ಬಸ್ತಾರ್, ಛತ್ತೀಸ್ಗಢ: ಆದರ್ಶ, ಅಮರ ಪ್ರೇಮಗಳು ದುರಂತ ಅಂತ್ಯ ಕಂಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಅಂತಹ ಪ್ರೇಮಕಥೆಗಳಲ್ಲಿ ಒಂದು ಛತ್ತೀಸ್ಗಢದ ಬಸ್ತಾರ್ನ ಈ ಸಾಂಪ್ರದಾಯಿಕ ಜಿಟ್ಕು ಮತ್ತು ಮಿಟ್ಕಿಯ ಪ್ರೀತಿಗಾಥೆ. ಇವರ ನೈಜ ಜೀವನದ ಪ್ರೀತಿ ಇಂದಿಗೂ ಶಾಶ್ವತವಾಗಿ ಉಳಿದಿದೆ. ಕೆಲವು ಮಧುರ ಪ್ರೇಮಿಗಳು ಅಲ್ಪಕಾಲ ಜೀವಿಸಿದರೂ ಅವರ ಬಂಧಗಳು ದೀರ್ಘಕಾಲದ್ದಾಗಿದ್ದು, ಅಜರಾಮರವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಂತಹ ಒಂದು ಪ್ರೇಮಕಥೆ ಇದು.
ಜಿಟ್ಕು- ಮಿಟ್ಕಿ ಅನುರಾಗದ ಕಥೆ: ವರ್ಷಗಳ ಕಾಲ ಇತಿಹಾಸದಲ್ಲಿ ಹುದುಗಿರುವ ಈ ಜಿಟ್ಕು ಮತ್ತು ಮಿಟ್ಕಿಯ ಪ್ರೀತಿ ಕುರಿತು ಬಸ್ತಾರ್ ನಿವಾಸಿಯಾಗಿರುವ ಹಿರಿಯ ಪತ್ರಕರ್ತ ಅವಿನಾಶ್ ಪ್ರಸಾದ್ ವಿವರಿಸಿದ್ದು ಹೀಗೆ
ಕೊಡಗಾವ್ ಜಿಲ್ಲೆಯಿಂದ 50 ರಿಂದ 60 ಕಿ.ಮೀ ದೂರದಲ್ಲಿರುವ ವಿಶಂಪುರಿ ರಸ್ತೆಯ ಸಮೀಪದಲ್ಲಿ ಪೆಂಡ್ರವನ್ ಎಂಬ ಗ್ರಾಮವಿದೆ. ಈ ಊರಲ್ಲಿ ಏಳು ಸಹೋದರರ ನೆರಳಿನಲ್ಲಿ ಬೆಳೆದವಳು ಮಿಟ್ಕಿ. ಅಕ್ಕರೆಯ ಏಕೈಕ ಸಹೋದರಿ ಮೇಲೆ ಸಹೋದರರ ಪ್ರೀತಿ ಕೂಡ ಅಗಾಧವಾಗಿತ್ತು. ಹೇಗಿತ್ತೆಂದರೆ, ಬೆಳಗ್ಗೆ ಎದ್ದಾಕ್ಷಣ ಅವರು ಮೊದಲು ದೇವರ ಬದಲು ಮಿಟ್ಕಿ ಮುಖವನ್ನೇ ನೋಡಿ ದಿನಚರಿ ಆರಂಭಿಸುತ್ತಿದ್ದರು. ಮಿಟ್ಕಿ ಕೂಡ ಪಕ್ಕದ ಜಾತ್ರೆಯಲ್ಲಿ ಜಿಟ್ಕು ಜೊತೆ ಮೊದಲ ನೋಟಕ್ಕೆ ಪ್ರೀತಿಗೆ ಮನಸೊಲುವವರೆಗೆ ತನ್ನ ಪ್ರಪಂಚ ಎಂದು ಸುಂದರ ಜೀವನ ಕಳೆಯುತ್ತಿದ್ದಳು.
ಮನೆ ಅಳಿಯನಾಗುವ ಸವಾಲು: ಮೊದಲ ನೋಟದಲ್ಲಿ ಅರಳಿದ ಪ್ರೀತಿ ಇಬ್ಬರನ್ನು ಹತ್ತಿರಕ್ಕೆ ಸೆಳೆದು ದಿನ ಕಳೆದಂತೆ ಈ ಬಾಂಧವ್ಯವನ್ನು ಗಟ್ಟಿಗೊಳಿಸಿತು. ಅದು ಎಷ್ಟು ಗಾಢವಾಗಿತ್ತು ಎಂದರೆ, ನಾವು ಪ್ರೀತಿಸುತ್ತಾ ಬದುಕೋಣ, ಇಲ್ಲ ಒಟ್ಟಿಗೆ ಸಾಯೋಣ ಎಂದು ಪರಸ್ಪರ ಮಾತನ್ನಿತ್ತರು. ಈ ನಡುವೆ ಜಿಟ್ಕು ಸಹೋದರರ ಮುಂದೆ ಮಿಟ್ಕಿಯನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ. ಈ ಪ್ರೀತಿಗೆ ಸಹೋದರರ ಒಪ್ಪಿದರೂ ಆತ ಮನೆ ಅಳಿಯನಾಗಬೇಕು ಎಂಬ ಷರತ್ತನ್ನು ವಿಧಿಸಿದರು. ಯಾವುದೇ ಕುಟುಂಬ ಹೊಂದಿರದ ಜಿಟ್ಕು, ಮನೆಯವರ ಮಾತಿಗೆ ಒಪ್ಪಿ ಮಿಟ್ಕಿ ಜೊತೆ ಜೀವನ ಕಳೆಯುವ ನಿರ್ಧಾರ ಕೈಗೊಂಡರು , ಹಿಂದೆ ಮುಂದೆ ಯೋಚಿಸದೇ ಅವರ ಮಾತಿಗೆ ಒಪ್ಪಿಕೊಂಡ.
