Rava Laddu Recipe: ಸಂಕ್ರಾಂತಿ ಹಬ್ಬದ ಸಮಯದಲ್ಲಿ ಎಲ್ಲರೂ ಮನೆಗಳಲ್ಲಿ ವಿವಿಧ ಭಕ್ಷ್ಯಗಳನ್ನು ಸಿದ್ಧಪಡಿಸಲಾಗಿರುತ್ತದೆ. ವಿವಿಧ ಸಿಹಿ ತಿನಿಸುಗಳು, ಕುರುಕಲು ತಿಂಡಿಗಳು ಹಾಗೂ ಹಲವು ಪ್ರಕಾರದ ಅಡುಗೆಗಳು ಬಾಯಲ್ಲಿ ನೀರೂರಿಸುವವು. ಅದರಲ್ಲಿ ರವೆ ಲಡ್ಡುಗಳನ್ನು ಕೂಡ ತಯಾರಿಸುತ್ತಾರೆ. ಕೆಲವರಿಗೆ ಈ ರವೆ ಲಡ್ಡು ಎಷ್ಟೇ ಬಾರಿ ಮಾಡಿದರೂ, ಅವು ಪರಿಪೂರ್ಣ ಅನಿಸುವುದಿಲ್ಲ.
ಅಂತಹವರು ಸಂಕ್ರಾಂತಿಯ ಸಮಯದಲ್ಲಿ ಬಾಯಲ್ಲಿಟ್ಟರೆ ಕರಗುವಂತಹ ರವೆ ಲಡ್ಡುಗಳನ್ನು ಟ್ರೈ ಮಾಡಬಹುದು. ಈ ಲಡ್ಡುಗಳನ್ನು ಪರಿಪೂರ್ಣವಾಗಿ ಸಿದ್ಧಪಡಿಸಬಹುದು. ಜೊತೆಗೆ ಅವು ತುಂಬಾ ರುಚಿಕರವೂ ಆಗಿರುತ್ತವೆ. ತಿಂಗಳವರೆಗೆ ಇಟ್ಟರೂ ಕೂಡ ಗಟ್ಟಿಯಾಗದೆ ಮೃದುವಾಗಿರುತ್ತವೆ. ಯಾರಾದರೂ ಕೂಡ ರವೆ ಲಡ್ಡುಗಳನ್ನು ಬಹಳ ಸುಲಭವಾಗಿ ಮಾಡಬಹುದು. ಹಾಗಾದರೆ, ರವೆ ಲಡ್ಡುಗೆ ಬೇಕಾಗುವ ಪದಾರ್ಥಗಳೇನು? ಸಿದ್ಧಪಡಿಸುವುದು ಹೇಗೆ ಎಂಬುದನ್ನು ನೋಡೋಣ.
ರವೆ ಲಡ್ಡುಗೆ ಬೇಕಾಗುವ ಪದಾರ್ಥಗಳೇನು?:
- ತುಪ್ಪ - ಕಾಲು ಕಪ್
- ಗೋಡಂಬಿ, ಒಣದ್ರಾಕ್ಷಿ - ಕಾಲು ಕಪ್
- ಬಾಂಬೆ ರವೆ - 2 ಕಪ್
- ತುರಿದ ಹಸಿ ಕೊಬ್ಬರಿ - ಒಂದೂವರೆ ಕಪ್
- ಏಲಕ್ಕಿ ಪುಡಿ - 1 ಟೀಸ್ಪೂನ್
ಪಾಕಕ್ಕೆ ಬೇಕಾಗುವ ಸಾಮಗ್ರಿ:
- ಸಕ್ಕರೆ - ಎರಡು ಕಪ್ಗಿಂತ ಕಡಿಮೆ
- ನೀರು - ಅರ್ಧ ಕಪ್
ರವೆ ಲಡ್ಡು ಸಿದ್ಧಪಡಿಸುವ ವಿಧಾನ:
- ಮೊದಲು ಕಡಾಯಿಯನ್ನು ಒಲೆಯ ಮೇಲೆ ಇಡಿ. ಅದರೊಳಗೆ ತುಪ್ಪವನ್ನು ಸೇರಿಸಿ. ತುಪ್ಪ ಕರಗಿ ಬಿಸಿಯಾದ ನಂತರ, ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಹಾಕಿ, ಕಡಿಮೆ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಅವುಗಳನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ಪಕ್ಕಕ್ಕೆ ಇಡಿ.
- ಬಾಂಬೆ ರವೆಯನ್ನು ಅದೇ ತುಪ್ಪದಲ್ಲಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ತಿಳಿ ಗೋಲ್ಡನ್ ಬಣ್ಣಕ್ಕೆ ತಿರುಗಿ ಉತ್ತಮ ಪರಿಮಳ ಬರುವವರೆಗೆ ಹುರಿಯಿರಿ. ಇದು 10 ರಿಂದ 15 ನಿಮಿಷಗಳನ್ನು ತೆಗೆದುಕೊಳ್ಳಬಹುದು.
