ಪೇಶಾವರ(ಪಾಕಿಸ್ತಾನ): ಇಲ್ಲಿನ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆ ವೇಳೆ ಪಾಕಿಸ್ತಾನಿ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿದ್ದು, 13 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪಾಕಿಸ್ತಾನಿ ಮಿಲಿಟರಿಯ ಮಾಧ್ಯಮ ವಿಭಾಗ ತಿಳಿಸಿದೆ.
ಭದ್ರತಾ ಪಡೆಯಿಂದ ಎಲ್ಲ ಕಾರ್ಯಾಚರಣೆಗಳು ಗುರುವಾರ ಮುಂಜಾನೆ ನಡೆದಿವೆ ಎಂದು ಮಾಧ್ಯಮ ವರದಿ ಹಂಚಿಕೊಂಡಿದೆ. ಮೊದಲ ಕಾರ್ಯಾಚರಣೆಯಲ್ಲಿ, ಬನ್ನು ಜಿಲ್ಲೆಯ ಜಾನಿ ಖೇಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಇಬ್ಬರು ಭಯೋತ್ಪಾದಕರನ್ನು ಕೊಂದಿ ಹಾಕಿದ್ದಾರೆ. ಉತ್ತರ ವಜಿರಿಸ್ತಾನ್‌ನಲ್ಲಿ ನಡೆದ ಎರಡನೇ ಕಾರ್ಯಾಚರಣೆಯಲ್ಲಿ ಐವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಇಲ್ಲಿ ಎಂಟು ಭಯೋತ್ಪಾದಕರು ಗಾಯಗೊಂಡಿದ್ದಾರೆ. ಆದರೆ ಈ ಗುಂಡಿನ ಕಾಳಗದಲ್ಲಿ ಪಾಕಿಸ್ತಾನಿ ಯೋಧ ಮೇಜರ್ ಮುಹಮ್ಮದ್ ಅವೈಸ್ (31) ಮೃತಪಟ್ಟಿದ್ದಾರೆ .
ಮೂರನೇ ಕಾರ್ಯಾಚರಣೆ ದಕ್ಷಿಣ ವಜಿರಿಸ್ತಾನ್‌ನಲ್ಲಿ ನಡೆದಿದೆ. ಸೈನಿಕರು ಆರು ಮಂದಿ ಉಗ್ರರನ್ನು ಕೊಂದರು ಮತ್ತು ಇಲ್ಲಿ ಮತ್ತೆ ಎಂಟು ಮಂದಿ ಭಯೋತ್ಪಾದಕರು ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಭದ್ರತಾ ಸೇನೆ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ತನ್ನ ಬದ್ಧತೆಯನ್ನು ಮತ್ತೆ ಒತ್ತಿ ಹೇಳಿದೆ. " ಕಾರ್ಯಾಚರಣೆ ನಡೆಸಿರುವ ಈ ಪ್ರದೇಶದಲ್ಲಿ ಕಂಡು ಬರುವ ಯಾವುದೇ ಉಗ್ರರನ್ನು ತೊಡೆದುಹಾಕಲು ನಮ್ಮ ಕಾರ್ಯಾಚರಣೆಗಳನ್ನು ಮುಂದುವರೆಸಲಾಗುತ್ತದೆ. ನಮ್ಮ ಕೆಚ್ಚೆದೆಯ ಸೈನಿಕರ ಇಂತಹ ತ್ಯಾಗಗಳು ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತವೆ" ಎಂದು ಗುಡುಗಿದೆ.
ಆಂತರಿಕ ಸಚಿವಾಲಯದ ಇತ್ತೀಚಿನ ಅಂಕಿ - ಅಂಶಗಳ ಪ್ರಕಾರ, ಕಳೆದ 10 ತಿಂಗಳಲ್ಲಿ ವರದಿಯಾದ 1,566 ಭಯೋತ್ಪಾದನಾ ಘಟನೆಗಳಲ್ಲಿ 948 ಘಟನೆಗಳು ಖೈಬರ್ ಪಖ್ತುಂಖ್ವಾದಲ್ಲಿ ನಡೆದಿವೆ. ಇದರ ಪರಿಣಾಮ 583 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ಕಝಾಕಿಸ್ತಾನದಲ್ಲಿ ಅಜರ್ಬೈಜಾನ್ ವಿಮಾನ ಪತನ; ಪವಾಡದಂತೆ 25 ಮಂದಿ ಪಾರು, 40ಕ್ಕೂ ಹೆಚ್ಚು ಸಾವು ಶಂಕೆ- ಭಯಾನಕ ವಿಡಿಯೋ