ಫ್ರಾನ್ಸ್: ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ನಲ್ಲಿ ಅಪರಾಧ ಚಟುವಟಿಕೆ ಹರಡಲು ಅವಕಾಶ ಮಾಡಿಕೊಟ್ಟಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಟೆಲಿಗ್ರಾಮ್ನ ಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬುಧವಾರ ಬಿಡುಗಡೆ ಮಾಡಿದೆ. ನಾಲ್ಕು ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ಡುರೊವ್ ಅವರನ್ನು ನ್ಯಾಯಾಲಯ ಬಂಧನಮುಕ್ತಗೊಳಿಸಿದ್ದು, ಮುಂದಿನ ತನಿಖೆ ಸಂಬಂಧ ದೇಶ ತೊರೆಯದಂತೆ ನಿರ್ಬಂಧ ವಿಧಿಸಿದೆ.
ಬುಧವಾರ ಪ್ಯಾರಿಸ್ನಲ್ಲಿ ಔಪಚಾರಿಕ ತನಿಖೆಗೊಳಪಡಿಸಿದ ಫ್ರೆಂಚ್ ನ್ಯಾಯಾಧೀಶರು ಡುರೊವ್ ಮೇಲೆ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಪ್ರಾಥಮಿಕ ಆರೋಪ ಹೊರಿಸಿಸಲಾಗಿದೆ.
ಶನಿವಾರ ತಡರಾತ್ರಿ ಪ್ಯಾರಿಸ್ನ ಹೊರಗಿನ ಲೆ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ರಷ್ಯಾ ಮೂಲದ ಪಾವೆಲ್ ಡುರೊವ್ ಅವರನ್ನು ಬಂಧಿಸಲಾಗಿತ್ತು. ಇದೀಗ ನಾಲ್ಕು ದಿನಗಳ ವಿಚಾರಣೆ ಬಳಿಕ ಫ್ರಾನ್ಸ್ ನ್ಯಾಯಾಲಯ 5 ಮಿಲಿಯನ್ ಯೂರೋಗಳ ಜಾಮೀನು ಹಣ ಪಾವತಿಸಲು ಹಾಗೂ ವಾರಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಆದೇಶಿಸಿ, ಬಿಡುಗಡೆಗೊಳಿಸಿದೆ.