ಮೈಸೂರು : ಶ್ರೀ ಕ್ಷೇತ್ರ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಜರುಗಿದ ಸಾಮೂಹಿಕ ವಿವಾಹದಲ್ಲಿ 178 ಜೋಡಿಗಳು ನವಜೀವನಕ್ಕೆ ಕಾಲಿಟ್ಟರು. ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಿದರು.
178 ಜೋಡಿಗಳು ಸತಿಪತಿಗಳಾಗಿ ಸಪ್ತಪದಿ ತುಳಿದ್ರು. ಇದರಲ್ಲಿ, ಪರಿಶಿಷ್ಟ ಜಾತಿಯ 84, ಪರಿಶಿಷ್ಟ ಪಂಗಡ 22, ಹಿಂದುಳಿದ ವರ್ಗ 22, ವೀರಶೈವ ಲಿಂಗಾಯತ 3, ಅಂತರ ಜಾತಿ 23, ಅಂತರ ಧರ್ಮ 1, ನೆರೆ ರಾಜ್ಯ ತಮಿಳುನಾಡಿನ 17 ಜೋಡಿಗಳು, ವಿಶೇಷ ಚೇತನರು 3 ಮತ್ತು ಮರು ಮದುವೆಯ 3 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಲಾಯಿತು. 2000 ರಿಂದ 2024ರ ವರೆಗೆ ಶ್ರೀ ಕ್ಷೇತ್ರದ ಸಾಮೂಹಿಕ ವಿವಾಹದಲ್ಲಿ 3,194 ಜೋಡಿಗಳು ಸತಿಪತಿಗಳಾಗಿದ್ದಾರೆ.
ಮಾಸಿಕ ವಿವಾಹ ಕಾರ್ಯಕ್ರಮದಲ್ಲಿ 462 ಜೋಡಿಗಳು ಸತಿಪತಿಗಳಾಗಿದ್ದು, ಎಲ್ಲ ಸೇರಿ ಇದುವರೆಗೆ ಒಟ್ಟು 3,656 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ.
ಸುತ್ತೂರು ಜಾತ್ರೆ ಕುರಿತು ಮಾಹಿತಿ : ದಕ್ಷಿಣ ಕರ್ನಾಟಕದ ಹೆಸರಾಂತ ಸುತ್ತೂರು ಜಾತ್ರೆ ಜ. 26 ರಿಂದ ಜ.31ರ ವರೆಗೆ ನಡೆಯಲಿದೆ. ವೈವಿಧ್ಯತೆಗಳಿಂದ ಕೂಡಿರುವ ಸುತ್ತೂರು ಜಾತ್ರೆ ಗ್ರಾಮೀಣ ಸೊಗಡಿನ ಅದ್ಧೂರಿ ಹಾಗೂ ಸಂಭ್ರಮದ ಜಾತ್ರೆಯಾಗಿದೆ.
ಆರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಕೇವಲ ಧಾರ್ಮಿಕ ಅಚರಣೆ ಅಷ್ಟೇ ಅಲ್ಲದೇ, ಆರೋಗ್ಯ ಮೇಳ, ಕೃಷಿ ಮೇಳ, ಉತ್ಪಾದಕ ಮತ್ತು ಗ್ರಾಹಕ ಮೇಳ, ಕ್ರೀಡಾ ಮೇಳ, ಸಾಂಸ್ಕೃತಿಕ ಮೇಳ, ಶೈಕ್ಷಣಿಕ ಮೇಳ, ಸಾಹಿತ್ಯ ಮತ್ತು ಪುಸ್ತಕ ಮೇಳ, ಸರ್ವಧರ್ಮ ಸಮ್ಮಿಲನ, ಸಾಮೂಹಿಕ ವಿವಾಹ, ವಿವಿಧ ವಸ್ತು ಪ್ರದರ್ಶನಗಳು, ದನಗಳ ಜಾತ್ರೆ, ಜಾನಪದ ಜಾತ್ರೆ, ಕುಸ್ತಿ ಪಂದ್ಯಾವಳಿ, ನಗೆ ಉತ್ಸವ, ನಾಟಕ, ನೃತ್ಯ, ವಚನ ಗಾಯನ, ಸುಗಮ ಸಂಗೀತದಂತಹ ಎಲ್ಲ ರೀತಿಯ ಕಾರ್ಯಕ್ರಮಗಳು ಇಲ್ಲಿ ಜರುಗುವುದು ವಿಶೇಷ.
ಇದನ್ನೂ ಓದಿ : ಸುತ್ತೂರು ಜಾತ್ರೆಯ ಮಹಾ ದಾಸೋಹಕ್ಕೆ ಶ್ರೀಗಳಿಂದ ಚಾಲನೆ: ಒಂದು ವಾರ ಆರದ ಒಲೆ ಬೆಂಕಿ - SUTTUR MAHA DASOHA