ವಾಶಿಂಗ್ಟನ್(ಯುಎಸ್‌ಎ): ಗಾಜಾ ಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ಫೋಟಕ ಹೇಳಿಕೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಅಮೆರಿಕವು ಗಾಜಾ ಪಟ್ಟಿಯನ್ನು ವಶಪಡಿಸಿಕೊಂಡು ಅಲ್ಲಿ ಉಳಿದಿರುವ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ನಾಶ ಮಾಡಲಿದೆ. ನಾಶವಾದ ಕಟ್ಟಡಗಳನ್ನು ಪುನರ್‌ನಿರ್ಮಾಣ ಮಾಡಲಿದೆ ಹಾಗೂ ಈ ಮೂಲಕ ಇಡೀ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಯತ್ನಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಕದನ ವಿರಾಮ-ಒತ್ತೆಯಾಳು ಒಪ್ಪಂದವು ದೀರ್ಘಕಾಲೀನ ಮತ್ತು ಶಾಶ್ವತ ಶಾಂತಿಯ ಆರಂಭವಾಗಿದೆ ಎಂದು ತಿಳಿಸಿದರು.
"ಗಾಜಾ ಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಲಿದೆ ಮತ್ತು ನಾವು ಅಲ್ಲಿ ಒಂದಿಷ್ಟು ಕೆಲಸ ಮಾಡಲಿದ್ದೇವೆ. ಆ ಪ್ರದೇಶವನ್ನು ವಶಪಡಿಸಿಕೊಳ್ಳಲಿರುವ ನಾವು ಸ್ಥಳದಲ್ಲಿ ಉಳಿದಿರುವ ಸ್ಫೋಟಗೊಳ್ಳದ ಎಲ್ಲ ಅಪಾಯಕಾರಿ ಬಾಂಬ್ಗಳು, ಇತರ ಶಸ್ತ್ರಾಸ್ತ್ರಗಳನ್ನು ತೆಗೆದುಹಾಕಲು ಮತ್ತು ನಾಶವಾದ ಕಟ್ಟಡಗಳ ಅವಶೇಷಗಳನ್ನು ಸ್ವಚ್ಛಗೊಳಿಸಲು ಜವಾಬ್ದಾರರಾಗಿದ್ದೇವೆ. ಈ ಪ್ರದೇಶದ ಎಲ್ಲ ಜನರಿಗೂ ಉದ್ಯೋಗವಕಾಶ ಸಿಗುವಂತಾಗಲು ಮತ್ತು ಎಲ್ಲರಿಗೂ ಸಾಕಾಗುವಷ್ಟು ಮನೆಗಳು ಲಭ್ಯವಾಗುವಂತೆ ಮಾಡಲು ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಿದ್ದೇವೆ" ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.