ಸಿಯೋಲ್: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಸಂಪೂರ್ಣ ಬೆಂಬಲಿಸುವುದಾಗಿ ಹೇಳಿರುವ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್, ಮಾಸ್ಕೊದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪ್ಯೋಂಗ್ಯಾಂಗ್ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ನಡೆದ ಶೃಂಗಸಭೆ ಮಾತುಕತೆಗಳಲ್ಲಿ ಅವರು ಮಾತನಾಡಿದರು. ಉತ್ತರ ಕೊರಿಯಾ ಮತ್ತು ರಷ್ಯಾ ಸಂಬಂಧಗಳ ಬಲವರ್ಧನೆಯನ್ನು ಜಗತ್ತಿನ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೊತ್ತಿನಲ್ಲಿ ಕಿಮ್ ಜಾಂಗ್-ಉನ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಜಾಗತಿಕ ಕಾರ್ಯತಂತ್ರದ ಸಮತೋಲನದಲ್ಲಿ ರಷ್ಯಾದ ಪಾತ್ರವನ್ನು ಶ್ಲಾಘಿಸಿದ ಕಿಮ್, ಉಭಯ ದೇಶಗಳ ನಡುವಿನ ಸಂಬಂಧಗಳು ಸಮೃದ್ಧಿಯ ಹೊಸ ಅವಧಿಯನ್ನು ಪ್ರವೇಶಿಸುತ್ತಿವೆ ಎಂದು ಹೇಳಿದರು ಮತ್ತು ಮಾಸ್ಕೋದೊಂದಿಗೆ ಕಾರ್ಯತಂತ್ರದ ಸಹಕಾರವನ್ನು ಬಲಪಡಿಸಲು ಪ್ರತಿಜ್ಞೆ ಮಾಡಿದರು ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ.
"ರಷ್ಯಾ ತನ್ನ ಸಾರ್ವಭೌಮತ್ವ, ಭದ್ರತಾ ಹಿತಾಸಕ್ತಿ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಿಕೊಳ್ಳಲು, ಅದು ಉಕ್ರೇನ್ನಲ್ಲಿ ನಡೆಸುತ್ತಿರುವ ವಿಶೇಷ ಮಿಲಿಟರಿ ಕಾರ್ಯಾಚರಣೆಗೆ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾದ ಸರ್ಕಾರವು ರಷ್ಯಾ ಸರ್ಕಾರ, ಸೇನೆ ಮತ್ತು ಜನರೊಂದಿಗೆ ತನ್ನ ಸಂಪೂರ್ಣ ಬೆಂಬಲ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸುತ್ತದೆ" ಎಂದು ಕಿಮ್ ಹೇಳಿದ್ದಾರೆ.