ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಮೌಲಾವಿ ಅಮೀರ್ ಖಾನ್ ಮುತ್ತಾಕಿ ನಡುವೆ ಇತ್ತೀಚೆಗೆ ದುಬೈನಲ್ಲಿ ನಡೆದ ಸಭೆ ದಕ್ಷಿಣ ಏಷ್ಯಾದಲ್ಲಿ ಸನ್ನಿವೇಶಗಳು ಬದಲಾಗುತ್ತಿರುವುದರ ಮತ್ತೊಂದು ಉದಾಹರಣೆಯಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಆಡಳಿತವನ್ನು ಉರುಳಿಸಿದ ನಂತರ ದಕ್ಷಿಣ ಏಷ್ಯಾದ ರಾಜಕೀಯ ಪರಿಸ್ಥಿತಿಗಳು ಬದಲಾಗಲಾರಂಭಿಸಿವೆ. ತನಗೆ ಅಕ್ಕಿ ಪೂರೈಸುವಂತೆ ಮತ್ತು ತನ್ನ ಬೆಂಬಲಕ್ಕೆ ನಿಲ್ಲುವಂತೆ ಆಗಿನಿಂದಲೂ ಬಾಂಗ್ಲಾದೇಶ ಭಾರತಕ್ಕೆ ವಿನಂತಿಸುತ್ತಿದೆಯಾದರೂ ಅದೇ ಸಮಯದಲ್ಲಿ ಅದು ಪಾಕಿಸ್ತಾನಕ್ಕೆ ಈ ಹಿಂದೆಂದಿಗಿಂತಲೂ ಹೆಚ್ಚು ಹತ್ತಿರವಾಗುತ್ತಿದೆ.
’ಕಳೆದುಹೋಗಿದ್ದ ಸಹೋದರ':ಪಾಕಿಸ್ತಾನದಿಂದ ಮದ್ದುಗುಂಡು ಮತ್ತು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿರುವುದು ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಮುಂದಿನ ದಿನಗಳಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿರುವುದು ಈ ಪ್ರದೇಶದಲ್ಲಿ ಪರಿಸ್ಥಿತಿಗಳು ಬದಲಾಗುತ್ತಿರುವುದರ ಸೂಚನೆಯಾಗಿವೆ. ಬಾಂಗ್ಲಾದೇಶವು ಪಾಕಿಸ್ತಾನದ 'ಕಳೆದುಹೋಗಿದ್ದ ಸಹೋದರ' ಎಂದು ಇಶಾಕ್ ದಾರ್ ಬಣ್ಣಿಸಿದ್ದಾರೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ನಾಯಕ ಮೊಹಮ್ಮದ್ ಯೂನುಸ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನಡುವಿನ ಸರಣಿ ಸಭೆಗಳ ನಂತರ ಈಗ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಬಾಂಗ್ಲಾದೇಶದ ಭೇಟಿಗೆ ಬರಲಿದ್ದಾರೆ.
ಸಾರ್ಕ್ ಅನ್ನು ಪುನರುಜ್ಜೀವನಗೊಳಿಸಬೇಕೆಂದು ಯೂನುಸ್ ನಿರಂತರವಾಗಿ ಬೇಡಿಕೆ ಇಡುತ್ತಿರುವುದು ಭಾರತಕ್ಕೆ ಅಸಮಾಧಾನ ಮೂಡಿಸಿದೆ. ಯೂನುಸ್ ಅವರ ಈ ಬೇಡಿಕೆಯನ್ನು ಭಾರತ ನಿರ್ಲಕ್ಷಿಸುವುದು ಹೌದಾದರೂ, ಬಾಂಗ್ಲಾದೇಶದೊಂದಿಗೆ ಸಂಬಂಧಗಳ ಬಲವರ್ಧನೆಯ ಪ್ರಯತ್ನಗಳನ್ನು ಮಾತ್ರ ಮುಂದುವರಿಸುತ್ತದೆ.
