಎಂಬುದು ಸಾಬೀತಾಗಿದೆ. ಈಗ ನನಗೆ ಮತ್ತು ವಿಶ್ವದ ದೇಶಗಳ ಮುಂದಿರುವ ಬಹುದೊಡ್ಡ ಪ್ರಶ್ನೆ ಏನೆಂದರೆ- ಯುಎಸ್-ಇಸ್ರೇಲ್​ ಗಳ ಶಸ್ತ್ರಾಸ್ತ್ರ ಬಲದಿಂದ ಇರಾನ್ ನಾಶವಾಗಲಿದೆಯೆ? ಜಗತ್ತಿನಲ್ಲಿ ರಕ್ತಸಿಕ್ತ ಮೂರನೇ ಮಹಾಯುದ್ಧ ನಡೆಯಲಿದೆಯೇ? ಮತ್ತು ಏಕೆ ಇದೆಲ್ಲ ನಡೆಯಬಹುದು?

ಇರಾನ್​ನ ಪ್ರತಿಕ್ರಿಯೆಯು ಸೋಮಾರಿತನದ ಮತ್ತು ಸಂಕೀರ್ಣ ಮಿಲಿಟರಿ ಶಕ್ತಿಯಿಂದ ಇಸ್ರೇಲ್ ಅಥವಾ ಯುಎಸ್ ತನ್ನ ಮೇಲೆ ದಬ್ಬಾಳಿಕೆ ನಡೆಯಲು ಬಿಡದ ಸಂಪೂರ್ಣ ಶಕ್ತಿಯಾಗಿ ಹೇಗೆ ರೂಪಾಂತರಗೊಂಡಿತು ಎಂಬ ಮೂಲ ಪ್ರಶ್ನೆಗೆ ಹಿಂತಿರುಗೋಣ. ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆ ಮತ್ತು ಲೆಬನಾನ್ ಮೇಲೆ ನಡೆದ ವಾಯು ದಾಳಿಗಳು ಮಹತ್ವದ ತಿರುವುಗಳಾಗಿವೆ.

ಯುಎಸ್ ಸೈನ್ಯದ ಬಹಿರಂಗ ಬೆಂಬಲದೊಂದಿಗೆ ಇಸ್ರೇಲ್ ಹಿಜ್ಬುಲ್ಲಾ ನಾಯಕನ ರಕ್ಷಣಾತ್ಮಕ ವ್ಯೂಹವನ್ನು ಛಿದ್ರಗೊಳಿಸಿದ್ದು ಮಾತ್ರವಲ್ಲದೆ, ಅತ್ಯಂತ ಸುಧಾರಿತ ಎಐ ಚಾಲಿತ ಕಣ್ಗಾವಲು ಸಾಫ್ಟ್​ವೇರ್​ ಅನ್ನು ಬಳಸುವ ಮೂಲಕ, ಆತ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾಡಿದ ಭಾಷಣದಿಂದಲೇ ಆತ ಎಲ್ಲಿದ್ದಾನೆ ಎಂಬುದನ್ನು ನಿಖರವಾಗಿ ಪತ್ತೆ ಮಾಡಿತ್ತು. ನಂತರ ನೆಲದಿಂದ 60 ಅಡಿ ಆಳದಲ್ಲಿದ್ದ ನಸ್ರಲ್ಲಾ ಅಡಗುತಾಣವನ್ನು ಬಂಕರ್ ಬಸ್ಟರ್ ಬಾಂಬ್ ಗಳ ಮೂಲಕ ಬಾಂಬ್ ಸ್ಫೋಟಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ನಸ್ರಲ್ಲಾನ ಅಡಗುತಾಣವು ತುಂಬಾ ಸುರಕ್ಷಿತವಾಗಿತ್ತು ಎಂದು ಇತ್ತೀಚಿನ ವರದಿಗಳು ಹೇಳಿದ್ದವು. ಆದರೆ ಕಟ್ಟಡಗಳನ್ನು ನೆಲಸಮಗೊಳಿಸಲು ಬಂಕರ್ ಬಸ್ಟರ್ ಬಾಂಬ್​ಗಳನ್ನು ಬಳಸಿದ ವಿಧಾನವು ಆತನ ವಾಸಸ್ಥಳದಿಂದ ಆಮ್ಲಜನಕವನ್ನು ಹೀರಿ ಹಾಕಿತ್ತು. ಇರಾನ್ ಮತ್ತು ಇತರ ದೇಶಗಳನ್ನು ವಿಭಜಿಸುವ ಮೂಲಕ ಮಧ್ಯಪ್ರಾಚ್ಯದ ನಕ್ಷೆಯನ್ನು ಮರುಕ್ರಮಿಸಲು ಸಿದ್ಧ ಎಂದು ಇಸ್ರೇಲ್ ಈಗ ಕೆಲ ದಿನಗಳಿಂದ ಅರಬ್ ಜಗತ್ತಿಗೆ ಸಂದೇಶ ರವಾನಿಸಿದೆ. ಈ ಪ್ರಾಚೀನ ಭೂಮಿಯನ್ನು ಆಳುತ್ತಿರುವ ಶಿಯಾ ಮೌಲ್ವಿಗಳನ್ನು ಹೊರಹಾಕುವಂತೆ ಇಸ್ರೇಲ್ ಪ್ರಧಾನಿ ಇರಾನಿಯನ್ನರಿಗೆ ಕರೆ ನೀಡಿದ್ದಾರೆ.

