ಈ ಸಾಂಪ್ರದಾಯಿಕ ಚಟ್ನಿ ಒಮ್ಮೆಯಾದರೂ ಸೇವಿಸಿದ್ದೀರಾ?: ನಿಮಗಾಗಿ ಇಲ್ಲಿದೆ ನೋಡಿ ಸೂಪರ್ ಟೇಸ್ಟಿ ಚಟ್ನಿ - GREEN TOMATO CHUTNEY RECIPE
Green Tomato Chutney Recipe: ಸಾಮಾನ್ಯ ಟೊಮೆಟೊ ಚಟ್ನಿಗಿಂತ ಉತ್ತಮವಾದ ರುಚಿಯನ್ನು ಹೊಂದಿದೆ. ನಿಮಗಾಗಿ ಇಲ್ಲಿದೆ ನೋಡಿ ಹಸಿರು ಟೊಮೆಟೊ ಚಟ್ನಿ. ಕೆಲವೇ ನಿಮಿಷಗಳಲ್ಲಿ ತುಂಬಾ ಸರಳವಾಗಿ ಹೇಗೆ ರೆಡಿ ಮಾಡಬೇಕು ಎಂಬುದನ್ನು ತಿಳಿಯೋಣ.
Green Tomato Chutney Recipe:ಊಟದಲ್ಲಿ ಎಷ್ಟೇ ಬಗೆಯ ಪಲ್ಯಗಳನ್ನು ಇದ್ದರೂ ಕೂಡ ಸೈಡ್ ಡಿಶ್ ಆಗಿ ಯಾವುದಾದರೂ ಒಂದು ರೀತಿಯ ಚಟ್ನಿಯಂತೂ ಕಡ್ಡಾಯವಾಗಿರುತ್ತದೆ. ಬಹುತೇಕರು ಇಷ್ಟಪಡುವ ಸೇವನೆ ಮಾಡುವುಂತಹ ಚಟ್ನಿಗಳಲ್ಲಿ ಟೊಮೆಟೊ ಚಟ್ನಿಯು ಒಂದಾಗಿದೆ. ವಿವಿಧ ಪ್ರಕಾರಗಳಲ್ಲಿ ಟೊಮೆಟೊ ಚಟ್ನಿ ಸಿದ್ಧಪಡಿಸಲಾಗುತ್ತದೆ. ಆದರೆ, ನಾವು ನಿಮಗಾಗಿ ಭರ್ಜರಿ ರುಚಿಯ ಹಸಿರು ಟೊಮೆಟೊ ಚಟ್ನಿ ತಂದಿದ್ದೇವೆ.
ಈ ಚಟ್ನಿಯನ್ನು ಒಮ್ಮೆ ಸವಿದರೆ ಸಾಕು ಪುನಃ ಪುನಃ ತಿನ್ನಬೇಕೆನಿಸುತ್ತದೆ. ಇದು ಖಂಡಿತವಾಗಿಯೂ ಮನೆ ಮಂದಿಗೆಲ್ಲ ಹಿಡಿಸುತ್ತದೆ. ಈ ಚಟ್ನಿಯು ಅದ್ಭುತ ಸುವಾಸನೆ ಜೊತೆಗೆ ರುಚಿಯು ಚೆನ್ನಾಗಿರುತ್ತದೆ. ಈ ಸೂಪರ್ ಟೇಸ್ಟಿಯಾಗಿರುವ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳೇನು? ಚಟ್ನಿ ತಯಾರಿಸಲು ಪ್ರಕ್ರಿಯೆ ಹೇಗೆ ಎಂಬುದನ್ನು ಇದೀಗ ನೋಡೋಣ.
