ವಾಶಿಂಗ್ಟನ್(ಯುಎಸ್ಎ):ಜನವರಿಯಲ್ಲಿ ತಾವು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಗಾಜಾದಲ್ಲಿ ಬಂಧಿಯಾಗಿರಿಸಿಕೊಂಡಿರುವ ಎಲ್ಲಾ ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಯೋತ್ಪಾದಕ ಸಂಘಟನೆ ಹಮಾಸ್ಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.
'ನರಕ ದರ್ಶನ ಮಾಡಿಸುತ್ತೇನೆ': ಯಾವುದೇ ಭಯೋತ್ಪಾದಕ ಸಂಘಟನೆಯ ಹೆಸರು ಹೇಳದೆ ಸೋಮವಾರ ಸಾಮಾಜಿಕ ಮಧ್ಯಮ 'ಟ್ರೂತ್ ಸೋಷಿಯಲ್'ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, "ನಾನು ಅಮೆರಿಕದ ಅಧ್ಯಕ್ಷನಾಗಿ ಹೆಮ್ಮೆಯಿಂದ ಅಧಿಕಾರ ವಹಿಸಿಕೊಳ್ಳುವ ದಿನಾಂಕವಾದ ಜನವರಿ 20, 2025ರೊಳಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಮಧ್ಯಪ್ರಾಚ್ಯದಲ್ಲಿ ಮತ್ತು ಮಾನವೀಯತೆಯ ವಿರುದ್ಧ ಇಂಥ ದೌರ್ಜನ್ಯಗಳನ್ನು ಎಸಗಿದವರಿಗೆ ನರಕ ದರ್ಶನ ಮಾಡಿಸುತ್ತೇನೆ. ಅಮೆರಿಕದ ಸುದೀರ್ಘ ಮತ್ತು ಪ್ರತಿಷ್ಠೆಯ ಇತಿಹಾಸದಲ್ಲಿ ಯಾರೂ ಕಾಣಲಾರದಂಥ ದೊಡ್ಡ ಹೊಡೆತ ಬೀಳಲಿದೆ. ತಕ್ಷಣವೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ!" ಎಂದು ಹಮಾಸ್ಗೆ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.
ಇಸ್ರೇಲಿ ಅಧಿಕಾರಿಗಳು ಹೇಳುವುದೇನು?: ಗಾಜಾದಲ್ಲಿ ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಹಮಾಸ್ ಸುಮಾರು 250 ಒತ್ತೆಯಾಳುಗಳನ್ನು ಸೆರೆಹಿಡಿದಿದೆ. ಇದರಲ್ಲಿ ಸುಮಾರು 100 ಮಂದಿ ಈಗಲೂ ಗಾಜಾದಲ್ಲಿ ಬಂಧಿಯಾಗಿದ್ದು, ಇದರಲ್ಲಿ ಮೂರನೇ ಒಂದು ಭಾಗದಷ್ಟು ಜನ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ಒತ್ತೆಯಾಳುಗಳ ಬಿಡುಗಡೆಯನ್ನು ಒಳಗೊಂಡ ಕದನ ವಿರಾಮ ಒಪ್ಪಂದ ಜಾರಿಗೆ ತರಲು ಬೈಡನ್ ಆಡಳಿತವು ಕಳೆದ ವರ್ಷದಿಂದ ಇಸ್ರೇಲ್, ಕತಾರ್ ಮತ್ತು ಈಜಿಪ್ಟ್ ಸೇರಿದಂತೆ ಅಂತಾರಾಷ್ಟ್ರೀಯ ಮಧ್ಯಸ್ಥಗಾರರೊಂದಿಗೆ ಮಾತುಕತೆ ನಡೆಸುತ್ತಿದೆ.