ಹೈದರಾಬಾದ್: ರಾಮೋಜಿ ಫಿಲ್ಮ್ ಸಿಟಿ ಹಾಗೂ ಡಾಲ್ಫಿನ್ ಹೋಟೆಲ್ಸ್ ತಮ್ಮ ಆದರ್ಶಪ್ರಾಯವಾದ ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯ ಮಾನದಂಡಗಳಿಗಾಗಿ ಮತ್ತೊಮ್ಮೆ 'ಈಟ್ ರೈಟ್ ಕ್ಯಾಂಪಸ್' ಪ್ರಮಾಣಪತ್ರ ಪಡೆದುಕೊಂಡಿವೆ. ಇದು ದೇಶಾದ್ಯಂತದ ರೆಸ್ಟೋರೆಂಟ್‌ಗಳಿಗೆ ನೀಡುವ ಬೆಂಚ್ಮಾರ್ಕ್ ಆಗಿದೆ.
ರಾಷ್ಟ್ರೀಯ ಆರೋಗ್ಯ ನೀತಿ ಮಾನದಂಡಗಳಿಗೆ ಅನುಗುಣವಾಗಿ ಉತ್ತಮ ಗುಣಮಟ್ಟದ, ಪೌಷ್ಟಿಕ ಹಾಗೂ ಸುರಕ್ಷಿತ ಆಹಾರ ಸೇವೆಗಳನ್ನು ನಿರ್ವಹಿಸುವಲ್ಲಿ ಈ ಸಂಸ್ಥೆಗಳ ಪ್ರಯತ್ನಗಳನ್ನು ರಾಜ್ಯ ಆಹಾರ ಸುರಕ್ಷತಾ ಆಯುಕ್ತ ಆರ್.ವಿ. ಕರ್ಣನ್ ಶ್ಲಾಘಿಸಿದರು.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬುಧವಾರ ನಡೆದ ವಿಶೇಷ ಸಮಾರಂಭದಲ್ಲಿ, ಆರ್.ವಿ. ಕರ್ಣನ್ ಮತ್ತು ರಾಜ್ಯ ಆಹಾರ ಸುರಕ್ಷತಾ ನಿರ್ದೇಶಕಿ ಡಾ.ಶಿವಲೀಲಾ ಅವರು, ಡಾಲ್ಫಿನ್ ಹೋಟೆಲ್‌ಗಳ ಉಪಾಧ್ಯಕ್ಷ ವಿಪಿನ್ ಸಿಂಘಾಲ್ ಹಾಗೂ ಸಲಹೆಗಾರ ಪಿ.ಕೆ. ತಿಮ್ಮಯ್ಯ ಅವರಿಗೆ 'ಈಟ್ ರೈಟ್ ಕ್ಯಾಂಪಸ್' ಪ್ರಮಾಣಪತ್ರ ಪ್ರದಾನ ಮಾಡಿದರು.
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (The Food Safety and Standards Authority of India - ಎಫ್‌ಎಸ್‌ಎಸ್‌ಎಐ) ರಾಮೋಜಿ ಫಿಲ್ಮ್ ಸಿಟಿಯನ್ನು ಈಟ್ ರೈಟ್ ಕ್ಯಾಂಪಸ್ ಎಂದು ಪ್ರಮಾಣೀಕರಿಸಿದೆ. ಇದು ಉನ್ನತ ಹಂತದ ಆಹಾರ ಸುರಕ್ಷತಾ ಅಭ್ಯಾಸಗಳಿಗೆ ಸಂಸ್ಥೆಯ ಬದ್ಧತೆ ಬಗ್ಗೆ ಪುನರುಚ್ಚರಿಸಿದೆ.
ಬಹು ಘಟಕಗಳಿಗೆ ಫೈವ್ ಸ್ಟಾರ್ ಹೈಜೀನ್ ರೇಟಿಂಗ್: ಈ ಕಾರ್ಯಕ್ರಮದ ಸಂದರ್ಭದಲ್ಲಿ ರಾಮೋಜಿ ಫಿಲ್ಮ್ ಸಿಟಿ ಮತ್ತು ಡಾಲ್ಫಿನ್ ಹೋಟೆಲ್ಸ್ ಅಡಿಯಲ್ಲಿ 19 ಘಟಕಗಳಿಗೆ ಫೈವ್ ಸ್ಟಾರ್ ಹೈಜೀನ್ ರೇಟಿಂಗ್ ಪ್ರಮಾಣಪತ್ರಗಳನ್ನು ನೀಡಲಾಯಿತು. ಆಹಾರ ಸುರಕ್ಷತೆಯ ಉನ್ನತ ಮಾನದಂಡಗಳನ್ನು ಕಾಯ್ದುಕೊಳ್ಳುವಲ್ಲಿ ಅವರ ಕೊಡುಗೆಯನ್ನು ಗುರುತಿಸಿ ಹಲವಾರು ವ್ಯಕ್ತಿಗಳನ್ನು ಆಂತರಿಕ ಲೆಕ್ಕಪರಿಶೋಧಕರಾಗಿ ಪ್ರಮಾಣೀಕರಿಸಲಾಯಿತು.
ಗಮನಾರ್ಹ ಸಾಧನೆ: ಸಮಾರಂಭದಲ್ಲಿ ಮಾತನಾಡಿದ ಆರ್.ವಿ. ಕರ್ಣನ್ ಅವರು, 2022 ರಿಂದ ತನ್ನ ಈಟ್ ರೈಟ್ ಕ್ಯಾಂಪಸ್ ಪ್ರಮಾಣೀಕರಣವನ್ನು ಉಳಿಸಿಕೊಂಡಿದ್ದಕ್ಕಾಗಿ ರಾಮೋಜಿ ಫಿಲ್ಮ್ ಸಿಟಿಯನ್ನು ಶ್ಲಾಘಿಸಿದರು. ಆಹಾರ ಸುರಕ್ಷತೆಯ ಶ್ರೇಷ್ಠತೆಯನ್ನು ಎತ್ತಿಹಿಡಿಯುವಲ್ಲಿ ಡಾಲ್ಫಿನ್ ಹೋಟೆಲ್ಸ್ ಎಂಡಿ ವಿಜಯೇಶ್ವರಿ ಅವರ ನಾಯಕತ್ವ ಹಾಗೂ ಇಡೀ ತಂಡದ ಸಮರ್ಪಣೆಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ.ಶಿವಲೀಲಾ ಮಾತನಾಡಿ, ರಾಮೋಜಿ ಫಿಲ್ಮ್ ಸಿಟಿ 41 ಘಟಕಗಳಿಗೆ ಕಟ್ಟುನಿಟ್ಟಾದ ನೈರ್ಮಲ್ಯ ಮತ್ತು ಸುರಕ್ಷತಾ ನಿಯಮಗಳ ಅಡಿ ಪರವಾನಗಿಗಳನ್ನು ಪಡೆಯುವ ಮಹತ್ವದ ಬಗ್ಗೆ ತಿಳಿಸಿದರು. ಇದು ತೆಲಂಗಾಣದಲ್ಲಿ ಮೊದಲ ಈಟ್ ರೈಟ್ ಕ್ಯಾಂಪಸ್ ಆಗಿ ಉಳಿದಿದೆ. ಮತ್ತು ಈಗ ಯಶಸ್ವಿಯಾಗಿ ಮರು ಪ್ರಮಾಣೀಕರಣವನ್ನು ಗಳಿಸಿದೆ ಎಂದು ಹೇಳಿದರು.
