ಕರ್ನಾಟಕ

karnataka

ETV Bharat / opinion

ಶ್ರೀಲಂಕಾದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಪ್ರಮುಖ ಪಾಲುದಾರನಾಗಿದ್ದು ಹೇಗೆ? - renewable energy

ಶ್ರೀಲಂಕಾದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಹೇಗೆ ಪ್ರಮುಖ ಪಾಲುದಾರನಾಗಿ ಹೊರಹೊಮ್ಮಿದೆ ಎಂಬ ಬಗ್ಗೆ ಒಂದು ಅವಲೋಕನ ಇಲ್ಲಿದೆ.

Why India is Emerging as a Big Player in Sri Lanka’s Renewable Energy Sector
Why India is Emerging as a Big Player in Sri Lanka’s Renewable Energy Sector

By ETV Bharat Karnataka Team

Published : Mar 18, 2024, 4:04 PM IST

ಕಳೆದ ವರ್ಷ ಜುಲೈನಲ್ಲಿ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ-ಶ್ರೀಲಂಕಾ ಆರ್ಥಿಕ ಪಾಲುದಾರಿಕೆ ವಿಷನ್ ಡಾಕ್ಯುಮೆಂಟ್​ಗೆ ಸಹಿ ಹಾಕಿದ ನಂತರ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರವಾಗಿರುವ ಶ್ರೀಲಂಕಾದ ನವೀಕರಿಸಬಹುದಾದ ಇಂಧನ ಉತ್ಪಾದನೆ ವಲಯದಲ್ಲಿ ಭಾರತೀಯ ಸಂಸ್ಥೆಗಳು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿವೆ.

ಈ ತಿಂಗಳ ಆರಂಭದಲ್ಲಿ, ಶ್ರೀಲಂಕಾ ಸರ್ಕಾರದ ಸುಸ್ಥಿರ ಇಂಧನ ಪ್ರಾಧಿಕಾರ ಮತ್ತು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಯು ಸೋಲಾರ್ ಕ್ಲೀನ್ ಎನರ್ಜಿ ಸಲ್ಯೂಷನ್ಸ್ ಜಾಫ್ನಾ ಕರಾವಳಿಯ ಪಾಕ್ ಕೊಲ್ಲಿಯ ಡೆಲ್ಫ್ಟ್ (ನೆಡುಂಥೀವು), ನೈನತೀವು ಮತ್ತು ಅನಾಲೈಟಿವು ದ್ವೀಪಗಳಲ್ಲಿ ಹೈಬ್ರಿಡ್ ನವೀಕರಿಸಬಹುದಾದ ಇಂಧನ ಯೋಜನೆಗಳ ಅನುಷ್ಠಾನಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದವು.

ಭಾರತ-ಶ್ರೀಲಂಕಾ ಆರ್ಥಿಕ ಪಾಲುದಾರಿಕೆ ವಿಷನ್ ಡಾಕ್ಯುಮೆಂಟ್​

ಕೊಲಂಬೊದಲ್ಲಿನ ಭಾರತೀಯ ಹೈಕಮಿಷನ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಮೂರು ದ್ವೀಪಗಳ ಜನರ ಇಂಧನ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಈ ಯೋಜನೆಯನ್ನು ಭಾರತ ಸರ್ಕಾರದ (ಜಿಒಐ) ಅನುದಾನದ ಸಹಾಯದಿಂದ ಕಾರ್ಯಗತಗೊಳಿಸಲಾಗುತ್ತಿದೆ. ಹೈಬ್ರಿಡ್ ಯೋಜನೆಯು ಸೌರ ಮತ್ತು ಪವನ ಸೇರಿದಂತೆ ವಿವಿಧ ರೀತಿಯ ಶಕ್ತಿಯನ್ನು ಸಂಯೋಜಿಸುವ ಸಾಮರ್ಥ್ಯವನ್ನು ಉತ್ತಮಗೊಳಿಸುತ್ತದೆ.

"ರಾಷ್ಟ್ರೀಯ ಗ್ರಿಡ್​ ನೊಂದಿಗೆ ಸಂಪರ್ಕ ಹೊಂದಿರದ ಮೂರು ದ್ವೀಪಗಳ ಜನರಿಗಾಗಿ ಈ ಯೋಜನೆಗೆ ಭಾರತ ಸರ್ಕಾರದ ಸಹಾಯವು ದ್ವಿಪಕ್ಷೀಯ ಇಂಧನ ಪಾಲುದಾರಿಕೆಗೆ ಭಾರತ ನೀಡಿದ ಮಹತ್ವವನ್ನು ಒತ್ತಿಹೇಳುತ್ತದೆ ಮತ್ತು ಅಭಿವೃದ್ಧಿ ಪಾಲುದಾರಿಕೆಯ ಮಾನವ ಕೇಂದ್ರಿತ ಸ್ವರೂಪವನ್ನು ಸೂಚಿಸುತ್ತದೆ" ಎಂದು ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.