ತದನಂತರ, ರಾಜಧಾನಿ ಟೆಹ್ರಾನ್​ನಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಸೌಮ್ಯವಾದಿ ನಿಲುವಿನ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಹಸನ್ ನಸ್ರಲ್ಲಾ ಅವರಂತಹ ಪ್ರಮುಖ ಮಿತ್ರರ ಹತ್ಯೆಯ ವಿರುದ್ಧ ಪೆಜೆಶ್ಕಿಯಾನ್ ಸೇಡು ತೀರಿಸಿಕೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ಸಾಮಾನ್ಯವಾಗಿ ಇರಾನಿಯನ್ನರು ಆತುರದಲ್ಲಿ ಏನನ್ನೂ ಮಾಡುವುದಿಲ್ಲ. ಆದರೆ ಅವಮಾನವನ್ನು ಎಂದಿಗೂ ಮರೆಯದ ಅವರು ತಮ್ಮ ಶತ್ರುಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ತಕ್ಕ ಸಮಯಕ್ಕಾಗಿ ಕಾಯುತ್ತಾರೆ.

ಯುಎಸ್ ಬೆಂಬಲಿತ ಇಸ್ರೇಲ್​ ಪ್ರತೀಕಾರದ ದಾಳಿ ನಡೆಸಿದರೆ ಅದರಿಂದ ಎದುರಾಗಬಹುದಾದ ಹಾನಿಯ ಬಗ್ಗೆ ಅರಿವಿದ್ದದ್ದರಿಂದಲೇ ಅವರು ಬಹುಶಃ ಇಸ್ರೇಲ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಆತುರಪಡುತ್ತಿರಲಿಲ್ಲ. ದಂಗೆ ಅಥವಾ ಹೆಚ್ಚಿದ ದೇಶೀಯ ಪ್ರಕ್ಷುಬ್ಧತೆಗೆ ಹೆದರಿ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಒಳಗೊಂಡ ದೊಡ್ಡ ದಾಳಿಯನ್ನು ನಡೆಸಿತು. ಇಸ್ರೇಲ್ ಮೇಲೆ 180 ಕ್ಷಿಪಣಿಗಳ ಮೂಲಕ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಇದರಲ್ಲಿ ಕೆಲವು ಹೈ ಸ್ಪೀಡ್ ಹೈಪರ್ ಸಾನಿಕ್ ಕ್ಷಿಪಣಿಗಳು ಸೇರಿವೆ. ಇವುಗಳಲ್ಲಿ ಅನೇಕವು ನಿರ್ದಿಷ್ಟ ಗುರಿಗಳನ್ನು ತಲುಪಿವೆ. ಆದಾಗ್ಯೂ ವಿಚಿತ್ರವೆಂದರೆ, ಈ ದಾಳಿಗಳಲ್ಲಿ ಕೇವಲ ಒಬ್ಬ ಪ್ಯಾಲೆಸ್ಟೈನ್ ವ್ಯಕ್ತಿ ಸಾವಿಗೀಡಾಗಿರುವುದು ಮತ್ತು ಒಬ್ಬನೇ ಒಬ್ಬ ಇಸ್ರೇಲಿಯ ಪ್ರಾಣ ಹಾನಿ ಆಗದಿರುವುದು.