ಅಲ್ಲದೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ಮಿಲಿಟರಿ ಸಹಕಾರ ಕೂಡ ಹೆಚ್ಚುತ್ತಿದೆ ಎಂದು ವರದಿಗಳು ತಿಳಿಸಿವೆ. ಭಾರತದ ವಿರುದ್ಧ ರಕ್ಷಣಾತ್ಮಕ ಕ್ರಮವಾಗಿ ಬಾಂಗ್ಲಾದೇಶವು ಪಾಕಿಸ್ತಾನದಿಂದ ಅಬ್ದಾಲಿ ಅಲ್ಪ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಟರ್ಕಿಯಿಂದ ಟ್ಯಾಂಕ್ಗಳನ್ನು ಖರೀದಿಸಲು ಹವಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಈ ವರ್ಷದ ಫೆಬ್ರವರಿಯಿಂದ ಪಾಕಿಸ್ತಾನ ಸೇನೆಯು ಬಾಂಗ್ಲಾದೇಶದ ಪಡೆಗಳಿಗೆ ತರಬೇತಿ ನೀಡಲಿದೆ. ಬಾಂಗ್ಲಾದೇಶದ ನಾಲ್ಕು ಕಂಟೋನ್ಮೆಂಟ್ ಗಳಲ್ಲಿ ಈ ತರಬೇತಿ ನಡೆಯಲಿದೆ. ಪಾಕಿಸ್ತಾನ ತಂಡದ ನೇತೃತ್ವವನ್ನು ಮೇಜರ್ ಜನರಲ್ ಶ್ರೇಣಿಯ ಅಧಿಕಾರಿ ವಹಿಸಲಿದ್ದಾರೆ.
ಬಾಂಗ್ಲಾ ಸೈನ್ಯಕ್ಕೆ ಪಾಕಿಸ್ತಾನ ಸೇನೆ ತರಬೇತಿ:ಪಾಕಿಸ್ತಾನ ಸೇನೆ ಬಾಂಗ್ಲಾ ಸೈನ್ಯಕ್ಕೆ ತರಬೇತಿ ನೀಡುವುದು ಭಾರತದ ಪಾಲಿಗೆ ಅಂಥ ಆತಂಕದ ವಿಚಾರವಲ್ಲವಾದರೂ, ಮೂಲಭೂತವಾದವನ್ನು ಹರಡುವ ಪಾಕಿಸ್ತಾನದ ಪ್ರಯತ್ನಗಳು ಭಾರತಕ್ಕೆ ಚಿಂತೆಯ ವಿಷಯವಾಗಿದೆ. ಪಾಕಿಸ್ತಾನವು ತನ್ನ ಕಾರ್ಯಸೂಚಿಯಲ್ಲಿ ಭಾರತ ವಿರೋಧಿ ವಿಷಯವನ್ನು ಸೇರಿಸಿ ಕೆಲಸ ಮಾಡುವುದರಿಂದ ಇಂಡೋ-ಬಾಂಗ್ಲಾದೇಶ ಮಿಲಿಟರಿ ಸಂಬಂಧಗಳು ತೀವ್ರ ಹಾಳಾಗುವ ಸಾಧ್ಯತೆಗಳಿವೆ. ಬಾಂಗ್ಲಾದೇಶಕ್ಕೆ ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದಿಂದ ಬೆದರಿಕೆ ಇಲ್ಲ. ಪಾಕಿಸ್ತಾನವು ಬಾಂಗ್ಲಾದೇಶದೊಂದಿಗೆ ಸಹಕಾರ ಸಾಧಿಸಿದ ಬೆನ್ನಲ್ಲೇ ಚೀನಾ ಕೂಡ ಬಾಂಗ್ಲಾದಲ್ಲಿ ತನ್ನ ಹಿತಾಸಕ್ತಿ ಸಾಧನೆಗೆ ಮುಂದಾಗಲಿದೆ. ಇದು ಭಾರತಕ್ಕೆ ಮತ್ತೊಂದು ಕಾಳಜಿಯ ವಿಷಯವಾಗಿದೆ.
