ಮಾಲ್ಡೀವ್ಸ್ನಿಂದ ಭಾರತದ ಸೇನಾ ಪಡೆಗಳನ್ನು ಹೊರಹಾಕುವ ನಿರ್ಧಾರ ಮತ್ತು ಚೀನಾದ ಸಂಶೋಧನಾ ನೌಕೆ 'ಕ್ಸಿಯಾಂಗ್ ಯಾಂಗ್ ಹಾಂಗ್ 3' ಯು ಮಾಲೆ ಬಂದರಿನಲ್ಲಿ ಲಂಗರು ಹಾಕಲು ಮಾಲ್ಡೀವ್ಸ್ನ ಹೊಸ ಸರ್ಕಾರ ಅನುಮತಿ ನೀಡುವುದರೊಂದಿಗೆ ಭಾರತ ಮತ್ತು ಮಾಲ್ಡೀವ್ಸ್ನ ದೀರ್ಘಕಾಲದ ಸುಮಧುರ ಸಂಬಂಧ ಕೊನೆಯಾಗುವ ಮತ್ತೊಂದು ಲಕ್ಷಣವಾಗಿದೆ. ಅಲ್ಲದೆ ಮಾಲ್ಡೀವ್ಸ್ನೊಂದಿಗೆ ಚೀನಾದ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಮಾರ್ಗವನ್ನು ಇದು ತೆರೆದಂತಾಗಿದೆ.
ಉಚಿತ ಮಿಲಿಟರಿ ಸಹಾಯಕ್ಕಾಗಿ ಚೀನಾದೊಂದಿಗೆ ಇತ್ತೀಚಿನ ರಕ್ಷಣಾ ಸಹಕಾರ ಒಪ್ಪಂದ ಮತ್ತು ಹೈಡ್ರೋಗ್ರಾಫಿಕ್ ಸಮೀಕ್ಷೆಗಳನ್ನು ನಡೆಸಲು ಭಾರತದೊಂದಿಗೆ ಮಾಡಿಕೊಳ್ಳಲಾದ ಒಪ್ಪಂದವನ್ನು ನವೀಕರಿಸದಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ನಿರ್ಧಾರವು ಚೀನಾ-ಮಾಲ್ಡೀವ್ಸ್ ಸಂಬಂಧಗಳ ಬೆಳವಣಿಗೆಯ ಹಾದಿಯಲ್ಲಿ ಮತ್ತೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಅದರೊಂದಿಗೆ ಈ ಕ್ರಮಗಳು ಭಾರತ-ಮಾಲ್ಡೀವ್ಸ್ ಸಂಬಂಧಗಳಿಗೆ ಮತ್ತೊಂದು ಹೊಡೆತ ನೀಡಿವೆ.
ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಕಡಲ ಪೈಪೋಟಿಯೊಂದಿಗೆ, ಭಾರತೀಯ ವ್ಯಾಪಾರಕ್ಕೆ ನಿರ್ಣಾಯಕವಾದ ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ನೌಕಾಯಾನ ಸ್ವಾತಂತ್ರ್ಯದ ಬಗ್ಗೆ ನವದೆಹಲಿ ಕಳವಳ ವ್ಯಕ್ತಪಡಿಸಿದೆ. ವುಡ್ ಮ್ಯಾಕೆಂಝಿ ಅವರ ಪ್ರಕಾರ, ಭಾರತವು ತನ್ನ ತೈಲ ಬೇಡಿಕೆಯ 88% ಅನ್ನು ಸಮುದ್ರಮಾರ್ಗದ ಆಮದಿನ ಮೂಲಕ ಪೂರೈಸುತ್ತದೆ. ಹೀಗಾಗಿ ಸಮುದ್ರ ಮಾರ್ಗಗಳಲ್ಲಿ ಯಾವುದೇ ಅಡೆತಡೆಗಳು ಉಂಟಾದಲ್ಲಿ ಅದು ಭಾರತದ ಹಿತಾಸಕ್ತಿಗೆ ಪ್ರತಿಕೂಲವಾಗಲಿದೆ.
ತನ್ನ ವ್ಯಾಪಾರ ನಡೆಯುವ ಸಮುದ್ರ ಮಾರ್ಗಗಳನ್ನು ರಕ್ಷಿಸುವುದು ಮತ್ತು ಈ ಪ್ರದೇಶದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಎದುರಿಸುವುದು ಪ್ರಸ್ತುತ ಭಾರತ ಸರ್ಕಾರದ ಮುಖ್ಯ ಕಾಳಜಿಯಾಗಿದೆ. ಭಾರತವನ್ನು ಸುತ್ತುವರೆಯುವ ಚೀನಾದ ಯೋಜನೆಯಾದ "ಮುತ್ತುಗಳ ಸರಮಾಲೆಯಲ್ಲಿ" (string of pearls) ಮಾಲ್ಡೀವ್ಸ್ ಚೀನಾಕ್ಕೆ ನಿರ್ಣಾಯಕ ಕೊಂಡಿಯನ್ನು ಒದಗಿಸಲಿದೆ. ಅರೇಬಿಯನ್ ಸಮುದ್ರಕ್ಕೆ ಹೊಂದಿಕೊಂಡಿರುವ ಪಾಕಿಸ್ತಾನದ ಗ್ವಾದರ್ನಲ್ಲಿರುವ ಚೀನಾದ ನೆಲೆಯು ಭಾರತದ ನೈಋತ್ಯ ಕರಾವಳಿಯ ಮಾಲ್ಡೀವ್ಸ್ನೊಂದಿಗೆ ಸಂಪರ್ಕ ಸಾಧಿಸಬಹುದು. ನಂತರ ಶ್ರೀಲಂಕಾದ ಹಂಬಂಟೋಟ ಬಂದರಿನೊಂದಿಗೆ ಸಂಪರ್ಕ ಸಾಧಿಸಬಹುದು.