ಎಫ್ -35 ವಿಮಾನವು ಟೇಕ್ ಆಫ್ ಆದ ವಿಮಾನ ನಿಲ್ದಾಣಕ್ಕೆ ಹಾನಿಯಾಗಿದೆ ಎಂದು ವರದಿಗಳು ಹೇಳಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಯುಎಸ್ ಮತ್ತು ಇಸ್ರೇಲ್​ನ ಯೋಜನೆಗಳನ್ನು ಬುಡಮೇಲು ಮಾಡಲು ಸಾಕಾಗುವಷ್ಟು ಯುದ್ಧಬಲ ಇರಾನ್ ಬಳಿ ಇದೆ ಎಂಬುದು ಈ ದಾಳಿಯಿಂದ ಸ್ಪಷ್ಟವಾಗಿದೆ. ಇರಾನಿಯನ್ನರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಾಮರ್ಥ್ಯದ ಪ್ರದರ್ಶನ ಮಾಡಿದ್ದಾರೆ ಎಂದು ಹೇಳಬಹುದು. ಆದರೆ ಸ್ಪಷ್ಟವಾದ ಸಂಗತಿಯೆಂದರೆ, ಇಸ್ರೇಲ್​ನ ಶತ್ರುಗಳು ಅದರ ಯುದ್ಧಬಲದ ಬಗ್ಗೆ ಹೆದರಿಕೆ ಹೊಂದಿರದಿದ್ದರೆ ಇಸ್ರೇಲ್ ಅಂಥ ನೆರೆಯ ದೇಶಗಳೊಂದಿಗೆ ಹೋರಾಡುವುದು ಕಷ್ಟವಾಗುತ್ತದೆ.

ಇಸ್ರೇಲ್ ಏನು ಮಾಡಲಿದೆ?: ಹಸನ್ ನಸ್ರುಲ್ಲಾ ಅವರನ್ನು ಹತ್ಯೆ ಮಾಡಿದ ನಂತರ ಅಜೇಯರಾಗಿ ಕಾಣುತ್ತಿದ್ದ ಇಸ್ರೇಲ್ ಪ್ರಧಾನಿ ಬೀಬಿ ನೆತನ್ಯಾಹು ಅವರು ಇರಾನಿನ ಪ್ರತೀಕಾರದ ನಂತರ ಕೆರಳಿ ಕೆಂಡವಾಗಿದ್ದರು. ತಮ್ಮ ದೇಶದತ್ತ ಹಾರಿಬಂದ ಕ್ಷಿಪಣಿಗಳು ಅವರಿಗೆ ಆಶ್ಚರ್ಯ ಮೂಡಿಸಿವೆ. ಯುಎಸ್ ಮತ್ತು ಇಸ್ರೇಲ್​ ಅನ್ನು ಎದುರು ಹಾಕಿಕೊಳ್ಳುವಂಥ ಯಾವುದೇ ಕೆಲಸವನ್ನು ಇರಾನ್ ಮಾಡುವುದಿಲ್ಲ ಎಂದು ಅವರ ಪಾಶ್ಚಿಮಾತ್ಯ ಬೆಂಬಲಿಗ ರಾಷ್ಟ್ರಗಳು ಅವರಿಗೆ ಭರವಸೆ ನೀಡಿದ್ದರು ಎಂದು ತೋರುತ್ತದೆ.

