Hyderabad One Day Tour : ಐತಿಹಾಸಿಕ ಸ್ಮಾರಕಗಳು, ಪ್ರಾಚೀನ ಅರಮನೆಗಳು, ರಾಜಮನೆತನ ಪ್ರತಿಬಿಂಬಿಸುವ ಕೋಟೆಗಳು, ರುಚಿಕರವಾದ ಬಿರಿಯಾನಿಗೆ ಹೈದರಾಬಾದ್ ಹೆಸರುವಾಸಿಯಾಗಿದೆ. ಅದಕ್ಕಾಗಿಯೇ ಅನೇಕ ಜನರು ಸಾಧ್ಯವಾದಾಗಲೆಲ್ಲಾ ಇಲ್ಲಿ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ನೀವು ಹೈದರಾಬಾದ್‌ನಲ್ಲಿರುವ ಪ್ರಸಿದ್ಧ ಸ್ಥಳಗಳನ್ನು ನೋಡಲು ಬಯಸುತ್ತೀರಾ? ವಾರಾಂತ್ಯದಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸ್ವಲ್ಪ ಮೋಜು ಮಸ್ತಿ ಮಾಡಲು ಬಯಸುವಿರಾ? ಹಾಗಾದ್ರೆ, ತೆಲಂಗಾಣ ಪ್ರವಾಸೋದ್ಯಮವು ನಿಮಗಾಗಿ ಗುಡ್ನ್ಯೂಸ್ ನೀಡಿದೆ. ಹೌದು, ಒಂದೇ ದಿನದಲ್ಲಿ ಇಡೀ ಹೈದರಾಬಾದ್ ನಗರವನ್ನು ಅತ್ಯಂತ ಕಡಿಮೆ ದರದ ಪ್ಯಾಕೇಜ್‌ನಲ್ಲಿ ಘೋಷಣೆ ಮಾಡಲಾಗಿದೆ. ಪ್ರವಾಸದ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿದುಕೊಳ್ಳೋಣ.
ತೆಲಂಗಾಣ ಪ್ರವಾಸೋದ್ಯಮ ಇಲಾಖೆಯು 'ಹೈದರಾಬಾದ್ ಸಿಟಿ ಹೆರಿಟೇಜ್ ಕಮ್ ಮ್ಯೂಸಿಯಂ ಟೂರ್' ಎಂಬ ಪ್ರವಾಸದ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಈ ಪ್ರವಾಸದ ಸೌಲಭ್ಯವು ಪ್ರತಿದಿನ ಲಭ್ಯವಿದೆ. ಈ ಪ್ಯಾಕೇಜ್‌ನಲ್ಲಿ, ನೀವು ಬಿರ್ಲಾ ಮಂದಿರ, ಚೌಮಹಲ್ ಅರಮನೆ, ಚಾರ್ಮಿನಾರ್, ಮೆಕ್ಕಾ ಮಸೀದಿ, ಲಾಡ್ ಬಜಾರ್‌ನಲ್ಲಿ ಶಾಪಿಂಗ್ ಹಾಗೂ ಇನ್ನೂ ಹೆಚ್ಚಿನ ಸ್ಥಳಗಳನ್ನು ವೀಕ್ಷಿಸಿ ಆನಂದಿಸಬಹುದು. ಎಸಿ ಮತ್ತು ನಾನ್ ಎಸಿ ಬಸ್‌ಗಳ ಮೂಲಕ ಪ್ರಯಾಣ ಮಾಡಬಹುದು.
ಪ್ರವಾಸದ ವಿವರ :
- ಈ ಪ್ರವಾಸವು ಬೆಳಗ್ಗೆ 7:30ಕ್ಕೆ ಸಿಕಂದರಾಬಾದ್‌ನ ಬೇಗಂಪೇಟ್ ಯಾತ್ರಿ ನಿವಾಸದಿಂದ ಆರಂಭವಾಗುತ್ತದೆ.
- ನೀವು ಬೆಳಗ್ಗೆ 7:45ಕ್ಕೆ ಪ್ರವಾಸಿ ಕಚೇರಿಯಲ್ಲಿ ಬಸ್ ಹತ್ತಬಹುದು.
- ಬೆಳಗ್ಗೆ 8:15ಕ್ಕೆ ಬಶೀರ್‌ಬಾಗ್ ಸಿಆರ್‌ಒ ಕಚೇರಿಯ ಬಳಿ ಬೋರ್ಡಿಂಗ್ ಪಾಯಿಂಟ್ ಕೂಡ ಇರುತ್ತದೆ.
- ಬಶೀರ್ ಬಾಗ್ನಿಂದ ಪ್ರಯಾಣ ಪ್ರಾರಂಭಿಸಿದ ಬಳಿಕ ಮೊದಲು ಬಿರ್ಲಾ ಮಂದಿರ ದೇವಸ್ಥಾನಕ್ಕೆ ಭೇಟಿ
- ನಂತರ ಚೌಮಹಲ್ ಅರಮನೆ, ಚಾರ್ಮಿನಾರ್ ಮತ್ತು ಮೆಕ್ಕಾ ಮಸೀದಿಗೆ ಭೇಟಿ ಕೊಡಲಾಗುವುದು.