- ರವೆಯನ್ನು ಚೆನ್ನಾಗಿ ಹುರಿದಷ್ಟು ಲಡ್ಡುವಿನ ರುಚಿ ಉತ್ತಮವಾಗಿರುತ್ತದೆ ಎನ್ನುವುದನ್ನು ನೆನಪಿಡಿ.
- ರವೆ ಹುರಿದ ಬಳಿಕ, ಒಂದು ಕಪ್ ರವೆಗೆ ಒಂದೂವರೆ ಕಪ್ ತುರಿದ ಕೊಬ್ಬರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇನ್ನೊಂದು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೆರೆಸುತ್ತಾ ಹುರಿಯಿರಿ.
- ಹುರಿಯುವಾಗ ಅಗತ್ಯವಿದ್ದರೆ, ಒಂದರಿಂದ ಎರಡು ಚಮಚ ಹೆಚ್ಚುವರಿ ತುಪ್ಪವನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ಒಂದು ಚಮಚದಿಂದ ನಿಧಾನವಾಗಿ ಮಿಶ್ರಣ ಮಾಡಿ.
- ರವೆ ಮತ್ತು ಕೊಬ್ಬರಿ ಮಿಶ್ರಣವನ್ನು ಸುವಾಸನೆ ಬರುವವರೆಗೆ ಹುರಿದ ನಂತರ, ತೆಗೆಯುವ ಮೊದಲು ಏಲಕ್ಕಿ ಪುಡಿಯನ್ನು ಸೇರಿಸಿ, ಎಲ್ಲವೂ ಚೆನ್ನಾಗಿ ಮಿಶ್ರಣವಾಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಒಲೆ ಆಫ್ ಮಾಡಬೇಕು.
- ಬಳಿಕ ಮಿಶ್ರಣವನ್ನು ಹುರಿದ ಒಣ ಹಣ್ಣುಗಳನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿಕೊಳ್ಳಿ. ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ.
- ಈಗ ನಾವು ಪಾಕ ತಯಾರಿಸಬೇಕಾಗಿದೆ. ಇದಕ್ಕಾಗಿ, ಅದೇ ಪಾತ್ರೆಯನ್ನು ಒಲೆಯ ಮೇಲೆ ಇರಿಸಿ, ಸಕ್ಕರೆ ಮತ್ತು ಅರ್ಧ ಕಪ್ ನೀರು ಸೇರಿಸಿ, ಸಕ್ಕರೆ ಕರಗುವವರೆಗೆ ಕಡಿಮೆ ಉರಿಯಲ್ಲಿ ಕುದಿಸಿ.
- ಸಕ್ಕರೆ ಕರಗಿ ಮಿಶ್ರಣವು ತಿಳಿ ಕಂದು ಬಣ್ಣಕ್ಕೆ ತಿರುಗಿದ ನಂತರ, ಈ ಹಿಂದೆ ಒಟ್ಟಿಗೆ ಬೆರೆಸಿದ ರವೆ ಮಿಶ್ರಣವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ, ಒಂದು ಚಮಚದಿಂದ ಬೆರೆಸಿ ಹಾಗೂ ಕಡಿಮೆ ಉರಿಯಲ್ಲಿ ಇನ್ನೊಂದು 2 ರಿಂದ 3 ನಿಮಿಷ ಬೇಯಿಸಿ.
- ಅಂದರೆ ಈ ಮಿಶ್ರಣವನ್ನು ಸ್ವಲ್ಪ ದಪ್ಪವಾಗುವವರೆಗೆ ಬೇಯಿಸಿ, ನಂತರ ತೆಗೆದು ಕೈಯಲ್ಲಿ ಹಿಡಿಯಲು ಸಾಧ್ಯವಾಗುವಂತೆ ಸ್ವಲ್ಪ ತಣ್ಣಗಾಗಲು ಬಿಡಬೇಕು.
- ಬಳಿಕ ಮಿಶ್ರಣವನ್ನು ನಿಮ್ಮ ಕೈಗಳಿಂದ ಲಡ್ಡು ಸಿದ್ಧಪಡಿಸಿ, ಸಣ್ಣ ಪ್ರಮಾಣದಲ್ಲಿ ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನು ಕಟ್ಟಬೇಕಾಗುತ್ತದೆ. ಈಗ ಬಾಯಲ್ಲಿ ನೀರೂರಿಸುವ 'ರವಾ ಲಡ್ಡು' ಸಿದ್ಧವಾಗುತ್ತವೆ.
- ಈ ಲಡ್ಡುಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿದರೆ, ಅವು ಕನಿಷ್ಠ ಒಂದು ತಿಂಗಳ ಕಾಲ ಗಟ್ಟಿಯಾಗದೆ ಮೃದು ಮತ್ತು ತಾಜಾ ಆಗಿರುತ್ತವೆ!