ಲಾಹೋರ್: ತಾನು ಹೊಂದಿರುವ ಅಪಾರ ಜನಬೆಂಬಲವನ್ನು ತೋರಿಸುವ ಸಲುವಾಗಿ ಲಾಹೋರ್‌ನಲ್ಲಿ ಶನಿವಾರ 'ಪವರ್ ಶೋ' ರ‍್ಯಾಲಿ ನಡೆಸುವುದಾಗಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಘೋಷಿಸಿದೆ ಎಂದು ಎಆರ್ವೈ ನ್ಯೂಸ್ ವರದಿ ಮಾಡಿದೆ. ಬೃಹತ್ ರ‍್ಯಾಲಿಯನ್ನು ಯಶಸ್ವಿಯಾಗಿ ಸಂಘಟಿಸಲು ಲಾಹೋರ್ನ ತೆಹ್ರೀಕ್-ಇ-ಇನ್ಸಾಫ್ ಪ್ರಧಾನ ಕಾರ್ಯದರ್ಶಿ ಅವೈಸ್ ಯೂನಿಸ್ ಅವರು ಗುರುವಾರ ಪಕ್ಷದ ಪದಾಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಿದ್ದಾರೆ ಎಂದು ವರದಿ ತಿಳಿಸಿದೆ.
"ಲಾಹೋರ್ ನಿವಾಸಿಗಳು ತೆಹ್ರೀಕ್-ಎ-ಇನ್ಸಾಫ್ ಪಕ್ಷ ಮತ್ತು ಅದರ ಸ್ಥಾಪಕ ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿ ದೊಡ್ಡ ಸಂಖ್ಯೆಯಲ್ಲಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಪೂರ್ಣ ಲಾಹೋರ್ ಇಮ್ರಾನ್ ಖಾನ್ ಅವರ ಪರವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಲಿದೆ" ಎಂದು ಯೂನಿಸ್ ಹೇಳಿದರು.
ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ಅವರು ಖೈಬರ್ ಪಖ್ತುನಖ್ವಾ (ಕೆಪಿ) ಕಡೆಯಿಂದ ರ‍್ಯಾಲಿಯ ನೇತೃತ್ವ ವಹಿಸಲಿದ್ದು, ಪಂಜಾಬಿನಲ್ಲಿನ ಪಕ್ಷದ ಪ್ರಾದೇಶಿಕ ಮತ್ತು ಜಿಲ್ಲಾ ಅಧ್ಯಕ್ಷರು ಆಯಾ ಪ್ರದೇಶಗಳ ರ‍್ಯಾಲಿಗಳನ್ನು ಮುನ್ನಡೆಸಲಿದ್ದಾರೆ. ವಿಧಾನಸಭೆಯಲ್ಲಿನ ಪಿಟಿಐ ಸದಸ್ಯರು ಮತ್ತು ಪಕ್ಷದ ಟಿಕೆಟ್ ಹೊಂದಿರುವವರು ರ‍್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಯೂನಿಸ್ ಹೇಳಿದರು.
ಇದಕ್ಕೂ ಮುನ್ನ ಲಾಹೋರ್ನ ಮಿನಾರ್-ಇ-ಪಾಕಿಸ್ತಾನ್ನಲ್ಲಿ ಈ ರ‍್ಯಾಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪಕ್ಷದ ಹಲವಾರು ನಾಯಕರನ್ನು ಬಂಧಿಸಿದ ನಂತರ ರ‍್ಯಾಲಿಯನ್ನು ಸೆಪ್ಟೆಂಬರ್ 21 ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಎಆರ್ವೈ ನ್ಯೂಸ್ ವರದಿ ಮಾಡಿದೆ.