ಒಟ್ಟು 2,230 ಕಿಲೋವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಿರುವ ಈ ಮೂರು ಯೋಜನೆಗಳು ಭಾರತ ಸರ್ಕಾರ ನೀಡುವ 11 ಮಿಲಿಯನ್ ಡಾಲರ್ ಅನುದಾನದಿಂದ ನಿರ್ಮಾಣವಾಗಲಿವೆ.

ಏಷ್ಯನ್ ಡೆವಲಪ್​​ಮೆಂಟ್ ಬ್ಯಾಂಕ್ (ಎಡಿಬಿ) ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಬಿಡ್ಡಿಂಗ್ ಪ್ರಕ್ರಿಯೆಯ ನಂತರ ಎಲ್ಲಾ ಮೂರು ಯೋಜನೆಗಳ ಗುತ್ತಿಗೆಯನ್ನು ಮೂಲತಃ ಚೀನಾದ ಸಂಸ್ಥೆ ಸಿನೋಸಾರ್​ಗೆ ಜನವರಿ 2021 ರಲ್ಲಿ ನೀಡಲಾಗಿತ್ತು. ಆದರೆ ಈ ಯೋಜನಾ ಸ್ಥಾವರಗಳು ದಕ್ಷಿಣ ಕರಾವಳಿಯಿಂದ ಕೇವಲ 50 ಕಿ.ಮೀ ದೂರದಲ್ಲಿರುವುದರಿಂದ ಭಾರತವು ಭದ್ರತಾ ಕಳವಳಗಳನ್ನು ವ್ಯಕ್ತಪಡಿಸಿದೆ. ಇದರ ಪರಿಣಾಮವಾಗಿ, ಶ್ರೀಲಂಕಾ ಸರ್ಕಾರ ಈ ಯೋಜನೆಗಳನ್ನು ಚೀನಾದ ಸಂಸ್ಥೆಯಿಂದ ಹಿಂಪಡೆದು ಭಾರತದ ಯು ಸೋಲಾರ್ ಕ್ಲೀನ್ ಎನರ್ಜಿ ಸಲ್ಯೂಷನ್ ಗೆ ನೀಡಿದೆ.

ಮನೋಹರ್ ಪರಿಕ್ಕರ್ ಇನ್ ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್​ನ ಅಸೋಸಿಯೇಟ್ ಫೆಲೋ ಆನಂದ್ ಕುಮಾರ್ ಅವರ ಪ್ರಕಾರ, ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾಕ್ಕೆ ಭಾರತ ಸಹಾಯ ಮಾಡುತ್ತಿದೆ. "ಈ ಪ್ರಕ್ರಿಯೆಯಲ್ಲಿ, ಭಾರತವು ಶ್ರೀಲಂಕಾದಲ್ಲಿ ತನ್ನ ಭೌಗೋಳಿಕ ರಾಜಕೀಯ ಪ್ರಭಾವವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ" ಎಂದು ಕುಮಾರ್ ಈಟಿವಿ ಭಾರತ್​ಗೆ ತಿಳಿಸಿದರು.

ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಯುಎಸ್ ಆಸಕ್ತಿ ವಹಿಸದ ಕಾರಣ ಚೀನಾ ಮೊರೆ ಹೋಗುತ್ತಿರುವುದಾಗಿ ಶ್ರೀಲಂಕಾ ಈ ಹಿಂದೆ ಹೇಳಿತ್ತು ಎಂಬುದನ್ನು ಅವರು ಸ್ಮರಿಸಿದರು.

"ಆದಾಗ್ಯೂ, ಚೀನಾದೊಂದಿಗಿನ ಶ್ರೀಲಂಕಾ ಸಂಬಂಧವು ಆತಂಕ ಮೂಡಿಸುವ ಮಟ್ಟಕ್ಕೆ ಹೆಚ್ಚಳವಾಗಿತ್ತು" ಎಂದು ಅವರು ಹೇಳಿದರು. ಶ್ರೀಲಂಕಾವು ಚೀನಾಕ್ಕೆ ಗುತ್ತಿಗೆ ನೀಡಿದ ಹಂಬಂಟೋಟ ಬಂದರನ್ನು ಉದಾಹರಣೆಯಾಗಿ ಅವರು ಉಲ್ಲೇಖಿಸಿದರು.

