ಕರ್ನಾಟಕ

karnataka

ETV Bharat / international

ಬಾಂಗ್ಲಾ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆ ನೇತೃತ್ವದಲ್ಲಿ ತನಿಖೆಯಾಗಲಿ: ಯುನೈಟೆಡ್​ ಕಿಂಗ್ಡಮ್​​​​ ಒತ್ತಾಯ - probe into Bangladesh crisis - PROBE INTO BANGLADESH CRISIS

ಬಾಂಗ್ಲಾದೇಶದಲ್ಲಿನ ಗಲಭೆ ಹಾಗೂ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಯುಕೆ ಆಗ್ರಹಿಸಿದೆ.

ಯುಕೆ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ, ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ
ಯುಕೆ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ, ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (IANS)

By ETV Bharat Karnataka Team

Published : Aug 6, 2024, 12:40 PM IST

ಲಂಡನ್, ಬ್ರಿಟನ್​: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಕಾರಣವಾದ ಹಿಂಸಾತ್ಮಕ ಗಲಭೆಗಳ ಬಗ್ಗೆ ವಿಶ್ವಸಂಸ್ಥೆಯ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಯುಕೆ ಸರ್ಕಾರ ಒತ್ತಾಯಿಸಿದೆ.

ದಕ್ಷಿಣ ಏಷ್ಯಾದ ದೇಶ ಬಾಂಗ್ಲಾದೇಶದಲ್ಲಿ ಶಾಂತಿಯುತವಾದ ಪ್ರಜಾಪ್ರಭುತ್ವ ಸರ್ಕಾರದ ಸ್ಥಾಪನೆಯಾಗಲಿ ಎಂದು ಯುಕೆ ಬಯಸುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಹೇಳಿದ್ದಾರೆ. ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ಸೋಮವಾರ ಬಾಂಗ್ಲಾದೇಶದಿಂದ ಪಲಾಯನ ಮಾಡಿ, ಸದ್ಯ ಭಾರತದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ. ಆದಾಗ್ಯೂ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಸೀನಾ ಅವರು ಆ ದೇಶದಲ್ಲಿ ಆಶ್ರಯ ಕೋರಿದ್ದಾರಾ ಎಂಬ ಬಗ್ಗೆ ಯುಕೆ ಯಾವುದೇ ಉಲ್ಲೇಖ ಮಾಡಿಲ್ಲ.

"ಬಾಂಗ್ಲಾದೇಶದಲ್ಲಿ ಕಳೆದ ಎರಡು ವಾರಗಳಲ್ಲಿ ದೊಡ್ಡ ಮಟ್ಟದ ಹಿಂಸಾಚಾರ ನಡೆದಿದ್ದು, ಸಾಕಷ್ಟು ಜನ ಮೃತಪಟ್ಟಿದ್ದಾರೆ. ಮಧ್ಯಂತರ ಸರ್ಕಾರದ ಅಡಿಯಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಎಲ್ಲ ಕಡೆಯವರು ಒಟ್ಟಾಗಿ ಕೆಲಸ ಮಾಡಬೇಕು" ಎಂದು ಡೇವಿಡ್ ಲ್ಯಾಮಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಕಳೆದ ಕೆಲ ವಾರಗಳಲ್ಲಿ ನಡೆದ ಘಟನೆಗಳ ಬಗ್ಗೆ ವಿಶ್ವಸಂಸ್ಥೆ ನೇತೃತ್ವದಲ್ಲಿ ಸಂಪೂರ್ಣ ಮತ್ತು ಸ್ವತಂತ್ರ ತನಿಖೆ ನಡೆಯುವುದು ಬಾಂಗ್ಲಾದೇಶದ ಜನರ ಹಕ್ಕಾಗಿದೆ. ಯುಕೆ ಮತ್ತು ಬಾಂಗ್ಲಾದೇಶಗಳ ಜನತೆ ಪರಸ್ಪರ ನಿಕಟವಾದ ಸಂಬಂಧ ಹೊಂದಿದ್ದಾರೆ ಮತ್ತು ಎರಡೂ ದೇಶಗಳು ಕಾಮನ್​ವೆಲ್ತ್​​ ಮೌಲ್ಯಗಳನ್ನು ಹಂಚಿಕೊಂಡಿವೆ" ಎಂದು ಅವರು ಹೇಳಿದರು.

ಹಸೀನಾ ಇಂಗ್ಲೆಂಡ್​​​ನ ಆಶ್ರಯ ಕೋರಿರುವ ಮಧ್ಯೆ ಭಾರತವು ಅವರಿಗೆ ಅಗತ್ಯವಾದ ಎಲ್ಲಾ ಪ್ರಯಾಣದ ಅನುಕೂಲತೆಗಳನ್ನು ಮಾಡಿಕೊಡಲಿದೆ. ಅವರಿಗೆ ರಾಜತಾಂತ್ರಿಕ ಆಶ್ರಯ ನೀಡಲು ಯುಕೆಯಿಂದ ಒಪ್ಪಿಗೆ ಸಿಗುವವರೆಗೂ ಭಾರತ ತಾತ್ಕಾಲಿಕವಾಗಿ ತನ್ನ ದೇಶದಲ್ಲಿ ಇರಲು ಅನುಮತಿ ನೀಡಿದೆ. ಢಾಕಾದಲ್ಲಿರುವ ಪ್ರಧಾನಿಯವರ ಅಧಿಕೃತ ನಿವಾಸ 'ಗಣಭಬನ್' ಮೇಲೆ ಸಾವಿರಾರು ಪ್ರತಿಭಟನಾಕಾರರು ದಾಳಿ ನಡೆಸಿ ಧ್ವಂಸಗೊಳಿಸುತ್ತಿದ್ದಂತೆ, ಹಸೀನಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕೆಲವೇ ಗಂಟೆಗಳ ನಂತರ ಸೋಮವಾರ ಭಾರತದ ಗಾಜಿಯಾಬಾದ್​ನ ಹಿಂಡನ್ ವಾಯುನೆಲೆಗೆ ಬಂದಿಳಿದರು.

ಬಾಂಗ್ಲಾದೇಶದಲ್ಲಿ ಭಾನುವಾರ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 1971 ರಲ್ಲಿ ನಡೆದ ರಕ್ತಸಿಕ್ತ ಅಂತರ್ಯುದ್ಧದಲ್ಲಿ ಬಾಂಗ್ಲಾದೇಶವು ಪಾಕಿಸ್ತಾನದಿಂದ ಪ್ರತ್ಯೇಕವಾಗಿ ಸ್ವತಂತ್ರ ರಾಷ್ಟ್ರವಾಗಿತ್ತು. ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 30 ರಷ್ಟು ಮೀಸಲಾತಿ ನೀಡುವುದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು.

ಇದನ್ನೂ ಓದಿ :ಬಾಂಗ್ಲಾ ಬಿಕ್ಕಟ್ಟು: ಬ್ರಿಟನ್​​ನ​ ಆಶ್ರಯ ಸಿಗುವವರೆಗೆ ಭಾರತದಲ್ಲಿ ಶೇಖ್​ ಹಸೀನಾ? - Bangladesh PM Sheikh Hasina

ABOUT THE AUTHOR

...view details