ಹೆಚ್ಚುವರಿಯಾಗಿ, ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಒಆರ್) ಭಾರತವನ್ನು ಹಿಮ್ಮೆಟ್ಟಿಸಲು ಬೀಜಿಂಗ್ ಹಿಂದೂ ಮಹಾಸಾಗರದ ವಿವಿಧ ಭಾಗಗಳಲ್ಲಿ ಸಾಗರ ಡೇಟಾವನ್ನು ಸಂಗ್ರಹಿಸಲು, ಸಂಶೋಧನೆ ಮತ್ತು ಸಮೀಕ್ಷೆ ಹಡಗುಗಳು ಮತ್ತು ಮಾನವರಹಿತ ನೀರೊಳಗಿನ ವಾಹನಗಳನ್ನು (ಯುಯುವಿ) ನಿಯಮಿತವಾಗಿ ಕಳುಹಿಸುತ್ತಿರುತ್ತದೆ. ಹೀಗಾಗಿ ಚೀನಾದ ಸಂಶೋಧನಾ ಹಡಗು ಕ್ಸಿಯಾಂಗ್ ಯಾಂಗ್ ಹಾಂಗ್ 3 ಅನ್ನು ಮಾಲ್ಡೀವ್ಸ್ನಲ್ಲಿ ನಿಲ್ಲಿಸುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಮಾಲ್ಡೀವ್ಸ್ ಮತ್ತು ಚೀನಾ ನಡುವಿನ ಸಂಬಂಧವು ಇನ್ನೂ ಹೆಚ್ಚಿನ ಸಮೀಕ್ಷೆ ನಡೆಯಲು ಕಾರಣವಾಗಬಹುದು. ಇದು ದೀರ್ಘಾವಧಿಯಲ್ಲಿ ಭಾರತದ ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ.
ಇದಲ್ಲದೆ, ರಾಜಧಾನಿ ಮಾಲೆಗೆ ಹತ್ತಿರದ ಮಾಲ್ಡೀವ್ಸ್ ದ್ವೀಪವಾದ ಫೇಧೂ ಫಿನೊಲ್ಹುವನ್ನು ಚೀನಾದ ಕಂಪನಿಗೆ 50 ವರ್ಷಗಳ ಕಾಲ ಗುತ್ತಿಗೆ ನೀಡಿರುವುದು ಭಾರತಕ್ಕೆ ಆತಂಕಕಾರಿಯಾಗಿದೆ. ಮಿನಿಕೋಯ್ ದ್ವೀಪದಿಂದ 900 ಕಿ.ಮೀ ಮತ್ತು ಭಾರತದ ಮುಖ್ಯ ಭೂಭಾಗದಿಂದ 1000 ಕಿ.ಮೀ ದೂರದಲ್ಲಿರುವ ಫೇಧೂ ಫಿನೋಲ್ಹು ದ್ವೀಪಗಳಲ್ಲಿ ಚೀನಾ ತನ್ನ ಮಿಲಿಟರಿ ನೆಲೆಯನ್ನು ಸ್ಥಾಪಿಸುವುದು ಭಾರತದ ಭದ್ರತೆಗೆ ನೇರ ಬೆದರಿಕೆಯಾಗಿದೆ. ಏಕೆಂದರೆ ಈ ನೆಲೆಯನ್ನು ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾ ಚಲನವಲನಗಳನ್ನು ಪತ್ತೆಹಚ್ಚಲು ಮತ್ತು ಪರಮಾಣು ಜಲಾಂತರ್ಗಾಮಿ ನೌಕೆಗಳಿಗೆ ಮಿಲಿಟರಿ ಪೋಸ್ಟ್ ಆಗಿ ಬಳಸಬಹುದು. ಭಾರತವು ಐಒಆರ್ನಲ್ಲಿ ಯಾವುದೇ ಮಿಲಿಟರಿ ನೆಲೆಗಳನ್ನು ಹೊಂದಿಲ್ಲ ಮತ್ತು ಸೀಶೆಲ್ಸ್, ಮಡಗಾಸ್ಕರ್ ಮತ್ತು ಮಾರಿಷಸ್ನಲ್ಲಿ ಮಾತ್ರ ಕಣ್ಗಾವಲು ವ್ಯವಸ್ಥೆಯನ್ನು ಸ್ಥಾಪಿಸಿದೆ.