- ಇಲ್ಲಿಂದ ಲಾಡ್ ಬಜಾರ್‌ನಲ್ಲಿ ಶಾಪಿಂಗ್ ಮಾಡಲು ನಿಮಗೆ ಸ್ವಲ್ಪ ಸಮಯ ನೀಡಲಾಗುತ್ತೆ.
- ಸಲಾರ್ ಜಂಗ್ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಬಳಿಕ ಊಟದ ವಿರಾಮವಿರುತ್ತದೆ.
- ಮಧ್ಯಾಹ್ನದ ಊಟದ ಬಳಿಕ ನಿಜಾಮರ ವಸ್ತುಸಂಗ್ರಹಾಲಯಕ್ಕೆ ತೆರಳಲಾಗುತ್ತದೆ. ಬಳಿಕ ನಿಮಗೆ ಗೋಲ್ಕೊಂಡ ಕೋಟೆಯನ್ನು ವೀಕ್ಷಿಸುವ ಅವಕಾಶವಿರುತ್ತದೆ.
- ಇದಾದ ಬಳಿಕ ಕುತುಬ್ ಶಾಹಿ ಸಮಾಧಿಗಳಿಗೆ ಭೇಟಿ ಇರಲಿದೆ. ನಂತರ ಐಮ್ಯಾಕ್ಸ್ (ಖೈರತಾಬಾದ್) ಮೂಲಕ ಹಾದು ಹೋಗಲಾಗುವುದು. ಅಂತಿಮವಾಗಿ ಸಂಜೆ 7.30ಕ್ಕೆ ಲುಂಬಿನಿ ಪಾರ್ಕ್ ಬಳಿ ಪ್ರಯಾಣಿಕರನ್ನು ತಂದು ಬಿಡಲಾಗುತ್ತದೆ. ಇದು ನಿಮ್ಮ ಒಂದು ದಿನದ ಪ್ರವಾಸ ಪೂರ್ಣವಾಗುತ್ತದೆ.
ಶುಕ್ರವಾರ ಹೋದರೆ ನೋಡುವುದಿಲ್ಲ : ಈ ಒಂದು ದಿನದ ಪ್ರವಾಸವು ಪ್ರತಿದಿನ ಲಭ್ಯವಿದೆ. ಆದರೆ, ನೀವು ಶುಕ್ರವಾರ ಹೋದರೆ ನಗರದ ಎಲ್ಲಾ ವಸ್ತು ಸಂಗ್ರಹಾಲಯಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆ ದಿನ ಚೌಮಹಲ್ ಅರಮನೆ, ಸಾಲಾರ್ ಜಂಗ್ ವಸ್ತುಸಂಗ್ರಹಾಲಯ ಮತ್ತು ನಿಜಾಮ್ ವಸ್ತುಸಂಗ್ರಹಾಲಯಗಳು ಮುಚ್ಚಿರುತ್ತವೆ. ಶುಕ್ರವಾರ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡುವ ಬದಲು, ನೀವು ನೆಹರು ಪ್ರಾಣಿಶಾಸ್ತ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು.
ಪ್ರವಾಸದ ದರಗಳು : ಹೈದರಾಬಾದ್ ನಗರ ಒಂದು ದಿನದ ಪ್ರವಾಸದ ಭಾಗವಾಗಿ ಎಸಿ ಮತ್ತು ಎಸಿ ಅಲ್ಲದ ಬಸ್‌ಗಳು ಲಭ್ಯವಿರುತ್ತವೆ. ಎಸಿ ಬಸ್‌ನಲ್ಲಿ ವಯಸ್ಕರಿಗೆ ₹500 ಹಾಗೂ ಮಕ್ಕಳಿಗೆ ₹400 ಪಾವತಿಸಬೇಕು. ನಾನ್ ಎಸಿ ಬಸ್ ಆಗಿದ್ದರೆ, ವಯಸ್ಕರು ₹380 ಹಾಗೂ ಮಕ್ಕಳು ₹300 ಪಾವತಿಸಬೇಕಾಗುತ್ತದೆ. ಪ್ರವಾಸಿಗರು ಆಹಾರ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವೇಶ ಟಿಕೆಟ್‌ಗಳನ್ನು ಅವರೇ ಪಾವತಿಸಬೇಕಾಗುತ್ತದೆ. ಈ ಪ್ರವಾಸದ ಪ್ಯಾಕೇಜ್‌ನ ಸಂಪೂರ್ಣ ವಿವರಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ನೋಡಿ.
ಇದನ್ನೂ ಓದಿ: ಏನಿವು ನೀಲಿ, ಕೆಂಪು, ಹಸಿರು ಕೋಚ್ಗಳು? - ರೈಲು ಬೋಗಿಗಳ ಬಣ್ಣಕ್ಕೆ ಇರುವ ವಿಶೇಷ ಕಾರಣ, ಮಹತ್ವ ಏನು?