Soft Idli Batter Recipe:ಬಹತೇಕರು ಮನೆಯಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ, ದೋಸೆ ಹಾಗೂ ಪಡ್ಡು ಸೇವಿಸುತ್ತಾರೆ. ಇದೀಗ ನಾವು ನಿಮಗಾಗಿ ವಿಶೇಷ ರೆಸಿಪಿಯನ್ನು ತಂದಿದ್ದೇವೆ. ಒಂದೇ ಸಲ ಹಿಟ್ಟು ರುಬ್ಬಿಕೊಂಡರೆ ಸಾಕು, ಅದರಿಂದಲೇ ಮೂರು ಪ್ರಕಾರದ ಉಪಹಾರಗಳನ್ನು ಸುಲಭವಾಗಿ ಸಿದ್ಧಪಡಿಸಬಹುದಾಗಿದೆ. ಒಂದೇ ಹಿಟ್ಟಿನಿಂದ ಸ್ಪಂಜಿನಂತಹ ಇಡ್ಲಿ, ಖಡಕ್ ದೋಸೆ, ರುಚಿಕರ ಪಡ್ಡು ರೆಡಿ ಮಾಡಬಹುದು. ಈ ಮೂರು ಬಗೆಯ ಉಪಹಾರಕ್ಕೆ ಒಂದೇ ಹಿಟ್ಟು ತಯಾರಿಸುವುದು ಹೇಗೆ? ಇದಕ್ಕೆ ಬೇಕಾಗುವ ಪದಾರ್ಥಗಳೇನು ಎಂಬುದನ್ನು ತಿಳಿಯೋಣ.
ಹಿಟ್ಟು ರುಬ್ಬಿಕೊಳ್ಳಲು ಬೇಕಾಗುವ ಸಾಮಗ್ರಿಗಳು:
- ಇಡ್ಲಿ ಅಕ್ಕಿ (ಇಡ್ಲಿ ಗುಂಡು ರೈಸ್) - 4 ಕಪ್
- ಉದ್ದಿನ ಬೇಳೆ - 1 ಕಪ್
- ಸಾಬುದಾನಿ - ಅರ್ಧ ಕಪ್
- ಉಪ್ಪು- 1 ಟೀಸ್ಪೂನ್
- ಅಡುಗೆ ಸೋಡಾ- ಕಾಲು ಟೀ ಸ್ಪೂನ್
ಇಡ್ಲಿ ಹಿಟ್ಟು ರುಬ್ಬಿಕೊಳ್ಳುವ ವಿಧಾನ ಹೇಗೆ?
ಇಡ್ಲಿ ರೈಸ್ (ಇದರ ಬದಲು ರೇಷನ್ ಅಕ್ಕಿಯನ್ನು ಕೂಡ ಬಳಸಬಹುದು), ಉದ್ದಿನ ಬೇಳೆ, ಸಾಬುದಾನಿಯನ್ನು ಪ್ರತ್ಯೇಕವಾದ ಪಾತ್ರೆಗಳಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ಜೊತೆಗೆ ಇವುಗಳನ್ನು ಪ್ರತ್ಯೇಕ ಪಾತ್ರೆಯಲ್ಲಿ ನೆನಸಿಡಿ. ಇವುಗಳೆಲ್ಲವನ್ನೂ ಸುಮಾರು 6 ಗಂಟೆಗಳಿಗೂ ಹೆಚ್ಚು ಕಾಲ ನೆನೆಸಿ ಇಡಬೇಕಾಗುತ್ತದೆ.
ಮೊದಲು ನೆನೆಸಿದ ಉದ್ದಿನಬೇಳೆಯನ್ನು ಮಿಕ್ಸ್ ಜಾರ್ನಲ್ಲಿ ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ. ಇದನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ. ಜೊತೆಗೆ ನೆನೆಸಿದ ಅಕ್ಕಿ ಮತ್ತು ಸಾಬುದಾನಿಯನ್ನು ಒಟ್ಟಿಗೆ ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ.
ಬಳಿಕ ನುಣ್ಣಗೆ ರುಬ್ಬಿಕೊಂಡಿರುವ ಎರಡು ಹಿಟ್ಟುಗಳನ್ನು ಚೆನ್ನಾಗಿ ಮಿಕ್ಸ್ ಮಾಡಬೇಕಾಗುತ್ತದೆ. ಹಿಟ್ಟಿನ ಪಾತ್ರೆಯೊಳಗೆ ಗಾಳಿಯಾಡದಂತೆ ಸರಿಯಾಗಿ ಮುಚ್ಚಿ ಇಡಬೇಕಾಗುತ್ತದೆ. ಸಂಜೆ ವೇಳೆ ಹಿಟ್ಟು ರುಬ್ಬಿಕೊಂಡು ರಾತ್ರಿಯಿಡೀ ಹುದುಗಲು ಬಿಡಬೇಕಾಗುತ್ತದೆ.
ನಂತರ 12 ರಿಂದ 14 ಗಂಟೆಗಳವರೆಗೆ ಹಾಗೇ ಬಿಟ್ಟರೆ, ಹಿಟ್ಟು ಪರ್ಮೆಂಟ್ ಆಗುತ್ತದೆ. ಮರುದಿನ ಬೆಳಿಗ್ಗೆ ಇಡ್ಲಿ ಹಿಟ್ಟು ಸಿದ್ಧವಾಗಿರುತ್ತದೆ. ಬಳಿಕ ಒಂದು ಚಿಕ್ಕ ಲೋಟ ತೆಗೆದುಕೊಂಡು ಅರದಲ್ಲಿ ಸ್ವಲ್ವ ನೀರು ಹಾಕಿ ಅದರೊಳಗೆ ಒಂದು ಟೀಸ್ಪೂನ್ ಉಪ್ಪು, ಕಾಲು ಟೀಸ್ಪೂನ್ ಅಡುಗೆ ಸೋಡಾ ಮಿಕ್ಸ್ ಮಾಡಿಕೊಳ್ಳಬೇಕು. ಅದನ್ನು ರೆಡಿಯಾದ ಇಡ್ಲಿ ಹಿಟ್ಟಿನೊಳಗೆ ಸೇರಿಸಿ ಸರಿಯಾಗಿ ಕಲಿಸಿಕೊಳ್ಳಬೇಕಾಗುತ್ತದೆ. ಪಾತ್ರೆಯೊಳಗೆ ಒಂದು ಗ್ಲಾಸ್ ನೀರು ಹಾಕಿ, ಬಳಿಕ ಇಡ್ಲಿ ಪ್ಲೇಟ್ನಲ್ಲಿ ಈ ಹಿಟ್ಟನ್ನು ಇಡ್ಲಿ ತಟ್ಟೆಗೆ ಹಾಕಿ, ಅದರ ಮುಚ್ಚಳವನ್ನು ಸರಿಯಾಗಿ ಮುಚ್ಚಬೇಕಾಗುತ್ತದೆ ಮತ್ತು 15 ನಿಮಿಷಗಳ ಕಾಲ ಬೇಯಿಸಿದರೆ ಸಾಕು ಮೃದುವಾದ ಇಡ್ಲಿ ರೆಡಿಯಾಗುತ್ತದೆ.