ಹೀಗೆ ಇಬ್ಬರು ಸಪ್ತಪದಿ ತುಳಿದು, ಅದೇ ಗ್ರಾಮದಲ್ಲಿ ವಾಸ ಶುರು ಮಾಡಿದರು. ಜಿಟ್ಕು ಸಣ್ಣ ಮಣ್ಣಿನ ಮನೆ ಕಟ್ಟಿ ಅಲ್ಲಿ ಇಬ್ಬರು ಒಟ್ಟಿಗೆ ಜೀವನ ನಡೆಸುವ ನಿರ್ಧಾರ ತೆಗೆದುಕೊಂಡರು. ಇದು ಅವರ ಸಹೋದರ ಬೇಸರಕ್ಕೆ ಕಾರಣವಾಯಿತು.
ಗ್ರಾಮಸ್ಥರ ದುರಾಸೆ: ಈ ನಡುವೆ ಗ್ರಾಮದಲ್ಲಿ ಒಮ್ಮೆ ಭೀಕರ ಬರ ತಲೆದೂರಿ, ಇದ್ದ ಒಂದು ಕೊಳವೂ ಬರಿದಾಯಿತು. ಇದಕ್ಕೆ ಪರಿಹಾರ ಕಾಣದೇ ಗ್ರಾಮಸ್ಥರು ಮಾಟಗಾರ (ತಾಂತ್ರಿಕ್) ಮೊರೆ ಹೋದರು. ಆತ ಮಾನವ ಬಲಿ ನೀಡಿದರೆ, ಕೊಳದಲ್ಲಿ ಇನ್ಮುಂದೆ ನೀರು ಬತ್ತುವುದಿಲ್ಲ ಎಂದು ಹೇಳಿದ. ಇಷ್ಟೇ ಅಲ್ಲದೇ, ಈ ಮಾನವ ಬಲಿ ಗ್ರಾಮದ ಹೊರಗಿನವರದಾಗಿರಬೇಕು ಎಂದು ನಿರ್ಧಿಷ್ಟವಾಗಿ ತಿಳಿಸಿದ. ಗ್ರಾಮದಲ್ಲಿ ಹೊರಗಿನಿಂದ ಬಂದು ನೆಲೆಸಿದ ಜಿಟ್ಕು ಮೇಲೆ ಊರವರ ಕಣ್ಣು ಬಿದ್ದಿತು. ಗ್ರಾಮದ ಒಳಿತಿಗೆ ಜಿತ್ಕುನ ಬಲಿ ಅಗತ್ಯ ಎಂಬುದನ್ನು ಗ್ರಾಮಸ್ಥರು ಮಿಟ್ಕಿ ಸಹೋದರರಿಗೆ ಮನವರಿಕೆ ಮಾಡಿದರು. ಈ ರೀತಿ ಮಾಡುವುದರಿಂದ ಗ್ರಾಮ ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಇತ್ತಾದರೂ, ಸುತ್ತ ಹಳ್ಳಿಯಲ್ಲಿ ತಮ್ಮ ಹೆಸರು, ಘನತೆ ಹೆಚ್ಚುತ್ತದೆ ಎಂಬ ದೂರಾಲೋಚನೆ ಸಹೋದರರ ತಲೆ ಹೊಕ್ಕಿತು.
ಸಾವಿನಲ್ಲೂ ಅಮರವಾದ ಜೋಡಿ: ಈ ನಡುವೆ ಜೋರಾಗಿ ಒಂದು ದಿನ ಮಳೆ ಸುರಿಯಲಾರಂಭಿಸಿತು. ಆಗ ಮಿಟ್ಕಿ ಸಹೋದರರು ಜಿಟ್ಕುವನ್ನು ಗ್ರಾಮಸ್ಥರೊಂದಿಗೆ ಕೊಳದ ಬಳಿ ಕೊಂಡೊಯ್ದು ಆತನನ್ನು ಬಲಿ ನೀಡಿದರು. ಇತ್ತ ರಾತ್ರಿ ಇಡೀ ಪ್ರೀತಿಯ ಪತಿಗಾಗಿ ಮಿಟ್ಕಿ ಕಾದು - ಕಾದು ಸಾಕಾದಳು. ಮರು ದಿನ ಆತನಿಗಾಗಿ ಹುಡುಕಾಡುತ್ತಾ ಕೊಳದ ಬಳಿಕ ಬಂದಾಗ ಆಕೆ ಕಂಡಿದ್ದು, ಭೀಕರ ದೃಶ್ಯ. ಗಂಡನ ಸಾವನ್ನು ಅರಗಿಸಿಕೊಳ್ಳಲಾರದ ಮಿಟ್ಕಿ ಅದೇ ಕೊಳದ ಬಳಿಯೇ ಜೀವ ಕಳೆದುಕೊಂಡರು.