ಹಸನ್ ನಸ್ರಲ್ಲಾ ಇಸ್ರೇಲ್​ನೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಉತ್ಸುಕರಾಗಿದ್ದರು ಮತ್ತು ಇರಾನ್ ಕೂಡ ಇದಕ್ಕೆ ಸಮ್ಮತಿ ಹೊಂದಿತ್ತು ಎಂಬ ವರದಿಗಳನ್ನು ನೋಡಿದರೆ ಈ ವಾದದಲ್ಲಿ ಹುರುಳಿದೆ ಅನಿಸುತ್ತದೆ. ಕೊಲೆಗಾರರು ತಮ್ಮ ಘೋರ ಕಾರ್ಯಸೂಚಿಯನ್ನು ನಡೆಸಲು ಅನುವು ಮಾಡಿಕೊಡಲು ಇದು ನಸ್ರಲ್ಲಾ ಅವರನ್ನು ಸಂತೃಪ್ತಿಗೆ ತಳ್ಳುವ ಕೆಲಸ ಆಗಿರಬಹುದು ಅಥವಾ ಬೇರೆ ಯಾರಾದರೂ ಶಾಂತಿ ಕ್ರಮವನ್ನು ಹಾಳುಗೆಡವಿದ್ದಾರೆಯೇ? ಮೇಲ್ನೋಟಕ್ಕೆ, ಯುಎಸ್ ಮತ್ತು ಇಸ್ರೇಲ್ ಎರಡೂ ಈ ಹತ್ಯೆಯಲ್ಲಿ ಭಾಗಿಯಾಗಿವೆ. ಇದು ಯಾವುದೇ ವಿಧ್ವಂಸಕ ಕೃತ್ಯ ನಡೆದಿಲ್ಲ ಮತ್ತು ಟೆಲ್ ಅವೀವ್ ಮುಂಬರುವ ದಿನಗಳಲ್ಲಿ ಏನು ಮಾಡಲಿದೆ ಎಂಬುದರ ಸುಳಿವನ್ನು ನೀಡುತ್ತದೆ. ಮಧ್ಯಪ್ರಾಚ್ಯದ ಮೂಲೆ ಮೂಲೆಗಳಲ್ಲಿ ಇಸ್ರೇಲ್ ಬಾಂಬ್ ಹಾಕಬಹುದು ಎಂಬ ಆತಂಕವನ್ನು ಇದು ಹುಟ್ಟು ಹಾಕಿದೆ.

ಕಳೆದ ಮಂಗಳವಾರ ಇರಾನ್ ತನ್ನ ಕ್ಷಿಪಣಿಗಳನ್ನು ಹಾರಿಸಿದಾಗ ಅದು ಆಯ್ಕೆ ಮಾಡಿಕೊಂಡ ಗುರಿಗಳನ್ನು ನೋಡಿದರೆ ಈ ಆತಂಕ ಎಷ್ಟು ನಿಜ ಎಂಬುದು ಸ್ಪಷ್ಟವಾಗುತ್ತದೆ. ಇಸ್ರೇಲಿಗಳು ತನ್ನ ತೈಲ ಮತ್ತು ಅನಿಲ ಸಂಸ್ಕರಣಾಗಾರಗಳ ಮೇಲೆ ದಾಳಿ ಮಾಡಿದರೆ ಬಹ್ರೇನ್, ಇರಾಕ್, ಕುವೈತ್ ಮುಂತಾದ ನೆರೆಹೊರೆಯ ತೈಲ ಸಂಸ್ಕರಣಾಗಾರಗಳ ಮೇಲೆ ಬಾಂಬ್ ಹಾಕುವುದಾಗಿ ಎಂದು ಇರಾನ್ ಹೇಳಿದೆ. ಯುಎಸ್ ಮತ್ತು ಇಸ್ರೇಲ್ ಇಂಥದ್ದೊಂದು ಸಂದರ್ಭವನ್ನು ಹೇಗೆ ನಿಭಾಯಿಸಬಲ್ಲವು ಎಂಬುದು ಪ್ರಶ್ನೆಯಾಗಿದೆ. ಕಳೆದ ಬಾರಿಗಿಂತ ಹೆಚ್ಚಿನ ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಹಾರಿಸುವುದಾಗಿ ಇರಾನ್ ಹೇಳಿದೆ.

