Myanmar Cyber Scams : ಮ್ಯಾನ್ಮಾರ್ ಬಿಕ್ಕಟ್ಟು ಇಡೀ ಏಷ್ಯಾ ಖಂಡವನ್ನೇ ನಡುಗಿಸಿದೆ. ಆಗ್ನೇಯ ಏಷ್ಯಾದ ಕ್ರೈಂ ಗುಂಪುಗಳು ಮ್ಯಾನ್ಮಾರ್‌ನ ಅಂತರ್ಯುದ್ಧದ ಅಸ್ಥಿರತೆಯ ಲಾಭವನ್ನು ಪಡೆದುಕೊಂಡಿವೆ. ಈ ಮೂಲಕ ಆ ಗುಂಪುಗಳು ಗ್ಲೋಬಲ್ ಆನ್‌ಲೈನ್ ಫ್ರಾಡ್ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿವೆ. ಇವು ಸ್ಕ್ಯಾಮ್ ಸೆಂಟರ್ಗಳನ್ನು ಸ್ಥಾಪಿಸಿ ವಾರ್ಷಿಕವಾಗಿ ಶತಕೋಟಿ ಡಾಲರ್‌ಗಳನ್ನು ಲೂಟಿ ಮಾಡುತ್ತಿವೆ. ಅದು ಯಾವರೀತಿ ನಡೆಯುತ್ತಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮ್ಯಾನ್ಮಾರ್‌ನ ಸ್ಕ್ಯಾಮ್ ಅಡ್ಡೆಗಳು : ಬರ್ಮಾದಲ್ಲಿ ಸಾವಿರಕ್ಕೂ ಹೆಚ್ಚು ‘ಸ್ಕ್ಯಾಮ್ ಅಡ್ಡೆಗಳು’ ಹತ್ತಾರು ದೇಶಗಳ ಮೇಲೆ ತಮ್ಮ ಹಿಡಿತ ಸಾಧಿಸಲು ಟೆಕ್ಸ್ಟ್ ಮತ್ತು ಇ-ಮೇಲ್ ಮೆಸೇಜ್ಗಳನ್ನು ಕಳುಹಿಸಲು ಕಳ್ಳಸಾಗಣೆ ಕಾರ್ಮಿಕರನ್ನು ಬಳಸುತ್ತವೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಯ ಪ್ರಕಾರ, ಬರ್ಮಾದ ಗಡಿ ಪ್ರದೇಶಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಸ್ಕ್ಯಾಮ್ ಅಡ್ಡೆಗಳು ಹರಡಿವೆ. ಮ್ಯಾನ್ಮಾರ್‌ನಲ್ಲಿ ಹೆಚ್ಚಿನ ಸ್ಕ್ಯಾಮ್ ಅಡ್ಡೆಗಳು ವಾ ರಾಜ್ಯ ಮತ್ತು ಕೊಕಾಂಗ್ ಶಾನ್ ರಾಜ್ಯದ ಲೌಕ್ಕಿಂಗ್ ಟೌನ್‌ಶಿಪ್‌ನ ಮೈವಾಡಿಯಲ್ಲಿವೆ ಎಂದು ಹೇಳಿದೆ.
'ಗೋಲ್ಡನ್ ಟ್ರಯಾಂಗಲ್' : ಮ್ಯಾನ್ಮಾರ್, ಕಾಂಬೋಡಿಯಾ ಮತ್ತು ಲಾವೋಸ್‌ನ ಕೆಲವು ಭಾಗಗಳನ್ನು ಒಳಗೊಂಡ ‘ಗೋಲ್ಡನ್ ಟ್ರಯಾಂಗಲ್’ ಸಂಘಟಿತ ಚೀನೀ ಸ್ಕ್ಯಾಮ್ ಸಿಂಡಿಕೇಟ್ಸ್ ಸೆಂಟರ್ ಆಗಿವೆ. ಮ್ಯಾನ್ಮಾರ್‌ನ ಮೈವಾಡಿ ಪ್ರದೇಶ ಸೈಬರ್ ಸ್ಕ್ಯಾಮ್ನ ಗ್ಲೋಬಲ್ ಕ್ಯಾಪಿಟಲ್ ಆಗಿದೆ. ಇಲ್ಲಿ ಕನಿಷ್ಠ 40 ಪ್ರಮುಖ ಸ್ಕ್ಯಾಮ್ ಅಡ್ಡೆಗಳಿಂದ ಅಂದಾಜು 3 ಲಕ್ಷಕ್ಕೂ ಹೆಚ್ಚು ಸ್ಕ್ಯಾಮರ್‌ಗಳಿವೆ.
