ಕರ್ನಾಟಕ

karnataka

ETV Bharat / international

ಸಂಘರ್ಷ ಕೊನೆಗೊಳಿಸುವಂತೆ ಇಸ್ರೇಲ್, ಹಿಜ್ಬುಲ್ಲಾಗೆ ವಿಶ್ವರಾಷ್ಟ್ರಗಳ ಒತ್ತಾಯ - Israel Hezbollah War - ISRAEL HEZBOLLAH WAR

ಇಸ್ರೇಲ್ ಮತ್ತು ಹಿಜ್ಬುಲ್ಲಾ 21 ದಿನಗಳ ಕಾಲ ಸಂಘರ್ಷ ನಿಲ್ಲಿಸಬೇಕೆಂದು ಅಮೆರಿಕ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಒತ್ತಾಯಿಸಿವೆ.

ಲೆಬನಾನ್ ಮೇಲೆ ನಡೆದ ದಾಳಿಯ ದೃಶ್ಯ
ಲೆಬನಾನ್ ಮೇಲೆ ನಡೆದ ದಾಳಿಯ ದೃಶ್ಯ (IANS)

By ETV Bharat Karnataka Team

Published : Sep 26, 2024, 12:44 PM IST

ನ್ಯೂಯಾರ್ಕ್: ಕದನವಿರಾಮ ಮಾತುಕತೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ಎರಡೂ ಬಣಗಳು ತಮ್ಮ ಮಧ್ಯದ ಸಂಘರ್ಷವನ್ನು 21 ದಿನಗಳ ಕಾಲ ನಿಲ್ಲಿಸಬೇಕೆಂದು ಅಮೆರಿಕ, ಫ್ರಾನ್ಸ್ ಮತ್ತು ಇತರ ಮಿತ್ರರಾಷ್ಟ್ರಗಳು ಜಂಟಿಯಾಗಿ ಕರೆ ನೀಡಿವೆ. ಇತ್ತೀಚಿನ ದಿನಗಳಲ್ಲಿ ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳಲ್ಲಿ ಈಗಾಗಲೇ 600 ಜನ ಸಾವಿಗೀಡಾಗಿದ್ದು, ಸಾವಿರಾರು ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಈ ಕರೆ ಮಹತ್ವ ಪಡೆದುಕೊಂಡಿದೆ.

ಯುಎಸ್, ಆಸ್ಟ್ರೇಲಿಯಾ, ಕೆನಡಾ, ಯುರೋಪಿಯನ್ ಯೂನಿಯನ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಯುಕೆ ಮತ್ತು ಕತಾರ್​ ದೇಶಗಳು ಬುಧವಾರ ನ್ಯೂಯಾರ್ಕ್​ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿ ಸಭೆಯ ಸಂದರ್ಭದಲ್ಲಿ, ಸಭೆಯ ಹೊರಗೆ ಈ ಮನವಿ ಮಾಡಿವೆ.

"ಅಕ್ಟೋಬರ್ 8, 2023ರಿಂದ ಲೆಬನಾನ್ ಮತ್ತು ಇಸ್ರೇಲ್ ನಡುವಿನ ಪರಿಸ್ಥಿತಿ ಉದ್ವಿಗ್ನವಾಗಿದೆ. ಇದು ಪ್ರಾದೇಶಿಕವಾಗಿ ವಿಶಾಲ ವ್ಯಾಪ್ತಿಯಲ್ಲಿ ಯುದ್ಧದ ಸ್ಥಿತಿಯನ್ನು ನಿರ್ಮಾಣ ಮಾಡುವಂತಿದ್ದು, ಬಹುದೊಡ್ಡ ಅಪಾಯ ಎದುರಾಗುವ ಸಂಭವವಿದೆ. ಇಂಥ ಯುದ್ಧವು ಇಸ್ರೇಲ್ ಅಥವಾ ಲೆಬನಾನ್ ಸೇರಿದಂತೆ ಯಾರಿಗೂ ಹಿತಕರವಲ್ಲ" ಎಂದು ದೇಶಗಳ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ನಿರಂತರ ಸಂಘರ್ಷದ ನಡುವೆ ರಾಜತಾಂತ್ರಿಕ ಮಾತುಕತೆಗಳು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಮಿತ್ರರಾಷ್ಟ್ರಗಳು ಒತ್ತಿ ಹೇಳಿವೆ.

"ಗಡಿಯ ಎರಡೂ ಬದಿಗಳಲ್ಲಿನ ನಾಗರಿಕರಿಗೆ ಸುರಕ್ಷಿತ ಸ್ಥಳಕ್ಕೆ ಮರಳಲು ಅನುವು ಮಾಡಿಕೊಡುವ ರಾಜತಾಂತ್ರಿಕ ಒಪ್ಪಂದವನ್ನು ಜಾರಿಗೊಳಿಸುವ ಸಮಯವಿದು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

2006 ರ ಇಸ್ರೇಲ್-ಹಿಜ್ಬುಲ್ಲಾ ಯುದ್ಧವನ್ನು ಕೊನೆಗೊಳಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ (ಯುಎನ್ಎಸ್​ಸಿಆರ್) 1701 ಮತ್ತು ಗಾಜಾದಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯುಎನ್ಎಸ್ ಸಿಆರ್ 2735 ಅನುಷ್ಠಾನಕ್ಕೆ ಅನುಗುಣವಾಗಿ ರಾಜತಾಂತ್ರಿಕ ಮಾತುಕತೆಗಳಿಗೆ ಅವಕಾಶ ಒದಗಿಸಲು 21 ದಿನಗಳ ಕದನ ವಿರಾಮಕ್ಕೆ ಜಂಟಿ ಹೇಳಿಕೆ ಒತ್ತಾಯಿಸಿದೆ.

"ಇಸ್ರೇಲ್ ಮತ್ತು ಲೆಬನಾನ್ ಸರ್ಕಾರಗಳು ಸೇರಿದಂತೆ ಎಲ್ಲಾ ಸಂಬಂಧಪಟ್ಟ ಎಲ್ಲಾ ಬಣಗಳು ತಕ್ಷಣವೇ ಕದನ ವಿರಾಮ ಜಾರಿ ಮಾಡಲು ಮತ್ತು ಬಿಕ್ಕಟ್ಟನ್ನು ಪರಿಹರಿಸಲು ರಾಜತಾಂತ್ರಿಕತೆಗೆ ಅವಕಾಶ ನೀಡುವಂತೆ ನಾವು ಕರೆ ನೀಡುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಇಸ್ರೇಲ್, ಲೆಬನಾನ್ ಅಥವಾ ಹಿಜ್ಬುಲ್ಲಾ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ ಕದನ ವಿರಾಮ ಕರೆಯ ಬಗ್ಗೆ ಎಲ್ಲ ಪಕ್ಷಗಳಿಗೆ ತಿಳಿದಿದೆ ಎಂದು ಹಿರಿಯ ಯುಎಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ: ಭಾರತ, ಚೀನಾ ಮಧ್ಯೆ ಸಮತೋಲನವೇ ಶ್ರೀಲಂಕಾದ ಹೊಸ ಅಧ್ಯಕ್ಷರಿಗೆ ದೊಡ್ಡ ಸವಾಲು: ವಿಶ್ಲೇಷಣೆ - Sri Lanka Political Situation

ABOUT THE AUTHOR

...view details