ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆಯುತ್ತಿದ್ದ ಪ್ರವಚನ ಕಾರ್ಯಕ್ರಮವೊಂದರಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 120 ಜನ ಸಾವಿಗೀಡಾಗಿರುವುದು ದುರದೃಷ್ಟಕರ ಮತ್ತು ಅತ್ಯಂತ ಹೃದಯ ವಿದ್ರಾವಕ ಘಟನೆಯಾಗಿದೆ. ಮೊದಲು ಪೊಲೀಸ್ ಕಾನ್ಸ್ಟೇಬಲ್ ಆಗಿದ್ದ ವ್ಯಕ್ತಿಯೊಬ್ಬ ನಂತರ ಸ್ವಯಂ ಘೋಷಿತ ದೇವಮಾನವನ ಪ್ರವಚನ ಕಾರ್ಯಕ್ರಮದಲ್ಲಿ ಈ ಕಾಲ್ತುಳಿತ ಸಂಭವಿಸಿತ್ತು. ಆದರೆ ಈ ಘಟನೆಯು ಇಂಥ ಸ್ವಯಂ ಘೋಷಿತ ದೇವಮಾನವರನ್ನು ಉನ್ನತ ಸ್ಥಾನದಲ್ಲಿಟ್ಟು ಅವರ ಬಗ್ಗೆ ಭಕ್ತಿಯ ಪರಾಕಾಷ್ಠೆಯನ್ನು ಬೆಳೆಸಿಕೊಳ್ಳುವ ಒಟ್ಟಾರೆ ಸಮಾಜದ ಸಾಕ್ಷಿ ಪ್ರಜ್ಞೆಯನ್ನು ಬಡಿದೇಳಿಸಬೇಕಿದೆ.
ಇದೊಂದು ಆಡಳಿತಾತ್ಮಕ ವೈಫಲ್ಯವಾಗಿದ್ದು, ಇದಕ್ಕೆ ಯಾರು ಜವಾಬ್ದಾರರು ಎಂಬುದನ್ನು ನಿರ್ಣಯಿಸಬೇಕು ಮತ್ತು ಅವರನ್ನು ಕಾನೂನಿನ ಪ್ರಕಾರ ಶಿಕ್ಷೆಗೊಳಪಡಿಸಬೇಕಿದೆ. ಆದರೆ ದೇಶಾದ್ಯಂತ ಇಂಥ ಸ್ವಯಂ ಘೋಷಿತ ದೇವಮಾನವರ ಸಂಖ್ಯೆ ಹೆಚ್ಚಾಗುತ್ತಿರುವುದರ ಬಗ್ಗೆ ನಾವೀಗ ಗಂಭೀರವಾಗಿ ಚಿಂತಿಸುವ ಸಮಯ ಬಂದಿದೆ. ದೈವತ್ವದ ಅಂಶಗಳನ್ನು ಹೊಂದಿರುವವರು ಅಥವಾ ಅಲೌಕಿಕ ಶಕ್ತಿಗಳನ್ನು ಹೊಂದಿರುವವರು ಎಂದು ನಂಬುವ ಸಮಾಜ ಅವರಿಗೆ ಉನ್ನತ ಸ್ಥಾನಮಾನ ನೀಡುವುದು ಪ್ರಶ್ನಾರ್ಹವಾಗಿದೆ. ಜನರ ಭಾವನೆಗಳ ಮೇಲೆ ಈ ದೇವಮಾನವರು ಹೊಂದಿರುವ ಹಿಪ್ನಾಟಿಕ್ ರೀತಿಯ ಹಿಡಿತವು ಹತ್ರಾಸ್ ಘಟನೆಗೆ ಒಂದು ಕಾರಣವಾಗಿರಬಹುದು.
ವರದಿಗಳ ಪ್ರಕಾರ, ಹತ್ರಾಸ್ನ ಸಮಾರಂಭದಲ್ಲಿ ಸ್ವಯಂ ಘೋಷಿತ ದೇವಮಾನವ ನಡೆದ ಹೆಜ್ಜೆಯ ಪಾದಧೂಳಿ ಸ್ಪರ್ಶಿಸಲು ಉನ್ಮಾದಿಂದ ಜನ ಮುಗಿಬಿದ್ದಿದ್ದರಿಂದಲೇ ಕಾಲ್ತುಳಿತ ಉಂಟಾಗಿ ಹಲವಾರು ಮುಗ್ಧ ಜೀವಗಳು ಬಲಿಯಾಗುವಂತಾಯಿತು. ಅಲ್ಲದೇ ಅನೇಕ ಕುಟುಂಬಗಳು ಅನಾಥವಾದವು.
