ಕರ್ನಾಟಕ

karnataka

ETV Bharat / international

ಅಧಿಕಾರ ಸ್ವೀಕಾರ ಸಮಾರಂಭಕ್ಕೂ ಮುನ್ನ ವಾಷಿಂಗ್ಟನ್​​ ನಲ್ಲಿ ಭರ್ಜರಿ ರ‍್ಯಾಲಿ: ಟ್ರಂಪ್​ ವಿಜಯೋತ್ಸವ; ಇಂದು ಪ್ರಮಾಣ - TRUMP TAKES VICTORY RALLY

ನವೆಂಬರ್​​​​ ಚುನಾವಣೆಯಲ್ಲಿ ವಿಜಯಗಳಿಸಿರುವ ಡೊನಾಲ್ಡ್​ ಟ್ರಂಪ್​ ಇಂದು ಅಮೆರಿಕದ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಇದಕ್ಕೂ ಮೊದಲು ಅವರು ವಾಷಿಂಗ್ಟನ್​ನಲ್ಲಿ ಭಾನುವಾರ ವಿಜಯೋತ್ಸವ ರ‍್ಯಾಲಿ ನಡೆಸಿದರು.

Trump takes victory lap ahead of inauguration at rally in Washington
ಅಧಿಕಾರ ಸ್ವೀಕಾರ ಸಮಾರಂಭಕ್ಕೂ ಮುನ್ನ ವಾಷಿಂಗ್ಟನ್​​ ನಲ್ಲಿ ಭರ್ಜರಿ ರ‍್ಯಾಲಿ: ಟ್ರಂಪ್​ ವಿಜಯೋತ್ಸವ (IANS)

By ETV Bharat Karnataka Team

Published : Jan 20, 2025, 6:41 AM IST

ವಾಷಿಂಗ್ಟನ್,ಅಮೆರಿಕ:ಅಕ್ರಮ ವಲಸಿಗರನ್ನು ಹೊರ ಹಾಕುವ ವಾಗ್ದಾನ ಮಾಡಿ ಮರು ಆಯ್ಕೆ ಆಗಿರುವ ಡೊನಾಲ್ಡ್​ ಟ್ರಂಪ್​ ಇಂದು ಅಮೆರಿಕದ ನೂತನ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇದಕ್ಕೂ ಮುನ್ನ ಟ್ರಂಪ್​ ವಿಜಯೋತ್ಸವ ರ‍್ಯಾಲಿ ನಡೆಯಿತು. ಭಾನುವಾರ ನಡೆದ ಅವರ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಸಾವಿರಾರು ಬೆಂಬಲಿಗರು ಚಳಿ ಮತ್ತು ಮಳೆಯನ್ನು ಲೆಕ್ಕಿಸದೇ ಗಂಟೆಗಳ ಕಾಲ ಟ್ರಂಪ್​ ಗಾಗಿ ಕಾದು ನಿಂತಿದ್ದರು.

78 ರ ಹರೆಯದ ರಿಪಬ್ಲಿಕನ್ ಲೀಡರ್​​ ತಮ್ಮ ಮೊದಲ ಪ್ರಮುಖ ಭಾಷಣ ಆರಂಭಿಸುವ ಮುನ್ನ ಭಾನುವಾರ ಆರ್ಲಿಂಗ್‌ಟನ್ ರಾಷ್ಟ್ರೀಯ ಸ್ಮಶಾನದಲ್ಲಿರುವ ಅಜ್ಞಾತ ಸೈನಿಕನ ಸಮಾಧಿಗೆ ಹಾರ ಹಾಕಿ ನಮನ ಸಲ್ಲಿಸಿದರು. ಬಳಿಕ ಬೆಂಬಲಿಗರೊಂದಿಗೆ ವಿಜಯೋತ್ಸವ ರ‍್ಯಾಲಿ ನಡೆಸಿದರು.

ಮೇಕ್ ಅಮೆರಿಕ ಗ್ರೇಟ್ ಅಗೇನ್ ವಿಕ್ಟರಿ ರ‍್ಯಾಲಿ: ಮಧ್ಯಾಹ್ನ 3 ಗಂಟೆಗೆ ಮೇಕ್​ ಅಮೆರಿಕ ಗ್ರೇಟ್​ ಅಗೇನ್​​​​​​​​ ರ‍್ಯಾಲಿ ಪ್ರಾರಂಭವಾಗಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಗಂಟೆಗಳ ಕಾಲ ತಡವಾಗಿ ಆರಂಭವಾಯಿತು. ಅವರ ಬೆಂಬಲಿಗರು ಟ್ರಂಪ್‌ರ ಟ್ರೇಡ್‌ಮಾರ್ಕ್ ಕೆಂಪು ಜಾಕೆಟ್‌ಗಳು ಮತ್ತು MAGA ಟೋಪಿಗಳನ್ನು ಧರಿಸುವ ಮೂಲಕ ಗಮನ ಸೆಳೆದರು. ಕೆಲವರು "USA! USA!" ಎಂದು ಜಯಘೋಷ ಮಾಡಿದರು. ಡೌನ್‌ಟೌನ್ ವಾಷಿಂಗ್ಟನ್‌ನ ಕ್ಯಾಪಿಟಲ್ ಒನ್ ಅರೆನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆಡಿ ವ್ಯಾನ್ಸ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಟ್ರಂಪ್ ಸ್ವತಃ ಭಾನುವಾರ ಮಾತನಾಡಿದರು.