ಈ ವಾರದ ಆರಂಭದಲ್ಲಿ, ನವೀಕರಿಸಬಹುದಾದ ಇಂಧನ ಸಹಕಾರಕ್ಕಾಗಿ ಭಾರತ-ಶ್ರೀಲಂಕಾ ಜಂಟಿ ಕಾರ್ಯ ಗುಂಪಿನ ಉದ್ಘಾಟನಾ ಸಭೆ ಕೊಲಂಬೊದಲ್ಲಿ ನಡೆಯಿತು. ಭಾರತೀಯ ನಿಯೋಗವು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಭಾರತೀಯ ಕೇಂದ್ರ ವಿದ್ಯುತ್ ಪ್ರಾಧಿಕಾರ ಮತ್ತು ಕೊಲಂಬೊದಲ್ಲಿನ ಭಾರತೀಯ ಹೈಕಮಿಷನ್ ಅಧಿಕಾರಿಗಳನ್ನು ಒಳಗೊಂಡಿತ್ತು. ಭಾರತದ ಪ್ರಮುಖ ನವೀಕರಿಸಬಹುದಾದ ಇಂಧನ ಕಂಪನಿಗಳನ್ನು ಪ್ರತಿನಿಧಿಸುವ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ನ 17 ಸದಸ್ಯರ ನಿಯೋಗವೂ ಅಧಿಕೃತ ನಿಯೋಗದೊಂದಿಗೆ ತೆರಳಿತ್ತು. ಶ್ರೀಲಂಕಾದ ನಿಯೋಗದಲ್ಲಿ ವಿದ್ಯುತ್ ಮತ್ತು ಇಂಧನ ಸಚಿವಾಲಯ, ಸಿಲೋನ್ ವಿದ್ಯುತ್ ಮಂಡಳಿ (ಸಿಇಬಿ) ಮತ್ತು ವಿದೇಶಾಂಗ ಸಚಿವಾಲಯದ ಸದಸ್ಯರು ಇದ್ದರು.

ಸಭೆಯಲ್ಲಿ ಭಾರತೀಯ ನಿಯೋಗವು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಸಾಧನೆಗಳು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಭಾರತ ಸರ್ಕಾರ ನೀಡುವ ನಾಗರಿಕ ಕೇಂದ್ರಿತ ಯೋಜನೆಗಳು, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಮತ್ತು ಭಾರತದ ಗಡಿಯಾಚೆಗಿನ ವಿದ್ಯುತ್ ವ್ಯಾಪಾರದ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡಿತು. ಶ್ರೀಲಂಕಾದ ವಿದ್ಯುತ್ ಕ್ಷೇತ್ರದ ಪ್ರಸ್ತುತ ಸ್ಥಿತಿ ಮತ್ತು ಇಂಧನ ಮಿಶ್ರಣದಲ್ಲಿ ನವೀಕರಿಸಬಹುದಾದ ಇಂಧನಗಳ ಕೊಡುಗೆಯನ್ನು ಶ್ರೀಲಂಕಾದ ಅಧಿಕಾರಿಗಳು ಎತ್ತಿ ತೋರಿಸಿದರು.

ಶ್ರೀಲಂಕಾದ ವಿದ್ಯುತ್ ಮತ್ತು ಇಂಧನ ಸಚಿವಾಲಯದ ಕಾರ್ಯದರ್ಶಿ ಸುಲಕ್ಷಣಾ ಜಯವರ್ಧನೆ ಮಾತನಾಡಿ, 2030 ರ ವೇಳೆಗೆ ನವೀಕರಿಸಬಹುದಾದ ಇಂಧನದ ಮೂಲಕ ಶೇಕಡಾ 70 ರಷ್ಟು ಇಂಧನ ಉತ್ಪಾದನೆಯ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಶ್ರೀಲಂಕಾ ಸರ್ಕಾರ ಕಾರ್ಯನಿರ್ವಹಿಸುತ್ತಿರುವುದರಿಂದ, ಭಾರತೀಯ ಕಂಪನಿಗಳ ಹೂಡಿಕೆಗೆ ಅಪಾರ ಅವಕಾಶಗಳಿವೆ ಎಂದು ಹೇಳಿದರು.

"ರಾಷ್ಟ್ರೀಯ ಸೌರ ಶಕ್ತಿ ಸಂಸ್ಥೆ, ರಾಷ್ಟ್ರೀಯ ಪವನ ಶಕ್ತಿ ಸಂಸ್ಥೆ ಮತ್ತು ರಾಷ್ಟ್ರೀಯ ಜೈವಿಕ ಇಂಧನ ಸಂಸ್ಥೆಯಂತಹ ಪ್ರಮುಖ ಭಾರತೀಯ ಸಂಸ್ಥೆಗಳಲ್ಲಿ ತರಬೇತಿ ನೀಡುವ ಮೂಲಕ ಸೌರ, ಪವನ, ಜೀವರಾಶಿ ಮತ್ತು ಗ್ರಿಡ್ ಸಂಪರ್ಕ ಕ್ಷೇತ್ರಗಳಲ್ಲಿ ಶ್ರೀಲಂಕಾ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ತಾಂತ್ರಿಕ ಸಹಾಯವನ್ನು ನೀಡಲು ಭಾರತ ಒಪ್ಪಿಕೊಂಡಿದೆ" ಎಂದು ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.