ಭಾರತದಂತಹ ಆಳವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಾಜದಲ್ಲಿ ಜನತೆ ಆಧ್ಯಾತ್ಮಿಕ ಮೋಕ್ಷದ ಅನ್ವೇಷಣೆಗಾಗಿ ಸಾಮೂಹಿಕ ಕಾರ್ಯಕ್ರಮಗಳಿಗೆ ಹಾಜರಾಗುವುದು ಅಸಾಮಾನ್ಯವೇನಲ್ಲ. ಆದಾಗ್ಯೂ, ಅನೇಕ ಸ್ವಯಂ-ಘೋಷಿತ ಅರೆ ದೈವಿಕ ವ್ಯಕ್ತಿಗಳು ಸಮಾಜದ ನೈತಿಕ ಆತ್ಮಸಾಕ್ಷಿಯನ್ನು ಅಲುಗಾಡಿಸುವ ರೀತಿಯ ತಪ್ಪು ಕೆಲಸಗಳಲ್ಲಿ ತೊಡಗಿದ್ದಾರೆ ಎಂಬುದು ಕೂಡ ಸತ್ಯ.
ಆದರೆ, ಹಾಗಂತ ಒಬ್ಬರ ಸೈದ್ಧಾಂತಿಕ ಪೂರ್ವಾಗ್ರಹಗಳ ಕಾರಣದಿಂದಾಗಿ ಎಲ್ಲಾ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಕೆಟ್ಟದಾಗಿ ಚಿತ್ರಿಸುವುದು ಕೂಡ ಸರಿಯಲ್ಲ. ಏಕೆಂದರೆ ಇವು ವ್ಯಕ್ತಿಗಳಲ್ಲಿ ಆಧ್ಯಾತ್ಮಿಕ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಸಮಾಜದಲ್ಲಿನ ಜನರನ್ನು ಒಟ್ಟಿಗೆ ತರಲು ಸಹಾಯ ಮಾಡುತ್ತವೆ. ಆದರೆ, ನಂಬಿಕೆಯು ಸಿದ್ಧಾಂತವಾಗಿ ರೂಪಾಂತರಗೊಂಡಾಗ ಮತ್ತು "ತರ್ಕ" ಮತ್ತು "ವೈಜ್ಞಾನಿಕ ಮನೋಭಾವವನ್ನು" ದುರ್ಬಲಗೊಳಿಸಿದಾಗ ಸಮಸ್ಯೆ ಉದ್ಭವಿಸುತ್ತದೆ. ದೇವಮಾನವರಂತೆ ವೇಷ ಧರಿಸಿದ ಅನೇಕ ಕಪಟರು ಮತಾಂಧತೆಯನ್ನು ಬೆಂಬಲಿಸುತ್ತಾರೆ. ಇದು ಮಾನವ ಪ್ರಜ್ಞೆಯನ್ನು ಕುರುಡಾಗಿಸುತ್ತದೆ ಮತ್ತು ಅಂತಿಮವಾಗಿ ಬೌದ್ಧಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಡ್ಡಿಯಾಗುವ ಏಕತಾನತೆಯು ಬಲವಾಗುತ್ತದೆ.
ಭೂಮಿಯ ಮೇಲೆ ತಾವು ದೈವಾಂಶ ಸಂಭೂತರೆಂದು ಹೇಳಿಕೊಳ್ಳುವ ದೇವಮಾನವರ ಬಹುತೇಕ ಮಾದಕ ಪ್ರಭಾವವು ಅಂಧಶ್ರದ್ಧೆಯನ್ನೇ ಆಧರಿಸಿದೆ. ಇದು ಜನರ ಮಾನಸಿಕ ಸಾಮರ್ಥ್ಯಗಳನ್ನು ದುರ್ಬಲಗೊಳಿಸುತ್ತದೆ ಮತ್ತು ವಿಮರ್ಶಾತ್ಮಕ ಚಿಂತನೆಗೆ ಅಡ್ಡಿಯುಂಟು ಮಾಡುತ್ತದೆ. ಆರ್ಥಿಕ ಮತ್ತು ಸಾಮಾಜಿಕ ಪಿರಮಿಡ್ ನ ಕೆಳಮಟ್ಟದಲ್ಲಿರುವ ಜನರು ಅಂಥ ವ್ಯಕ್ತಿಗಳ ಪಾದದ ಧೂಳಿನಲ್ಲಿ ಮೋಕ್ಷವನ್ನು ಹುಡುಕುವುದರಲ್ಲಿ ಆಶ್ಚರ್ಯವೇನಿಲ್ಲ. ಜೀವನದ ದುಃಖಗಳಿಂದ ವಿಮೋಚನೆ ನೀಡುವುದಾಗಿ ಹೇಳಿಕೊಳ್ಳುವ ದೇವಮಾನವರು ನಮ್ಮ ಸಮಾಜದ ದೊಡ್ಡ ಜನಸಂಖ್ಯೆಯ ದೈಹಿಕ ಮತ್ತು ಮಾನಸಿಕ ಮನೋಭಾವದ ಮೇಲೆ ಅಪಾರ ಹಿಡಿತವನ್ನು ಹೊಂದಿದ್ದಾರೆ.
ಹಾಗಿರುವಾಗ ಹತ್ರಾಸ್ನಲ್ಲಿ ನಡೆದ ಘಟನೆಗೆ ದೇವಮಾನವ ಎಂದು ಕರೆದುಕೊಳ್ಳುವ ವ್ಯಕ್ತಿ ಕೂಡ ಒಂದಿಷ್ಟಾದರೂ ಹೊಣೆಗಾರಿಕೆಯನ್ನು ಹೊರಲೇಬೇಕಲ್ಲವೇ?