ಇದಕ್ಕೆ ಕಾರಣಗಳೇನು ? ಹೆಚ್ಚಾಗಿ ಚೀನಾದಿಂದ ಹುಟ್ಟಿಕೊಂಡಿರುವ ಹಲವಾರು ಉತ್ತಮ ಸಂಪರ್ಕ ಹೊಂದಿರುವ ಸಂಘಟಿತ ಸ್ಕ್ಯಾಮ್ ಸೆಂಟರ್ಗಳು ಆಗ್ನೇಯ ಏಷ್ಯಾದಾದ್ಯಂತ ಮುಖ್ಯವಾಗಿ ಬಡ ರಾಜ್ಯಗಳಾದ ಕಾಂಬೋಡಿಯಾ, ಲಾವೋಸ್ ಮತ್ತು ವಿಶೇಷವಾಗಿ 2021 ರಲ್ಲಿ ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಮ್ಯಾನ್ಮಾರ್‌ನಲ್ಲಿ ಸೈಬರ್ ಸ್ಕ್ಯಾಮ್ ಸೆಂಟರ್ಗಳನ್ನು ನಿರ್ವಹಿಸುತ್ತಿವೆ. 2020 ರಲ್ಲಿ ತಮ್ಮ ತಾಯ್ನಾಡಿನಿಂದ ಪಲಾಯನ ಮಾಡಿದ ಚೀನಿಯರೇ ಹೆಚ್ಚಾಗಿ ನಡೆಸಲ್ಪಡುವ ಈ ಸ್ಕ್ಯಾಮ್ ವ್ಯವಹಾರಗಳು ಮ್ಯಾನ್ಮಾರ್‌ನ ಪ್ರದೇಶಗಳಲ್ಲಿ ನಡೆಯುತ್ತಿವೆ. ಅಲ್ಲಿ ಮಿಲಿಟರಿ ಆಡಳಿತವು ಬಂಡುಕೋರರ ಪ್ರದೇಶಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದೆ.
ಸಾಂಕ್ರಾಮಿಕ ರೋಗದ ಸಮಯದಲ್ಲಿ UNODC ಯ ವರದಿಯ ಪ್ರಕಾರ, ಸಂಘಟಿತ ಸ್ಕ್ಯಾಮ್ ಸಿಂಡಿಕೇಟ್ಸ್ ಕ್ಯಾಸಿನೊ ಕಾಂಪ್ಲೆಕ್ಸ್ಗಳನ್ನು ದೊಡ್ಡ ಪ್ರಮಾಣದ ಆನ್‌ಲೈನ್ ಸ್ಕ್ಯಾಮ್ ಮತ್ತು ಫ್ರಾಡ್ ಸಿಂಡಿಕೇಟ್ಗಳಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದವು. ಕಾಂಪ್ಲೆಕ್ಸ್ಗಳಲ್ಲಿ ಡಾರ್ಮಿಟರಿ ಶೈಲಿಯ ಮಲಗುವ ಕೋಣೆಗಳನ್ನು ನಿರ್ಮಿಸಲಾಯಿತು. ಅಷ್ಟೇ ಅಲ್ಲ, ಅಲ್ಲಿ ವಂಚಕರ ತರಬೇತಿ ಕೈಪಿಡಿಗಳನ್ನು ರಚಿಸಲಾಯಿತು. ಕಳ್ಳಸಾಗಣೆ ಬಲಿಪಶುಗಳನ್ನು ನಿಯಂತ್ರಿಸಲು ನಾಯಕರನ್ನು ನೇಮಿಸಲಾಯಿತು. ಬಳಿಕ ಕಳ್ಳಸಾಗಣೆ ಬಲಿಪಶುಗಳ ಸಾಮೂಹಿಕ ನೇಮಕಾತಿ ಪ್ರಾರಂಭವಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