ಹಸಿರು ಟೊಮೆಟೊ ಚಟ್ನಿಗೆ ಅಗತ್ಯವಿರುವ ಪದಾರ್ಥಗಳೇನು?:
ಹಸಿರು ಟೊಮೆಟೊ - ಅರ್ಧ ಕೆಜಿ
ಎಣ್ಣೆ - 3 ಟೀಸ್ಪೂನ್
ಒಣಮೆಣಸಿನಕಾಯಿ - 5
ಹಸಿಮೆಣಸಿನಕಾಯಿ - 5
ಕೊತ್ತಂಬರಿ ಸೊಪ್ಪು - ಒಂದು ಹಿಡಿ
ಹುಣಸೆಹಣ್ಣು - ಒಂದು ಸಣ್ಣ ನಿಂಬೆಹಣ್ಣಿನ ಗಾತ್ರದಷ್ಟು
ಜೀರಿಗೆ - 1 ಟೀಸ್ಪೂನ್
ಧನಿಯಾ ಬೀಜಗಳು - 1 ಟೀಸ್ಪೂನ್
ಬೆಳ್ಳುಳ್ಳಿ ಎಸಳು - 10
ಅರಿಶಿನ - ಅರ್ಧ ಟೀಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗಾಗಿ:
ಎಣ್ಣೆ - 2 ಟೀಸ್ಪೂನ್
ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ ಸೇರಿ - 2ಟೀಸ್ಪೂನ್
ಇಂಗು - ಒಂದು ಚಿಟಿಕೆ
ಒಣ ಮೆಣಸಿನಕಾಯಿ - 2
ಕರಿಬೇವು - 1 ಚಿಗುರು
ಹಸಿರು ಟೊಮೆಟೊ ಚಟ್ನಿ ಸಿದ್ಧಪಡಿಸುವ ವಿಧಾನ:
ಮೊದಲು ಹಸಿರು ಟೊಮೆಟೊಗಳನ್ನು ಚೆನ್ನಾಗಿ ತೊಳೆದು, ಮಧ್ಯಮ ಗಾತ್ರದ ಪೀಸ್ಗಳನ್ನಾಗಿ ಕಟ್ ಮಾಡಿ ಪಕ್ಕಕ್ಕೆ ಇಡಿ.
ಒಲೆಯ ಮೇಲೆ ಬಾಣಲೆ ಇಡಿ ಎಣ್ಣೆ ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದ ಬಳಿಕ ಒಣಗಿದ ಮೆಣಸಿನಕಾಯಿಗಳನ್ನು ಸೇರಿಸಿ. ನಿಮ್ಮ ರುಚಿಗೆ ಅನುಗುಣವಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿಗಳನ್ನು ಸೇರಿಸಿಕೊಳ್ಳಿ. ಅವು ಸ್ವಲ್ಪ ಬೆಂದ ಬಳಿಕ ಕೊತ್ತಂಬರಿ ಸೊಪ್ಪು ಸೇರಿಸಿ ಸ್ವಲ್ಪ ಹೊತ್ತು ಫ್ರೈ ಮಾಡಿಕೊಳ್ಳಿ.
ಮಿಶ್ರಣ ಚೆನ್ನಾಗಿ ಬೆಂದ ಬಳಿಕ ಮೊದಲೇ ಕತ್ತರಿಸಿದ ಹಸಿರು ಟೊಮೆಟೊ ಪೀಸ್ಗಳನ್ನು ಸೇರಿಸಿ ಹಾಗೂ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
ಬಳಿಕ ಪಾತ್ರೆಯನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಟೊಮೆಟೊ ಪೀಸ್ಗಳನ್ನು ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಬೇಯಿಸಬೇಕು. ನಂತರ ಬೇಯಿಸುವಾಗ ಮುಚ್ಚಳ ತೆಗೆದು ಅರ್ಧಕ್ಕೆ ಬೆರೆಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ಟೊಮೆಟೊ ಪೀಸ್ಗಳೆಲ್ಲಾ ಚೆನ್ನಾಗಿ ಫ್ರೈ ಆಗುತ್ತವೆ. ಇದಕ್ಕೆ 10 ನಿಮಿಷಗಳವರೆಗೆ ಸಮಯ ಬೇಕಾಗುತ್ತದೆ.
ಹಸಿರು ಟೊಮೆಟೊ ಪೀಸ್ಗಳು ಚೆನ್ನಾಗಿ ಕಂದು ಬಣ್ಣಕ್ಕೆ ಬಂದ ಬಳಿಕ, ಹುಣಸೆಹಣ್ಣು, ಜೀರಿಗೆ, ಕೊತ್ತಂಬರಿ ಬೀಜಗಳು ಮತ್ತು ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಹಾಗೂ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
ನಂತರ ಕಡಿಮೆ ಉರಿಯಲ್ಲಿ ಇಟ್ಟು ಎರಡು ನಿಮಿಷ ಹುರಿಯಿರಿ. ಫ್ರೈ ಮಾಡುವ ಸಮಯದಲ್ಲಿ ಮಾತ್ರ ಅರಿಶಿನ ಸೇರಿಸಬೇಕು.
ಹುರಿದ ಬಳಿಕ ಒಲೆ ಆಫ್ ಮಾಡಿ ಹಾಗೂ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಬೇಕಾಗುತ್ತದೆ.
ಈಗ ಮಿಕ್ಸರ್ ಜಾರ್ ತೆಗೆದುಕೊಂಡು ತಣ್ಣಗಾದ ಟೊಮೆಟೊ ಮಿಶ್ರಣಕ್ಕೆ ಉಪ್ಪು ಸೇರಿಸಿ ಅದನ್ನು ನುಣ್ಣಗೆ ರುಬ್ಬಿಕೊಳ್ಳಬಾರದು. ರೊಟ್ಟಿಯಲ್ಲಿ ಸೇವಿಸಲು ಒರಟಾಗುವವರೆಗೆ ಚಟ್ನಿಯನ್ನು ರುಬ್ಬಿಕೊಳ್ಳಿ. ಬಳಿಕ ಚಟ್ನಿಯನ್ನು ಒಂದು ಬೌಲ್ನಲ್ಲಿ ತೆಗೆದುಕೊಂಡು ಪಕ್ಕಕ್ಕೆ ಇರಿಸಿ.
ಚಟ್ನಿ ರುಬ್ಬಿದ ನಂತರ, ಇದ್ದಕ್ಕೆ ಒಗ್ಗರಣೆಗಾಗಿ, ಒಲೆಯ ಮೇಲೆ ಸಣ್ಣ ಪ್ಯಾನ್ ಇಡಬೇಕಾಗುತ್ತದೆ. ಅದರೊಳಗೆ ಎಣ್ಣೆ ಹಾಕಿ, ಎಣ್ಣೆ ಸ್ವಲ್ಪ ಬಿಸಿಯಾದ ನಂತರ ಮಸಾಲೆಗಳು (ಜೀರಿಗೆ, ಸಾಸಿವೆ, ಕಡಲೆ, ಉದ್ದಿನಬೇಳೆ), ಒಣ ಮೆಣಸಿನಕಾಯಿ, ಇಂಗು ಮತ್ತು ಕರಿಬೇವು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
ಚೆನ್ನಾಗಿ ಬೆಂದ ನಂತರ ಒಲೆ ಆಫ್ ಮಾಡಬೇಕಾಗುತ್ತದೆ. ಈ ಹಿಂದೆ ತಯಾರಿಸಿದ ಚಟ್ನಿಯೊಳಗೆ ಒಗ್ಗರಣೆಯನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ಇದೀಗ ನಿಮ್ಮ ಬಾಯಲ್ಲಿ ನೀರೂರಿಸುವ ಹಸಿರು ಟೊಮೆಟೊ ಚಟ್ನಿ ಸವಿಯಲು ಸಿದ್ಧವಾಗಿದೆ.