ವಾಷಿಂಗ್ಟನ್ : ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ತಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದಿರುವ ಅಮೆರಿಕ, ವಿಶ್ವದ ಯಾವುದೇ ಭಾಗದಲ್ಲಿ ನಡೆಯುವ ಇಂಥ ಚುನಾವಣೆಗಳ ವಿಷಯದಲ್ಲಿ ಅನುಸರಿಸುವ ನೀತಿಯನ್ನೇ ಭಾರತದ ಚುನಾವಣೆಯ ವಿಷಯದಲ್ಲಿಯೂ ಅನುಸರಿಸಲಾಗಿದೆ ಎಂದು ಅದು ಹೇಳಿದೆ.
"ವಿಶ್ವದ ಯಾವುದೇ ದೇಶದ ಚುನಾವಣೆಗಳಲ್ಲಿಯೂ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಹಾಗೆಯೇ ಭಾರತದ ಚುನಾವಣೆಗಳಲ್ಲಿಯೂ ನಾವು ಖಂಡಿತವಾಗಿಯೂ ಹಸ್ತಕ್ಷೇಪ ಮಾಡಿಲ್ಲ. ಭಾರತದ ಚುನಾವಣೆಗಳಲ್ಲಿ ಅಲ್ಲಿನ ಜನರೇ ನಿರ್ಣಯ ನೀಡುತ್ತಾರೆ" ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಗುರುವಾರ ವಾಷಿಂಗ್ಟನ್ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ನಿರಂತರವಾಗಿ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಗೊಂದಲ ಸೃಷ್ಟಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಝಖರೋವಾ ಬುಧವಾರ ಆರೋಪಿಸಿದ್ದರು. ಈ ಆರೋಪಕ್ಕೆ ಪ್ರತಿಯಾಗಿ ಸದ್ಯ ಮಿಲ್ಲರ್ ಸ್ಪಷ್ಟನೆ ನೀಡಿದ್ದಾರೆ.
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪಗಳ ಬಗ್ಗೆ ನಡೆಯುತ್ತಿರುವ ತನಿಖೆಯ ಬಗ್ಗೆ ಪ್ರತಿಕ್ರಿಯಿಸಲು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಈ ಸಂದರ್ಭದಲ್ಲಿ ನಿರಾಕರಿಸಿದರು.
2024 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಭಾರತವನ್ನು ಅಸ್ಥಿರಗೊಳಿಸುವ ಗುರಿಯನ್ನು ಯುಎಸ್ ಹೊಂದಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ. ಭಾರತದ ರಾಷ್ಟ್ರೀಯ ಮನಸ್ಥಿತಿ ಮತ್ತು ಇತಿಹಾಸದ ಬಗ್ಗೆ ತಿಳುವಳಿಕೆ ಇಲ್ಲದ ವಾಷಿಂಗ್ಟನ್ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡುತ್ತಲೇ ಇದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಝಖರೋವಾ ಹೇಳಿದ್ದಾರೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ನೆಟ್ ವರ್ಕ್ ಆರ್ಟಿ ನ್ಯೂಸ್ ವರದಿ ಮಾಡಿತ್ತು.
"ಭಾರತದ ಆಂತರಿಕ ರಾಜಕೀಯ ಪರಿಸ್ಥಿತಿಯನ್ನು ಅಸಮತೋಲನಗೊಳಿಸುವುದು ಮತ್ತು ಸಾರ್ವತ್ರಿಕ ಚುನಾವಣೆಗಳನ್ನು ಸಂಕೀರ್ಣಗೊಳಿಸುವುದು ಯುಎಸ್ ಆರೋಪಗಳ ಹಿಂದಿನ ಕಾರಣವಾಗಿದೆ" ಎಂದು ಝಖರೋವಾ ಹೇಳಿದ್ದಾರೆ ಎಂದು ಆರ್ ಟಿ ನ್ಯೂಸ್ ಉಲ್ಲೇಖಿಸಿದೆ. ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ ನ್ಯಾಷನಲ್ ರಿಲಿಜಿಯಸ್ ಫ್ರೀಡಂ (ಯುಎಸ್ ಸಿಐಆರ್ ಎಫ್) ನ ಇತ್ತೀಚಿನ ವಾರ್ಷಿಕ ವರದಿಯು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗಾಗಿ ಭಾರತವನ್ನು ಟೀಕಿಸಿತ್ತು.
ಇದನ್ನೂ ಓದಿ : ಇಸ್ರೇಲ್ನಲ್ಲಿ ಅಲ್ -ಜಜೀರಾ ಚಾನೆಲ್ಗೆ ನಿರ್ಬಂಧ: ಕಚೇರಿಗಳ ಮೇಲೆ ಪೊಲೀಸರ ದಾಳಿ - Al Jazeera