Indian Women Achievers 2024:ಭಾರತದ ಮಹಿಳೆಯರು ಪ್ರಪಂಚದಾದ್ಯಂತ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದ್ದಾರೆ. ಧೈರ್ಯಶಾಲಿ, ಬುದ್ಧಿವಂತ, ನಿರ್ಭೀತ ವ್ಯಕ್ತಿತ್ವದ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಶ್ರೇಷ್ಠತೆ ಪ್ರದರ್ಶಿಸಿದ್ದಾರೆ. 2024ರಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಪ್ರಮುಖರ ಸಾಧನೆಗಳನ್ನು ಸಂಕ್ಷಿಪ್ತವಾಗಿ ನೋಡೋಣ.
1. ಮನು ಭಾಕರ್:ಇವರು 2024ರ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ. ಒಂದೇ ಆವೃತ್ತಿಯಲ್ಲಿ ಈ ಕ್ರೀಡೆಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಯೂ ಇವರದ್ದಾಗಿದೆ. ಶೂಟಿಂಗ್ ಸೇರಿದಂತೆ ಬಾಕ್ಸಿಂಗ್, ಸ್ಕೇಟಿಂಗ್ ಮತ್ತು ಮಾರ್ಷಲ್ ಆರ್ಟ್ಸ್‌ನಲ್ಲೂ ಮನು ಭಾಕರ್ ಪ್ರವೀಣೆ.
2. ಅವನಿ ಲೇಖರಾ: 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದ ಅವನಿ ಲೇಖರಾ ಇತಿಹಾಸದಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ. ಒಂದೇ ಸ್ಪರ್ಧೆಯಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾರಾಲಿಂಪಿಯನ್ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ. (ಒಂದು ಚಿನ್ನ ಮತ್ತು ಕಂಚು). ಪದ್ಮಶ್ರೀ ಮತ್ತು ಖೇಲ್ ರತ್ನದಂತಹ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.
3. ರಾಚೆಲ್ ಗುಪ್ತಾ:ರಾಚೆಲ್ ಗುಪ್ತಾ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2024ರ ಸೌಂದರ್ಯ ಸ್ಪರ್ಧೆ ಗೆದ್ದರು. ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಕಿರೀಟ ಗೆದ್ದ ಮೊದಲ ಭಾರತೀಯಳು ಮತ್ತು ಮೂರನೇ ಏಷ್ಯನ್ ಸುಂದರಿಯಾಗಿದ್ದಾರೆ.
4. ಸಾಧನಾ ಸಕ್ಸೇನಾ ನಾಯರ್:ಲೆಫ್ಟಿನೆಂಟ್ ಜನರಲ್ ಸಾಧನಾ ಸಕ್ಸೇನಾ ನಾಯರ್ 2024ರ ಆಗಸ್ಟ್ 1ರಂದು ಡೈರೆಕ್ಟರ್ ಜನರಲ್ ಮೆಡಿಕಲ್ ಸರ್ವಿಸಸ್ (ಸೇನೆ) ವಿಭಾಗದಲ್ಲಿ ಅಧಿಕಾರ ವಹಿಸಿಕೊಂಡರು. ಈ ಪ್ರತಿಷ್ಠಿತ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಇವರು. ಇದಕ್ಕೂ ಮೊದಲು, ಏರ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದ ನಂತರ ಇವರು ಡೈರೆಕ್ಟರ್ ಜನರಲ್ ಆಸ್ಪತ್ರೆ ಸೇವೆಗಳ (ಸಶಸ್ತ್ರ ಪಡೆ) ಹುದ್ದೆ ಅಲಂಕರಿಸಿದ ಮೊದಲ ಮಹಿಳೆಯಾಗಿದ್ದರು. ಲೆಫ್ಟಿನೆಂಟ್ ಜನರಲ್ ನಾಯರ್ ಪುಣೆಯ ಆರ್ಮ್ಡ್ ಫೋರ್ಸ್ ಮೆಡಿಕಲ್ ಕಾಲೇಜಿನಿಂದ ವಿಶಿಷ್ಟ ಶೈಕ್ಷಣಿಕ ದಾಖಲೆಯೊಂದಿಗೆ ಪದವಿ ಪಡೆದರು ಹಾಗೂ ಡಿಸೆಂಬರ್ 1985ರಲ್ಲಿ ಆರ್ಮಿ ಮೆಡಿಕಲ್ ಕಾರ್ಪ್ಸ್‌ಗೆ ನಿಯೋಜಿಸಲ್ಪಟ್ಟರು.
5. ದಿವ್ಯಾ ದೇಶ್ಮುಖ್:ಕೇವಲ 18ನೇ ವಯಸ್ಸಿನಲ್ಲಿ ದಿವ್ಯಾ ದೇಶ್ಮುಖ್ ಚೆಸ್ ಜಗತ್ತಿನ ಅಸಾಧಾರಣ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. 2024ರಲ್ಲಿ ವಿಶ್ವ ಅಂಡರ್-20 ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್ ಗೆದ್ದರು. ಈ ಗೌರವ ಸಾಧಿಸಿದ ನಾಲ್ಕನೇ ಭಾರತೀಯರಾಗಿದ್ದರು.
6. ಶೀತಲ್ ದೇವಿ:ಹದಿನೇಳು ವರ್ಷದ ಪ್ಯಾರಾ ಬಿಲ್ಲುಗಾರ್ತಿ ಶೀತಲ್ ದೇವಿ ಮಿಶ್ರ ಕಂಪೌಂಡ್ ಆರ್ಚರಿ ಟೀಮ್ ಈವೆಂಟ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಅತ್ಯಂತ ಕಿರಿಯ ಪ್ಯಾರಾಲಿಂಪಿಕ್ ಪದಕ ವಿಜೇತೆಯಾಗಿದ್ದಾರೆ. ಅಪರೂಪದ ಜನ್ಮಜಾತ ಕಾಯಿಲೆಯಿಂದ ಜನಿಸಿರುವ ಇವರು, ಭುಜ, ಕಾಲು ಮತ್ತು ಬಾಯಿಯನ್ನು ಬಳಸಿ ಬಿಲ್ಲುಗಾರಿಕೆಯನ್ನು ಕರಗತ ಮಾಡಿಕೊಂಡಿದ್ದಾರೆ.
7. ಡಯಾನಾ ಪುಂಡೋಲೆ:ಡಯಾನಾ ಪುಂಡೋಲೆ 2024ರ MRF ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಮಹಿಳೆಯಾದರು. ಪುರುಷ ಪ್ರಧಾನ ಕ್ಷೇತ್ರಗಳಲ್ಲಿ ಮಹಿಳೆಯರು ವೈಯಕ್ತಿಕ ಜವಾಬ್ದಾರಿಯಲ್ಲಿ ರಾಜಿ ಮಾಡಿಕೊಳ್ಳದೆ ಸಾಧನೆ ಮಾಡಬಲ್ಲರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದಕ್ಕೂ ಮೊದಲು ಶಿಕ್ಷಕಿಯಾಗಿದ್ದ ಡಯಾನಾ ಇಬ್ಬರು ಮಕ್ಕಳ ತಾಯಿ.