ಲಂಡನ್:14 ವರ್ಷಗಳ ಕಾಲ ಬ್ರಿಟನ್‌ನಲ್ಲಿ ಆಡಳಿತ ನಡೆಸಿದ ಕನ್ಸರ್ವೇಟಿವ್ ಪಕ್ಷ ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ ಭಾರೀ ಸೋಲು ಕಂಡಿದೆ. ಪ್ರಚಂಡ ಜಯಭೇರಿ ಬಾರಿಸಿರುವ ಲೇಬರ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಒಲಿದುಬಂದಿದೆ.
ಶುಕ್ರವಾರ ಬೆಳಿಗ್ಗೆ 5 ಗಂಟೆಯ ವೇಳೆಗೆ, 650 ಸ್ಥಾನಗಳಲ್ಲಿ 326 ಸ್ಥಾನಗಳನ್ನು ಲೇಬರ್ ಪಕ್ಷ ಗೆದ್ದಿದೆ. ನಾಯಕ ಕೀರ್ ಸ್ಟಾರ್ಮರ್ ದೇಶದ ಮುಂದಿನ ಪ್ರಧಾನಿಯಾಗಲಿದ್ದಾರೆ.
ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಅವರು ರಿಚ್ಮಂಡ್ ಮತ್ತು ನಾರ್ತಲರ್ಟನ್‌ನಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ''ಚುನಾವಣೆಯಲ್ಲಿ ಲೇಬರ್ ಪಾರ್ಟಿ ಜಯಗಳಿಸಿದ್ದು, ಕೀರ್ ಸ್ಟಾರ್ಮರ್‌ಗೆ ಅಭಿನಂದನೆಗಳು'' ಎಂದು ಅವರು ಹೇಳಿದ್ದಾರೆ.
''ಫಲಿತಾಂಶದ ಬಗ್ಗೆ ವಿಚಾರ ಮಂಥನ ಮಾಡುತ್ತೇನೆ. ಪ್ರಧಾನಿ ಹುದ್ದೆಯಲ್ಲಿದ್ದಾಗ ನನ್ನ ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನನ್ನ ಸಾಮರ್ಥ್ಯವನ್ನೆಲ್ಲ ಧಾರೆಯೆರೆದು ಸರ್ಕಾರವನ್ನು ಮುನ್ನಡೆಸಿದ್ದೇನೆ'' ಎಂದು ಸುನಕ್ ತಿಳಿಸಿದರು.
ಎಕ್ಸಿಟ್ ಪೋಲ್ಗಳು, ಕೀರ್ ಸ್ಟಾರ್ಮರ್ ಬ್ರಿಟನ್‌ನ ಮುಂದಿನ ಪ್ರಧಾನಿ ಎಂದು ಭವಿಷ್ಯ ನುಡಿದಿದ್ದವು. ಲೇಬರ್ ಪಾರ್ಟಿ 410 ಸೀಟುಗಳನ್ನು ಗೆದ್ದರೆ, ಕನ್ಸರ್ವೇಟಿವ್ ಪಕ್ಷಕ್ಕೆ ಕೇವಲ 131 ಸ್ಥಾನಗಳು ಸಿಗಲಿವೆ ಎಂದು ಸಮೀಕ್ಷೆಗಳು ತಿಳಿಸಿದ್ದವು. ಬ್ರಿಟನ್‌ನಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಲು 326 ಸ್ಥಾನಗಳನ್ನು ಗೆಲ್ಲಬೇಕಿದೆ. ಕನ್ಸರ್ವೇಟಿವ್ ನಾಯಕ ಮತ್ತು ಭಾರತೀಯ ಮೂಲದ ರಿಷಿ ಸುನಕ್ ಅವರ ರಾಜಕೀಯ ಭವಿಷ್ಯ ನಿರ್ಧರಿಸುವ ಸಾರ್ವತ್ರಿಕ ಚುನಾವಣೆಯೂ ಇದಾಗಿತ್ತು.
ನಿಮ್ಮ ಮತದಿಂದ ಬದಲಾವಣೆ ಪ್ರಾರಂಭ-ಸ್ಟಾರ್ಮರ್:ಕೀರ್ ಸ್ಟಾರ್ಮರ್ ಅವರು ಲೇಬರ್ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ. ಪಕ್ಷಕ್ಕೆ ಸಿಕ್ಕಿರುವ ಭಾರೀ ಬೆಂಬಲವನ್ನು ಗಮನಿಸಿದ ಸ್ಟಾರ್ಮರ್ ಮತದಾರರಿಗೆ ಧನ್ಯವಾದ ಹೇಳಿದ್ದಾರೆ. ನಮಗೆ ಮತ ಹಾಕದವರ ಪರವಾಗಿಯೂ ಕೆಲಸ ಮಾಡುತ್ತೇವೆ ಎಂದಿದ್ದಾರೆ. ನಾನು ನಿಮಗಾಗಿ ಮಾತನಾಡುತ್ತೇನೆ, ಪ್ರತಿದಿನ ನಿಮಗಾಗಿ ಹೋರಾಡುತ್ತೇನೆ, ಬದಲಾವಣೆಗೆ ಸಿದ್ಧ. ನಿಮ್ಮ ಮತದಿಂದ ಈಗ ಬದಲಾವಣೆ ಪ್ರಾರಂಭವಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ.
ಸಮೀಕ್ಷೆಗಳ ಫಲಿತಾಂಶದ ನಂತರ ರಿಷಿ ಸುನಕ್ ಪಕ್ಷದ ಅಭ್ಯರ್ಥಿಗಳು ಹಾಗು ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ. "ಲೇಬರ್ ಪಾರ್ಟಿ ಅಧಿಕಾರಕ್ಕೆ ಬಂದರೆ, ಅವರು ಹೆಚ್ಚಿನ ತೆರಿಗೆ ವಿಧಿಸುತ್ತಾರೆ" ಎಂದು ಸುನಕ್ ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದರು. ಮತ್ತೊಂದೆಡೆ, ಪ್ರಧಾನ ಮಂತ್ರಿಯನ್ನು ಬದಲಾವಣೆ ಮಾಡುವ ಮೂಲಕ ಅಸ್ಥಿರ ಸರ್ಕಾರವನ್ನು ಉರುಳಿಸುವಂತೆ ಸ್ಟಾರ್ಮರ್ ಮತದಾರರಿಗೆ ಮನವಿ ಮಾಡಿದ್ದರು.
ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನಾದ್ಯಂತ ಒಟ್ಟು 650 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಎರಡು ಪ್ರಬಲ ಪಕ್ಷಗಳ ಜೊತೆಗೆ ಲಿಬರಲ್ ಡೆಮಾಕ್ರಾಟ್ಸ್, ಗ್ರೀನ್ ಪಾರ್ಟಿ, ಸ್ಕಾಟಿಷ್ ನ್ಯಾಷನಲ್ ಪಾರ್ಟಿ, ಎಸ್‌ಡಿಎಲ್‌ಪಿ, ಡೆಮಾಕ್ರಟಿಕ್ ಯೂನಿಯನಿಸ್ಟ್ ಪಾರ್ಟಿ, ಸಿನ್ ಫೀನ್, ಪ್ಲೈಡ್ ಕ್ಯಾಮ್ರಿ, ವರ್ಕರ್ಸ್ ಪಾರ್ಟಿ, ಆ್ಯಂಟಿ-ಇಮಿಗ್ರೇಷನ್ ರಿಫಾರ್ಮ್ ಪಾರ್ಟಿ ಸೇರಿದಂತೆ ಹಲವು ಸ್ವತಂತ್ರ ಅಭ್ಯರ್ಥಿಗಳು ಈ ಬಾರಿಯ ಚುನಾವಣಾ ಅಖಾಡದಲ್ಲಿದ್ದಾರೆ.
ಬ್ರಿಟನ್ ಕಾಲಮಾನದ ಪ್ರಕಾರ ಗುರುವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ, ರಾತ್ರಿ 10 ಗಂಟೆಯವರೆಗೂ ಮುಂದುವರೆಯಿತು. ಸುಮಾರು 4.6 ಕೋಟಿ ಮತದಾರರಿದ್ದು, 2019ಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಮತದಾನವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಕಳೆದ ಬಾರಿ ಶೇ.67ರಷ್ಟು ಮತದಾನ ದಾಖಲಾಗಿತ್ತು.
ಇದನ್ನೂ ಓದಿ:ಬ್ರಿಟನ್ ಸಾರ್ವತ್ರಿಕ ಚುನಾವಣೆ ಗುರುವಾರವೇ ನಡೆಯುವುದೇಕೆ? - UK General Election