43.8 ಬಿಲಿಯನ್ ಡಾಲರ್ ಉದ್ಯಮ : ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಯ ಪ್ರಕಾರ, ಸ್ಕ್ಯಾಮ್ ಸೆಂಟರ್ಗಳು ‘ಪ್ರತಿ ವರ್ಷ ಶತಕೋಟಿ ಯುಎಸ್ ಡಾಲರ್‌ಗಳಷ್ಟು ಆದಾಯವನ್ನು ಗಳಿಸುತ್ತವೆ. ಆಗ್ನೇಯ ಏಷ್ಯಾದಲ್ಲಿ ಸೈಬರ್ ಸ್ಕ್ಯಾಮರ್ಗಳು ವಾರ್ಷಿಕವಾಗಿ 43.8 ಬಿಲಿಯನ್ ಡಾಲರ್ಗಿಂತ ಹೆಚ್ಚು ಆದಾಯವನ್ನು ಗಳಿಸುತ್ತಾರೆ. ಇದು ಪ್ರಾಥಮಿಕವಾಗಿ ಪ್ರದೇಶದಾದ್ಯಂತ ಕ್ರಿಮಿನಲ್ ಮತ್ತು ದುರುದ್ದೇಶ ವ್ಯಕ್ತಿಗಳಿಗೆ ಹೋಗುತ್ತದೆ.
ಆರ್ಥಿಕ ನಷ್ಟ : time.com ವೆಬ್‌ಸೈಟ್ ಪ್ರಕಾರ, ಇತ್ತೀಚಿನ ಅಧ್ಯಯನವು 2020 ಮತ್ತು 2024 ರ ನಡುವೆ ವಿಶ್ವದಾದ್ಯಂತ ಬಲಿಪಶುಗಳು ಆಗ್ನೇಯ ಏಷ್ಯಾ ಆಧಾರಿತ ಸೈಬರ್ ಸ್ಕ್ಯಾಮ್ಗಳಿಗೆ ಸುಮಾರು 75 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಆಗ್ನೇಯ ಏಷ್ಯಾದಾದ್ಯಂತ ಸ್ಕ್ಯಾಮ್ ಉದ್ಯಮವು ಪ್ರವರ್ಧಮಾನಕ್ಕೆ ಬಂದಿದೆ.
ಕಾರ್ಯ ವಿಧಾನ : ಅವರ ಟ್ರೇಡ್‌ಮಾರ್ಕ್ ‘ಶಾ ಝು ಪ್ಯಾನ್’ ಅಥವಾ ‘ಪಿಗ್ ಬುಚರಿಂಗ್’ ಫ್ರಾಡ್ಸ್, ಇದರಲ್ಲಿ ಬಲಿಪಶುಗಳನ್ನು ಸಾಮಾಜಿಕ ಮಾಧ್ಯಮ ಅಥವಾ ಟೆಕ್ಸ್ಟ್ ಮೆಸೇಜೆಸ್ ಮೂಲಕ ಗಾಳ ಹಾಕಲಾಗುತ್ತದೆ. ವಂಚಕರು ಬಲಿಪಶುಗಳೊಂದಿಗೆ ಸ್ನೇಹ ಬೆಳೆಸುತ್ತಾರೆ. ಬಳಿಕ ಅವರು ನಕಲಿ ಹೂಡಿಕೆ ಯೋಜನೆಗಳಿಗೆ ಆಮಿಷವೊಡ್ಡುತ್ತಾರೆ. ಸಾಮಾನ್ಯವಾಗಿ ಕ್ರಿಪ್ಟೋಕರೆನ್ಸಿ.. ಈ ಸ್ಕ್ಯಾಮ್ ಅನ್ನು ಸಾಮಾನ್ಯವಾಗಿ "ಪಿಗ್ ಬುಚರಿಂಗ್" ಎಂದು ಕರೆಯಲಾಗುತ್ತದೆ. ಇದು ವಧೆ ಮಾಡುವ ಮೊದಲು ಹಂದಿಯನ್ನು ಕೊಬ್ಬಿಸುವುದನ್ನು ಸೂಚಿಸುತ್ತದೆ.