ಇದಲ್ಲದೆ, ಇದು ಪಾಕಿಸ್ತಾನದ ಐಎಸ್ಐಗೆ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ದಂಗೆಕೋರ ಗುಂಪುಗಳಿಗೆ ತರಬೇತಿ ನೀಡಲು ನೆಲೆಗಳನ್ನು ಪುನಃ ಸ್ಥಾಪಿಸಲು ಬಾಗಿಲು ತೆರೆಯುತ್ತದೆ. ಕಾಶ್ಮೀರಿ ಉಗ್ರರನ್ನು ಭಾರತಕ್ಕೆ ಸಾಗಿಸಲು ಬಾಂಗ್ಲಾದೇಶವು ಒಂದು ಮಾರ್ಗವಾಗಬಹುದು. ಇದು ಈಗಾಗಲೇ ಪ್ರಾರಂಭವಾಗಿದೆ ಎಂದು ದೃಢೀಕರಿಸದ ವರದಿಗಳು ಉಲ್ಲೇಖಿಸುತ್ತವೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಸಂಬಂಧಗಳಲ್ಲಿ ಬಿರುಕು:ಭಾರತದ ವಿದೇಶಾಂಗ ಕಾರ್ಯದರ್ಶಿ ಮತ್ತು ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವರ ನಡುವಿನ ಸಭೆ ಬಾಂಗ್ಲಾದೇಶವನ್ನು ಬಳಸಿಕೊಂಡು ಭಾರತವನ್ನು ಪ್ರಚೋದಿಸಲು ನಿರ್ಧರಿಸಿದರೆ ಏನಾಗಬಹುದು ಎಂಬುದರ ಬಗ್ಗೆ ಇಸ್ಲಾಮಾಬಾದ್ಗೆ ನೀಡಿರುವ ಸ್ಪಷ್ಟ ಎಚ್ಚರಿಕೆಯಾಗಿದೆ. ಅಫ್ಘಾನಿಸ್ತಾನದಲ್ಲಿ ಯುಎಸ್ ಮತ್ತು ನ್ಯಾಟೋ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನವು ತಾಲಿಬಾನ್ ಅನ್ನು ಬೆಂಬಲಿಸಿದ್ದರೂ, ಪ್ರಸ್ತುತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಸಂಬಂಧಗಳು ಸಂಪೂರ್ಣವಾಗಿ ಹದಗೆಟ್ಟಿವೆ.
ಅಫ್ಘಾನಿಸ್ತಾನದಲ್ಲಿ ನೆಲೆಗಳನ್ನು ಹೊಂದಿರುವ ಟಿಟಿಪಿ (ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್) ಮತ್ತು ಬಲೂಚ್ ಸ್ವಾತಂತ್ರ್ಯ ಹೋರಾಟಗಾರರಿಂದ ನಡೆಯುತ್ತಿರುವ ದಾಳಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪಾಕಿಸ್ತಾನ ಸೇನೆಗೆ ಆತಂಕ ಮೂಡಿಸಿದೆ. ಹತಾಶೆಯಿಂದ ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ಟಿಟಿಪಿಯ ಅಡಗುತಾಣದ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು ಐವತ್ತು ಜನ ಸಾವಿಗೀಡಾದರು. ಇದರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದು, ಇವರು ಪಾಕಿಸ್ತಾನದಿಂದ ಹಿಂದಿರುಗಿದ ನಿರಾಶ್ರಿತರಾಗಿದ್ದು ಗಮನಾರ್ಹ. ಈ ದಾಳಿಯ ನಂತರ ಕಾಬೂಲ್ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ದಾಳಿಗಳನ್ನು ಹೆಚ್ಚಿಸಿದೆ.
ದುಬೈನಲ್ಲಿ ನಡೆದ ಸಭೆಗೆ ಸ್ವಲ್ಪ ಮೊದಲು ಈ ಒಗ್ಗಟ್ಟಿನ ಪ್ರದರ್ಶನವು ಗಮನಾರ್ಹವಾಗಿತ್ತು. ಪಾಕಿಸ್ತಾನದೊಂದಿಗಿನ ಹೋರಾಟದಲ್ಲಿ ಭಾರತವು ಅಫ್ಘಾನಿಸ್ತಾನವನ್ನು ಬೆಂಬಲಿಸುತ್ತಿದೆ ಎಂಬುದನ್ನು ಇದು ತೋರಿಸಿದೆ. ಅಫ್ಘಾನಿಸ್ತಾನದಲ್ಲಿ ಭಾರತದ ಬಗ್ಗೆ ಉತ್ತಮ ಭಾವನೆಯಿದೆ. ಅಫ್ಘಾನಿಸ್ತಾನಕ್ಕೆ ನೀಡಿದ ಸಹಾಯ ಮತ್ತು ಬೆಂಬಲಕ್ಕಾಗಿ ಭಾರತದ ಬಗ್ಗೆ ಅಲ್ಲಿ ಗೌರವದ ಭಾವನೆಯಿದೆ. ಆದರೆ, ಪಾಕಿಸ್ತಾನ ಹಾಗೂ ರಾವಲ್ಪಿಂಡಿಯಿಂದ ಬೆಂಬಲಿತವಾದ ಐಸಿಸ್ ಬಗ್ಗೆ ಅಫ್ಘಾನಿಸ್ತಾನದಲ್ಲಿ ತೀವ್ರ ಆಕ್ರೋಶವಿದೆ. ಭಾರತವು ತನ್ನ ಇತ್ತೀಚಿನ ಕ್ರಮಗಳ ಮೂಲಕ ಈ ಸದ್ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ.