ಹೈದರಾಬಾದ್:ಹೈದರಾಬಾದ್ ಮೂಲದ 36 ವರ್ಷದ ಮಹಿಳೆಯೊಬ್ಬರು ಆಸ್ಟ್ರೇಲಿಯಾದಲ್ಲಿ ಶವವಾಗಿ ಪತ್ತೆಯಾಗಿದ್ದು, ಪತಿಯೇ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಹೈದರಾಬಾದ್‌ನಲ್ಲಿರುವ ಪತ್ನಿಯ ಮನೆಯಲ್ಲಿ ಮಗು ಬಿಟ್ಟು ಪತಿ ಪರಾರಿಯಾಗಿದ್ದಾನೆ. ಚೈತನ್ಯ ಮದಗಣಿ ಮೃತ ಮಹಿಳೆ. ಆಸ್ಟ್ರೇಲಿಯಾದ ಬಕ್ಲಿಯ ಪ್ರದೇಶದಲ್ಲಿನ ವೀಲಿ ಬಿನ್ ಎಂಬಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪತಿ ಮತ್ತು ಮಗನೊಂದಿಗೆ ಮಹಿಳೆ ವಾಸಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ನೀಡಿರುವ ಉಪ್ಪಳ ಶಾಸಕ ಬಂಡಾರಿ ಲಕ್ಷ್ಮ ರೆಡ್ಡಿ ಅವರು, ಮೃತ ಮಹಿಳೆ ತಮ್ಮ ಕ್ಷೇತ್ರದವರಾಗಿದ್ದು, ಆಸ್ಟ್ರೇಲಿಯಾದಲ್ಲಿ ಮೃತಪಟ್ಟ ಬಗ್ಗೆ ಮಾಹಿತಿ ಸಿಕ್ಕಿದೆ. ಮಹಿಳೆಯ ಪೋಷಕರ ಕೋರಿಕೆಯ ಮೇರೆಗೆ ಪಾರ್ಥಿವ ಶರೀರವನ್ನು ಹೈದರಾಬಾದ್‌ಗೆ ತರಲು ವಿದೇಶಾಂಗ ಇಲಾಖೆಗೆ ಪತ್ರ ಬರೆಯಲಾಗಿದೆ. ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರ ಕಚೇರಿಗೂ ಮಾಹಿತಿ ನೀಡಿದ್ದಾಗಿ ತಿಳಿಸಿದರು.
ಮಗು ಬಿಟ್ಟು ಹೋದ ಪತಿ:ಮೃತ ಮಹಿಳೆಯ ಪತಿ ಆಸ್ಟ್ರೇಲಿಯಾದಿಂದ ಹೈದರಾಬಾದ್‌ಗೆ ಮಗುವಿನ ಸಮೇತ ಬಂದು ಆಕೆಯ ಮನೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಮಹಿಳೆಯ ಪೋಷಕರು ಹೇಳುವಂತೆ ತನ್ನ ಪತ್ನಿಯನ್ನು ಕೊಂದಿದ್ದಾಗಿ ಪತಿ ತಪ್ಪೊಪ್ಪಿಕೊಂಡಿದ್ದಾನೆ. ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದು ತಿಳಿಸಿಲ್ಲ ಎಂದು ಅವರು ಹೇಳಿದ್ದಾಗಿ ಶಾಸಕರು ಮಾಹಿತಿ ನೀಡಿದರು.
ಮಾರ್ಚ್ 9 ರಂದು ವಿಕ್ಟೋರಿಯಾ ಪೊಲೀಸರು ತಮ್ಮ ವೆಬ್‌ಸೈಟ್‌ನಲ್ಲಿ, ಬಕ್ಲಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಕೊಲೆ ನಡೆದಿರುವ ಶಂಕೆ ಇದೆ. ತನಿಖೆ ನಡೆಸಲಾಗುತ್ತಿದೆ ಎಂದು ಹಂಚಿಕೊಂಡಿದ್ದಾರೆ. ಆರೋಪಿ ಪತಿ ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಮಹಿಳೆಯ ಪೋಷಕರು ಹೇಳಿದ್ದಾರೆ.