ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶಗಳು ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡಿವೆ. ವಿಶೇಷವಾಗಿ ಪ್ರಜಾಪ್ರಭುತ್ವವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕುಶಲತೆಯಿಂದ ನಿರ್ವಹಿಸಬಹುದೆಂದು ಭಾವಿಸಿದವರಿಗೆ ಹೆಚ್ಚು ಅಚ್ಚರಿಯಾಗಿದೆ.
ಮೊದಲಿಗೆ ಕೆಚ್ಚೆದೆಯನ್ನು ಪ್ರದರ್ಶಿಸಿರುವ ಮತದಾರರು, ನಂತರದಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ (ಪಿಟಿಐ) ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಪಿಟಿಐ ನಾಯಕ ಇಮ್ರಾನ್ ಖಾನ್ ಅವರನ್ನು ಹಲವಾರು ಪ್ರಕರಣಗಳಲ್ಲಿ 20 ವರ್ಷಗಳ ಕಾಲ ಜೈಲಿನಲ್ಲಿ ಇರಿಸುವ, ಅವರ ಪಕ್ಷವನ್ನು ಸ್ಪರ್ಧಿಸದಂತೆ ನಿಷೇಧಿಸಿ, ಚಿಹ್ನೆಯನ್ನು ಕಸಿದುಕೊಳ್ಳುವ ಮೂಲಕ ಪಕ್ಷವನ್ನೇ ಚುನಾವಣೆಯಲ್ಲಿ ಭಾಗವಹಿಸದಂತೆ ತಡೆಯಲು ಸೇನೆಯ ನೇತೃತ್ವದಲ್ಲಿ ನಡೆದ ಅಸಾಧಾರಣ ಪ್ರಯತ್ನಗಳ ಹೊರತಾಗಿಯೂ ಈ ಫಲಿತಾಂಶ ಬಂದಿದೆ. ಇದು ಯಾವುದೂ ಕಾರ್ಯ ಸಾಧುವಾಗಲಿಲ್ಲ ಎಂದು ತೋರಿಸುತ್ತದೆ. ಪಾಕಿಸ್ತಾನದ ದಿನಪ್ರತಿಕೆ 'ಡಾನ್' ತನ್ನ ಸಂಪಾದಕೀಯದಲ್ಲಿ ನಾಗರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಇನ್ಮುಂದೆ ಮತದಾರರಿಗೆ ಸ್ವೀಕಾರಾರ್ಹವಲ್ಲ ಎಂಬುದನ್ನು ಪ್ರಬಲ ವರ್ಗಗಳು ಅರಿತುಕೊಳ್ಳಬೇಕು ಎಂದು ಸೇನೆಯನ್ನು ದೂಷಿಸಿದೆ.
ಈ ಫಲಿತಾಂಶಗಳ ತೀಕ್ಷ್ಣ ಆಘಾತದಿಂದ ಸೇನೆಯು ದಿಗ್ಭ್ರಮೆಗೊಂಡಿರಬಹುದು. ಪಿಟಿಐ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 93 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದರೆ, ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್) 75 ಸ್ಥಾನಗಳನ್ನು ಗೆದ್ದಿದೆ. ಆದರೆ, ನವಾಜ್ ಷರೀಫ್ ಅವರ ಪಿಎಂಎಲ್ (ಎನ್) ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಬಹುಮತದ ಹಕ್ಕು ಪ್ರತಿಪಾದಿಸಿದ್ದು, ವಿಧಾನಸಭೆಯಲ್ಲೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದಾಗಿ ಎಂದು ಹೇಳಿಕೊಂಡಿವೆ. ಇದೇ ವೇಳೆ, ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಪಕ್ಷೇತರರಿಗೆ ಭರ್ಜರಿ ಹಣದ ಆಮಿಷವೊಡ್ಡಿರುವ ಕುದುರೆ ವ್ಯಾಪಾರದ ವರದಿಗಳೂ ಇವೆ. ಸ್ವತಂತ್ರ ಟಿಕೆಟ್‌ನಲ್ಲಿ ಹೋರಾಡಿದ್ದರಿಂದ ಈ ಪಕ್ಷೇತರರು ಪಿಎಂಎಲ್ (ಎನ್) ಅಥವಾ ಪಿಪಿಪಿ ಎರಡು ಪಕ್ಷಗಳಲ್ಲಿ ಒಂದನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ.
