ವಾಷಿಂಗ್ಟನ್ ಡಿಸಿ, ಅಮೆರಿಕ: ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಂತಿಮ ಸುತ್ತಿನ ಮತದಾನದ ದಿನ ಸಮೀಪಿಸುತ್ತಿದ್ದಂತೆ ಇಬ್ಬರು ಅಭ್ಯರ್ಥಿಗಳ ಗೆಲುವಿನ ಸಾಧ್ಯತೆಯ ಬಗ್ಗೆ ಹೊಸ ಸಮೀಕ್ಷೆಯೊಂದು ಹೊರಬಿದ್ದಿದೆ. ನಿರ್ಣಾಯಕ ಚುನಾವಣಾ ಕಣದ ರಾಜ್ಯಗಳಾದ ಅರಿಜೋನಾ ಹಾಗೂ ನೆವಾಡಾದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇಬ್ಬರ ನಡುವೆ ತೀರಾ ಹಣಾಹಣಿಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಎಸ್ಎಸ್ಆರ್ಎಸ್ ನಡೆಸಿದ ಸಿಎನ್ಎನ್ ಸಮೀಕ್ಷೆಯ ಪ್ರಕಾರ, ಅರಿಜೋನಾದಲ್ಲಿ 48 ಶೇ ಸಂಭಾವ್ಯ ಮತದಾರರು ಹ್ಯಾರಿಸ್ ಅವರಿಗೆ ಬೆಂಬಲ ಸೂಚಿಸಿದರೆ, ಟ್ರಂಪ್ಗೆ 47 ಶೇ ಬೆಂಬಲ ಸೂಚಿಸಿದ್ದಾರೆ. ನೆವಾಡಾದಲ್ಲಿ, ಹ್ಯಾರಿಸ್ ಅವರಿಗೆ ಶೇ 47 ಆದರೆ ಟ್ರಂಪ್ ಅವರು ಶೇ 48 ಬೆಂಬಲ ಪಡೆದು ಸ್ವಲ್ಪ ಮುನ್ನಡೆ ಸಾಧಿಸಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಎರಡು ರಾಜ್ಯಗಳಲ್ಲಿ ಇಬ್ಬರಿಗೂ ದೊರೆತಿರುವ ಬೆಂಬಲವನ್ನು ಗಮನಿಸಿದರೆ ಯಾವುದೇ ಸ್ಪಷ್ಟ ಮುಂಚೂಣಿಯನ್ನು ಸೂಚಿಸಿಲ್ಲ.
ಅರಿಝೋನಾದಲ್ಲಿ 781 ನೋಂದಾಯಿತ ಮತದಾರರಲ್ಲಿ ಮತ್ತು ನೆವಾಡಾದಲ್ಲಿ 683 ನೋಂದಾಯಿತ ಮತದಾರರಲ್ಲಿ ಸಮೀಕ್ಷೆ ನಡೆಸಲಾಯಿತು. ಅಕ್ಟೋಬರ್ 21 ರಿಂದ ಅಕ್ಟೋಬರ್ 26 ರ ನಡುವೆ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ವೇಳೆ, ಯಾವ ಅಭ್ಯರ್ಥಿ ಪ್ರಮುಖ ಸಮಸ್ಯೆಗಳನ್ನು ಉತ್ತಮವಾಗಿ ನಿಭಾಯಿಸುತ್ತಾರೆ ಎಂಬುದರ ಕುರಿತು ಮತದಾರರು ಹೆಚ್ಚು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಯಾವ ಅಭ್ಯರ್ಥಿ ತಮ್ಮ ಮತದಾರರ ಬಗ್ಗೆ ಕಾಳಜಿ ವಹಿಸುತ್ತಾರೆ, ದೇಶದ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾರೆ, ವೈಯಕ್ತಿಕ ಹಿತಾಸಕ್ತಿಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಗುಣಲಕ್ಷಣಗಳ ಮೇಲೆ ಯಾವುದೇ ಅಭ್ಯರ್ಥಿ ಮತದಾರರ ಮೇಲೆ ಪ್ರಭಾವ ಬೀರಿಲ್ಲ.
ನೆವಾಡಾದಲ್ಲಿ ಕಳೆದ ಆಗಸ್ಟ್ ಅಂತ್ಯದಿಂದಲೂ ಇದೇ ರೀತಿ ಮುಂದುವರಿದಿದೆ. ಆದರೆ, ಅರಿಜೋನಾದಲ್ಲಿ ಇತ್ತೀಚಿನ ಬದಲಾವಣೆಗಳು ಹ್ಯಾರಿಸ್ ಅವರತ್ತ ಮತದಾರರು ವಾಲುತ್ತಿರುವಂತೆ ಸೂಚಿಸುತ್ತಿವೆ. ವಿಶೇಷವಾಗಿ ಮಹಿಳೆಯರು ಲ್ಯಾಟಿನೋ ಮತದಾರರು, ಕಿರಿಯ ಮತದಾರರು 16 ಪಾಯಿಂಟ್ ಅಂತರದಿಂದ ಹ್ಯಾರಿಸ್ ಅವರನ್ನು ಬೆಂಬಲಿಸಿದರೆ, ಪುರುಷರು 14 ಪಾಯಿಂಟ್ಗಳಿಂದ ಟ್ರಂಪ್ ಅವರ ಪರವಾಗಿದ್ದಾರೆ.