ಕೆಲವು ವಿಲಕ್ಷಣ ಕಾರಣಗಳಿಗಾಗಿ, ಇಸ್ರೇಲಿಗಳು ತಮ್ಮ ಮಿಲಿಟರಿ ಆಕ್ರಮಣಗಳ ವ್ಯಾಪ್ತಿಯನ್ನು ವಿಸ್ತರಿಸಲು ಉತ್ಸುಕರಾಗಿದ್ದಾರೆ. ಅವರು ಗಾಜಾದ ಮೇಲೆ ದಾಳಿ ಮಾಡಿದ್ದಲ್ಲದೆ, ಲೆಬನಾನ್ ಮೇಲೆ ಕೂಡ ಭೂ ಆಕ್ರಮಣ ಆರಂಭಿಸಿದ್ದಾರೆ. ಅವರ ಹಿಂದಿನ ತಂತ್ರಗಳನ್ನು ಗಮನಿಸಿದರೆ, ಪ್ರತಿ ಬಾರಿ ಇಸ್ರೇಲಿಗಳು ಯುದ್ಧಕ್ಕೆ ಮಾಡಿದಾಗ, ಅವರು ಮತ್ತಷ್ಟು ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ತಮ್ಮ ರಾಷ್ಟ್ರದ ವಿಸ್ತೀರ್ಣವನ್ನು ಹೆಚ್ಚಿಸಿಕೊಂಡಿದ್ದಾರೆ.

ಅವರ ಭೂ ಆಕ್ರಮಣವು ಸಾಮ್ರಾಜ್ಯಶಾಹಿ ವಿಜಯದ ಸುಳಿವನ್ನು ನೀಡುತ್ತದೆ. ಇರಾನ್ ಸದ್ಯಕ್ಕೆ ಅದನ್ನು ತಡೆಹಿಡಿದಿರಬಹುದು, ಆದರೆ ಪರಮಾಣು ಬಾಂಬ್ ತಯಾರಿಸಲು ಬಳಸಲಾಗುತ್ತಿದೆ ಎಂದು ಇರಾನ್ ಆರೋಪಿಸುತ್ತಿರುವ ಸಂಸ್ಕರಣಾಗಾರಗಳು ಮತ್ತು ಪರಮಾಣು ಸೌಲಭ್ಯಗಳನ್ನು ಹಾಳು ಮಾಡಲು ಇಸ್ರೇಲ್ ತನ್ನ ಎಫ್ -35 ಮತ್ತು ಸ್ಟೆಲ್ತ್ ಬಾಂಬರ್ ಗಳನ್ನು ಕಳುಹಿಸುವುದನ್ನು ತಡೆಯಬಹುದೇ? ಅದರ ಮಿತ್ರರಾಷ್ಟ್ರಗಳಾದ ಯುನೈಟೆಡ್ ಕಿಂಗ್ ಡಮ್ ಮತ್ತು ಫ್ರಾನ್ಸ್ ಯುಎಸ್ ಮತ್ತು ಇಸ್ರೇಲ್​ನೊಂದಿಗೆ ಬಾಂಬ್ ದಾಳಿ ನಡೆಸಲು ಹಿಂಜರಿಯುತ್ತಿವೆ.

