ಚಿಕಾಗೋ:ಪೆನ್ಸಿಲ್ವೇನಿಯಾದಲ್ಲಿ ನಡೆಸುತ್ತಿದ್ದ ಚುನಾವಣಾ ರ‍್ಯಾಲಿ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಟ್ರಂಪ್ ಅವರ ಬಲ ಕಿವಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿ ವೇಳೆ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೋರ್ವನಿಗೆ ಗುಂಡು ತಗುಲಿ ಪರಿಣಾಮ ಮೃತಪಟ್ಟಿದ್ದಾರೆ. ಅಮೆರಿಕ ಭದ್ರತಾ ಪಡೆಗಳು ಘಟನಾ ಸ್ಥಳದಲ್ಲಿ ಶಂಕಿತ ಶೂಟರ್ನನ್ನು ಹೊಡೆದುರುಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಂಪ್ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ದಾಳಿಕೋರ ಗುಂಡು ಹಾರಿಸಿದ್ದಾನೆ. ಈ ಸಮಯದಲ್ಲಿ ಟ್ರಂಪ್ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ. ಭದ್ರತಾ ಸಿಬ್ಬಂದಿ ತಕ್ಷಣವೇ ಟ್ರಂಪ್ ಅವರನ್ನು ಸುತ್ತುವರೆದರು. ಟ್ರಂಪ್ ಅವರ ಬಲ ಕಿವಿಯ ಭಾಗದಲ್ಲಿ ರಕ್ತ ಸುರಿದಿದೆ. ಮಾಜಿ ಅಧ್ಯಕ್ಷರನ್ನು ವೇದಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಟ್ರಂಪ್ ಸುರಕ್ಷಿತವಾಗಿದ್ದಾರೆ. ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆ ಬಗ್ಗೆ ಹೆಚ್ಚಿನ ತನಿಖೆ:''ಮಾಜಿ ಅಧ್ಯಕ್ಷರು ಸುರಕ್ಷಿತವಾಗಿದ್ದಾರೆ. ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ'' ಎಂದು ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ (Source: AP) ಟ್ರಂಪ್ ಮೇಲಿನ ದಾಳಿ ಖಂಡಿಸಿದ ಬೈಡನ್: ಟ್ರಂಪ್ ಮೇಲಿನ ನಡೆದ ಗುಂಡಿ ದಾಳಿಯನ್ನು ಅಧ್ಯಕ್ಷ ಜೋ ಬೈಡನ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ''ಗುಂಡಿನ ದಾಳಿ ಬಗ್ಗೆ ಭದ್ರತಾ ಏಜೆನ್ಸಿಗಳಿಂದ ವಿವರಣೆ ಕೇಳಲಾಗಿದೆ. ಅಮೆರಿಕದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ'' ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಟ್ರಂಪ್ ಶೀಘ್ರ ಗುಣಮುಖರಾಗಲಿ- ಕಮಲಾ ಹ್ಯಾರಿಸ್:ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿರುವುದನ್ನು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಖಂಡಿಸಿದ್ದಾರೆ. ''ಅಮೆರಿಕದಲ್ಲಿ ಹಿಂಸೆಗೆ ಜಾಗವಿಲ್ಲ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಟ್ರಂಪ್ ಅವರು ಶೀಘ್ರ ಗುಣಮುಖರಾಗಲಿ'' ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಘಟನೆಗೆ ತಕ್ಷಣವೇ ಎಚ್ಚೆತ್ತುಕೊಂಡು ಕ್ರಮವಹಿಸಿದ ಅಮೆರಿಕ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಅಧಿಕಾರಿಗಳ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.
ಟೆಸ್ಲಾ ಸಿಇಒ ಎಲೋನ್ ಮಸ್ಕ್ ಪ್ರತಿಕ್ರಿಯೆ:ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಟೆಸ್ಲಾ ಸಿಇಒ ಎಲೋನ್ ಮಸ್ಕ್, ''ನಾನು ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಟ್ರಂಪ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ (Source: AP) ಬರಾಕ್ ಒಬಾಮಾ ಪ್ರತಿಕ್ರಿಯೆ:ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು, 'ನಮ್ಮ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಜಾಗವಿಲ್ಲ. ಏನಾಯಿತು ಎಂದು ನಮಗೆ ಇನ್ನೂ ನಿಖರವಾಗಿ ತಿಳಿದಿಲ್ಲವಾದರೂ, ಮಾಜಿ ಅಧ್ಯಕ್ಷ ಟ್ರಂಪ್ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ನಾವೆಲ್ಲರೂ ನಿರಾಳರಾಗಬೇಕು. ಮಿಚೆಲ್ ಮತ್ತು ನಾನು, ಟ್ರಂಪ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ'' ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನವೆಂಬರ್ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಸದ್ಯ ಬಿರುಸಿನ ಪ್ರಚಾರ ನಡೆಯುತ್ತಿದೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಹಾಲಿ ಅಧ್ಯಕ್ಷ ಜೋ ಬೈಡನ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಹೀಗಿರುವಾಗಲೇ ಟ್ರಂಪ್ ಮೇಲೆ ನಡೆದಿರುವ ಗುಂಡಿನ ದಾಳಿಯು ಅಮೆರಿಕದ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾದ ಕೇಪ್ಟೌನ್ನಲ್ಲಿ ಮಳೆ ಅಬ್ಬರ: ನಿರಾಶ್ರಿತರಾದ 1 ಲಕ್ಷ ಮಂದಿ - Cape Town damaged by heavy rains