ಈ ಕಥೆ ಇಲ್ಲಿಗೆ ಮುಗಿಯಲಿಲ್ಲ. ಬಸ್ತಾರ್ ಜನರು ಮಿಟ್ಕಿಯನ್ನು ಗೊಪಾ ದೇವಿಯಾಗಿ ಆರಾಧಿಸಲು ಶುರು ಮಾಡಿದರು. ಜಿಟ್ಕು ಮೃತ ದೇಹ ಖೋಡಿಯಾ ದೇವ ಪ್ರತಿಮೆ ಬಳಿ ಸಿಕ್ಕ ಹಿನ್ನೆಲೆ ಖೋಡಿಯಾ ರಾಜನಾಗಿ ಪ್ರಖ್ಯಾತಿ ಹೊಂದಿದ. ಜನರು ಪ್ರೀತಿಯ ಕುರಿತು ಚರ್ಚಿಸಿದಾಗಲೆಲ್ಲಾ, ಜಿಟ್ಕು ಮತ್ತು ಮಿಟ್ಕಿಯ ಹೆಸರುಗಳು ತಲೆಮಾರುಗಳಿಂದಲೂ ಕೇಳಿ ಬರುತ್ತಿದೆ. ಇಂದು ಸ್ಥಳೀಯ ಸಂಘಟಕರು ಕೂಡ ಮಾರುಕಟ್ಟೆ ಪ್ರದೇಶದಲ್ಲಿ ಅವರ ಹೆಸರಲ್ಲಿ ಮೇಳವನ್ನು ಆಯೋಜಿಸಿದ್ದಾರೆ. ಸ್ಥಳೀಯ ಕುಶಲಕರ್ಮಿಗಳು ಜಿಟ್ಕು ಮತ್ತು ಮಿಟ್ಕಿಯ ವಿಗ್ರಹಗಳನ್ನು ಲೋಹದಲ್ಲಿ ರೂಪಿಸಿದ್ದು, ಪ್ರೀತಿ ಮತ್ತು ತ್ಯಾಗದ ಸಂಕೇತವಾಗಿ ಅವರ ಪ್ರೇಮಕಥೆ ಉಳಿದಿದೆ.
ಮದುವೆಯಾದ ಮತ್ತು ಅವಿವಾಹಿತ ದಂಪತಿಗಳು ತಮ್ಮ ಪ್ರೀತಿ - ಬಾಂಧವ್ಯದ ಕುರಿತು ಜಿಟ್ಕು ಮತ್ತು ಮಿಟ್ಕಿ ಬಳಿ ಪ್ರಾರ್ಥಿಸುವ ಪದ್ದತಿ ರೂಢಿಯಲ್ಲಿದೆ. ಬಸ್ತಾರನ ಯಾವುದೇ ಶಿಲ್ಪಿಗಳು ತಮ್ಮ ಹೊಸ ಆಕೃತಿ ಮಾಡುವ ಮುನ್ನ ಜಿಟ್ಕು ಮತ್ತು ಮಿಟ್ಕಿ ಪ್ರತಿಮೆ ನಿರ್ಮಾಣ ಮಾಡುತ್ತಾರೆ. ಇವರ ಕಥೆ ಛತ್ತೀಸ್ಗರಿ ಸಿನಿಮಾಕ್ಕೂ ಪ್ರೇರಣೆಯಾಗಿದ್ದು, ಚಲನಚಿತ್ರದ ಮೂಲಕ ಅವರ ಕಥೆಯನ್ನು ಶಾಶ್ವತವಾಗಿಸಲಾಗಿದೆ.
ಇದನ್ನೂ ಓದಿ: ದಾವಣಗೆರೆ ಬೆಣ್ಣೆ ದೋಸೆಗೆ 97 ವರ್ಷ: ಚನ್ನಮ್ಮಜ್ಜಿಯಿಂದ ಆರಂಭ, ಪ್ರಸಿದ್ಧಿ ಗಳಿಸಿದ್ದು ಹೇಗೆ ಗೊತ್ತೇ?
ಇದನ್ನೂ ಓದಿ: ನಿಮ್ಮ ಸಂಗಾತಿಗೆ ಐ ಲವ್ ಯೂ ಅಂತ ಹೇಳಿಲ್ವಾ? ಈಗಲೇ ಹೋಗಿ ಹೇಳಿ ನೋಡಿ!