2024 ರಲ್ಲಿ ಯುನೈಟೆಡ್ ನೇಷನ್ಸ್ ಆಫೀಸ್ ಆಫ್ ಡ್ರಗ್ಸ್ ಅಂಡ್ ಕ್ರೈಮ್ (UNODC) ಪ್ರಕಾರ, ಲಾರ್ಜ್ ಲಾಂಗ್ವೇಜ್ ಮಾಡ್ಯೂಲ್ಸ್ ಆಧಾರಿತ ಚಾಟ್‌ಬಾಟ್‌ಗಳು, ಡೀಪ್‌ಫೇಕ್ ಟೆಕ್ನಾಲಾಜಿ ಮತ್ತು ಆಟೋಮೇಶನ್ ಇತ್ತೀಚಿನ ಪ್ರಗತಿಗಳು ಹೆಚ್ಚು ಅತ್ಯಾಧುನಿಕ ಮತ್ತು ಹಾನಿಕಾರಕ ಸೈಬರ್ ವಂಚನೆ ಯೋಜನೆಗಳನ್ನು ಸಕ್ರಿಯಗೊಳಿಸಿವೆ ಎಂದು ಎಚ್ಚರಿಸಿದೆ.
ಎಐ ರಿಯಲ್-ಟೈಂ ಫೇಶ್-ಚೇಂಜಿಂಗ್ ನಿಖರವಾದ ಚಾಟ್‌ಗೆ ಮತ್ತು ಪಿಗ್ ಬುಚರಿಂಗ್ ಸ್ಕ್ಯಾಮ್ಸ್ಗೂ ಅತ್ಯಗತ್ಯವಾಗಿದೆ. ಅಪರಾಧ ಸಂಸ್ಥೆಗಳು ಇತರ ಭಾಷೆಗಳಲ್ಲಿ ಬಲಿಪಶುಗಳಿಗೆ ಸಂದೇಶ ಕಳುಹಿಸುವಾಗ ಎಐ ಲಾರ್ಜ್ ಲಾಂಗ್ವೇಜ್ ಮಾಡ್ಯೂಲ್ಸ್ (LLM) ಅಥವಾ ಚಾಟ್‌ಬಾಟ್‌ಗಳನ್ನು ಸಹ ಬಳಸುತ್ತಿವೆ.
ಪಿಗ್ ಬುಚರಿಂಗ್ ಸ್ಕ್ಯಾಮ್ನಲ್ಲಿ ಹಲವು ಬಗೆಗಳಿವೆ. ಅದರಲ್ಲಿ ಬಿಟ್‌ಕಾಯಿನ್ ಹೂಡಿಕೆ ಸ್ಕ್ಯಾಮ್ಸ್, ರಗ್ ಪುಲ್ ಸ್ಕ್ಯಾಮ್ಸ್, ಫಿಸಿಂಗ್ ಸ್ಕ್ಯಾಮ್ಸ್, ಮ್ಯಾನ್ ಇನ್ ದಿ ಮಿಡೆಲ್ ಅಟ್ಯಾಕ್ಸ್, ಸಾಮಾಜಿಕ ಮಾಧ್ಯಮ ಕೊಡುಗೆಗಳು, ಪೊಂಜಿ ಸ್ಕೀಮ್ಸ್, ಎಐ ಸ್ಕ್ಯಾಮ್ಸ್, ಫೇಕ್ ಎಕ್ಸ್ಚೇಂಜ್ಸ್, ಮೋಸದ ಉದ್ಯೋಗ, ಫ್ಲ್ಯಾಶ್ ಲೋನ್ ಅಟ್ಯಾಕ್ಸ್ ಮತ್ತು ರೋಮ್ಯಾನ್ಸ್ ಸ್ಕ್ಯಾಮ್ಸ್ಗಳು ಸೇರಿವೆ.
