ಹಾವೇರಿ/ವಿಜಯನಗರ : ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಶತಶತಮಾನಗಳಿಂದ ವಿಶಿಷ್ಠ ಜಾತ್ರೆ ನಡೆಯುತ್ತದೆ. ಎಲ್ಲ ಜಾತ್ರೆಗಳಲ್ಲಿ ರಥೋತ್ಸವ ನಡೆದರೆ ಇಲ್ಲಿ 11 ದಿನ ಉಪವಾಸ ಇರುವ ಗೊರವಯ್ಯ 18 ಅಡಿ ಎತ್ತರದ ಬಿಲ್ಲನೇರಿ ಕಾರ್ಣಿಕ ನುಡಿಯುತ್ತಾರೆ. ಇದನ್ನು ವರ್ಷದ ಭವಿಷ್ಯವಾಣಿ ಎಂದೇ ಪರಿಗಣಿಸಲಾಗುತ್ತದೆ.
ಮೈಲಾರದ ಮೈಲಾರಲಿಂಗೇಶ್ವರ ಕಾರ್ಣಿಕ ಶುಕ್ರವಾರ ನಡೆಯಲಿದ್ದು, ಈಗಾಗಲೇ ಭರದ ಸಿದ್ಧತೆಗಳು ಆರಂಭವಾಗಿವೆ. ಮೈಲಾರಲಿಂಗೇಶ್ವರ ಕಾರ್ಣಿಕವಾಣಿ ಕೇಳಲು ರಾಜ್ಯ, ಹೊರರಾಜ್ಯ ಹಾಗೂ ಹೊರದೇಶಗಳಿಂದಲೂ ಭಕ್ತರ ದಂಡು ಮೈಲಾರದತ್ತ ಹರಿದು ಬರುತ್ತಿದೆ.
ಕಾರ್ಣಿಕವಾಣಿ ಮೇಲೆ ಭಕ್ತರ ನಂಬಿಕೆ : ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಮೈಲಾರಲಿಂಗೇಶ್ವರ ಕಾರ್ಣಿಕಕ್ಕೆ ಎಲ್ಲಿಲ್ಲದ ಮಹತ್ವವಿದೆ. ವಿಶೇಷವಾಗಿ ರೈತಾಪಿ ವರ್ಗದ ಜನರು ಮೈಲಾರಲಿಂಗೇಶ್ವರ ಕಾರ್ಣಿಕವಾಣಿಯ ಆಧಾರದ ಮೇಲೆಯೇ ವರ್ಷದ ಮಳೆ ಬೆಳೆ ನಿರ್ಧರಿಸುತ್ತಾರೆ. ಭರತ ಹುಣ್ಣಿಮೆ ನಂತರ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಜರುಗುತ್ತದೆ.
11 ದಿನ ಗೊರವಪ್ಪನಿಂದ ಉಪವಾಸ ವ್ರತ : ಫೆ. 4ರಿಂದಲೇ ಮೈಲಾರದ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಾಲು ಉಕ್ಕಿಸುವುದು, ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತಿವೆ. ಅಲ್ಲಿಂದ ಹನ್ನೊಂದು ದಿನಗಳ ಕಾಲ ಪ್ರತಿದಿನ ಎರಡು ಬಾರಿ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ ಸಹ ಸಲ್ಲಿಸಲಾಗುತ್ತಿದೆ. ನಾಳೆ (ಫೆಬ್ರುವರಿ 14) ವರ್ಷದ ಭವಿಷ್ಯವಾಣಿ ಕಾರ್ಣಿಕ ನುಡಿಯುವ ಗೊರವಯ್ಯ ಹನ್ನೊಂದು ದಿನಗಳ ಕಾಲ ಕಠಿಣ ಉಪವಾಸ ವ್ರತ ಮಾಡುತ್ತಾರೆ. 14ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಿಲ್ಲನ್ನೇರಿ 'ಸದ್ದಲೇ..' ಅನ್ನುತ್ತಲೇ ವರ್ಷದ ಭವಿಷ್ಯವಾಣಿ ನುಡಿಯುತ್ತಾರೆ.
ಕಳೆದ ವರ್ಷದ ಭವಿಷ್ಯವಾಣಿ ಹೀಗಿತ್ತು : ಮೈಲಾರಲಿಂಗೇಶ್ವರನ ವಾಣಿ ಎಲ್ಲವೂ ಸತ್ಯವಾಗುತ್ತವೆ ಎಂಬ ನಂಬಿಕೆ ಇಲ್ಲಿ ಬಲವಾಗಿದೆ. ಕಳೆದ ವರ್ಷ ಸಂಪಾಯಿತಲೇ ಪರಾಕ್ ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದರು. ಅದರಂತೆ ಕಳೆದ ವರ್ಷ ಮಳೆ, ಬೆಳೆ ಸಮೃದ್ಧಿಯಾಗಿದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ನಡೆಯುವ ಕಾರ್ಣಿಕವಾಣಿ ವರ್ಷದ ಭವಿಷ್ಯವಾಣಿಯಾಗಿರುತ್ತೆ. ಕಾರ್ಣಿಕ ನುಡಿಯುವ ಡೆಂಕನಮರಡಿಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ವರ್ಷದ ಭವಿಷ್ಯವಾಣಿ ಕಾರ್ಣಿಕ ಕೇಳಲು ಟ್ರ್ಯಾಕ್ಟರ್ ಚಕ್ಕಡಿ ಸೇರಿದಂತೆ ಸಾರಿಗೆ ಇಲಾಖೆಯ ಬಸ್ ಖಾಸಗಿ ವಾಹನಗಳಲ್ಲಿ ಭಕ್ತರು ಮೈಲಾರ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಕಾತುರರಾಗಿದ್ದಾರೆ.
ಇದನ್ನೂ ಓದಿ: 'ತುಂಬಿದ ಕೊಡ ಉರಡೀತಲೇ, ತುಪ್ಪದ ಕೊಡ ಉಕ್ಕೀತಲೇ ಪರಾಕ್': ಕಾರ್ಣಿಕ ನುಡಿದ ಗೊರವಪ್ಪ