ವಾಸ್ತವವಾಗಿ ಚೀನಾದ ಯೋಜನೆಗಳು ಮತ್ತು ತಂತ್ರಗಳನ್ನು ಎದುರಿಸಲು ಪ್ರಮುಖ ಪ್ರದೇಶವಾಗಿದ್ದ ಮಾಲ್ಡೀವ್ಸ್ ಅನ್ನು ಭಾರತ ಕಳೆದುಕೊಂಡಿದೆ ಎಂದು ತೋರುತ್ತದೆ. ಪರಿಣಾಮವಾಗಿ, ಐಒಆರ್ನಲ್ಲಿ ಚೀನಾದ ವಿಸ್ತರಣಾವಾದಿ ಚಟುವಟಿಕೆಗಳನ್ನು ಎದುರಿಸಲು, ಮಾಲ್ಡೀವ್ಸ್ಗೆ ಪರ್ಯಾಯವಾಗಿ ಅರೇಬಿಯನ್ ಸಮುದ್ರದಲ್ಲಿರುವ ಲಕ್ಷದ್ವೀಪ ದ್ವೀಪಗಳಲ್ಲಿ ತನ್ನ ರಕ್ಷಣೆಯನ್ನು ಬಲಪಡಿಸುವ ಮೂಲಕ ಭಾರತ ಪ್ರತಿಕ್ರಿಯಿಸುತ್ತಿದೆ. ಐಒಆರ್ನಲ್ಲಿ ತನ್ನ ಹಿಡಿತವನ್ನು ಉಳಿಸಿಕೊಳ್ಳಲು, ಭಾರತೀಯ ನೌಕಾಪಡೆಯು ಮಾರ್ಚ್ 6 ರಂದು ಮಾಲ್ಡೀವ್ಸ್ನ ಉತ್ತರಕ್ಕೆ 125 ಕಿಲೋಮೀಟರ್ (78 ಮೈಲಿ) ದೂರದಲ್ಲಿರುವ ಮಿನಿಕೋಯ್ ದ್ವೀಪದಲ್ಲಿ ತನ್ನ ಹೊಸ ನೌಕಾ ನೆಲೆ ಐಎನ್ಎಸ್ ಜಟಾಯುವನ್ನು ನಿಯೋಜಿಸಿತು ಮತ್ತು ಕೊಚ್ಚಿಯಲ್ಲಿ ನೌಕಾ ವಾಯು ಸ್ಕ್ವಾಡ್ರನ್ಗೆ ಮಲ್ಟಿರೋಲ್ ಎಂಎಚ್ 60 ಹೆಲಿಕಾಪ್ಟರ್ಗಳನ್ನು ಸೇರಿಸಿತು.
ಲಕ್ಷದ್ವೀಪದ ದಕ್ಷಿಣದ ದ್ವೀಪವಾದ ಮಿನಿಕೋಯ್ ದ್ವೀಪದಲ್ಲಿ ಆಯಕಟ್ಟಿನ ಸ್ಥಳದಲ್ಲಿ ನೆಲೆಗೊಂಡಿರುವ ಕವರತ್ತಿಯ ಐಎನ್ಎಸ್ ದ್ವೀಪರಕ್ಷಕ್ ನಂತರ ಲಕ್ಷದ್ವೀಪದಲ್ಲಿ ಭಾರತದ ಎರಡನೇ ನೆಲೆಯಾಗಿ ಸೇವೆ ಸಲ್ಲಿಸುತ್ತಿರುವ ಐಎನ್ಎಸ್ ಜಟಾಯು, ಭಾರತೀಯ ನೌಕಾಪಡೆಯ ಕಾರ್ಯಾಚರಣೆ ಸಾಮರ್ಥ್ಯ ಮತ್ತು ಕಡಲ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ತೀವ್ರಗೊಳಿಸುತ್ತದೆ. ಲಕ್ಷದ್ವೀಪವು ಮಾಲ್ಡೀವ್ಸ್ಗೆ ಹತ್ತಿರದಲ್ಲಿರುವುದರಿಂದ ಫೈಟರ್ ಜೆಟ್ಗಳು, ಯುದ್ಧನೌಕೆಗಳು ಮತ್ತು ಇತರ ನೌಕಾ ಸ್ವತ್ತುಗಳನ್ನು ಒಳಗೊಂಡ ನೌಕಾಪಡೆಯನ್ನು ನಿಯೋಜಿಸುವ ಸಾಮರ್ಥ್ಯವನ್ನು ಹೊಂದಿರುವ ಹೊಸ ನೆಲೆಯು ಐಒಆರ್ನ ಪಶ್ಚಿಮ ಗಡಿಯಲ್ಲಿ ಚೀನಾ ನಿಯಂತ್ರಣವನ್ನು ಪಡೆಯುವ ಅಪಾಯವನ್ನು ಕಡಿಮೆ ಮಾಡಲು ಭಾರತೀಯ ನೌಕಾಪಡೆಗೆ ಮತ್ತಷ್ಟು ಧೈರ್ಯ ನೀಡುತ್ತದೆ.