ವಾಷಿಂಗ್ಟನ್(ಅಮೆರಿಕ): ಅಮೆರಿಕದ ಸೆನೆಟರ್ (ಸಂಸದೆ) ತುಳಸಿ ಗಬ್ಬಾರ್ಡ್ ಅವರು 18 ಭದ್ರತಾ ಸಂಸ್ಥೆಗಳ ಮೇಲ್ವಿಚಾರಕ ಸಂಸ್ಥೆಯಾದ 'ರಾಷ್ಟ್ರೀಯ ಗುಪ್ತಚರ ವಿಭಾಗ'ದ ನಿರ್ದೇಶಕಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ವಿಶ್ವದ ಅತಿ ಬಲಿಷ್ಠ ದಳದ ನೇತೃತ್ವ ವಹಿಸಿದ ಮೊದಲ ಹಿಂದು ನಾಯಕಿ ಎಂಬ ಗರಿಮೆಗೂ ಪಾತ್ರರಾದರು.
ಗುಪ್ತಚರ ದಳದ ಮುಖ್ಯಸ್ಥೆಯಾಗಿ ತುಳಸಿ ಗಬ್ಬಾರ್ಡ್ ಅವರನ್ನು ಶ್ವೇತಭವನ ಅಂಗೀಕರಿಸಿತು. ಇದರ ಬೆನ್ನಲ್ಲೇ, ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಯುಎಸ್ ಅಟಾರ್ನಿ ಜನರಲ್ ಪ್ಯಾಮ್ ಗೊಂಡಿ ಅವರು ಇಲ್ಲಿನ ಓವಲ್ ಕಚೇರಿಯಲ್ಲಿ ಗಬ್ಬಾರ್ಡ್‌ಗೆ ಪ್ರಮಾಣ ಬೋಧಿಸಿದರು.
![ತುಳಸಿ ಗಬ್ಬಾರ್ಡ್ ಅವರನ್ನು ಅಭಿನಂದಿಸಿದ ಅಧ್ಯಕ್ಷ ಟ್ರಂಪ್](https://etvbharatimages.akamaized.net/etvbharat/prod-images/13-02-2025/23535574_don.jpg)
ಗಬ್ಬಾರ್ಡ್ ಪ್ರಮಾಣ ಸ್ವೀಕಾರ ಕಾರ್ಯಕ್ರಮದ ವಿಡಿಯೋವನ್ನು ಶ್ವೇತಭವನ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. "ಓವಲ್ ಕಚೇರಿಯಲ್ಲಿ ಅಟಾರ್ನಿ ಜನರಲ್ ಪಾಮ್ ಬೋಂಡಿ ಅವರಿಂದ ತುಳಸಿ ಗಬ್ಬಾರ್ಡ್ ಅಧಿಕೃತವಾಗಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕ ಮತ್ತೆ ಸುರಕ್ಷಿತವಾಗಿರಲಿದೆ" ಎಂದು ಹೇಳಿದೆ.
🇺🇸@TulsiGabbard has officially been sworn in as Director of National Intelligence by AG Pam Bondi in the Oval Office!
— The White House (@WhiteHouse) February 12, 2025
MAKE AMERICA SAFE AGAIN! pic.twitter.com/Um3WZvYFLh
ಗಬ್ಬಾರ್ಡ್ ನೇಮಕಕ್ಕೆ ವಿರೋಧ: 43 ವರ್ಷದ ತುಳಸಿ ಗಬ್ಬಾರ್ಡ್ ಅವರನ್ನು ಕೇಂದ್ರ ಗುಪ್ತಚರ ಸಂಸ್ಥೆ (CIA), ರಾಷ್ಟ್ರೀಯ ಭದ್ರತಾ ಸಂಸ್ಥೆ (NSA) ಮತ್ತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಸೇರಿದಂತೆ 18 ಸಂಸ್ಥೆಗಳನ್ನು ಒಳಗೊಂಡಿರುವ ರಾಷ್ಟ್ರೀಯ ಗುಪ್ತಚರ ವಿಭಾಗಕ್ಕೆ ಮುಖ್ಯಸ್ಥರನ್ನಾಗಿ ನೇಮಿಸುವುದಕ್ಕೆ ವಿಪಕ್ಷ ಡೆಮಾಕ್ರಟಿಕ್ನಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ದೇಶದ ಭದ್ರತೆಗೆ ಸಂಬಂಧಿಸಿದಂತೆ ದೊಡ್ಡ ಹುದ್ದೆಯನ್ನು ಗಬ್ಬಾರ್ಡ್ ಅವರು ನಿರ್ವಹಿಸಲು ಅನುಭವ ಸಾಕಾಗುವುದಿಲ್ಲ ಎಂಬುದು ಡೆಮಾಕ್ರಟಿಕ್ ಸಂಸದರ ತಕರಾರು. ಜೊತೆಗೆ, ರಿಪಬ್ಲಿಕನ್ನ ಓರ್ವ ಸಂಸದ ಕೂಡ ಇದಕ್ಕೆ ಸಹಮತಿಸಿದ್ದರು. ಮತ ಚಲಾವಣೆ ವೇಳೆ ಗಬ್ಬಾರ್ಡ್ ಪರವಾಗಿ 52, ವಿರುದ್ಧ 48 ಮತಗಳು ಬಿದ್ದಿವೆ. ಬಹುಮತದ ಮೂಲಕ ಅವರನ್ನು ನಿರ್ದೇಶಕಿಯನ್ನಾಗಿ ನೇಮಿಸಲಾಗಿದೆ.
ಭದ್ರತಾ ಸಂಸ್ಥೆಯ ಚುಕ್ಕಾಣಿ ಹಿಡಿದ ಮೊದಲ ಹಿಂದು: ತುಳಸಿ ಗಬ್ಬಾರ್ಡ್ ಅವರು ಭಾರತದ ಜೊತೆ ಯಾವುದೇ ನಂಟು ಹೊಂದಿಲ್ಲವಾದರೂ, ಹಿಂದು ಧರ್ಮವನ್ನು ಅನುಸರಿಸುತ್ತಾರೆ. ಇದನ್ನು ಅವರೇ ಸಂಸತ್ತಿನಲ್ಲಿ ಅಧಿಕೃತಗೊಳಿಸಿದ್ದರು. ಈ ಮೂಲಕ ಅಮೆರಿಕದ ಅತಿದೊಡ್ಡ ಭದ್ರತಾ ಸಂಸ್ಥೆಗೆ ಬಾಸ್ ಆಗಿ ನೇಮಕವಾದ ಮೊದಲ ಹಿಂದು ಎಂಬ ಅಭಿದಾನಕ್ಕೂ ಪಾತ್ರವಾದರು.
ತುಳಸಿ ಗಬ್ಬಾರ್ಡ್ ಅವರ ತಾಯಿ ಕ್ಯಾರೊಲ್ ಪೋರ್ಟರ್ ಗಬ್ಬಾರ್ಡ್ ಅವರು ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ. ಅವರು ತಮ್ಮ ಮಕ್ಕಳಿಗೆ ಭಕ್ತಿ, ಜೈ, ಆರ್ಯನ್, ತುಳಸಿ ಮತ್ತು ವೃಂದಾವನ ಎಂಬ ಹಿಂದೂ ಹೆಸರನ್ನಿಟ್ಟಿದ್ದಾರೆ.
ಇದನ್ನೂ ಓದಿ: ಅಮೆರಿಕಕ್ಕೆ ಆಗಮಿಸಿದ ಮೋದಿಗೆ ಅನಿವಾಸಿ ಭಾರತೀಯರಿಂದ ಭರ್ಜರಿ ಸ್ವಾಗತ: ಇಂದು ಮಸ್ಕ್ ಭೇಟಿ ಸಾಧ್ಯತೆ