ಇರಾನ್ ವಿರುದ್ಧ ದಾಳಿ ನಡೆಸದಂತೆ ಯುನೈಟೆಡ್ ಕಿಂಗ್ ಡಮ್ ಮತ್ತು ಫ್ರಾನ್ಸ್ ಇರಾನ್​ಗೆ ಒತ್ತಾಯಿಸುತ್ತಿವೆ. ಆದರೆ ಯುಎಸ್ ಹೊಸ ಅಧ್ಯಕ್ಷರನ್ನು ಹೊಂದುವವರೆಗೂ ಯುದ್ಧ ನಿಲ್ಲುವ ಸಾಧ್ಯತೆಯಿಲ್ಲ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದರೆ, ಉಕ್ರೇನ್ ಮತ್ತು ಮಧ್ಯಪ್ರಾಚ್ಯದಲ್ಲಿ ಯುದ್ಧಗಳು ಕೊನೆಗೊಳ್ಳುತ್ತವೆ. ಆದರೆ ಡೆಮೊಕ್ರಾಟ್​ಗಳೇ ಮತ್ತೆ ಅಧಿಕಾರಕ್ಕೆ ಬಂದರೆ ಯುದ್ಧ ಮತ್ತೂ ತೀವ್ರವಾಗಬಹುದು. ಮೇಲೆ ವಿವರಿಸಿದಂತೆ, ಇಸ್ರೇಲ್ ರಷ್ಯಾವನ್ನು ಹೊಸ ಮತ್ತು ಹಳೆಯ ದ್ವೇಷಗಳ ಈ ಸಂಘರ್ಷದಲ್ಲಿ ಎಳೆಯಲು ಪ್ರಯತ್ನಿಸುತ್ತಿದೆ.

ರಷ್ಯಾ ಈ ಯುದ್ಧದಲ್ಲಿ ಭಾಗಿಯಾದರೆ ಮುಂದೇನಾಗಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಕೆಲವರು ಮೂರನೇ ಮಹಾಯುದ್ಧದ ಮುನ್ಸೂಚನೆ ನೀಡುತ್ತಿದ್ದಾರೆ. ಸದ್ಯದ ಸಂಘರ್ಷ ಅಂಥದೊಂದು ಮಹಾಯುದ್ಧಕ್ಕೆ ಕಾರಣವಾಗಬಹುದೇ? ನೆತನ್ಯಾಹು ಅವರ ಉದಯವು ಇರಾನ್ ಹೇಳುತ್ತಿರುವಂತೆ ಅಡಾಲ್ಫ್ ಹಿಟ್ಲರ್ ಅವರ ಉದಯವನ್ನು ಹೋಲುತ್ತದೆಯೇ ಅಥವಾ ರಷ್ಯಾ ಮತ್ತು ಚೀನಾವನ್ನು ಪಳಗಿಸಲು ಯುದ್ಧದ ಅಗತ್ಯವಿದೆಯೇ?

ಈ ಭಯಾನಕ ಸಂಭಾಷಣೆಯ ಪ್ರಕಾಶಮಾನವಾದ ಭಾಗವೆಂದರೆ - ತೈಲದ ಭವಿಷ್ಯದ ಬಗ್ಗೆ ವ್ಯವಹರಿಸುವವರು ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಯುದ್ಧದ ಭೀತಿ ಇದ್ದರೆ ತೈಲ ಬೆಲೆಗಳು ಏರಬೇಕಿತ್ತು, ಆದರೆ ಹಾಗಾಗುತ್ತಿಲ್ಲ. ಹೀಗಾಗಿ ಯುದ್ಧ ನಡೆಯುವುದಿಲ್ಲ ಎಂಬುದು ಅವರ ನಿಲುವಾಗಿದೆ. ಹಾಗೆ ನೋಡಿದರೆ ತೈಲ ಬೆಲೆಗಳು ಈಗಲೂ ಕೆಳಮಟ್ಟದಲ್ಲಿವೆ.

ಲೇಖನ: ಸಂಜಯ ಕಪೂರ್

ಇದನ್ನೂ ಓದಿ : ದಿಸ್ಸನಾಯಕೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಪದಗ್ರಹಣ; ಭಾರತದ ಮೇಲಾಗುವ ಪರಿಣಾಮ - ಪ್ರಯೋಜನಗಳೇನು? - Anura Kumara Dissanayake

ABOUT THE AUTHOR

...view details