ಭಾರತೀಯರ ಮೇಲಿನ ಸೈಬರ್ ಅಪರಾಧಗಳ ವೆಚ್ಚ : ಏಪ್ರಿಲ್ 2024ರ ಹೊತ್ತಿಗೆ, ಡಿಜಿಟಲ್ ಅರೆಸ್ಟ್, ಸ್ಟಾಕ್ ಮಾರ್ಕೆಟ್ ಸ್ಕ್ಯಾಮ್, ಇನ್ವೆಸ್ಟ್ಮೆಂಟ್ ಸ್ಕ್ಯಾಮ್ ಮತ್ತು ಆಗ್ನೇಯ ಏಷ್ಯಾದಿಂದ ಹೊರಹೊಮ್ಮುವ ರೋಮ್ಯಾನ್ಸ್ ಅಥವಾ ಡೇಟಿಂಗ್ ಸ್ಕ್ಯಾಮ್ಸ್ನಂತಹ 89,054 ಫೈನಾನ್ಶಿಯಲ್ ಕ್ರೈಮ್ಸ್ ಪ್ರಕರಣಗಳಲ್ಲಿ ಭಾರತೀಯರು 1,776 ಕೋಟಿಗೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ ಎಂಬುದು ವರದಿಗಳ ಮೂಲಕ ತಿಳಿದುಬಂದಿದೆ.
ಕಳ್ಳಸಾಗಣೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ : ಬಲಿಪಶುಗಳು ಹೆಚ್ಚಾಗಿ ಉತ್ತಮ ಉದ್ಯೋಗಾವಕಾಶದ ಸುಳ್ಳು ಭರವಸೆಯಿಂದ ಆಕರ್ಷಿತರಾಗುತ್ತಾರೆ. ಆದರೆ ಅವರು ದಿನಕ್ಕೆ 15 ಗಂಟೆಗಳ ಕಾಲ, ವಾರದ ಏಳು ದಿನಗಳು ಕೆಲಸ ಮಾಡಲು ಒತ್ತಾಯಿಸಲ್ಪಡುವ ಗಾರ್ಡೆಡ್ ಕಾಂಪೌಂಡ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮ ಮತ್ತು ಡೇಟಿಂಗ್ ಆಪ್ಗಳಲ್ಲಿ ಜನರೊಂದಿಗೆ ಸ್ನೇಹ ಬೆಳೆಸುತ್ತಾರೆ ಮತ್ತು ಕ್ರಿಪ್ಟೋಕರೆನ್ಸಿ ಹಗರಣಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಲು ಅವರನ್ನು ಮನವೊಲಿಸುತ್ತಾರೆ.
ಮ್ಯಾನ್ಮಾರ್‌ನ ಸೈಬರ್ ಗುಲಾಮಗಿರಿ ದಂಧೆ : ಕಳ್ಳಸಾಗಣೆದಾರರು ಅಂದಾಜು 1,20,000 ಬಲಿಪಶುಗಳನ್ನು ಬಲವಂತದ ಅಪರಾಧದಲ್ಲಿ ಬಳಸಿಕೊಂಡರು. ಅಷ್ಟೇ ಅಲ್ಲ ಮಿಲಿಟರಿ, ಪೊಲೀಸ್, ಸ್ಥಳೀಯ ಅಧಿಕಾರಿ, EAO ಭ್ರಷ್ಟಾಚಾರ ಮತ್ತು ಈ ಕಾರ್ಯಾಚರಣೆಗಳಲ್ಲಿ ಜಟಿಲತೆಯ ನಿಯಮಿತ ಮತ್ತು ಹೆಚ್ಚುತ್ತಿರುವ ವರದಿಗಳು ಇದ್ದವು. ಈ ಸೈಬರ್‌ಸ್ಕ್ಯಾಮ್ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುವವರಲ್ಲಿ ಅನೇಕರು ಗುಲಾಮರಂತಹ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಒತ್ತಾಯಿಸುವ ಮೊದಲು ಕಾನೂನುಬದ್ಧ ಉದ್ಯೋಗಗಳ ಭರವಸೆಯೊಂದಿಗೆ ಇತರ ದೇಶಗಳಿಂದ ಆಮಿಷಕ್ಕೆ ಒಳಗಾಗುತ್ತಾರೆ. ಅಷ್ಟೇ ಅಲ್ಲ, ಪಲಾಯನ ಮಾಡಿದವರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಮ್ಯಾನ್ಮಾರ್‌ಗೆ ಕಳ್ಳಸಾಗಣೆ ಮಾಡಲ್ಪಟ್ಟ ಭಾರತೀಯರೆಷ್ಟು : ವಿದೇಶಾಂಗ ಸಚಿವ ಎಸ್. ಜೈಶಂಕರ್ ಡಿಸೆಂಬರ್ 2024 ರಲ್ಲಿ ಲೋಕಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ, ಕಾಂಬೋಡಿಯಾ ಮತ್ತು ಮ್ಯಾನ್ಮಾರ್‌ನಿಂದ ಆನ್‌ಲೈನ್ ಉದ್ಯೋಗ ವಂಚನೆಗಳಿಗೆ ಬಲಿಯಾದ 1664 ಭಾರತೀಯರನ್ನು ಭಾರತ ಸರ್ಕಾರ ಮರಳಿ ಕರೆತಂದಿದೆ ಎಂದು ಮಾಹಿತಿ ನೀಡಿದ್ದರು.
