ನವದೆಹಲಿ: ನ್ಯಾಷನಲ್ ಪೀಪಲ್ಸ್ ಪವರ್ (ಎನ್ಪಿಪಿ) ಒಕ್ಕೂಟದ ಅನುರಾ ಕುಮಾರ್ ದಿಸ್ಸನಾಯಕೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಕೊಲೊಂಬೊದಲ್ಲಿನ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶನಿವಾರ ನಡೆದ ಶ್ರೀಲಂಕಾ ಚುನಾವಣೆಯಲ್ಲಿ ದಿಸ್ಸನಾಯಕ್ 5.6 ಮಿಲಿಯನ್ ಮತಗಳನ್ನು, ಅಂದರೆ ಶೇ 42.3ರಷ್ಟು ಮತಗಳನ್ನು ಪಡೆದುಕೊಂಡು ಎರಡನೇ ಪ್ರಾಶಸ್ತ್ಯದ ಮತಗಳೊಂದಿಗೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ತಮ್ಮ ಎದರುರಾಳಿ ಎಸ್ಜೆಪಿಯ ಸಜಿತ್ ಪ್ರೇಮ್ದಾಸ ವಿರುದ್ಧ ಒಂದು ಮಿಲಿಯನ್ ಮತಗಳಿಗಿಂತ ಹೆಚ್ಚಿನ ಅಂತರದಿಂದ ಗೆದ್ದು ಅಧ್ಯಕ್ಷ ಪಟ್ಟಕ್ಕೇರಿದ್ದಾರೆ. ಇನ್ನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ರನಿಲ್ ವಿಕ್ರಮಸಿಂಘೆ 2.3 ಮಿಲಿಯನ್ ಮತ ಅಂದರೆ ಶೇ 17,3ರಷ್ಟು ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
ಹಿರಿಯ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ 55 ವರ್ಷದ ದಿಸ್ಸನಾಯಕ್ ಎಕೆಡಿ ಎಂದೇ ಪರಿಚಿತರಾಗಿದ್ದು, ಇದೇ ಮೊದಲ ಬಾರಿಗೆ ಅವರು ದ್ವೀಪ ರಾಷ್ಟ್ರದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ದಿಸ್ಸನಾಯಕೆ ಆರಂಭಿಕ ಜೀವನ:1968ರ ನವೆಂಬರ್ 24ರಂದು ಜನಿಸಿದ ದಿಸ್ಸನಾಯಕೆ, ಶ್ರೀಲಂಕಾದ ಉತ್ತರ ಕೇಂದ್ರ ಪ್ರಾಂತ್ಯದ ಅನುರಾಧಪುರ ಜಿಲ್ಲೆಯಲ್ಲಿನ ಥಂಬುಥೆಗಮನಲ್ಲಿ ಜನಿಸಿದರು. ಇವರ ತಂದೆ ಕಾರ್ಮಿಕರಾಗಿದ್ದರೆ, ತಾಯಿ ಗೃಹಿಣಿ. ಥಂಬುಥೆಗಮ ಗಮಿನಿ ಮಹಾ ವಿದ್ಯಾಲಯ ಮತ್ತು ಥಂಬುಥೆಗಮ ಕೇಂದ್ರ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದಿದ್ದು, ಈ ಕಾಲೇಜಿನಿಂದ ಯುನಿವರ್ಸಿಟಿ ಪ್ರವೇಶ ಪಡೆದ ಮೊದಲ ವಿದ್ಯಾರ್ಥಿ ಕೂಡ ಇವರಾಗಿದ್ದಾರೆ. 1987ರಲ್ಲಿ ಶ್ರೀಲಂಕಾದ ಮಾರ್ಕ್ಸಿಸ್ಟ್ ಲೆನಿನಿಸ್ಟ್ ಪಕ್ಷ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಸೇರುವ ಮೂಲಕ ವಿದ್ಯಾರ್ಥಿ ರಾಜಕಾರಣದಲ್ಲಿ ಸಕ್ರಿಯರಾಗಿ ತೊಡಿಗಿಸಿಕೊಂಡಿದ್ದರು. ಇದಾದ ಬಳಿಕ 1987 ರಿಂದ 1989 ಜೆವಿಪಿ ದಂಗೆ ಶುರುವಾದ ನಂತರ ಸಂಪೂರ್ಣ ರಾಜಕೀಯದಲ್ಲಿ ಇವರು ಸಕ್ರಿಯರಾಗಿ ತೊಡಗಿಸಿಕೊಂಡರು. ಪೆರಡೆನಿಯಾ ಯುನಿವರ್ಸಿಟಿಗೆ ಪ್ರವೇಶ ಪಡೆದ ಇವರು, ಬೆದರಿಕೆ ಎದುರಾದ ಹಿನ್ನಲೆ ಕೆಲವೇ ತಿಂಗಳಲ್ಲಿ ಅಲ್ಲಿಂದ ಹೊರ ನಡೆದು, 1992ರಲ್ಲಿ ಕೆಲನಿಯಾ ಯುನಿವರ್ಸಿಟಿಗೆ ವರ್ಗವಾದರು. 1995ರಲ್ಲಿ ಭೌತ ವಿಜ್ಞಾನದಲ್ಲಿ ಪದವಿಯನ್ನು ಪಡೆದರು.
ರಾಜಕೀಯ ಹಾದಿ: 1995ರಲ್ಲಿ ಜೆವಿಪಿ ಪಾಲಿಟ್ಬ್ಯುರೊಗೆ ಸೇರಿದ ಇವರು 2000ದಲ್ಲಿ ಮೊದಲ ಬಾರಿಗೆ ಸಂಸತ್ಗೆ ಆಯ್ಕೆಯಾದರು. ಭ್ರಷ್ಟಾಚಾರ, ಆರ್ಥಿಕ ಅವ್ಯವಸ್ಥೆ ಮತ್ತು ರಾಜಕೀಯ ಟೀಕಾಕಾರರಾಗಿ ಗುರುತಿಸಿಕೊಂಡರು. ಅವರ ಭಾಷಣಗಳು ದುಡಿಯುವ ವರ್ಗ ಮತ್ತು ಗ್ರಾಮೀಣ ಬಡವರ ಕುರಿತಾಗಿಯೇ ಹೆಚ್ಚು ಕೇಂದ್ರೀಕೃತವಾಗಿರುತ್ತಿದ್ದವು. ಇನ್ನು ಅವರು ಬಡವರ ಬವಣೆಗಳನ್ನು ನಿವಾರಿಸಲು ಶ್ರೀಲಂಕಾದ ಆರ್ಥಿಕತೆ ಮತ್ತು ರಾಜಕೀಯ ವಿನ್ಯಾಸಗಳು ವ್ಯವಸ್ಥಿತರ ಸುಧಾರಣೆಗಳು ಬೇಕು ಎಂದು ಪ್ರತಿಪಾದನೆ ಮಾಡಿಕೊಂಡು ಬಂದವರಾಗಿದ್ದಾರೆ.