ವಿವಿಧ ಗಣ್ಯರು ಭಾಗಿ: ಕಾರ್ಯಕ್ರಮದಲ್ಲಿ ಮಾಜಿ ಉಪ ಆಹಾರ ನಿಯಂತ್ರಕ ಟಿ. ವಿಜಯ್‌ಕುಮಾರ್, ಸಹಾಯಕ ಆಹಾರ ನಿಯಂತ್ರಕ ಖಲೀಲ್, ಎಸ್‌ಬಿಆರ್ ಪ್ರಸಾದ್, ವೆಂಕಟ್ ಪಾರ್ವತೀಸಂ ಹಾಗೂ ಜಿ. ಶ್ರೀನಿವಾಸ್ ರಾವ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಪ್ರತಿನಿಧಿಗಳು ಮತ್ತು ನೌಕರರು ಪಾಲ್ಗೊಂಡಿದ್ದರು.
ರಾಮೋಜಿ ಫಿಲ್ಮ್ ಸಿಟಿ ಮತ್ತು ಡಾಲ್ಫಿನ್ ಹೋಟೆಲ್ಸ್ ತಮ್ಮ ಸಂದರ್ಶಕರಿಗೆ ಸುರಕ್ಷಿತ, ನೈರ್ಮಲ್ಯ ಮತ್ತು ಉತ್ತಮ ಗುಣಮಟ್ಟದ ಆಹಾರ ಸೇವೆಗಳನ್ನು ಖಾತ್ರಿಪಡಿಸುವಲ್ಲಿ ಮಾದರಿಯಾಗಿ ಮುಂದುವರಿಯುತ್ತಿವೆ ಎಂಬುದನ್ನು ಈ ಪ್ರಮಾಣೀಕರಣವು ಪುನರುಚ್ಚರಿಸುತ್ತದೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ 3,000ಕ್ಕೂ ಹೆಚ್ಚು ಸಿನಿಮಾಗಳ ಚಿತ್ರೀಕರಣ: ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ವಿಶ್ವದ ಅತಿದೊಡ್ಡ ಫಿಲ್ಮ್ ಸಿಟಿ ಎಂದು ಗುರುತಿಸಲ್ಪಟ್ಟ ರಾಮೋಜಿ ಫಿಲ್ಮ್ ಸಿಟಿಯು ಚಲನಚಿತ್ರ ನಿರ್ಮಾಪಕರ ಸ್ವರ್ಗವಾಗಿದೆ. ರಜಾ ದಿನಗಳನ್ನು ಕಳೆಯಲು ಇಲ್ಲಿಗೆ ಬುರುವವರಿಗೆ ಇದು ಕನಸಿನ ತಾಣವಾಗಿದೆ. 2,000 ಎಕರೆಗಳಲ್ಲಿ ಈ ಫಿಲ್ಮ್ ಸಿಟಿ ವ್ಯಾಪ್ತಿಯನ್ನು ಹೊಂದಿದೆ. ಜೊತೆಗೆ ಚಲನಚಿತ್ರ ಪ್ರೇರಿತ ವಿಷಯಾಧಾರಿತ ಪ್ರವಾಸೋದ್ಯಮ ತಾಣವಾಗಿ ಎಲ್ಲರ ಗಮನ ಸೆಳೆಯುತ್ತದೆ. ಪ್ರತಿವರ್ಷ, ಸುಮಾರು 200 ಸಿನಿಮಾ ಸಂಸ್ಥೆಗಳು ತಮ್ಮ ಕನಸುಗಳನ್ನು ನನಸಾಗಿಸಲು ಫಿಲ್ಮ್ ಸಿಟಿಗೆ ಆಗಮಿಸುತ್ತಿವೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಎಲ್ಲ ಭಾರತೀಯ ಭಾಷೆಗಳಲ್ಲಿ 3,000ಕ್ಕೂ ಹೆಚ್ಚು ಚಿತ್ರಗಳನ್ನು ಚಿತ್ರೀಕರಿಸಲಾಗಿದೆ.
ಇದನ್ನೂ ಓದಿ: ದಾವಣಗೆರೆ ಬೆಣ್ಣೆ ದೋಸೆಗೆ 97 ವರ್ಷ: ಚನ್ನಮ್ಮಜ್ಜಿಯಿಂದ ಆರಂಭ, ಪ್ರಸಿದ್ಧಿ ಗಳಿಸಿದ್ದು ಹೇಗೆ ಗೊತ್ತೇ?