ಸೆಪ್ಟೆಂಬರ್ 2024 ರಲ್ಲಿ ಗೃಹ ಸಚಿವಾಲಯದ ವರದಿಯಡಿಯಲ್ಲಿ ಇಮೆಗ್ರೇಶನ್ ಬ್ಯೂರೋ ಪ್ರಕಾರ, ಜನವರಿ 2022 ಮತ್ತು ಮೇ 2024 ರ ನಡುವೆ ಸಂದರ್ಶಕ ವೀಸಾದಲ್ಲಿ ಕಾಂಬೋಡಿಯಾ, ಥೈಲ್ಯಾಂಡ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂಗೆ ಪ್ರಯಾಣಿಸಿದ 29,466 ಭಾರತೀಯರು ಹಿಂತಿರುಗಿಲ್ಲ ಮತ್ತು ಲೆಕ್ಕವಿಲ್ಲದವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಪಂಜಾಬ್, ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ಬಂದವರು ಎಂದು ವರದಿಯಾಗಿದೆ.
ಬಲಿಪಶುಗಳನ್ನು ಗೇಟೆಡ್ ಕಾಂಪ್ಲೆಕ್ಸಸ್ಗೆ ಸೀಮಿತಗೊಳಿಸಲಾಗುತ್ತದೆ. 12 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡಲು ಒತ್ತಾಯಿಸಲಾಗುತ್ತದೆ ಮತ್ತು ನಿರಂತರ ಕಣ್ಗಾವಲಿಗೆ ಒಳಪಡಿಸಲಾಗುತ್ತದೆ. ಸಿಂಡಿಕೇಟ್ಸ್ ತಮ್ಮ ಬಲಿಪಶುಗಳನ್ನು ಶೋಷಿಸುವುದನ್ನು ಮುಂದುವರಿಸುತ್ತಾ ಕುಟುಂಬಗಳಿಂದ ಸುಲಿಗೆಯನ್ನು ಮಾಡಲಾಗುತ್ತದೆ.
ಸೈಬರ್ ಕ್ರೈಂ ಸೆಂಟರ್ಸ್ ಮೇಲೆ ಮ್ಯಾನ್ಮಾರ್ ಮಿಲಿಟರಿ ಸರ್ಕಾರ ದಾಳಿ : ಅಕ್ಟೋಬರ್ 2023 ರಿಂದ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರವು 55 ಸಾವಿರಕ್ಕೂ ಹೆಚ್ಚು ವಿದೇಶಿಯರನ್ನು ವಾಪಸ್ ಕಳುಹಿಸಿದೆ. ಅದರಲ್ಲಿ ಹೆಚ್ಚಿನವರು ಚೀನಿಯರು. ಅವರನ್ನು ಸ್ಕ್ಯಾಮ್ ಕಾಂಪೌಂಡ್ಸ್ನಲ್ಲಿ ಕೆಲಸ ಮಾಡಲು ಒತ್ತಾಯಿಸಲಾಗಿತ್ತು. ಹೀಗೆ ಮ್ಯಾನ್ಮಾರ್ ಬಿಕ್ಕಟ್ಟು ಇಡೀ ಜಗತ್ತನ್ನೇ ನಡುಗಿಸಿತು.
ಓದಿ: ನಮ್ಮ ಗುರಿ, ಮೊದಲ ಆದ್ಯತೆ ಗಗನಯಾನ: ಈಟಿವಿ ಭಾರತ ಸಂದರ್ಶನದಲ್ಲಿ ಇಸ್ರೋ ಅಧ್ಯಕ್ಷರ ಮನದಾಳದ ಮಾತು