2004ರಲ್ಲಿ ಜೆವಿಪಿ ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್ಎಲ್ಎಫ್ಪಿ) ಮೈಯ್ರಿ ನಡೆಸಿ, ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲಯನ್ಸ್ (ಯುಪಿಎಫ್ಎ) ಭಾಗವಾಗಿ 2004ರಲ್ಲಿ ಸಂಸದೀಯ ಚುನಾವಣೆಗೆ ಸ್ಪರ್ಧಿಸಿ, ಸಂಸತ್ನಲ್ಲಿ 39 ಸ್ಥಾನ ಜಯಗಳಿಸಿತು. ದಿಸ್ಸನಾಯಕ್ ಕೂಡ ಯುಪಿಎಫ್ಎಯಿಂದ ಕುರುನೆಗಲಾ ಜಿಲ್ಲೆಯಿಂದ ಸಂಸತ್ ಪ್ರವೇಶ ಮಾಡಿದ್ದರು. ಅಲ್ಲದೇ, 2004ರಲ್ಲಿ ರಚನೆಯಾದ ಎಸ್ಎಲ್ಎಫ್- ಜೆವಿಪಿ ಸರ್ಕಾರದಲ್ಲಿ ದಿಸ್ಸನಾಯಕೆಗೆ ಕೃಷಿ, ಪಶು ಸಂಗೋಪನೆ, ಭೂ ಮತ್ತು ನೀರಾವರಿ ಸಚಿವರಾಗಿ ಅಧ್ಯಕ್ಷ ಚಂದ್ರಿಕಾ ಕುಮರನಾತುಂಗಾ ನೇಮಕ ಮಾಡಿದ್ದರು.
2005ರ ಜೂನ್ 16ರಂದು ದಿಸ್ಸನಾಯಕೆ ಇತರ ಜೆವಿಪಿ ಸಚಿವರೊಂದಿಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಸುನಾಮಿ ಪರಿಹಾರ ಸಮನ್ವಯಕ್ಕಾಗಿ ಎಲ್‌ಟಿಟಿಇ ಜೊತೆಗಿನ ಅಧ್ಯಕ್ಷ ಕುಮಾರನಾತುಂಗ ಸರ್ಕಾರದ ವಿವಾದಾತ್ಮಕ ಜಂಟಿ ಕಾರ್ಯವಿಧಾನವನ್ನು ವಿರೋಧಿಸಿ ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲೈಯನ್ಸ್‌ನಿಂದ ಜೆಪಿವಿ ನಾಯಕ ಸೋಮವಂಶ ಅಮರ ಸಿಂಘೆ ನಿರ್ಧಾರ ಇದಕ್ಕೆ ಕಾರಣವಾಗಿತ್ತು. ಇದಾದ ನಂತರ ದಿಸ್ಸನಾಯಕೆ 2015 ಸೆಪ್ಟೆಂಬರ್ನಿಂದ ಡಿಸೆಂಬರ್ 2016ರವರೆಗೆ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದರು.
ಅಮರ ಸಿಂಘೆ ನಿಧನದ ಬಳಿಕ ಜೆವಿಪಿ ನಾಯಕತ್ವ:2014ರಲ್ಲಿ ಹೃದಯಾಘಾತದಿಂದ ಅಮರಸಿಂಘೆ ನಿಧನದಬಳಿಕ ದಿಸ್ಸನಾಯಕೆ ಜೆವಿಪಿ ನಾಯಕತ್ವವನ್ನು ಪಡೆದರು. ದಿಸ್ಸನಾಯಕೆ ನಾಯಕತ್ವದಲ್ಲಿ ಜೆವಿಪಿಯು ಪ್ರಾಜಾಸತಾತ್ಮಕ ಸಾಮಾಜೀಕರಣದತ್ತ ಸಾಗಿ, ಉತ್ತಮ ಆಡಳಿತ, ಮಾನವ ಹಕ್ಕು, ಭ್ರಷ್ಟಾಚಾರ ವಿರೋಧಿ ಮತ್ತು ಬಡತನ ನಿರ್ಮೂಲನೆಯಂತಹ ವಿಷಯಕ್ಕೆ ಹೆಚ್ಚಿನ ಗಮನ ಹರಿಸಿದರು.
ಬಡ ಜನರ ಧ್ವನಿಯಾಗಿ ಕೆಲಸ: 2019ರಲ್ಲಿ ದಿಸ್ಸನಾಯಕೆ ಶ್ರೀಲಂಕಾದಲ್ಲಿ ಎನ್ಪಿಪಿ ಸಾಮಾಜೀಕರಣ ಮತ್ತು ಸಮಾಜ ಪ್ರಜಾಸತಾತ್ಮಕ ರಾಜಕೀಯ ಒಕ್ಕೂಟವನ್ನು ಸ್ಥಾಪಿಸಿದರು. ಸಮತಾವಾದಕ್ಕೆ ಈ ಮೂಲಕ ವೇದಿಕೆ ಒದಗಿಸಿದರು. ಜೆವಿಪಿ ಮತ್ತು ಅನೇಕ ಎಡ ಪಂಥೀಯ ರಾಜಕೀಯ ಪಕ್ಷಗಳು, ಟ್ರೇಡ್ ಯುನಿಯನ್, ನಾಗರಿಕ ಸಮಾಜ ಸಂಘಟನೆ ಮತ್ತು ಇತರ ವ್ಯಕ್ತಿಗಳ ದೂರದೃಷ್ಟಿಯನ್ನು ಹಂಚಿಕೊಂಡಿತು. ಎನ್ಪಿಪಿ ಪ್ರಮುಖ ಗುರಿ ಎಂದರೆ ಅದು, ದೇಶದಲ್ಲಿ ಇರುವ ಪ್ರಮುಖ ಎರಡು ರಾಜಕೀಯ ಪಕ್ಷಗಳಾದ ಶ್ರೀಲಂಕಾ ಪೊದುಜನ ಪೆರಮುನ (ಎಸ್ಎಲ್ಪಿಪಿ) ಮತ್ತು ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎಲ್ಪಿ) ವಿರುದ್ಧ ವಿಶ್ವಾಸಾರ್ಹ ಪರ್ಯಾಯವನ್ನು ಸ್ಥಾಪಿಸುವುದು ಮತ್ತು ಗುರುತಿಸಿಕೊಳ್ಳುವುದಾಗಿತ್ತು.
ತಮ್ಮ ತೀಕ್ಷ್ಣ ಹಾಗೂ ಮೊನಚಾದ ಭಾಷಣದಿಂದಲೇ ಪ್ರಖ್ಯಾತಗೊಂಡಿರುವ ದಿಸ್ಸನಾಯಕೆ, ಭ್ರಷ್ಟಾಚಾರ, ಮಾನವ ಹಕ್ಕುಗಳ ಉಲ್ಲಂಘನೆ, ಆರ್ಥಿಕ ಅವ್ಯವಹಾರದಂತಹ ವಿಷಯಗಳಲ್ಲಿ ಸರ್ಕಾರದ ವಿರುದ್ಧ ಬಲವಾದ ವಾಗ್ದಾಳಿ ನಡೆಸುತ್ತಿದ್ದರು. ಪ್ರಖರ ವಾದದ ಮೂಲಕ ಸರ್ಕಾರದ ತಪ್ಪುಗಳನ್ನು ಸಂಸತ್ ಎದುರು ಇಡುತ್ತಿದ್ದರು. ಶ್ರೀಲಂಕಾ ಆಡಳಿತದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದ ಕುಟುಂಬ ರಾಜಕಾರಣದ ವಿರುದ್ಧ ಇವರು ಕಟು ಟೀಕೆ ಮಾಡಿದ್ದಾರೆ. ಅಷ್ಟೇ ಅಲ್ಲ ಕುಟುಂಬ ರಾಜಕಾರಣದ ವಿರುದ್ಧ ಇದ್ದಾರೆ. ದೇಶದ ಸಾಮಾನ್ಯ ಜನರ ಕಾಳಜಿ ಕುರಿತು ನೇರವಾಗಿ ಮಾತನಾಡುವ ಹಿನ್ನಲೆ ಇವರು ಯುವ ಮತ್ತು ದುಡಿಯುವ ವರ್ಗದ ಮತದಾರರಲ್ಲಿ ಪ್ರಖ್ಯಾತ ನಾಯಕರಾಗಿ ರೂಪುಗೊಂಡಿದ್ದಾರೆ.