ಡಮಾಸ್ಕಸ್: ಉತ್ತರದ ಅಲೆಪ್ಪೊ ಮತ್ತು ಇದ್ಲಿಬ್ ಪ್ರಾಂತ್ಯಗಳಲ್ಲಿ ಬಂಡುಕೋರ ಪಡೆಗಳ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದಾಗಿ ಸಿರಿಯನ್ ಸೇನೆ ಸೋಮವಾರ ಪ್ರಕಟಿಸಿದ್ದು, ರಷ್ಯಾದ ಪಡೆಗಳ ಬೆಂಬಲದೊಂದಿಗೆ ಕಳೆದ 24 ಗಂಟೆಗಳಲ್ಲಿ 400ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಹೇಳಿಕೊಂಡಿದೆ.
ಸೇನೆ ಮತ್ತು ಸಶಸ್ತ್ರ ಪಡೆಗಳ ಜನರಲ್ ಕಮಾಂಡ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕೇಂದ್ರೀಕೃತ ವಾಯು, ಕ್ಷಿಪಣಿ ಮತ್ತು ಫಿರಂಗಿ ದಾಳಿಗಳ ಮೂಲಕ 'ಭಯೋತ್ಪಾದಕರಿಗೆ' ಸೇರಿದ ಐದು ಕಮಾಂಡ್ ಕೇಂದ್ರಗಳು ಮತ್ತು ಏಳು ಮದ್ದುಗುಂಡು ಡಿಪೋಗಳನ್ನು ನಾಶಪಡಿಸಲಾಗಿದೆ ಎಂದು ಮಿಲಿಟರಿ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಕಳೆದ 24 ಗಂಟೆಗಳಲ್ಲಿ ಸಿರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಪರ ರಷ್ಯಾದ ಪಡೆಗಳ ಸಹಕಾರದೊಂದಿಗೆ ನಮ್ಮ ಸಶಸ್ತ್ರ ಪಡೆಗಳು ಅಲೆಪ್ಪೊ ಮತ್ತು ಇದ್ಲಿಬ್ನ ಗ್ರಾಮೀಣ ಪ್ರದೇಶಗಳಲ್ಲಿ ಭಯೋತ್ಪಾದಕ ನೆಲೆಗಳು, ಅವರ ಗೋದಾಮುಗಳು, ಸರಬರಾಜು ಮಾರ್ಗಗಳು ಮತ್ತು ಸಂಚಾರ ಮಾರ್ಗಗಳ ಮೇಲೆ ವೈಮಾನಿಕ, ಕ್ಷಿಪಣಿ ಮತ್ತು ಫಿರಂಗಿ ದಾಳಿಗಳನ್ನು ಮುಂದುವರಿಸಿವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ಗಂಟೆಗಳಲ್ಲಿ ನಿಖರವಾದ ದಾಳಿಯಲ್ಲಿ ವಿವಿಧ ದೇಶಗಳಿಗೆ ಸೇರಿದ 400ಕ್ಕೂ ಹೆಚ್ಚು ಉಗ್ರರನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.