ಏತನ್ಮಧ್ಯೆ, 2022 ರಲ್ಲಿ ಶ್ರೀಲಂಕಾ ಭಾರತದ ಅದಾನಿ ಗ್ರೀನ್ ಎನರ್ಜಿಗೆ ವಾಯುವ್ಯ ಮನ್ನಾರ್ ಮತ್ತು ಪೂನೆರಿನ್​​ನಲ್ಲಿ 500 ಮಿಲಿಯನ್ ಡಾಲರ್ ಹೂಡಿಕೆಗಾಗಿ 286 ಮೆಗಾವ್ಯಾಟ್ ಮತ್ತು 234 ಮೆಗಾವ್ಯಾಟ್​ನ ಎರಡು ಪವನ ಶಕ್ತಿ ಯೋಜನೆಗಳಿಗೆ ಅನುಮೋದನೆ ನೀಡಿದೆ. ಮನ್ನಾರ್​ನಲ್ಲಿನ ಯೋಜನೆಯು ಒಟ್ಟು 250 ಮೆಗಾವ್ಯಾಟ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಪೂನೆರಿನ್​ನಲ್ಲಿನ ಯೋಜನೆಯು 100 ಮೆಗಾವ್ಯಾಟ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಎರಡೂ ಯೋಜನೆಗಳು ಡಿಸೆಂಬರ್ 2024 ರೊಳಗೆ ಕಾರ್ಯಾರಂಭ ಮಾಡಲಿವೆ ಎಂದು ವರದಿಗಳು ತಿಳಿಸಿವೆ.

ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ವಿಕ್ರಮಸಿಂಘೆ ಅವರು ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ-ಶ್ರೀಲಂಕಾ ಆರ್ಥಿಕ ಸಹಭಾಗಿತ್ವ ದೃಷ್ಟಿಕೋನದ ದಾಖಲೆಯನ್ನು ಬಿಡುಗಡೆ ಮಾಡುವ ಮೊದಲೇ ಈ ಯೋಜನೆಗಳನ್ನು ಅದಾನಿ ಗ್ರೂಪ್​ಗೆ ಮಂಜೂರು ಮಾಡಲಾಗಿತ್ತು. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಸಹಕಾರವನ್ನು ವಿಷನ್ ಡಾಕ್ಯುಮೆಂಟ್ ನಲ್ಲಿ ಆದ್ಯತೆಯಾಗಿ ಉಲ್ಲೇಖಿಸಲಾಗಿದೆ.

ಸಂಪೂರ್ ಸೌರ ವಿದ್ಯುತ್ ಯೋಜನೆಯ ತಿಳಿವಳಿಕೆ ಒಪ್ಪಂದದ ಅನುಷ್ಠಾನವನ್ನು ತ್ವರಿತಗೊಳಿಸಲಾಗುವುದು ಎಂದು ವಿಷನ್ ಡಾಕ್ಯುಮೆಂಟ್​ನಲ್ಲಿ ಉಲ್ಲೇಖಿಸಲಾಗಿದೆ. ಮಾರ್ಚ್ 2022 ರಲ್ಲಿ, ಭಾರತದ ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್​ಟಿಪಿಸಿ) ಮತ್ತು ಶ್ರೀಲಂಕಾದ ಸಿಲೋನ್ ವಿದ್ಯುತ್ ಮಂಡಳಿ (ಸಿಇಬಿ) ಶ್ರೀಲಂಕಾದ ಪೂರ್ವ ಟ್ರಿಂಕೋಮಲಿ ಜಿಲ್ಲೆಯಲ್ಲಿ 135 ಮೆಗಾವ್ಯಾಟ್ ಸಂಪೂರ್ ಸೌರ ವಿದ್ಯುತ್ ಯೋಜನೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಲೇಖನ : ಅರುಣಿಮ್ ಭುಯಾನ್

ಇದನ್ನೂ ಓದಿ : ಚೀನಾದೊಂದಿಗೆ ದೋಸ್ತಿ: ಮಾಲ್ಡೀವ್ಸ್​ಗೆ ಭಾರತದ ವ್ಯೂಹಾತ್ಮಕ ತಿರುಗೇಟು

ABOUT THE AUTHOR

...view details