ಟ್ರಂಪ್​ ಪದಗ್ರಹಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ US ಕ್ಯಾಪಿಟಲ್ ಮತ್ತು ಶ್ವೇತಭವನದ ಸುತ್ತಲಿನ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಭಾರಿ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ.

ಹಲವು ಮಹತ್ವದ ನಿರ್ಧಾರಗಳ ಘೋಷಣೆ:ಇಂದು ಪ್ರಮಾಣವಚನ ಸ್ವೀಕರಿಸಲಿರುವ ಡೊನಾಲ್ಡ್​ ಟ್ರಂಪ್​ 100ಕ್ಕೂ ಹೆಚ್ಚು ಕಾರ್ಯಕಾರಿ ಆದೇಶಗಳನ್ನು ಹೊರಡಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಈ ನಡುವೆ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಟ್ರಂಪ್​, ಗ್ರೀನ್‌ಲ್ಯಾಂಡ್ ಮತ್ತು ಪನಾಮ ಕಾಲುವೆಯನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಕೆನಡಾವನ್ನು ಅಮೆರಿಕದ 51ನೇ ರಾಜ್ಯವಾಗಿ ಪರಿವರ್ತಿಸುವ ಬಗ್ಗೆ ಗಟ್ಟಿಯಾಗಿ ಮಾತನಾಡುವ ಮೂಲಕ ಎಲ್ಲರನ್ನು ದಿಗ್ಬ್ರಮೆಗೊಳಿಸಿದ್ದಾರೆ.

ಜೋ ಬೈಡನ್​ ಕೊನೆ ಪ್ರವಾಸ;ಏತನ್ಮಧ್ಯೆ ನಿರ್ಗಮಿತ ಅಧ್ಯಕ್ಷ ಜೋ ಬೈಡನ್​ ಅವರು ಭಾನುವಾರದಂದು ದಕ್ಷಿಣ ಕೆರೊಲಿನಾದ ಚಾರ್ಲ್ಸ್‌ಟನ್‌ಗೆ ಅಧ್ಯಕ್ಷರಾಗಿ ತಮ್ಮ ಕೊನೆಯ ಅಧಿಕೃತ ಪ್ರವಾಸವನ್ನು ಮುಗಿಸಿದರು. ಈ ವೇಳೆ ಅವರು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ದಿನವನ್ನು ಆಚರಿಸಿದರು. ಇಂದು ಬೈಡನ್​ ಅವರು ಟ್ರಂಪ್​ ಪದ ಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ ಪದಗ್ರಹಣ ಸಮಾರಂಭ:ಸೋಮವಾರ ಮಧ್ಯಾಹ್ನ ET (1700 GMT) ಉದ್ಘಾಟನಾ ದಿನ ಅಂದರೆ ಟ್ರಂಪ್ ಪದಗ್ರಹಣ ಸಮಾರಂಭ ನಡೆಯಲಿದೆ. ಭಾರಿ ಶೀತಗಾಳಿಯ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಒಳಾಂಗಣದಲ್ಲಿ ನಡೆಸಲು ಈಗಾಗಲೇ ಅಲ್ಲಿನ ಆಡಳಿತ ನಿರ್ಧರಿಸಿದೆ. ಕ್ಯಾಪಿಟಲ್ ಕಟ್ಟಡದ ರೋಟುಂಡಾದಲ್ಲಿ ಟ್ರಂಪ್ ಅವರು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

25 ಸಾವಿರ ಸಿಬ್ಬಂದಿಯಿಂದ ಭದ್ರತೆ:ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ಸುಮಾರು 25,000 ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಇದನ್ನು ಓದಿ:ಮೊದಲ ದಿನವೇ ಚುನಾವಣೆ ಭರವಸೆಗಳನ್ನು ಈಡೇರಿಸಲು ಟ್ರಂಪ್​ ಸನ್ನದ್ಧ: 100 ಕಾರ್ಯಾದೇಶಗಳಿಗೆ ಸಹಿ ಹಾಕಲು ಪ್ಲಾನ್​

ABOUT THE AUTHOR

...view details