ಇದರ ನಡುವೆ ಪಾಕಿಸ್ತಾನದಲ್ಲಿನ ಅಕ್ರಮ ಮತದಾನದ ಬಗ್ಗೆಯೂ ವರದಿಗಳಿಂದಾಗಿ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ. ಇಮ್ರಾನ್ ಖಾನ್ ಪದಚ್ಯುತಿಗೆ ಪಶ್ಚಿಮವು ಬೆಂಬಲ ನೀಡುತ್ತಿದೆ ಎಂದು ಪಿಟಿಐ ಆರೋಪಿಸಿತ್ತು. ಯುಎಸ್, ಯುಕೆ, ಇಯು (ಯೂರೋಪಿನ ಒಕ್ಕೂಟ) ಅಂತಹ ರಾಷ್ಟ್ರಗಳು ಫೆಬ್ರವರಿ 8ರಂದು ನಡೆದ ಮತದಾನದ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದೆ. ಇದು ಪಾಕಿಸ್ತಾನದಲ್ಲಿ ಚುನಾವಣೆಗಳು ಎಷ್ಟು ಕೆಟ್ಟದಾಗಿ ನಡೆಸಲ್ಪಟ್ಟವು ಎಂಬುದಕ್ಕೆ ನಿದರ್ಶನವಾಗಿದೆ.
ಪಾಕಿಸ್ತಾನದ ಚುನಾವಣಾ ಆಯೋಗವು ಫಲಿತಾಂಶಗಳನ್ನು ಪ್ರಕಟಿಸಲು ತುಂಬಾ ಸಮಯ ತೆಗೆದುಕೊಂಡಿರುವುದನ್ನೂ ಹಲವು ಮಾಧ್ಯಮ ಸಂಸ್ಥೆಗಳು ಟೀಕಿಸಿವೆ. ವಿಳಂಬದ ಬಗ್ಗೆ ವಿವರಣೆ ನೀಡದೆ ಆಯೋಗವು ಇಂಟರ್ನೆಟ್ ಮತ್ತು ಮೊಬೈಲ್ ಟೆಲಿಫೋನ್ ಸೇವೆಯನ್ನು ನಿಷೇಧಿಸಿತ್ತು. ನವಾಜ್ ಷರೀಫ್ ಅವರ ಪಿಎಂಎಲ್ (ಎನ್) ಮತ್ತು ಪಿಪಿಪಿ ಪಕ್ಷಕ್ಕೆ ಅನಗತ್ಯ ಲಾಭವನ್ನು ನೀಡಲು ಫಲಿತಾಂಶಗಳ ಎಣಿಕೆ ಮತ್ತು ಪ್ರಕಟಣೆಯನ್ನು ವಿಳಂಬ ಮಾಡಲಾಗಿದೆ ಎಂದು ಪಿಟಿಐ ಬೆಂಬಲಿಗರು ದೂರಿದ್ದರು. ಅಲ್ಲದೇ, ಸೇನೆಯ ಯಾವುದೇ ಹಸ್ತಕ್ಷೇಪವಿಲ್ಲದಿದ್ದರೆ ಅವರ ಅನೇಕ ಅಭ್ಯರ್ಥಿಗಳು ಸೋಲುತ್ತಿದ್ದರು. ಕೆಲ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳಿಗಿಂತ ಎಣಿಕೆಯಾದ ಮತಗಳು ಹೆಚ್ಚು ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು.
ಆದಾಗ್ಯೂ, ಪ್ರಬಲ ಗುಂಪುಗಳ ಯಾವುದೇ ತಂತ್ರವು ಮತದಾರರು ತಮ್ಮ ಕೋಪವನ್ನು ವ್ಯಕ್ತಪಡಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಫಲಿತಾಂಶಗಳು ಸಾಬೀತುಪಡಿಸಿವೆ. ವ್ಯವಸ್ಥೆಯು ಭಯದಿಂದ ಮತದಾರರನ್ನು ಓಲೈಸಲಾಗುವುದಿಲ್ಲ ಎಂಬುದು ಸಹ ಬಲವಾದ ಸಂಗತಿಯಾಗಿದೆ. ಇಮ್ರಾನ್ ಖಾನ್ ಒಬ್ಬ ಕಳಪೆ ಆಡಳಿತಗಾರರಾಗಿರಬಹುದು. ಆದರೆ, ಅವರು ಪಾಕಿಸ್ತಾನಕ್ಕಾಗಿ ಹೃದಯ ಬಡಿತದ ಹಿತಚಿಂತಕ ವ್ಯಕ್ತಿಯಾಗಿ ಕಂಡುಬಂದಿದ್ದಾರೆ. ನವಾಜ್ ಷರೀಫ್ ಅಥವಾ ಜರ್ದಾರಿಗಳು ಈ ಖ್ಯಾತಿಯನ್ನು ಹೊಂದಿಲ್ಲ.