ವಾಷಿಂಗ್ಟನ್(ಯುಎಸ್‌ಎ): ತನ್ನ ನೆರೆ ದೇಶಗಳಾದ ಮೆಕ್ಸಿಕೋ ಮತ್ತು ಕೆನಡಾದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ತೆರಿಗೆ ಬರೆ ಹಾಕಿದ್ದಾರೆ. ಈ ಎರಡೂ ದೇಶಗಳ ಮೇಲೆ ಶೇ.25ರಷ್ಟು ಆಮದು ತೆರಿಗೆ ವಿಧಿಸಲಾಗಿದೆ. ಇದೇ ವೇಳೆ, ಚೀನಾದ ಸರಕಗಳ ಆಮದಿನ ಮೇಲೂ ಶೇ.10ರಷ್ಟು ತೆರಿಗೆ ವಿಧಿಸಿದ್ದಾರೆ. ಅಕ್ರಮ ವಲಸೆ ಮತ್ತು ಡ್ರಗ್ಸ್ ಕಳ್ಳಸಾಗಣೆಯನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
ಅಮೆರಿಕದ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಚುನಾವಣೆಗೂ ಮುನ್ನ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆಯಡಿ ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ ಎಂದು ವೈಟ್‌ಹೌಸ್ ಹೇಳಿದೆ. ಇದೇ ವೇಳೆ, ಅಕ್ರಮ ವಲಸೆ ಮತ್ತು ಡ್ರಗ್ಸ್ ಕಳ್ಳಸಾಗಣೆಯಂಥ ಬೆದರಿಕೆಗಳಿಂದ ಅಮೆರಿಕದ ನಾಗರಿಕರನ್ನು ರಕ್ಷಿಸಲು ಹೆಚ್ಚುವರಿ ತೆರಿಗೆ ಜಾರಿ ನಿರ್ಧಾರವನ್ನು ಜಾರಿಗೆ ತರಲಾಗುತ್ತಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
"ಇವತ್ತು ನಾನು ಮೆಕ್ಸಿಕೋ ಮತ್ತು ಕೆನಡಾ(ಇಂಧನಕ್ಕೆ ಶೇ.10) ದೇಶಗಳ ಮೇಲೆ ಶೇ 25 ಮತ್ತು ಚೀನಾ ಮೇಲೆ ಶೇ 10 ಹೆಚ್ಚುವರಿ ಆಮದು ತೆರಿಗೆ ಹಾಕುವ ನಿರ್ಧಾರ ತೆಗೆದುಕೊಂಡಿದ್ದೇನೆ. ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆಯಡಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ನಮ್ಮ ದೇಶದ ನಾಗರಿಕರನ್ನು ಅಕ್ರಮ ವಲಸೆಗಾರರು ಮತ್ತು ಮಾರಣಾಂತಿಕ ಡ್ರಗ್ಸ್‌ನಿಂದ ರಕ್ಷಿಸಬೇಕಿದೆ. ಅಮೆರಿಕದ ಅಧ್ಯಕ್ಷನಾಗಿ ಇದು ನನ್ನ ಕರ್ತವ್ಯವೂ ಹೌದು. ಈ ಕುರಿತಾಗಿ ನಾನು ಚುನಾವಣೆಗೆ ಮುನ್ನ ಜನರಿಗೆ ಭರವಸೆ ನೀಡಿದ್ದೆ. ಈ ಕಾರಣಕ್ಕೆ ಅಮೆರಿಕನ್ನರು ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದರು" ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಅವರು ಮಾಹಿತಿ ನೀಡಿದ್ದಾರೆ.