ವಿಶ್ವಸಂಸ್ಥೆ: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಗಲಭೆಯ ಸಂದರ್ಭದಲ್ಲಿ ಗಲಭೆಯ ನಿಯಂತ್ರಣಕ್ಕಾಗಿ ಸರ್ಕಾರಿ ಅಧಿಕಾರಿಗಳು ವಿಶ್ವಸಂಸ್ಥೆಯ ಚಿಹ್ನೆ ಹಾಗೂ ಹೆಸರುಗಳನ್ನು ಹೊಂದಿದ್ದ ವಾಹನಗಳನ್ನು ನಿಯೋಜಿಸಿದ್ದರು ಎಂಬ ವರದಿಗಳ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.
"ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ನಡೆದ ಗಲಭೆಗಳ ಸಮಯದಲ್ಲಿ ಯುಎನ್ ಚಿಹ್ನೆಯ ವಾಹನಗಳನ್ನು ಬಳಸಿರುವುದನ್ನು ಆ ದೇಶದಲ್ಲಿನ ಯುಎನ್ ಸಿಬ್ಬಂದಿ ನೋಡಿದ್ದು, ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ" ಎಂದು ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಸೋಮವಾರ ಹೇಳಿದ್ದಾರೆ.
ಯುಎನ್ ಶಾಂತಿಪಾಲನಾ ಕಾರ್ಯಾಚರಣೆ ಅಥವಾ ಯುಎನ್ ರಾಜಕೀಯ ಕಾರ್ಯಾಚರಣೆಯ ಭಾಗವಾಗಿ ಕಡ್ಡಾಯ ಕೆಲಸಗಳನ್ನು ನಿರ್ವಹಿಸುವಾಗ ಮಾತ್ರ ಯುಎನ್ ಪಡೆಗಳು ಮತ್ತು ಪೊಲೀಸ್ ಕೊಡುಗೆ ನೀಡುವ ದೇಶಗಳು ತಮ್ಮ ಉಪಕರಣಗಳ ಮೇಲೆ ಯುಎನ್ ಚಿಹ್ನೆಯನ್ನು ಬಳಸಲು ಅವಕಾಶವಿದೆ ಎಂದು ಅವರು ಹೇಳಿದರು.
"ಈ ನಿಟ್ಟಿನಲ್ಲಿ ನಮ್ಮ ಗಂಭೀರ ಕಾಳಜಿಯನ್ನು ನಮ್ಮ ಸಹೋದ್ಯೋಗಿಗಳು ಬಾಂಗ್ಲಾದೇಶದ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದ್ದಾರೆ" ಎಂದು ಅವರು ತಿಳಿಸಿದರು. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ 5,859 ಸೈನಿಕರನ್ನು ಹೊಂದಿರುವ ಬಾಂಗ್ಲಾದೇಶವು ವಿಶ್ವ ಸಂಸ್ಥೆಯ ಕಾರ್ಯಾಚರಣೆಗಳಲ್ಲಿ ತನ್ನ ಸಿಬ್ಬಂದಿಯನ್ನು ನಿಯೋಜಿಸಲಾದ ಇತರ ದೇಶಗಳಲ್ಲಿ ಬಳಸಲು ಯುಎನ್ ಹೆಸರು ಹಾಗೂ ಚಿಹ್ನೆಗಳನ್ನು ಹೊಂದಿರುವ ವಾಹನಗಳು ಮತ್ತು ಸಲಕರಣೆಗಳನ್ನು ಬಳಸುವ ಅನುಮತಿಯನ್ನು ಹೊಂದಿದೆ. ಪ್ರಸ್ತುತ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಬಾಂಗ್ಲಾದೇಶದ ಕೊಡುಗೆಯು ಮೂರನೇ ಅತಿದೊಡ್ಡ ಕೊಡುಗೆಯಾಗಿದೆ.
ಇತ್ತೀಚೆಗೆ ಮೀಸಲಾತಿ ಕಾಯ್ದೆ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬ ವರದಿಗಳ ಬಗ್ಗೆ ಕೂಡ ಗುಟೆರೆಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಡುಜಾರಿಕ್ ಹೇಳಿದರು.
ಪಾಕಿಸ್ತಾನಿ ಪಡೆಗಳ ವಿರುದ್ಧ ಹೋರಾಡಿದ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಕುಟುಂಬ ಸದಸ್ಯರಿಗೆ ಶೇಕಡಾ 30 ರಷ್ಟು ಸರ್ಕಾರಿ ಉದ್ಯೋಗ ಮೀಸಲಾತಿ ನೀಡುವ ಕಾಯ್ದೆಯನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ನಂತರ ಸುಪ್ರೀಂ ಕೋರ್ಟ್ ಈ ಮೀಸಲಾತಿ ಪ್ರಮಾಣವನ್ನು ಶೇ 5 ಕ್ಕೆ ಇಳಿಕೆ ಮಾಡಿದೆ.
ಇದನ್ನೂ ಓದಿ : ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ನಿಂದ ಒಂದೇ ವಾರದಲ್ಲಿ 63 ಬಾರಿ ದಾಳಿ: ಹಮಾಸ್ ಆರೋಪ - Israel Gaza War