ಲಂಡನ್: ದೆಹಲಿ ಮೂಲದ ಉದ್ಯಮಿ ತರುಣ್ ಗುಲಾಟಿ ಅವರು ಮೇ 2 ರಂದು ಲಂಡನ್ ಮೇಯರ್ ಚುನಾವಣೆಯಲ್ಲಿ ಹಾಲಿ ಮೇಯರ್ ಸಾದಿಕ್ ಖಾನ್‌ಗೆ ಸವಾಲು ಹಾಕುತ್ತಿದ್ದಾರೆ. ಲಂಡನ್ ಮೇಯರ್ ಹುದ್ದೆಯ ರೇಸ್‌ನಲ್ಲಿರುವ ದೆಹಲಿ ಮೂಲದ ಈ ವ್ಯಕ್ತಿ ತರುಣ್ ಗುಲಾಟಿ ಅವರು, ಪಾಕಿಸ್ತಾನಿ ಮೂಲದ ಸಾದಿಕ್ ಖಾನ್ ಮಣಿಸಲು ತಂತ್ರ ಹೆಣೆದಿದ್ದಾರೆ. ಪಾಕಿಸ್ತಾನ ಮೂಲದ ಸಾದಿಕ್ ಖಾನ್ ಅವರು ಮೂರನೇ ಬಾರಿಗೆ ಗೆಲ್ಲುವ ಗುರಿಯೊಂದಿಗೆ ಇಂಗ್ಲೆಂಡ್‌ನ ಲಂಡನ್ ಮೇಯರ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ, ಈ ಬಾರಿ ಅವರಿಗೆ ಭಾರತೀಯ ಮೂಲದ ಅಭ್ಯರ್ಥಿ ತರುಣ್ ಗುಲಾಟಿ ಅವರು ಭಾರಿ ಪೈಪೋಟಿ ನೀಡುತ್ತಿದ್ದಾರೆ.
''ಎಲ್ಲಾ ರಾಜಕೀಯ ಪಕ್ಷಗಳಿಂದ ಲಂಡನ್ ನಾಗರಿಕರು ಅತೃಪ್ತರಾಗಿದ್ದಾರೆ. ಆದ್ರೆ, ನಾನು ಅನುಭವಿ ಸಿಇಒ ರೀತಿಯಲ್ಲಿ ಲಂಡನ್ ಅನ್ನು ಮುನ್ನಡೆಸಲು ಬಯಸುತ್ತೇನೆ. ಇದರಿಂದ ಪ್ರತಿಯೊಬ್ಬರಿಗೂ ಪ್ರಯೋಜನ ಆಗಲಿದೆ. ಉದ್ಯಮಿ ಮತ್ತು ಹೂಡಿಕೆ ತಜ್ಞರಾಗಿ ತಮ್ಮ ಅನುಭವವು ಲಂಡನ್‌ಗೆ ಸಹಾಯಕವಾಗಲಿದೆ'' ಎಂದು ತರುಣ್ ಗುಲಾಟಿ ಹೇಳಿದರು.
ತರುಣ್ ಗುಲಾಟಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಮೇ 2 ರಂದು ನಡೆಯಲಿರುವ ಮೇಯರ್ ಚುನಾವಣೆಯಲ್ಲಿ 63 ವರ್ಷದ ಭಾರತೀಯ ಮೂಲದ ತರುಣ್ ಗುಲಾಟಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ತರುಣ್ ಅವರು ಮೇಯರ್ ಹುದ್ದೆಗಾಗಿ ಇತರ 13 ಅಭ್ಯರ್ಥಿಗಳ ವಿರುದ್ಧ ಅಖಾಡಕ್ಕೆ ಇಳಿದಿದ್ದಾರೆ. ತರುಣ್ ಆರು ದೇಶಗಳಲ್ಲಿ ಸಿಟಿ ಬ್ಯಾಂಕ್ ಮತ್ತು ಹೆಚ್‌ಎಸ್‌ಬಿಸಿಯೊಂದಿಗೆ ಕೆಲಸ ಮಾಡಿದ್ದಾರೆ. ಹೆಚ್ಎಸ್ಬಿಸಿಯಲ್ಲಿ ಅವರು ಅಂತಾರಾಷ್ಟ್ರೀಯ ವ್ಯವಸ್ಥಾಪಕರಾಗಿದ್ದರು.
ಈ ಕುರಿತು ಮಾತನಾಡಿರುವ ತರುಣ್ ಗುಲಾಟಿ, "ನಾನು ಲಂಡನ್ ಅನ್ನು ಒಂದು ವಿಶಿಷ್ಟ ಜಾಗತಿಕ ನಗರವಾಗಿ ನೋಡುತ್ತೇನೆ. ಇದು ವಿಶ್ವದ ಜಾಗತಿಕ ಬ್ಯಾಂಕ್‌ನಂತೆ, ಪ್ರಪಂಚದಾದ್ಯಂತದ ಜನರು ಒಟ್ಟಿಗೆ ಸೇರುತ್ತಾರೆ" ಎಂದರು. ''ಮೇಯರ್ ಆಗಿ, ನಾನು ಎಲ್ಲಾ ನಿವಾಸಿಗಳಿಗೆ ಭದ್ರತೆ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸುವ ಸಂದರ್ಭದಲ್ಲಿ ಲಂಡನ್‌ನ ಬ್ಯಾಲೆನ್ಸ್ ಶೀಟ್ ಅನ್ನು ಪ್ರಮುಖ ಹೂಡಿಕೆಯ ತಾಣವನ್ನಾಗಿ ಮಾಡಲು ಯೋಜನೆ ರೂಪಿಸುತ್ತೇನೆ. ನಾನು ಅನುಭವಿ ಸಿಇಓ ರೀತಿಯಲ್ಲಿ ಲಂಡನ್ ಅನ್ನು ಪರಿಣಾಮಕಾರಿಯಾಗಿ ಪರಿವರ್ತಿಸುತ್ತೇನೆ. ಇಲ್ಲಿ ಲಾಭದಾಯಕತೆಯು ಎಲ್ಲರಿಗೂ ಲಾಭವನ್ನು ನೀಡುತ್ತದೆ. ಈ ಯಾತ್ರೆಯಲ್ಲಿ ನೀವೆಲ್ಲರೂ ಭಾಗವಹಿಸುತ್ತೀರಿ. ಲಂಡನ್‌ನ ಬೀದಿಗಳಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುವುದು'' ಎಂದು ಭರವಸೆ ನೀಡಿದರು.