ವಾಷಿಂಗ್ಟನ್:ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾನ ಮಾಡಿದಂತೆ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. 538 ಅಕ್ರಮ ವಲಸಿಗರನ್ನು ಬಂಧಿಸಿ, ಅದರಲ್ಲಿ ನೂರಾರು ಜನರನ್ನು ಎರಡು ವಿಮಾನಗಳಲ್ಲಿ ಗ್ವಾಟೆಮಾಲಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ನಿವಾಸಿಗಳನ್ನು ಸ್ಥಳಾಂತರಿಸುತ್ತಿರುವ ಚಿತ್ರಗಳನ್ನು ಶ್ವೇತಭವನವು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಟ್ರಂಪ್ ಅವರು ಕೊಟ್ಟ ಭರವಸೆಯಂತೆ ಗಡೀಪಾರು ಕಾರ್ಯಾಚರಣೆ ಆರಂಭಿಸಲಾಗಿದೆ. ಅಕ್ರಮವಾಗಿ ಅಮೆರಿಕ ಪ್ರವೇಶಿಸಿದವರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಮೊದಲ ದಿನವೇ 538 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಹಲವು ಕ್ರಿಮಿನಲ್ಗಳು ಇದ್ದಾರೆ ಎಂದು ಅದರಲ್ಲಿ ತಿಳಿಸಲಾಗಿದೆ.
48 ಪುರುಷರು, 31 ಮಹಿಳೆಯರು ಸೇರಿ ಒಟ್ಟು 79 ಅಕ್ರಮ ವಲಸಿಗರನ್ನು ಮೊದಲ ಸೇನಾ ವಿಮಾನದಲ್ಲಿ ಶುಕ್ರವಾರ ಮಧ್ಯರಾತ್ರಿ ಗ್ವಾಟೆಮಾಲಾಕ್ಕೆ ಕರೆತರಲಾಗಿದೆ. ಎರಡನೇ ವಿಮಾನದವೂ ಹೆಚ್ಚಿನ ಸಂಖ್ಯೆಯ ಜನರನ್ನು ಹೊತ್ತು ತಂದಿದೆ. ನೂರಾರು ಜನರನ್ನು ಮಿಲಿಟರಿ ವಿಮಾನಗಳು ಗಡೀಪಾರು ಮಾಡಿವೆ. ಇತಿಹಾಸದಲ್ಲಿ ಅತಿದೊಡ್ಡ ಗಡೀಪಾರು ಕಾರ್ಯಾಚರಣೆ ಚುರುಕು ಪಡೆದಿದೆ ಎಂದು ಶ್ವೇತಭವನ ತಿಳಿಸಿದೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ತಿಳಿಸಿದಂತೆ, ದೊಡ್ಡ ಪ್ರಮಾಣದ ಗಡೀಪಾರು ಕಾರ್ಯಾಚರಣೆ ಆರಂಭವಾಗಿದೆ. ಮೊದಲ ದಿನವೇ, ಶಂಕಿತ ಭಯೋತ್ಪಾದಕರು, ಕ್ರಿಮಿನಲ್ಗಳು, ಗ್ಯಾಂಗ್ಸ್ಟರ್ಗಳು ಮತ್ತು ಅಪರಾಧ ಕೃತ್ಯ ನಡೆಸಿ ಶಿಕ್ಷೆಗೊಳಗಾದವರು ಇದ್ದಾರೆ. ಎಲ್ಲರನ್ನೂ ಬಂಧಿಸಿ ಗಡೀಪಾರು ಮಾಡಲಾಗುತ್ತಿದೆ ಎಂದು ಹೇಳಿದರು.